Kannada NewsKarnataka NewsLatest

ಅಧಿಕಾರದ ಅವಧಿಯಲ್ಲಿ ಪಕ್ಷಾತೀತ, ಧರ್ಮಾತೀತ, ಜಾತ್ಯಾತೀತವಾಗಿ ನಡೆದುಕೊಂಡ ಅಧಿಕಾರಿ ಪಿ ಎ ಮೇಘಣ್ಣವರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕಚೇರಿಯನ್ನು ಕುಟುಂಬದಂತೆ ಬಳಸಿಕೊಂಡ ಹೃದಯವಂತ ಅಧಿಕಾರಿ ಪಿ ಎ ಮೇಘಣ್ಣವರ ಅವರ ಆಡಳಿತದಲ್ಲಿ ವಾತ್ಸಲ್ಯದ ಉಸಿರಿತ್ತು,  ಕುರ್ಚಿಯಲ್ಲಿ ಕುಳಿತ ಮೇಘಣ್ಣವರ ಎಂದೂ ಕುಬ್ಜರಾಗಲಿಲ್ಲ, ಕುರ್ಚಿ ತ್ಯಾಗ ಮಾಡಿದ ಬುದ್ಧ, ಬಸವಣ್ಣ, ಗಾಂಧೀಜಿ, ಅಂಬೇಡ್ಕರ್ ಪರಂಪರೆಯಲ್ಲಿ ಮೇಘಣ್ಣವರ ಮುಂದುವರಿದವರು ಎಂದು ಬಂಡಾಯ ಕವಿ ಸತ್ಯಾನಂದ ಪಾತ್ರೋಟ ಹೇಳಿದರು.
ನಗರದ ಬಸವರಾಜ ಕಟ್ಟೀಮನಿ ಸಭಾಂಗಣದಲ್ಲಿ ಏರ್ಪಡಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಪಿ ಎ ಮೇಘಣ್ಣವರ ಅವರ ಅಭಿನಂದನಾ ಸಮಾರಂಭ ಹಾಗೂ ಮೇಘಮಿತ್ರ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು.
ಅಧಿಕಾರದ ಅವಧಿಯಲ್ಲಿ ಪಕ್ಷಾತೀತ, ಧರ್ಮಾತೀತ, ಜಾತ್ಯಾತೀತ ವಾಗಿ ನಡೆದುಕೊಂಡ ಅವರು ವಿವೇಕ ಮತ್ತು ವಿನಯದ ಹಲವು ಶಕ್ತಿಗಳ ಒಕ್ಕೂಟವಾಗಿದ್ದಾರೆ. ಕುರ್ಚಿಯ ಅಮಲು ಅವರಿಗಿರಲಿಲ್ಲ, ಅರಿವಿತ್ತು, ಅಧಿಕಾರದ ವ್ಯಾಮೋಹದ ಬದಲು ಕರ್ತವ್ಯದ ತ್ಯಾಗವಿತ್ತು. ಇದು ಮೇಘಣ್ಣವರ ಅವರ ದೊಡ್ಡ ಸಂಪತ್ತು, ಅವರಿನ್ನೂ ಸಮಾಜದ ಭಾಗವಾಗಿ ದುಡಿಯುತ್ತಿರುವುದು ನಮಗೆಲ್ಲಾ ಅಭಿಮಾನದ ಸಂಗತಿಯಾಗಿದೆ.  ಇಂತಹ ಮೇಘಣ್ಣವರ ಹೆಸರಿನಲ್ಲಿ ಒಂದು ಟ್ರಸ್ಟ್ ಮಾಡಿ ಪ್ರತಿಭಾವಂತವರನ್ನು ಪ್ರೋತ್ಸಾಹಿಸುವ ಕಾರ್ಯವಾಗಲಿ ಎಂದರು.
 ತಮಿಳುನಾಡು ಸರ್ಕಾರದ ಸಮಾಜಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶಂಭು ಕಲ್ಲೋಳಿಕರ ‘ಮೇಘಮಿತ್ರ’ ಅಭಿನಂದನಾ ಗ್ರಂಥವನ್ನು ಲೋಕಾರ್ಪಣೆ ಮಾಡಿ, ದಿವಂಗತ ಎಂ ಎನ್ ರಾಯಣ್ಣವರ ಅವರು ಬೆಳಸಿದ ಮರದಡಿ ಇಂದು ಈ ಕಾರ್ಯಕ್ರಮ ನಡೆಯುತ್ತಿದೆ, ನಾನಿಂದು ತಮಿಳು ನಾಡಿನ ಹೆಚ್ಚುವರಿ ಕಾರ್ಯದರ್ಶಿ ಸ್ಥಾನದಲ್ಲಿರಲು ರಾಯಣ್ಣವರಿಂದ ಪ್ರೇರಣೆ ಪಡೆದ ಪಿ ಎ ಮೇಘಣ್ಣವರ ಹಾಗೂ ಡಾ. ಶಿವರುದ್ರ ಕಲ್ಲೋಳಿಕರ ಅವರುಗಳು ನೀಡಿದ ಬೆಂಬಲ ಮತ್ತು ಪ್ರೋತ್ಸಾಹವೇ ಕಾರಣ. ಅಧಿಕಾರಿಯಾಗಿ ಬಡವರ ಕುರಿತು ಮಾಡಿದ ಸೇವೆಯೇ ಮೇಘಣ್ಣವರ ಅವರ ಶ್ರೇಷ್ಠ ಸಾಧನೆ, ಅವರ ಜೊತೆಗೆ ಕಾರ್ಯ ನಿರ್ವಹಿಸಿದ ಎಲ್ಲಾ ಅಧಿಕಾರಿಗಳು ಅವರ ಕಾರ್ಯ ವೈಖರಿಯನ್ನು ನನ್ನ ಮುಂದೆ ಹೇಳಿದಾಗ ಮೇಘಣ್ಣವರ ಅಧಿಕಾರಿಯಾಗಿ  ಸಾರ್ಥಕ ಸೇವೆ ಮಾಡಿದ್ದಾರೆ ಎಂಬ ಅಭಿಮಾನ ತುಂಬಿ ಬರುತ್ತದೆ, ಅವರನ್ನು  ಈ ಮೇಘಮಿತ್ರ ಗ್ರಂಥ ಚಿರಸ್ಥಾಯಿಗೊಳಿಸಿದೆ ಎಂದು ಮಾತನಾಡಿದರು.*
      *ಅತಿಥಿಯಾಗಿ ಭಾಗವಹಿಸಿದ ಕನ್ನಡ ಪರ ಹೋರಾಟಗಾರ ಅಶೋಕ ಚಂದರಗಿ ಅವರು ಮಾತನಾಡಿ ಮೇಘಣ್ಣವರ ಅಧಿಕಾರಿಯಾಗಿ ಮಾಡಿದ ಸೇವೆ ಶ್ರೇಷ್ಠ ಮಟ್ಟದ್ದು, ಆದರೆ ಅವರು ವೃತ್ತಿಯಲ್ಲಿ ಮಾಡಿದ್ದು ಬಡವರು ಮತ್ತು ತುಳಿತಕ್ಕೊಳಗಾದ ಜನಗಳ ಕಣ್ಣೀರು ಒರೆಸುವ ಕಾರ್ಯ. ಅದಕ್ಕಾಗಿ ಅವರು ಅಪ್ಪಟ ಮಾನವತಾವಾದಿ ಎಂದು ಬಣ್ಣಿಸಿದರು.
ಇದೇ ಸಂದರ್ಭದಲ್ಲಿ ಅಭಿನಂದನಾ ಪರ ನುಡಿಗಳನ್ನಾಡಿದ ಹಿರಿಯ ಬಂಡಾಯ ಸಾಹಿತಿ ಡಾ. ಸರಜೂ ಕಾಟ್ಕರ್ , ಮೇಘಣ್ಣವರ ಎಂದರೆ ಅದೊಂದು ಮಾನವೀಯ ಸಂಬಂಧಗಳ ರೂಪ, ಅಂದಿನ ಅಧಿಕಾರಿ, ದಲಿತ ಚಳುವಳಿಯ ರೂವಾರಿ  ಎಂ ಎನ್ ರಾಯಣ್ಣವರ ಪ್ರೇರೇಪಣೆಗೊಳಿಸಿದ ಸ್ವಸ್ವಾಭಿಮಾನದ ಜಾಗೃತಿಯೇ ಇದಕ್ಕೆ ಕಾರಣ. ತಾವು ತುಳಿದು ಬಂದ ಬಡತನದ ದಾರಿಯನ್ನು ಅಧಿಕಾರಿಯಾಗಿ ಮನುಷ್ಯತ್ವದ ದಾರಿಯಾಗಿ ಪರಿವರ್ತಿಸಿದ್ದು ಅವರ ಜೀವನದ ಬಹು ದೊಡ್ಡ ಸಾಧನೆ ಎಂದು ಹೇಳಿದರು. ಇದಕ್ಕೂ ಮೊದಲು ಮೇಘಣ್ಣವರ ದಂಪತಿಗಳನ್ನು  ಸನ್ಮಾನಿಸಲಾಯಿತು.
 ಅಭಿನಂದನೆಗೆ ಪ್ರತಿಯಾಗಿ ಮಾತನಾಡಿದ ಪಿ ಎ ಮೇಘಣ್ಣವರ, ಅತ್ಯಂತ ಕಡು ಬಡತನದ ಮತ್ತು ಅಶಿಕ್ಷಿತ ತಂದೆ ತಾಯಿಗಳ ಮಗನಾಗಿ ಹುಟ್ಟಿದ ನನಗೆ ದಿವಂಗತ ಎಂ ಎನ್ ರಾಯಣ್ಣವರ ಅವರು ಚಿಕ್ಕೋಡಿಯ ಭೀಮ್ ನಗರದಲ್ಲಿ ಸ್ಥಾಪಿಸಿದ ಡಾ. ಅಂಬೇಡ್ಕರ್ ವಾಚನಾಲಯ ನನ್ನ ಬದಕಿನಲ್ಲಿ ಓದಿಗೆ ಬಹು ದೊಡ್ಡ ಬದಲಾವಣೆ ತಂದಿತು.  ರಾಯಣ್ಣವರ ನನ್ನ ಬದುಕಿನ ಮಾರ್ಗದರ್ಶಿಯಾದರು.  ನಮ್ಮ ಸಮುದಾಯದಲ್ಲಿ ಬಹಳಷ್ಟು ಜನ ಜವಾನರು, ಕಾರಕೂನರು, ಶಿಕ್ಷಕರು ಇದ್ದಾರೆ ಆದರೆ ಅಧಿಕಾರಿಗಳ್ಯಾರೂ ಇಲ್ಲ, ಆದರೆ ನಾನು ಅಧಿಕಾರಿಯೇ ಆಗಬೇಕು ಎಂದು ಛಲತೊಟ್ಟು ಓದಿ ಅಧಿಕಾರಿಯಾದೆ, ಅಧಿಕಾರವನ್ನು ಸೇವೆಯೆಂದು  ತಿಳಿದು ದುಡಿದೆ. ಅದರ ಫಲವೇ ಈ ಅಭಿಮಾನ ಎಂದು ತಿಳಿದಿರುವೆ, ಈ ಋಣ ತೀರಿಸುವೆ ಎಂದು ಕೃತಜ್ಞತೆಗಳನ್ನು ಸಲ್ಲಿಸಿದರು.
ಎಂಕೆ ಪಬ್ಲಿಸಿಟಿಯ ಎಮ್ ಕೆ ಜೈನಾಪುರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿದ್ಯಾವತಿ ಭಜಂತ್ರಿ, ಡಾ. ವ್ಹಿ ಎಸ್ ಚೌಗುಲಾ, ಗಣೇಶ್ ಕದಮ್, ಮೇಘಣ್ಣವರ ದಂಪತಿಗಳು ಉಪಸ್ಥಿತರಿದ್ದರು.
ಹಿರಿಯ ಸಂಶೋಧಕ ಡಾ. ಶಿವರುದ್ರ ಕಲ್ಲೋಳಿಕರ, ಚಂದ್ರಕಾಂತ ಪೋಕಳೆ, ಡಾ. ರಾಮಕೃಷ್ಣ ಮರಾಠೆ, ಡಾ. ಯಲ್ಲಪ್ಪ ಹಿಮ್ಮಡಿ, ಡಾ. ಯಮನಪ್ಪ ಬಲವಂತಗೋಳ, ಪ್ರೊ. ಮಹಾಂತೇಶ ಚಲವಾದಿ, ಅರವಿಂದ ಗಟ್ಟಿ, ಡಾ. ಪಿ ಜಿ ಕೆಂಪಣ್ಣವರ, ಬಿ ಎಸ್ ಗವಿಮಠ, ಜಗದೀಶ ರೂಗಿ,  ಎ ಎ ಸನದಿ,ರವಿ ಕರಲಿಂಗನವರ, ಡಾ. ಎ ಬಿ ಘಾಟಗೆ, ಬಸವರಾಜ ಗಾರ್ಗಿ, ಶಂಕರ ಬಾಗೇವಾಡಿ, ಮೋಹನ ಪಾಟೀಲ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸ್ವಾತಿ ಕಿಟದಾಳ ಅವರ ಭಕ್ತಿಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಡಾ. ಸುಬ್ಬರಾವ್ ಎಂಟೆತ್ತಿನವರ  ಸ್ವಾಗತ ಮತ್ತು ಪ್ರಾಸ್ತಾವಿಕ ಮಾತುಗಳನ್ನಾಡಿದರು, ಕವಿ ನದೀಮ್ ಸನದಿ ಕಾರ್ಯಕ್ರಮ ನಿರ್ವಹಿಸಿದರು ಕೊನೆಯಲ್ಲಿ ಪತ್ರಕರ್ತ ಗಣೇಶ ಕದಮ್ ಅವರು ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button