
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಟ್ರೇಲರ್ ನಲ್ಲಿ ಬೆಳಗಾವಿ ಮಹಾರಾಷ್ಟ್ರದ್ದು ಎಂದು ಉಲ್ಲೇಖಿಸಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು “ಫಾಲೋವರ್” ಮರಾಠಿ ಚಿತ್ರ ವಿರುದ್ಧ ಸಿಡಿದೆದ್ದಿದ್ದಾರೆ. ತೀವ್ರ ಆಕ್ರೋಶ ವ್ಯಕ್ತವಾಗಿದ್ದರಿಂದ ಸಿನಿಮಾ ಪ್ರದರ್ಶನ ರದ್ದು ಪಡಿಸಲಾಗಿದೆ.
ಗಡಿ ವಿವಾದದ ಬಗ್ಗೆ ಬೆಳಕು ಚೆಲ್ಲುವ ಚಿತ್ರ ಇದಾಗಿದೆ ಎಂದು ಕರವೇ ಶಿವರಾಮೇಗೌಡ ಬಣದ ಜಿಲ್ಲಾಧ್ಯಕ್ಷ ವಾಜೀದ್ ಹಿರೇಕೋಡಿ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕರವೇ ಕಾರ್ಯಕರ್ತರ ತೀವ್ರ ಆಕ್ರೋಶ ಹಿನ್ನೆಲೆಯಲ್ಲಿ ಫಾಲೋವರ್ ಚಿತ್ರಪ್ರದರ್ಶನವನ್ನು ಟಾಕೀಸ್ ಸಿಬ್ಬಂದಿಗಳು ರದ್ದುಪಡಿಸಿದ್ದಾರೆ. ಬೆಳಗಾವಿ ನಗರದ ಬಿಇ ಪದವೀಧರ ಹರ್ಷದ್ ನಲವಡೆ ನಿರ್ಮಿಸಿರುವ ಸಿನಿಮಾ ಇದು.
ಬೆಳಗಾವಿ ಐನಾಕ್ಸ್ ಚಿತ್ರ ಮಂದಿರದಲ್ಲಿ ಇಂದು ರಾತ್ರಿ 8 ಗಂಟೆಗೆ ಮೊದಲ ಪ್ರದರ್ಶನ ನಡೆಯಬೇಕಿತ್ತು. ಈ ಸಿನಿಮಾದ ಟ್ರೇಲರ್ ನಲ್ಲಿ ಯಳ್ಳೂರ ಮಹಾರಾಷ್ಟ್ರ ನಾಮಫಲಕ ವಿವಾದ ಪ್ರಸ್ತಾಪಿಸಲಾಗಿದೆ. ಅದೇ ರೀತಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರುತ್ತದೆ ಎಂಬ ವಿಚಾರವನ್ನು ಉಲ್ಲೇಖಿಸಿದ್ದಾರೆ ಎಂದು ಕರವೇ ಕಾರ್ಯಕರ್ತರು ಆರೋಪಿಸಿ, ಚಿತ್ರದ ತಂಡದ ವಿರುದ್ಧ ಕಿಡಿಕಾರಿದರು.
ಸ್ಥಳಕ್ಕೆ ಖಡೇಬಜಾರ್ ಎಸಿಪಿ ಶೇಖರಪ್ಪ, ಸಿಪಿಐ ಅಲ್ತಾಫ್ ಮುಲ್ಲಾ ದೌಡಾಯಿಸಿ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರು. ಕರವೇ ಕಾರ್ಯಕರ್ತರ ಆರೋಪವನ್ನು ಚಿತ್ರದ ತಂಡ ತಳ್ಳಿ ಹಾಕಿದೆ. ನಮ್ಮ ಬೆಳಗಾವಿ ಹುಡುಗರು 7 ವರ್ಷ ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ಇದರಲ್ಲಿ ಯಾವುದೇ ರೀತಿ ಗಡಿ ವಿವಾದ ಇಲ್ಲವೇ ಇಲ್ಲ. ಮೂರು ಜನ ಸ್ನೇಹಿತರ ಸುತ್ತಲೂ ಕಥೆ ಸಾಗುತ್ತದೆ. ಕನ್ನಡ ಭಾಷೆಯಲ್ಲೇ ಸಿನಿಮಾ ಪ್ರದರ್ಶಿಸುತ್ತಿದ್ದೇವೆ. ಒಂದು ಶೋ ರದ್ದಾದ್ರೆ ಎಷ್ಟು ನಷ್ಟ ಆಗುತ್ತದೆ ಎಂಬುದು ನಮಗೆ ಗೊತ್ತು. ರೋಟರ್ ಡ್ಯಾಮ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮ ಪ್ರದರ್ಶನಗೊಂಡಿದೆ. ಈಗ ಏಕಾಏಕಿ ಪ್ರದರ್ಶನ ರದ್ದು ಮಾಡಿದ್ದಾರೆ. ಮತ್ತೆ ಭಾನುವಾರ ಪ್ರದರ್ಶನ ಮಾಡುತ್ತೇವೆ. ನೀವೇ ಸಿನಿಮಾ ನೋಡಿ ಹೇಳಿ ಎಂದ ಚಿತ್ರ ತಂಡದ ಸದಸ್ಯರು ಮನವಿ ಮಾಡಿಕೊಂಡಿದ್ದಾರೆ.
ಅಲ್ಲದೇ ನಾವು ಕನ್ನಡದವರೇ ನಮ್ಮ ಚಿತ್ರಕ್ಕೆ ಅಡ್ಡಿಯುಂಟು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಚಿತ್ರ ಪ್ರದರ್ಶನ ರದ್ದು ಹಿನ್ನೆಲೆಯಲ್ಲಿ ಸಿನಿಮಾ ಟಿಕೆಟ್ ಪಡೆದಿದ್ದ ಸಿನಿಮಾ ವೀಕ್ಷಕರಿಗೆ ಟಾಕೀಸ್ ಸಿಬ್ಬಂದಿ ಹಣ ವಾಪಸ್ಸು ಕೊಟ್ಟಿದ್ದಾರೆ. ಬೆಳಗಾವಿ ಕ್ಯಾಂಪ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.