Latest

ಕಳ್ಳ ಮಾರ್ಗದಲ್ಲಿ ಭಾರತ ಪ್ರವೇಶಿಸಿದ್ದ ಪಾಕಿಸ್ತಾನಿ ಮಹಿಳೆ ಭಟ್ಕಳದಲ್ಲಿ ಬಂಧನ

ಪ್ರಗತಿವಾಹಿನಿ ಸುದ್ದಿ, ಭಟ್ಕಳ – ಉತ್ತರ ಕನ್ನಡ ಜಿಲ್ಲೆ ಭಟ್ಕಳದಲ್ಲಿ ಅಕ್ರಮವಾಗಿ ವಾಸವಿದ್ದ ಪಾಕಿಸ್ತಾನಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ವೀಸಾ ಇಲ್ಲದೇ ಅನಧಿಕೃತವಾಗಿ ಖತೀಜಾ ಮೆಹರಿನ್ ಎನ್ನುವ ಪಾಕಿಸ್ತಾನ ಮೂಲದ ಮಹಿಳೆ ಭಟ್ಕಳದಲ್ಲಿ ವಾಸವಾಗಿದ್ದಳು. ಬುಧವಾರ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.
ಈಕೆ ಪಾಕಿಸ್ತಾನದ ರಾಷ್ಟ್ರೀಯತೆಯನ್ನು ಹೊಂದಿದ್ದು, ಸುಮಾರು 8 ವರ್ಷಗಳ ಹಿಂದೆ ಭಟ್ಕಳದ ನವಾಯತ ಕಾಲೋನಿಯ ಜಾವೀದ್ ಮೊಹಿದ್ದೀನ್ ರುಕ್ಕುದ್ದೀನ್ ಎಂಬಾತನನ್ನು ದುಬೈನಲ್ಲಿ ವಿವಾಹವಾಗಿ, 2014ರಲ್ಲಿ 3 ತಿಂಗಳ ವಿಸಿಟಿಂಗ್ ವೀಸಾದ ಮೇಲೆ ಭಾರತಕ್ಕೆ ಬಂದಿದ್ದು
ಬಳಿಕ ವಾಪಸ್ಸಾಗದ್ದಳು .
ಮತ್ತೆ  2015ರ ಪ್ರಾರಂಭದಲ್ಲಿ ಕಳ್ಳ ಮಾರ್ಗದಲ್ಲಿ ಭಾರತಕ್ಕೆ ನುಸುಳಿ ಬಂದು ತನ್ನ ಗಂಡನ ಮನೆಯಾದ ಭಟ್ಕಳದ ನವಾಯತ ಕಾಲೋನಿಯಲ್ಲಿ ತನ್ನ 3 ಮಕ್ಕಳೊಂದಿಗೆ ಅಕ್ರಮವಾಗಿ ವಾಸವಾಗಿದ್ದಳು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಮಾಹಿತಿ ನೀಡಿದ್ದಾರೆ.
ಭಟ್ಕಳದಲ್ಲಿ ಈಕೆಯು ಸುಳ್ಳು ದಾಖಲೆಗಳನ್ನು ಸ್ಥಳೀಯ ಸಂಸ್ಥೆಗಳಿಗೆ ನೀಡಿ ರೇಷನ್ ಕಾರ್ಡ್, ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಪಡೆದಕೊಂಡಿದ್ದಾಳೆ. ಪೊಲೀಸರು ಆಕೆಯನ್ನು ಬಂಧಿಸಿ, ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಈಕೆ ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕೆಲವು ತಿಂಗಳುಗಳಿಂದ ಸ್ಥಳೀಯ ಪೊಲೀಸರು ಇತರ ತನಿಖಾ ಸಂಸ್ಥೆಯ ಸಹಕಾರದೊಂದಿಗೆ ಪತ್ತೆಗೆ ಸತತವಾಗಿ ಪ್ರಯತ್ನಿಸಿ, ಅಕ್ರಮವಾಗಿ ವಾಸವಾಗಿದ್ದ ಈಕೆಯನ್ನು  ಬಂಧಿಸುವಲ್ಲಿ  ಯಶಸ್ವಿಯಾಗಿದ್ದಾರೆ.
ಈಕೆಯ ಮೇಲೆ ವಿದೇಶಿ ಕಾಯಿದೆ ಉಲ್ಲಂಘನೆ ಮತ್ತು ಇತರೆ ಐಪಿಸಿ ಪ್ರಕರಣಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈಕೆಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು  ಹೇಳಿದ್ದಾರೆ.
 ಕಾರ್ಯಾಚರಣೆಯು ಎಸ್. ಪಿ. ಶಿವಪ್ರಕಾಶ್ ದೇವರಾಜು, ಎಎಸ್ ಪಿ ಬದರಿನಾಥ, ಭಟ್ಕಳ ಡಿವೈಎಸ್ ಪಿ ಬೆಳ್ಳಿಯಪ್ಪ ಕೆ.ಯು. ಹಾಗೂ ಸಿಪಿಐ ದಿವಾಕರ ಪಿ.ಎಮ್ ಅವರ ಮಾರ್ಗದರ್ಶನ ಹಾಗೂ ಸೂಚನೆಯ ಮೇರೆಗೆ ಭಟ್ಕಳ ನಗರ ಪೊಲೀಸ್ ಠಾಣಿಯ ಪಿಎಸ್ಐ ಸುಮಾ ಬಿ. ಮತ್ತು ಸಿಬ್ಬಂದಿ ನಾರಾಯಣ ನಾಯ್ಕ, ಮುಗ್ದುಂ ಪತ್ತೆಖಾನ್, ಲೋಕಪ್ಪ ಪತ್ತಿ, ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿ ಹೀನಾ ಎಫ್. ಇತರರು ತಂಡದಲ್ಲಿ ಇದ್ದರು.

Related Articles

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button