ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹೊಸ ತಳಿ ಒಮಿಕ್ರಾನ್ ಪತ್ತೆಯಾಗಿಲ್ಲ, ರೂಪಾಂತರಿ ವೈರಸ್ ಪತ್ತೆಯಾಗಿರುವ ದೇಶಗಳ ಪ್ರಯಾಣಿಕರ ಪ್ರವೇಶಕ್ಕೆ ನಿರ್ಬಂಧ ಹೇರುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಒಮಿಕ್ರಾನ್ ಹೊಸ ವೈರಸ್ ಅತಿ ವೇಗವಾಗಿ ಹರಡುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ ಇದರ ಪರಿಣಾಮ ಯಾವರೀತಿ ಎಂಬುದು ಗೊತ್ತಿಲ್ಲ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಈಗಾಗಲೇ ಕಟ್ಟೆಚ್ಚರ ವಹಿಸಲಾಗಿದೆ. ರಾಜ್ಯದಲ್ಲಿಯೂ ಕೋವಿಡ್ ಟೆಸ್ಟ್ ಸಂಖ್ಯೆ ಹೆಚ್ಚಿಸುವಂತೆ ಸೂಚಿಸಲಾಗಿದೆ ಎಂದರು.
ವಿದೇಶದಿಂದ ಬಂದವರನ್ನು ಏರ್ ಪೋರ್ಟ್ ನಲ್ಲಿ ಕಟ್ಟುನಿಟ್ಟಿನ ತಪಾಸಣೆಗೆ ಒಳಪಡಿಸಲಾಗಿದೆ. ನೆಗೆಟೀವ್ ಬಂದರೆ ಮಾತ್ರ ಏರ್ ಪೋರ್ಟಿನಿಂದ ಹೊರ ಬಿಡಲಾಗುವುದು. ಇಲ್ಲದಿದ್ದರೆ ಅವರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ಮುಂದುವರೆಸಲಾಗುತ್ತದೆ ಎಂದರು. ಸರ್ಕಾರಿ ಸಿಬ್ಬಂದಿಗಳು, ಹೋಟೇಲ್, ಮಾಲ್, ಕಚೇರಿ ಸಿಬ್ಬಂದಿಗಳಿಗೆ 2 ಡೋಸ್ ಲಸಿಕೆ ಕಡ್ಡಾಯವಾಗಿದೆ ಎಂದು ತಿಳಿಸಿದರು.
ಕೇರಳದಿಂದ ಬಂದವರಿಂದ ರಾಜ್ಯದಲ್ಲಿ ಸೋಂಕು ಹೆಚ್ಚುತ್ತಿದೆ. ಹೀಗಾಗಿ ಕೇರಳದಿಂದ ಬಂದವರನ್ನು ಮತ್ತೊಮ್ಮೆ ಕೋವಿಡ್ ಪರೀಕ್ಷೆಗೆ ಒಳಪಡಿಸಲು ಸೂಚಿಸಲಾಗಿದೆ. ಬೂಸ್ಟರ್ ಡೋಸ್ ನೀಡಲು ಕೇಂದ್ರದ ಜೊತೆ ಚರ್ಚೆ ನಡೆಸಲಾಗಿದೆ. ಕೇಂದ್ರದಿಂದ ಅನುಮತಿ ದೊರೆತ ಕೂಡಲೇ ಬೂಸ್ಟರ್ ಡೋಸ್ ನೀಡಲಾಗುತ್ತದೆ. ಇನ್ನು ನಮ್ಮಲ್ಲಿ 80 ಲಕ್ಷ ಲಸಿಕೆ ಸಿದ್ಧವಿದ್ದು, ಲಸಿಕೆ ಕೊರತೆ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ