ಪ್ರಗತಿವಾಹಿನಿ ಸುದ್ದಿ, ನಂಜನಗೂಡು: ನಂಜನಗೂಡು ತಾಲೂಕಿಗೆ ಅಭಿವೃದ್ಧಿಯ ಮಹಾಪೂರವೇ ಹರಿದುಬರುತ್ತಿದ್ದು, ನ.28ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.
ಅಂದು ಬೆಳಗ್ಗೆ 10.30ಕ್ಕೆ ನಂಜನಗೂಡಿನ ಶ್ರೀ ಶ್ರೀಕಂಠ ದೇವಸ್ಥಾನಕ್ಕೆ ಸರ್ಕಾರದಿಂದ ಮಂಜೂರಾಗಿರುವ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ, ನುಗು ಮತ್ತು ಹೆಡಿಯಾಲ ಏತ ನೀರಾವರಿ ಯೋಜನೆಗೆ ಚಾಲನಾ ಸಮಾರಂಭ, ಗೋಳೂರು (ಗೀಕಹಳ್ಳಿ) ಗ್ರಾಮದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ವಿದ್ಯುತ್ ಉಪ ಕೇಂದ್ರಗಳ ಶಂಕುಸ್ಥಾಪನೆ, ನಗರೋತ್ಥಾನ ಹಂತ -4ರಲ್ಲಿ ನಂಜನಗೂಡು ನಗರಸಭಾ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ, ನಗರೋತ್ಥಾನ ಹಂತ-3ರಲ್ಲಿ ಗೌರಿಘಟ್ಟದ ಬೀದಿಯಲ್ಲಿರುವ ನಾಯಕ ಸಮುದಾಯ ಭವನದ ಉದ್ಘಾಟನೆ, ಮಹರ್ಷಿ ವಾಲ್ಮೀಕಿ ಸಮುದಾಯ ಭವನದ ಉದ್ಘಾಟನಾ ಸಮಾರಂಭ ನೆರವೇರಲಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶ್ರೀಕಂಠ ದೇವಸ್ಥಾನದ ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಈ ಎಲ್ಲ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ನಂಜನಗೂಡು ಕ್ಷೇತ್ರದ ಶಾಸಕ ಬಿ. ಹರ್ಷವರ್ಧನ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು.
ಸಹಕಾರ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಜಲಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ, ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ಮುಜರಾಯಿ ಹಜ್ ಹಾಗೂ ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ, ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ (ಭೈರತಿ), ಪೌರಾಡಳಿತ ಸಚಿವ ಎನ್. ನಾಗರಾಜ್ (ಎಂಟಿಬಿ) , ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ಉಪಸ್ಥಿತರಿರುವರು.
ಚಾಮರಾಜನಗರ ಸಂಸದ ವಿ. ಶ್ರೀನಿವಾಸ ಪ್ರಸಾದ್, ಮೈಸೂರು-ಕೊಡಗು ಸಂಸದ ಪ್ರತಾಪ್‌ಸಿಂಹ, ಮಂಡ್ಯ ಲೋಕಸಭಾ ಸದಸ್ಯೆ ಸುಮಲತಾ ಅಂಬರೀಷ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಶಾಸಕರದ ತನ್ವೀರ್ ಸೇಠ್, ಸಾ.ರಾ. ಮಹೇಶ್, ಜಿ.ಟಿ. ದೇವೇಗೌಡ, ಕೆ. ಮಹಾದೇವ್, ಮರಿತಿಬ್ಬೇಗೌಡ, ಎಲ್. ನಾಗೇಂದ್ರ, ಎಸ್.ಎ. ರಾಮದಾಸ್, ಡಾ. ಯತೀಂದ್ರ ಎಸ್., ಅನಿಲ್ ಕುಮಾರ್ ಸಿ., ಹೆಚ್.ಪಿ. ಮಂಜುನಾಥ್, ಅಶ್ವಿನ್ ಕುಮಾರ್, ಎಚ್. ವಿಶ್ವನಾಥ್, ಡಾ. ಡಿ. ತಿಮ್ಮಯ್ಯ, ಸಿ.ಎನ್. ಮಂಜೇಗೌಡ, ಮಧು ಜಿ. ಮಾದೇಗೌಡ ಅತಿಥಿಗಳಾಗಿ ಪಾಲ್ಗೊಳ್ಳುವರು.
ನಿಗಮ ಮಂಡಳಿಗಳ ಅಧ್ಯಕ್ಷರು, ನಂಜನಗೂಡು ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಜಲಸಂಪನ್ಮೂಲ, ಧಾರ್ಮಿಕ ದತ್ತಿ ಇಲಾಖೆ, ನಗರಾಭಿವೃದ್ಧಿ, ಕವಿಪ್ರನಿ, ಕಾವೇರಿ ನೀರಾವರಿ ನಿಗಮ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ, ಮೈಸೂರು ಜಿಲ್ಲಾ ಪಂಚಾಯ್ತಿ ಮತ್ತಿತರ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿರುವರು.
ಏನಿದು ನುಗು ಏತ ನೀರಾವರಿ ಯೋಜನೆ ?
ನುಗು ಏತ ನೀರಾವರಿ ಯೋಜನೆ ನಂಜನಗೂಡು ಶಾಸಕ ಬಿ. ಹರ್ಷವರ್ಧನ್ ಅವರ ಕನಸಿನ ಯೋಜನೆಯಾಗಿದೆ.
ಈ ಹಿಂದೆ ಹಲವಾರು ಶಾಸಕರು, ಸಚಿವರು ನುಗು ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸುವ ಭರವಸೆ ನೀಡಿದ್ದರೂ ಅದು ಈಡೇರಿರಲಿಲ್ಲ. ಆದರೆ ಶಾಸಕ ಹರ್ಷವರ್ಧನ್ ಈ ಯೋಜನೆಯ ಅನುಷ್ಠಾನಕ್ಕೆ ನಿರಂತರ ಶ್ರಮವಹಿಸಿದರು. 2018ರಲ್ಲಿ ಶಾಸಕರಾಗಿ, ಹರ್ಷವರ್ಧನ್ ಅವರು ಮೊದಲು ಕೈಗೊಂಡ ಕಾರ್ಯವೆಂದರೆ ಅಂದಿನ ಮುಖ್ಯಮಂತ್ರಿಗಳೊಂದಿಗೆ ಈ ಯೋಜನೆಯ ಬಗ್ಗೆ ಪ್ರಸ್ತಾಪಿಸಿ ಯೋಜನೆ ಕೈಗೆತ್ತಿಕೊಂಡಿದ್ದು. ಯೋಜನೆಗೆ ಅಂದಿನ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು 80 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿದರು. ಬಳಿಕ ಮುಖ್ಯಮಂತ್ರಿಯಾಗಿದ್ದ ಬಿಎಸ್ ಯಡಿಯೂರಪ್ಪ ಹಣ ಬಿಡುಗಡೆ ಮಾಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಗ ಅದಕ್ಕೆ ಶಿಲಾನ್ಯಾಸ ಮಾಡುತ್ತಿದ್ದಾರೆ. ಶಾಸಕರ ಸತತ ಪ್ರಯತ್ನದಿಂದ ಯೋಜನೆ ಸಾಕಾರಗೊಂಡಿದೆ. ಹಾಗಾಗಿ ಅವರನ್ನು ಜನ ಪ್ರೀತಿಯಿಂದ “ಆಧುನಿಕ ಭಗೀರಥ” ಎಂದು ಕರೆಯುತ್ತಾರೆ.
ನಂಜನಗೂಡು ಮತ್ತು ಸುರುಗೂರು ತಾಲೂಕುಗಳ 19 ಗ್ರಾಮಗಳ ಒಟ್ಟು 20 ಕೆರೆಗಳನ್ನು ಈ ಯೋಜನೆಯಡಿ ತುಂಬಿಸಲಾಗುತ್ತದೆ. 15ರಿಂದ 20 ಸಾವಿರ ಕುಟುಂಬಗಳಿಗೆ ಈ ಯೋಜನೆಯ ಪ್ರಯೋಜನ ಸಿಗಲಿದೆ. *ನೀರಾವರಿ ಮತ್ತು ಜಲವಿದ್ಯುತ್ ಉತ್ಪಾದನೆಯ ಸಲುವಾಗಿ ನುಗು ಜಲಾಶಯ ನಿರ್ಮಾಣ ಮಾಡಲಾಗಿದೆ.
ನುಗು ಜಲಾಶಯ ಮೈಸೂರು ಜಿಲ್ಲೆ, ಎಚ್‌ಡಿ ಕೋಟೆಯ ಸರಗುರು ತಾಲೂಕಿನ ಬೀರವಾಳು ಗ್ರಾಮದಲ್ಲಿದೆ. ಕಾವೇರಿ ನದಿಗೆ ಅಡ್ಡಲಾಗಿ 1959ರಲ್ಲಿ ಈ ಜಲಾಶಯ ನಿರ್ಮಾಣ ಮಾಡಲಾಯಿತು. ಸರ್ ಎಂ. ವಿಶ್ವೇಶ್ವರಯ್ಯ ಅವರು ಜಲಾಶಯ ನಿರ್ಮಾಣದ ಮೇಲ್ವಿಚಾರಣೆ ಹೊಣೆ ಹೊತ್ತಿದ್ದರು.
ನುಗು ಜಲಾಶಯದ ಜಲಾನಯನ ಪ್ರದೇಶ ಎಚ್‌ಡಿ ಕೋಟೆ ತಾಲೂಕಿನ 1471 ಎಕರೆ, ನಂಜನಗೂಡು ತಾಲೂಕಿನ 16,839 ಎಕರೆ. ಹೆಗ್ಗಡಹಳ್ಳಿ ಬಳಿ ಕಬಿನಿ ನದಿಯಿಂದ 65 ಕ್ಯೂಸೆಕ್ ನೀರನ್ನು ಎತ್ತಿ ಕುಡಿಯುವ ನೀರಿಗಾಗಿ ೭ ಕೆರೆಗಳನ್ನು ಭರ್ತಿ ಮಾಡುವ ಯೋಜನೆ ಇದಾಗಿದೆ. *ನಂಜನಗೂಡು ತಾಲೂಕು ಈ ಉದ್ದೇಶಿತ ಏತ ನೀರಾವರಿ ಯೋಜನೆಯ ಫಲಾನುಭವಿ ತಾಲೂಕಾಗಲಿದೆ. ತಾಲೂಕಿನ 10 ಹಳ್ಳಿಗಳ 15 ಸಾವಿರ ಕುಟುಂಬಗಳು ಈ ಯೋಜನೆಯ ಪ್ರಯೋಜನ ಪಡೆಯಲಿವೆ. ಪೂರ್ವಹರತಳೆ, ಕ್ಯಾತನಹಳ್ಳಿ, ಮಸಗೆ, ಕಾಳೆ ಚೆಲುವಾಂಬುದಿ, ಕುಂತೇರಿ, ಸಿಂಧುವಳ್ಳಿ ಮತ್ತು ನರಸಾಂಬುದಿ ಗ್ರಾಮಗಳಲ್ಲಿ ಇರುವ ಕೆರೆಗಳಿಗೆ ಯೋಜನೆಯಿಂದ ನೀರು ತುಂಬಿಸಲಾಗುವುದು.
ಪ್ರತಿ ವರ್ಷ ಅಕ್ಟೋಬರ್ ತಿಂಗಳ ಆರಂಭದಿಂದ ನವೆಂಬರ್ ತಿಂಗಳ ಅಂತ್ಯದವರೆಗೆ, ಒಟ್ಟು ೬೦ ದಿನ ನೀರು ತುಂಬಿಸಲಾಗುತ್ತದೆ. ಯೋಜನೆಯ ಎತ್ತರ 50 ಮೀ., ವಿದ್ಯುತ್‌ಚಕ್ತಿ ಬಳಕೆ 2ಮೆ.ವ್ಯಾ, ಅಂದಾಜು ವೆಚ್ಚ 63 ಕೋಟಿ ರೂ., ಸೋಲಾರ್ ಪವರ್ ಪ್ಲ್ಯಾಂಟ್‌ನ ವೆಚ್ಚ 17 ಕೋಟಿ ರೂ.
ಯಡಿಯಾಲ ಏತ ನೀರಾವರಿ ಯೋಜನೆ:
ಯಡಿಯಾಲ ಏತ ನೀರಾವರಿ ಯೋಜನೆ ಸಹ 2013ರಿಂದ ಬಾಕಿ ಉಳಿದಿದೆ. ಚಾಮರಾಜ ನಗರ ಸಂಸದ ಎಂ. ಶ್ರೀನಿವಾಸ ಪ್ರಸಾದ ಕಂದಾಯ ಸಚಿವರಾಗಿದ್ದ ಅವಧಿಯಲ್ಲಿ ಯೋಜನೆಯನ್ನು ಮಂಜೂರು ಮಾಡಿದ್ದರು. ಆದರೆ ಈವರೆಗೂ ಯೋಜನೆ ಅನುಷ್ಠಾನಗೊಂಡಿರಲಿಲ್ಲ.
* ಕುಡಿಯುವ ನೀರಿನ ಸಲುವಾಗಿ ನುಗು ನದಿಗೆ ಎಚ್‌ಡಿ ಕೋಟೆ ತಾಲೂಕು ಹಾಗೂ ಸರಗೂರಿನ ಮಲ್ಲೂರು ಬಳಿ ಈ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಪ್ರತಿ ವರ್ಷ ಜುಲೈನಿಂದ ಅಕ್ಟೋಬರ್‌ವರೆಗೆ ಒಟ್ಟು 13 ಕ್ಯೂಸೆಕ್ಸ್ ನೀರನ್ನು ಮೇಲೆ್ತ್ತುವ ಯೋಜನೆ ಇದು. ನಂಜನಗೂಡು ಮತ್ತು ಸರಗೂರು ತಾಲೂಕುಗಳ 12 ಗ್ರಾಮಗಳು ಇದರ ಪ್ರಯೋಜನ ಪಡೆಯಲಿವೆ. 13 ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ಒಟ್ಟೂ ಅಂದಾಜು ವೆಚ್ಚ 30.50 ಕೋಟಿ ರೂ.
ನುಗು ಏತ ನೀರಾವರಿ ಯೋಜನೆ ನನ್ನ ಕನಸಾಗಿದೆ. ಕೆಎನ್‌ಎನ್‌ಎಲ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಜಯಪ್ರಕಾಶ ನಾರಾಯಣ್ ಮತ್ತು ಈಗಿನ ವ್ಯವಸ್ಥಾಪಕ ನಿರ್ದೇಶಕ ಶಂಕರೇಗೌಡ ಅವರ ಜತೆ ಹಲವು ಬಾರಿ ಚರ್ಚೆ ನಡೆಸಿ ಯೋಜನೆಯ ರೂಪು ರೇಶೆಗಳನ್ನು ಸಿದ್ಧಗೊಳಿಸಲಾಗಿದೆ. ಯಡಿಯಾಲ ಭಾಗದ ೧೩ ಕೆರೆಗಳನ್ನು ಈ ಯೋಜನೆಯ ಮೂಲಕ ಭರ್ತಿ ಮಾಡಲಾಗುತ್ತದೆ. ಒಬ್ಬ ಜನಪ್ರತಿನಿಧಿಯಾಗಿ ಸಾರ್ವಜನಿಕರ ಬೇಡಿಕೆಗಳಿಗೆ ಸ್ಪಂದಿಸಲು ಸಾಧ್ಯವಾದ ಬಗ್ಗೆ ಸಂತೋಷವಾಗಿದೆ
-ಬಿ. ಹರ್ಷವರ್ಧನ, ಶಾಸಕರು, ನಂಜನಗೂಡು.
For English News:
On November 28, grand fest of the inauguration of development projects in Nanjangud
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ