ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ದೇಶದಲ್ಲಿ ನರೇಂದ್ರ ಮೋದಿಯವರ ಸರ್ಕಾರ, ರಾಜ್ಯದಲ್ಲಿ
ಯಡಿಯೂರಪ್ಪ ಸರ್ಕಾರ ಇರುವುದರಿಂದ ಕಿತ್ತೂರು ಕ್ಷೇತ್ರ ಅಭಿವೃದ್ಧಿ ಪಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಶಾಸಕ ಮಹಾಂತೇಶ ದೊಡ್ಡಗೌಡರ ಅವರು ಭರವಸೆ ನೀಡಿದರು.
ಅ.8ರಂದು ದಸರಾ ಹಬ್ಬದ ಪ್ರಯುಕ್ತವಾಗಿ ಗಿರಿಯಾಲ ಕೆಬಿ ಗ್ರಾಮದ ಶ್ರೀ ವೆಂಕಟೇಶ್ವರ ಜಾತ್ರಾಮಹೋತ್ಸವದ ನಿಮಿತ್ತವಾಗಿ ನಡೆದ ಹಿಂದುಸ್ಥಾನಿ ಗಾಯನ, ಸುಗಮ ಸಂಗೀತಗಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೇಶಭಕ್ತ, ವೀರಯೋಧ ಸುಭಾಷಚಂದ್ರ ಬೋಸ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಗಿಡಕ್ಕೆ ನೀರೆಡುವ ಮೂಲಕ ಉದ್ಘಾಟನೆ ಮಾಡಿದರು. ಗ್ರಾಮದ ಧುರೀಣ ಶಿವಪ್ಪ ಇಟಗಿ ಅವರಿಂದ ಶಾಸಕ ಮಹಾಂತೇಶ ದೊಡ್ಡಗೌಡರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಗಿರಿಯಾಲ ಗ್ರಾಮದಲ್ಲಿನ 35ಕ್ಕೂ ಹೆಚ್ಚು ದೇಶ ಸೇವೆ ಮಾಡಿದ ಮಾಜಿ ಹಾಗೂ ಹಾಲಿ ಸೈನಿಕರಿಗೆ ಶಾಲು ಹೊದಿಸಿ, ಸ್ವಾಮಿ ವಿವೇಕಾನಂದರವರ ಪುಸ್ತಕವನ್ನು ಸೈನಿಕರಿಗೆ ಕೊಡುವ ಮೂಲಕ ಶಾಸಕರಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಗ್ರಾಮದಲ್ಲಿ ದೊಡ್ಡ ವಿಶೇಷವಾಗಿತ್ತು. ಜೊತೆಗೆ ರಾಜಧಾನಿ ಬೆಂಗಳೂರಿನಿಂದ ಕಾರ್ಯಕ್ರಮಕ್ಕೆ ಬಂದಿದ್ದ ಖ್ಯಾತ ಗಾಯಕರಾದ ಶರಣ ಗುರ್ಜರ್ ರವರ ಬಳಗದವರಿಗೆ ಗ್ರಾಮದ ವತಿಯಿಂದ ಸನ್ಮಾನ ಮಾಡಲಾಯಿತು.
ಶಾಸಕರಾದ ಮಹಾಂತೇಶ ದೊಡ್ಡಗೌಡರ ಅವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು , ಕಿತ್ತೂರು ಕ್ಷೇತ್ರದ ಹಳ್ಳಿಗಳಲ್ಲಿ ನೆರೆಯಿಂದ ಹಾನಿಯುಂಟಾಗಿರುವ ಸಂತ್ರಸ್ತರ ಕುರಿತು ಸಂಪೂರ್ಣ ವರದಿಯನ್ನು ಪಡೆದುಕೊಂಡು ಅವರಿಗೆ ಸೂಕ್ತ ರೀತಿಯ ಸೌಲಭ್ಯ ಒದಗಿಸುವಲ್ಲಿ ಪ್ರಮಾಣಿಕ ಪ್ರಯತ್ನ ಮಾಡುವೆ ಎಂದು ಶಾಸಕರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕ ಪಂಚಾಯತ ಸದಸ್ಯ ಮಲ್ಲನಾಯ್ಕ ಬಾವಿ, ಗ್ರಾಮದ ಧುರೀಣರಾದ ಗಿರೇಪ್ಪ ಗುಂಡ್ಲೂರ, ಮಾಜಿ ಗ್ರಾಮ ಪಂಚಾಯಿತ ಸದಸ್ಯರಾದ ಈರಪ್ಪ ಗುಂಡ್ಲೂರು, ಗಂಗಪ್ಪ ಹಳಮನಿ, ಮಾಜಿ ಸೈನಿಕ ಮೇಲಗಿರಿ ವಿರಕಿನಕೊಪ್ಪ, ಶಿಕ್ಷಕರಾದ ಮಹಾಂತೇಶ ಇಟಗಿ, ದೇವೆಂದ್ರಪ್ಪ ಕೆಳಗಿನಮನಿ ಹಾಗೂ ಗ್ರಾಮದ ಯುವಕರು, ಮತ್ತಿತರರು, ಗ್ರಾಮಸ್ಥರು ಕಾರ್ಯಕ್ರಮವನ್ನು ವೀಕ್ಷಣೆ ಮಾಡಿ, ಸಂಭ್ರಮಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ