Kannada NewsKarnataka NewsLatest

*ಪ್ರಯಾಣಿಕರಿಗೆ ಬಿಗ್ ಶಾಕ್: ಶೀಘ್ರದಲ್ಲಿಯೇ KSRTC, ಬಿಎಂಟಿಸಿ ಬಸ್ ಟಿಕೆಟ್ ದರ ಏರಿಕೆ*

ಪ್ರಗತಿವಾಹಿನಿ ಸುದ್ದಿ: ಪೆಟ್ರೋಲ್ ಡೀಸೆಲ್ ದರ ಹೆಚ್ಚಳದ ಬೆನ್ನಲ್ಲೇ ಇದೀಗ ಬಸ್ ಟಿಕೆಟ್ ದರ ಕೂಡ ಏರಿಕೆಯಾಗಲಿದೆ. ಕಳೆದ ವರ್ಷವಷ್ಟೇ ಜನವರಿಯಲ್ಲಿ ಶೇಕಡಾ 15 ರಷ್ಟು ಬಸ್ ಟಿಕೆಟ್ ದರವನ್ನು ಹೆಚ್ಚಿಸಿದ್ದ ರಾಜ್ಯದ ಸಾರಿಗೆ ನಿಗಮಗಳು, ಇದೀಗ ಮತ್ತೆ ದರ ಏರಿಕೆಗೆ ಸಿದ್ಧತೆ ನಡೆಸಿವೆ.

ದೇಶದಲ್ಲಿ ಡೀಸೆಲ್ ದರ ಪ್ರತಿ ಲೀಟರ್‌ಗೆ ಸುಮಾರು 8 ರೂಪಾಯಿಯಷ್ಟು ದುಬಾರಿಯಾಗಿದೆ. ಇದರಿಂದಾಗಿ ಕೆಎಸ್ಆರ್‌ಟಿಸಿ , ಬಿಎಂಟಿಸಿ , ಈಶಾನ್ಯ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಟಿಕೆಟ್ ದರ ಏರಿಕೆಗೆ ಅನುಮತಿ ನೀಡುವಂತೆ ಮುಖ್ಯಮಂತ್ರಿಗಳ ಬಳಿ ನಾಲ್ಕೂ ನಿಗಮಗಳು ಅಧಿಕೃತವಾಗಿ ಮನವಿ ಮಾಡಿವೆ.

ಇಂಧನ ದರ ಏರಿಕೆಯಿಂದಾಗಿ ಸಾರಿಗೆ ನಿಗಮಗಳಿಗೆ ಪ್ರತಿ ತಿಂಗಳಿಗೆ ಬರೋಬ್ಬರಿ 40 ಕೋಟಿ ರೂಪಾಯಿಗಳಷ್ಟು ಹೆಚ್ಚುವರಿ ನಷ್ಟವಾಗುತ್ತಿದೆ. ಇದೇ ರೀತಿ ಮುಂದುವರಿದರೆ ವಾರ್ಷಿಕವಾಗಿ ನಿಗಮಗಳ ನಷ್ಟದ ಪ್ರಮಾಣ 480 ಕೋಟಿ ರೂಪಾಯಿ ದಾಟುವ ಆತಂಕ ಎದುರಾಗಿದೆ. ಈ ಆರ್ಥಿಕ ಹೊರೆಯನ್ನು ಸರಿದೂಗಿಸಲು ಕನಿಷ್ಠ ಶೇ 25 ರಷ್ಟು ಟಿಕೆಟ್ ದರ ಏರಿಕೆ ಮಾಡುವುದು ಅನಿವಾರ್ಯ, ಇಲ್ಲದಿದ್ದರೆ ನಿಗಮಗಳನ್ನು ನಡೆಸುವುದು ಕಷ್ಟ ಎಂದು ಸಾರಿಗೆ ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ನೀಡಿರುವ ಮನವಿಯಲ್ಲಿ ವಿವರಿಸಿದ್ದಾರೆ.

ನಿಗಮಗಳಿಗೆ ಇತರೆ ಆರ್ಥಿಕ ಹೊರೆಗಳೂ ಹೆಚ್ಚುತ್ತಿವೆ. ಬರುವ ಜುಲೈ ತಿಂಗಳಿನಿಂದ ಸಾರಿಗೆ ನೌಕರರಿಗೆ ಶೇಕಡಾ 12.5 ರಷ್ಟು ಹೊಸ ವೇತನವನ್ನು ನೀಡಬೇಕಾಗಿದೆ. ಇದರೊಂದಿಗೆ ನೌಕರರಿಗೆ ನೀಡಬೇಕಿರುವ ಒಟ್ಟು 1,271 ಕೋಟಿ ರೂಪಾಯಿಗಳ ವೇತನ ಹಿಂಬಾಕಿ (Arrears) ಹಣದಲ್ಲಿ ಸದ್ಯ 450 ಕೋಟಿ ರೂಪಾಯಿ ಮಾತ್ರ ಬಿಡುಗಡೆಯಾಗಿದ್ದು, ಇನ್ನುಳಿದ 821 ಕೋಟಿ ರೂಪಾಯಿಗಳನ್ನು ನೀಡಬೇಕಿದೆ. ಇವೆಲ್ಲದರ ಜೊತೆಗೆ, ರಾಜ್ಯ ಸರ್ಕಾರದ ಶಕ್ತಿ ಯೋಜನೆಗೆ (ಮಹಿಳೆಯರ ಉಚಿತ ಪ್ರಯಾಣ) ಸಂಬಂಧಿಸಿದಂತೆ ಸರ್ಕಾರದಿಂದ ನಿಗಮಗಳಿಗೆ ಬಿಡುಗಡೆಯಾಗಬೇಕಿರುವ ಸುಮಾರು 5,000 ಕೋಟಿ ರೂಪಾಯಿಗಳ ಅನುದಾನವೂ ಬಾಕಿ ಉಳಿದಿದೆ. ಈ ಎಲ್ಲಾ ಆರ್ಥಿಕ ಸವಾಲುಗಳನ್ನು ಎದುರಿಸಲು ಟಿಕೆಟ್ ದರ ಏರಿಕೆ ಮಾಡಲೇಬೇಕಾದ ಅನಿವಾರ್ಯತೆ ಇದೆ.

ಬಸ್ ಟಿಕೆಟ್ ದರ ಏರಿಕೆಯ ಆಲೋಚನೆಗೆ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ವರ್ಷವಷ್ಟೇ ದರ ಏರಿಕೆಯಾಗಿದೆ. ಈಗ ಮತ್ತೆ ಬೆಲೆ ಏರಿಕೆ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಬಸ್ ಟಿಕೆಟ್ ದರ ಏರಿಕೆ ಬಗ್ಗೆ ಸಿಎಂ ಡಿ.ಕೆ.ಶಿವಕುಮಾರ್ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಕಾದುನೋಡಬೇಕಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button