*ಬನ್ನೂರು ಶ್ರೀಗಳಿಗೆ ಪಂಚಾಚಾರ್ಯ ಶ್ರೀ ಪ್ರಶಸ್ತಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಮದುರ್ಗ ತಾಲೂಕಿನ ಬನ್ನೂರು ಗ್ರಾಮದ ಚಿಕ್ಕಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಶ್ರೀ ಜಗದ್ಗುರು ಪಂಚಾಚಾರ್ಯರ ಯುಗಮಾನೋತ್ಸವದ ಅಂಗವಾಗಿ ಹುಕ್ಕೇರಿ ಶ್ರೀ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದಿಂದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಮಾ.30 ರಂದು ಸಂಜೆ 6.30ಕ್ಕೆ ಪಂಚಾಚಾರ್ಯ ಶ್ರೀ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಿದ್ದಾರೆ.
ರಾಮದುರ್ಗ ತಾಲೂಕಿನ ಬನ್ನೂರು ಚಿಕ್ಕಮಠದಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಕಟಕೋಳ ಎಂ. ಚಂದರಗಿಯ ಹಿರೇಮಠದ ತಪೋಭೂಷಣ ಶ್ರೀ ವೀರಭದ್ರ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿಯವರು, ಬಾಗೋಜಿಕೊಪ್ಪ ಹಿರೇಮಠದ ಶ್ರೀ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ, ಹರಲಾಪುರದ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ ಹಾಗೂ ಕಟಕೋಳ ಎಂ. ಚಂದರಗಿ ಹಿರೇಮಠದ ಉತ್ತರಾಧಿಕಾರಿಯಾದ ಶ್ರೀ ರೇಣುಕ ಗಡದೇಶ್ವರ ದೇವರು ಇವರ ಸಾನಿದ್ಯದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಆಡಳಿತಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿಯ ಹಿನ್ನೆಲೆ
ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ತಮ್ಮ ಮಠದಿಂದ ಪ್ರತಿವರ್ಷ ಒಬ್ಬ ಹಿರಿಯ ಸ್ವಾಮೀಜಿ ಅವರಿಗೆ ಯುಗಾದಿ ಪಾಂಡ್ಯಯದಂದು ಶ್ರೀ ರೇಣುಕಾಚಾರ್ಯ ಯುಗಮಾನೋತ್ಸವನ್ನು ತಮ್ಮ ಶ್ರೀಮಠದಲ್ಲಿ ಆಚರಿಸಿ, ಹಿರಿಯ ಶ್ರೀಗಳಲ್ಲಿಯೇ ಹೋಗಿ ಅವರಿಗೆ ಪಂಚಾಚಾರ್ಯರ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸುವ ಪದ್ಧತಿಯನ್ನು ಇಟ್ಟುಕೊಂಡಿದ್ದಾರೆ. ಈಗಾಗಲೇ ಅನೇಕ ಜನ ಮಹಾಸ್ವಾಮೀಜಿಗಳಿಗೆ ಶ್ರೀಗಳು ಅವರ ಮಠಕ್ಕೆ ಹೋಗಿ ಪ್ರಶಸ್ತಿ ಪ್ರಧಾನ ಮಾಡಿ ಬಂದಿದ್ದಾರೆ.
ಯುಗಾದಿಯ ಪಾಂಡ್ಯಯ ದಿನ ವೀರಶೈವ ಲಿಂಗಾಯತರು ತಮ್ಮ ಮನೆಯಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯರ ಭಾವ ಚಿತ್ರ ಇರಿಸಿ ಶ್ರೀ ಜಗದ್ಗುರು ಪಂಚಾಚಾರ್ಯರ ಯುಗಮಾನೋತ್ಸವ ಆಚರಿಸಿ ಭಕ್ತಿಯನ್ನು ಸಮರ್ಪಪಿಸುವ ಪರಿಪಾಠವನ್ನು ಅಳವಡಿಸಿಕೊಳ್ಳಬೇಕೆಂದು ಹುಕ್ಕೇರಿ ಶ್ರೀಗಳು ಕರೆ ನೀಡಿದ್ದಾರೆ.
ಬನ್ನೂರಿನ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ಸಂಸ್ಕೃತ ಎಂ.ಎ.ಪದವಿದರರು. ಕನ್ನಡ, ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯವನ್ನು ಗಳಿಸಿರುವ ಶ್ರೀಗಳು ಸರಳತೆಗೆ ಮತ್ತೊಂದು ಹೆಸರಾಗಿದ್ದಾರೆ. ನಿರಂತರವಾಗಿ ಕೃಷಿ ಕಾಯಕದಲ್ಲಿ ತೋಡಗಿರುವ ಶ್ರೀಗಳು ಇವರಿಗೆ ಎಲ್ಲರು ಕೃಷಿ ಋಷಿಗಳು ಎಂದು ಹೇಳುತ್ತಾರೆ.