ಮೊದಲ ಬಾರಿಗೆ ಗೋಕಾಕ ನೆಲದಲ್ಲಿ ಗುಡುಗಿದ ಕಡಾಡಿ; ಈ ಬಾರಿ ವಿಧಾನಸೌಧ ಕಬ್ಜಾ ಎಂದ ಕಾಶಪ್ಪನವರ್
ಪ್ರಗತಿವಾಹಿನಿ ಸುದ್ದಿ, ಗೋಕಾಕ: ಪಂಚಮಸಾಲಿ ಹೋರಾಟ ಈ ಬಾರಿ ಅಂತಿಮ ಹೋರಾಟವಾಗಿದ್ದು ಮೀಸಲಾತಿ ಪಡೆದೇ ತೀರುತ್ತೇವೆ ಎಂದು ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಗೋಕಾಕದಲ್ಲಿ ಭಾನುವಾರ ಬೃಹತ್ ಪಂಚಮಸಾಲಿ ಸಮಾವೇಶದಲ್ಲಿ ಅವರು ಮಾತನಾಡಿದರು.
ನಮ್ಮದು ಸ್ವಾಭಿಮಾನಿ ಸಮಾಜ, ಯಾರಿಗೂ ನಮಸ್ಕಾರ ಮಾಡಿ ಸ್ವಾಭಿಮಾನ ಕಳೆದುಕೊಳ್ಳಬೇಡಿ. ಈ ಸಮಾವೇಶಕ್ಕೆ ನಮ್ಮ ಸಮಾಜೇತರ ಯಾರಿಂದಲೂ ಒಂದು ಪೈಸೆಯನ್ನೂ ಪಡೆದಿಲ್ಲ ಎಂದರು.
ಮೀಸಲಾತಿ ಬಿಟ್ಟರೆ ನಮ್ಮದು ಬೇರೇನೂ ಬೇಡಿಕೆ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ಕೆಲವರು ಹೋರಾಟ ಒಡೆಯುವ ಯತ್ನ ಮಾಡಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೂವರಿಗೆ ಮಂತ್ರಿಗಿರಿ
ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ನನ್ನನ್ನು ಮುಗಿಸಲು ಎಲ್ಲ ಕಳ್ಳರೂ ಒಂದಾದರು. ಹಣ ಹಂಚಿದರು. ನನ್ನನ್ನು ಅಲ್ಲಾಡಿಸಲು ಯಾರಿಂದಲೂ ಆಗುವುದಿಲ್ಲ. ದುಬೈನಲ್ಲಿ ಆಸ್ತಿ ಮಾಡಿ ಏನು ಮಾಡುತ್ತೀರಿ? ರೈತರಿಗೆ ಸರಿಯಾಗಿ ದುಡ್ಡು ಕೊಡಿ, ಕಾಟಾ ಹೊಡೆಯೋದು ಬಿಡಿ. ದುಡ್ಡು ಹೊಡೆದು ಏನು ಮಾಡುತ್ತೀರಿ. ಗೋಶಾಲೆ ಕಟ್ಟಿ, ಆಸ್ಪತ್ರೆ ಕಟ್ಟಿ ಎಂದು ಮಾರ್ಮಿಕವಾಗಿ ನುಡಿದರು.
ಸ್ವಾಭಿಮಾನದಿಂದ ಬದುಕೋಣ. ಯಾರಮನೆ ಮುಂದೆ ಹೋಗಿ ಯಾಕೆ ಕೈ ಮುಗೀತೀರಿ? ಎಂದು ಪ್ರಶ್ನಿಸಿದರು.
ಬೊಮ್ಮಾಯಿ ಮೊನ್ನೆ ಕರೆದು ಈಬಾರಿ ರಮೇಶ ಜಾರಕಿಹೊಳಿ, ಯೋಗೀಶ್ವ ಮತ್ತು ನಿಮ್ಮನ್ನು ಮಂತ್ರಿ ಮಾಡಬೇಕೆಂದಿದ್ದೇನೆ ಎಂದರು. ನನಗೆ ಮಂತ್ರಿ ಬೇಡ. ನಾನು ಕೇಳುತ್ತಿರುವ ಮೀಸಲಾತಿ ಕೊಡಿ ಎಂದಿದ್ದೇನೆ. ಇನ್ನು 6 ತಿಂಗಳಲ್ಲಿ ನಾನು ಮಂತ್ರಿಯಾಗಿ ಏನು ಮಾಡಬೇಕು? ಸನ್ಮಾನ ಮಾಡಿಕೊಳ್ಳುವುದರೊಳಗೆ ಚುನಾವಣೆ ಬಂದೇ ಬಿಡ್ತದೆ. ಸ್ಟಾರ್ ಕ್ಯಾಂಪೇನರ್ ಆಗಿ ಎಂದು ಅರುಣ ಸಿಂಗ್ ಮನೆಗೆ ಬಂದು ಈಗಾಗಲೆ ಆಮಂತ್ರಣ ಕೊಟ್ಟಿದ್ದಾರೆ ಎಂದು ಹೇಳಿದರು.
ಡಿಸೆಂಬರ್ 12ರೊಳಗೆ ಮೀಸಲಾತಿ ಕೊಟ್ಟೇ ಕೊಡ್ತಾರೆ. ಎಲ್ಲರೂ ಹೊರಾಟಕ್ಕೆ ಬನ್ನಿ. ನಮಗೆ ಮೀಸಲಾತಿ ಕೊಡುವ ಎಲ್ಲರಿಗೂ ಆಶಿರ್ವಾದ ಮಾಡೋಣ ಎಂದು ಅವರು ಹೇಳಿದರು.
ಸಂಘರ್ಷ ಮಾಡಲು ಬಂದಿಲ್ಲ- ಲಕ್ಷ್ಮೀ ಹೆಬ್ಬಾಳಕರ್
ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ, 2 ಎ ಮೀಸಲಾತಿ ಸಿಗೋವರೆಗೂ ನಾವು ಕ್ಷಮಿಸುವುದಿಲ್ಲ. ಗೋಕಾಕದಲ್ಲಿ ಸಮಾವೇಶ ಮಾಡಲು ಎಂಟೆದೆ ಬೇಕು ಎಂದು ಯಾರೋ ಹೇಳಿದರು. ನಾವು ಕಿತ್ತೂರು ಚನ್ನಮ್ಮನ ವಂಶಸ್ಥರು. ನಾವು ಮೀಸಲಾತಿ ಕೇಳಲು ಬಂದಿದ್ದೇವೆ. ಸಂಘರ್ಷ ಮಾಡಲು ಬಂದಿಲ್ಲ. ನಾವು 12ನೇ ಶತಮಾನದಲ್ಲಿ ಸಮಾನತೆ ಸಾರಿದ ಬಸವಣ್ಣನ ಕುಲದವರು. ಯಾರಿಂದಲೂ ಕಲಿಯಬೇಕಾಗಿಲ್ಲ ಎಂದು ಹೇಳಿದರು.
ಮುಖ್ಯಮಂತ್ರಿಗಳೇ ನೀವೂ ನಮ್ಮ ಸಮಾಜದವರು. ನೀವು ಮೀಸಲಾತಿ ಕೊಡಲಿಲ್ಲ ಎಂದರೆ ಇನ್ನ ಯಾರು ಬಂದು ಕೊಡುತ್ತಾರೆ? ನೀವು ಕೊಟ್ಟರೆ ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ನಿಮ್ಮ ಫೋಟೋ ಹಚ್ಚುತ್ತಾರೆ. ಉಪ್ಪಿನಕಾಯಿ ತರ ನಮ್ಮ ಸಮಾಜವನ್ನು ಉಪಯೋಗ ಮಾಡಿಕೊಳ್ಳಲು ಹೋಗಬೇಡಿ. ಅಂದು ಸಂಗೊಳ್ಳಿ ರಾಯಣ್ಣ ರಾಣಿ ಚನ್ನಮ್ಮನಿಗೆ ಸಹಾಯ ಮಾಡಿದನೆಂದು ಕುರುಬ ಸಮಾಜವನ್ನು ನಾವು ಇಂದಿಗೂಆದರ್ಶವಾಗಿ ನೋಡುತ್ತೇವೆ. ಎಲ್ಲ ಸಮಾಜಗಳಿಗೂ ನಾವು ಗೌರವ ಕೊಡುತ್ತೇವೆ ಎಂದ ಅವರು, ಸಮಾಜದ ವೇದಿಕೆ ಇದು. ರಾಜಕಾರಣ ಮಾತನಾಡಲು ಮನಸ್ಸು ಬರುತ್ತಿಲ್ಲ. ಬಹಳಷ್ಟು ಮಾತನಾಡಬೇಕೆಂದು ಅನಿಸಿದರೂ ಹೋರಾಟದ ದಿಕ್ಕು ಬದಲಾಗಬಹುದು ಎಂದು ಸುಮ್ಮನಿದ್ದೇನೆ. 10 ಬಾರಿ ಕರೆದರೂ ಬರುತ್ತೇನೆ. ನಿರ್ಭಯರಾಗಿರಿ. ನಿಮ್ಮೊಂದಿಗೆ ಇರುತ್ತೇನೆ. ಇರುವಷ್ಟು ದಿನ ಹುಲಿಯಾಗಿ ಬದುಕಿ. ಭಾಷಣ ಮಾಡುವುದಷ್ಟೇ ಅಲ್ಲ, ನಿಮ್ಮೊದಿಗೆ ಇರುತ್ತೇವೆ ಎಂದು ಧೈರ್ಯ ತುಂಬಿದರು.
ಮೊದಲ ಬಾರಿಗೆ ಗೋಕಾಕ ನೆಲದಲ್ಲಿ ಗುಡುಗಿದ ಕಡಾಡಿ
ನಮ್ಮ ಸಮಾಜ ಸ್ವಾಭಿಮಾನಿ, ನಂಬಿಕಸ್ತ ಸಮಾಜ. ಕೊಡದಿದ್ದರೆ ಇವರು ಬಿಡುವುದಿಲ್ಲ ಎನ್ನುವುದು ಮುಖ್ಯಮಂತ್ರಿ ಮತ್ತು ಸಚಿವಸಂಪುಟದವರಿಗೆ ಗೊತ್ತಿದೆ. ಮೀಸಲಾತಿ ಸಲುವಾಗಿ ಆರಂಭವಾದರೂ ನಮ್ಮ ಸಮಾಜ ದೊಡ್ಡ ಸಂಘಟನೆಯಾಗಿ ಹೊರಹೊಮ್ಮುತ್ತಿದೆ. ಆದರೆ ನಾವು ಸಂಘಟಿತರಾದರೆ ಇನ್ನೊಬ್ಬರ ಹೊಟ್ಟೆಯಲ್ಲಿ ಅವಲಕ್ಕಿ ಕುಟ್ಟಿದಂತಾಗುತ್ತಿದೆಯೋ ಗೊತ್ತಿಲ್ಲ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಗುಡುಗಿದರು.
ನಮ್ಮಿಂದ ಬೇರೆಯವರಿಗೆ ಉಪಯೋಗವಾಗಿದೆ. ನಮಗೆ ಯಾರಿಂದಲೂ ಉಪಯೋಗವಾಗಿಲ್ಲ. ರಾಜಕಾರಣ ಯಾರಪ್ಪನ ಸ್ವತ್ತಲ್ಲ. ಬೇರೆಯವರಿಗಾಗಿ ನಾವು ಊರೆಲ್ಲ ಸಂಘಟನೆ ಮಾಡಿ ಮಾಡ್ತೇವೆ. ನಮ್ಮದು ಮಾಡುವಾಗ ನಾವೇ ಹೋರಾಟ ಮಾಡಬೇಕಾಗಿದೆ. ನಾವು ಸಂಘಟಿತರಿಲ್ಲ ಎಂದು ನಮ್ಮನ್ನು ಬೇರೆಯವರು ಆಳುತ್ತಿದ್ದಾರೆ. ಯಾರಿಗೂ ನಾವು ಗುಲಾಮರಲ್ಲ. ನಮಗೆ ಭಯದ ವಾತಾವರಣವಿದೆ. ಮೊದಲು ನನ್ನನ್ನು ಮಾತನಾಡಿಸುತ್ತಿರಲಿಲ್ಲ. ಈಗ ಮಾತನಾಡಿಸಲು ಹೆದರುವ ಸ್ಥಿತಿಯಲ್ಲಿ ಜನರಿದ್ದಾರೆ. ತಾಲೂಕಿನಲ್ಲಿ ಇಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದರು.
ಮನೆ ಬಿದ್ದಾಗ ಸರಕಾರ ಕೊಟ್ಟ ದುಡ್ಡು ಹೊಡೆದವರನ್ನು ನಾವು ಬಡವರ ಬಂಧು, ಕೊಡುಗೈ ಧಾನಿ ಎನ್ನುತ್ತಿದ್ದೇವೆ. ಕಬ್ಬು ಪಡೆದು ಅದರಲ್ಲಿ ಕೊಳ್ಳೆ ಹೊಡದವರನ್ನು ರೈತ ಬಂಧು ಎನ್ನುತ್ತೇವೆ. ಇದೆಲ್ಲ ಮುಂದಿನ ದಿನಗಳಲ್ಲಿ ನಿಲ್ಲಬೇಕು ಎಂದೂ ಕಡಾಡಿ ಹೇಳಿದರು.
ಮಹಿಳಾ ಸಿಂಹಿಣಿ
ಈರಣ್ಣ ಕಡಾಡಿ ಮಾತು ಆರಂಭಿಸುವಾಗ, ಮಹಿಳಾ ಸಿಂಹಿಣಿ ಎಂದೇ ಕರೆಯಲ್ಪಡುವ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಎಂದು ಸಂಬೋಧಿಸಿದರು.
ಪಂಚಮಸಾಲಿ ಸಮಾಜದ ಮೀಸಲಾತಿಗಾಗಿ ನಾವು ಸೇರಿದ್ದೇವೆ. ಸ್ವಾಮೀಜಿ ಸ್ವಚ್ಚ ಕನ್ನಡಿ ಇದ್ದಂತೆ. ಅಲ್ಲಿ ಯಾರು ಹೋಗಿ ನಿಲ್ತಾರೋ ಅವರು ಕಾಣ್ತಾರೆ. ಕಾಂಗ್ರೆಸ್ ನವರು ನಿಂತರೆ ಅವರು ಕಾಣುತ್ತಾರೆ. ಬಿಜೆಪಿಯವರು ನಿಂತರೆ ಅವರು ಕಾಣುತ್ತಾರೆ. ಆದರೆ ಕೆಲವರು ಬೆಂಕಿ ಹಚ್ಚಲು ಪ್ರಯತ್ನಿಸಿದರು. ನಾವೇನು ಗುಲಾಮರೇ? ಅಮಾಯಕರನ್ನು ಎತ್ತಿಕಟ್ಟಿ ನನ್ನ ಮೇಲೆ ಹಲ್ಲೆ ಮಾಡುವಯತ್ನ ನಡೆಯಿತು. ನನ್ನ ಮನೇಲೆ ದಲಿತ ವಿರೋಧಿ ಎನ್ನುವ ಪಟ್ಟ ಕಟ್ಟುವ ಯತ್ನ ನಡೆಯಿತು. 2 ವರ್ಷದಿಂದ ದಲಿತರಿಗೆ ಮೀಸಲಿಟ್ಟ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನ ಕಾಲಿ ಇಟ್ಟವರು ದಲಿತ ವಿರೋಧಿಗಳು. ರಾಜೇಂದ್ರ ಸಣ್ಣಕ್ಕಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗುವುದನ್ನು ತಡೆದವರು ಯಾರು? ಸಣ್ಮಕ್ಕಿ ನಾಯಕರಾಗುತ್ತಿದ್ದರು ಎಂದು ಅವರು ಹೇಳಿದರು.
ಸಮಾಜದ ಸ್ವಾಭಿಮಾನ ಉಳಿಸುವ ದೃಷ್ಟಿಯಿಂದ ನಾನು ಗಟ್ಟಿಯಾಗಿ ನಿಲ್ಲುತ್ತೇನೆ. ಈಗ ಕೆಲವರು ನಮ್ಮದೂ ಬೆಂಬಲ ಇದೆ ಎನ್ನುತ್ತಿದ್ದಾರೆ. ಬೆಂಬಲ ಇದ್ದರೆ ವಿಧಾನಸಭೆಯಲ್ಲಿ ಮಾತನಾಡಿ. ಎಲ್ಲೋ ಕುಳಿತು ಹೇಳುವುದಲ್ಲ. ಹಿಂದುತ್ವ ನನ್ನ ಜೀವನಪದ್ಧತಿ . ನಾನೇನು ಭಿಕಾರಿಯಲ್ಲ. ನನಗೂ ಸಂಘಟನೆ ಇದೆ. ಆದರೆ ಯಾರ ವಿರುದ್ಧವೂ ಕುಸ್ತಿ ಹಿಡಿಯಲು ಹೋಗಿಲ್ಲ. ಆದರೆ ಸ್ಥಳೀಯ ಜನಪ್ರತಿನಿಧಿಗಳಿದ್ದರೂ ಪಿಎಗಳನ್ನು ಕರೆದುಕೊಂಡು ಪೂಜೆ ಮಾಡಿಸುವುದನ್ನು ನಾನು ವಿರೋಧಿಸುತ್ತೇನೆ. ವ್ಯವಸ್ಥೆ ವಿರುದ್ಧ ಹೋರಾಟವಿದೆ ಎಂದು ಕಡಾಡಿ ಆಕ್ರೋಶ ವ್ಯಕ್ತಪಡಿಸಿದರು.
ಕೆಲವು ಲೀಡರ್ ಗಳಲ್ಲಿ ದೋಷವಿದೆ. ಸರಿಪಡಿಸೋಣ. ಸಮಾಜವನ್ನು ಒತ್ತೆ ಇಡುವ ಕೆಲಸಕ್ಕೆ ಕೈಹಾಕಬೇಡಿ. ತಾಲೂಕಿನ ಜನ ಅರ್ಥ ಮಾಡಿಕೊಳ್ಳಿ, ಹಣ ಬಲ, ತೋಳ್ಬಲ ಇಲ್ಲದವರು ರಾಷ್ಟ್ರಪತಿ, ಪ್ರಧಾನಿ ಆಗಿದ್ದಾರೆ. ಹಾಗಿದ್ದಾಗ ನಾವು ಏಕೆ ಬದಲಾಯಿಸಲು ಆಗುವುದಿಲ್ಲ? ಯಾರ ಅನ್ನವನ್ನೂ ನಾವು ಕಸಿಯುವುದಿಲ್ಲ ಎಂದು ಹೇಳಿದರು.
ಈ ಸಮಾವೇಶದ ಮೂಲಕ 2 ಎ ಮೀಸಲಾತಿ ಸಿಗುವವರೆಗೂ ನಾವು ಸಂಘಟಿತರಾಗೋಣ.ಗೋಕಾಕ ತಾಲೂಕಿನ ವಿಷಯ ಬಂದಾಗ ಸಮಾಜದ ಜೊತೆಗಿರಿ. ಚನ್ನಮ್ಮನ ವಂಶಸ್ಥರು ನಾವು. ನಾನು ಜನರಿಂದ ಆಯ್ಕೆಯಾದವನಲ್ಲ. ಶಾಸಕರಿಂದ ಆಯ್ಕೆಯಾದವನು. ದೆಹಲಿ, ಬೆಂಗಳೂರು ಸುತ್ತುತ್ತ, ಕಾಜು ತಿನ್ನುತ್ತ ತಿರುಗಬಹುದಿತ್ತು. ಆದರೆ ನಾನು ಜನರ ಮಧ್ಯೆೆ ಇರುತ್ತೇನೆ. ನಿಮ್ಮೊಂದಿಗಿರುತ್ತೇನೆ. ನಾನು ಪಕ್ಷಕ್ಕೂ, ಸಮಾಜಕ್ಕೂ ನಿಷ್ಠೆಯಿಂದ ಇರುತ್ತೇನೆ ಎಂದರು.
ಮಾಜಿ ಸಚಿವ ವಿನಯ ಕುಲಕರ್ಣಿ, ಮಾದರಿ ಯುವಕರಾಗಿ. 25 ವರ್ಷದೊಳಗೆ ನಿಮ್ಮ ಕಾಲ ಮೇಲೆ ನಿಲ್ಲಿ. ನಿಮಗೆ ಅನ್ಯಾಯವಾದಾಗ ನಮ್ಮನ್ನು ಕರೆಯಿರಿ. ಎಲ್ಲಿದ್ದರೂ ಬರುತ್ತೇವೆ.
ಮಾಜಿ ಶಾಸಕ ಎಚ್.ಎಸ್.ಶಿವಶಂಕರ, ಗುಲಾಮಗಿರಿಯಿಂದ ಬದುಕಲು ಸಾಧ್ಯವಿಲ್ಲ. ಸಂದರ್ಭ ಬಂದಾಗ ಒಟ್ಟಾಗಿ ಉತ್ತರಿಸೋಣ. ನಾವು ಸ್ನೇಹಕ್ಕೂ ಬದ್ಧ, ಸಮರಕ್ಕೂ ಸಿದ್ದ, ಸ್ವಾಭಿಮಾನದ ಸಂಕೇತವಾಗಿ ನಾವು ಇಲ್ಲಿ ಸೇರಿದ್ದೇವೆ. ನಮ್ಮ ಸಮಾಜದ ಕಾರ್ಯಕ್ರಮಕ್ಕೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪೊಲೀಸರು ರಕ್ಷಣೆ ನೀಡುತ್ತಿರುವುದು ನೋವಾಗುತ್ತಿದೆ. ನಮಗೆ ಯಾರ ರಕ್ಷಣೆಯೂ ಬೇಕಿಲ್ಲ. ಪೊಲೀಸರ ನೆರಳಿನಲ್ಲಿ ಸಮಾವೇಶ ಬೇಕಿಲ್ಲ ಎಂದರು.
ಮಲಗಿದ ಕೆಲವು ಸ್ವಾಮಿಗಳು ಈಗ ಎಸಿ ರೂಮಿನಿಂದ ಎದ್ದು ಹೊರಬಂದು ಸಮಾಜ ಜಾಗ್ರತಿ ಮಾಡುತ್ತೇವೆ ಎನ್ನುತ್ತಿದ್ದಾರೆ. ನಾವು ಆಗಲೇ ಎದ್ದು ಹೋರಾಟಕ್ಕಿಳಿದಿದ್ದೇವೆ ಎಂದು ಅವರು ಹೇಳಿದರು.
ಈ ಸಮಾವೇಶ ನೋಡಿದರೆ ಈ ಹೋರಾಟ ರಾಜಕೀಯ ಬದಲಾವಣೆಗೂ ನಾಂದಿ ಹಾಡುತ್ತಿದೆ ಎಂದು ಅನಿಸುತ್ತಿದೆ. ಮೀಸಲಾತಿ ಕೊಡದಿದ್ದರೆ ಸರಕಾರಕ್ಕೂ ಹೊಡೆತ ಕೊಡುತ್ತದೆ. ಮನೆಯ ಮುಂದಿನ ನಾಯಿಯನ್ನೇ ಹೊಡೆಯಲು ಆಗುವುದಿಲ್ಲ, ನಮ್ಮನ್ನು ಹೊಡಿತೀರಾ? ಬನ್ನಿ ಎಲ್ಲಿದ್ದೀರಿ ಎಂದು ಶಿವಶಂಕರ ಎಂದು ಪ್ರಶ್ನಿಸಿದರು.
ಶಾಸಕ ಅರವಿಂದ ಬೆಲ್ಲದ, ಗೋಕಾಕ ಪಂಚಮಸಾಲಿ ಸಮಾವೇಶ ಹೇಗಾಗುತ್ತದೆಯೋ ಎನ್ನುವ ಆತಂಕ ಇತ್ತು. ಆದರೆ ಎಲ್ಲರೂ ಹೊರಗೆ ಬಂದು ನಮಗೆ ಕರದಂಟು ತಿಂದಷ್ಟೇ ಸಂತೋಷವನ್ನುಂಟು ಮಾಡಿದ್ದೀರಿ ಎಂದರು.
ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಮಾತನಾಡಿ, ಇದು ಮಾಡು ಇಲ್ಲವೇ ಮಡಿ ಹೋರಾಟ. ಮಡಿಯುವ ಮುನ್ನ ಮೀಸಲಾತಿ ಪಡೆದೇ ಸಾಯುತ್ತೇವೆ. ಮೀಸಲಾತಿ ಕೊಟ್ಟೇ ಸಾಯುತ್ತೇವೆ. ಸರ್ವ ತ್ಯಾಗಕ್ಕೂ ನಾವು ಸಿದ್ದರಾಗಿದ್ದೇವೆ. ಯಾರು ಬರುತ್ತೀರಿ ಬನ್ನಿ. ಎಷ್ಟು ಮಂದಿ ನೋಡುತ್ತೀರಿ ನೋಡಿ. ನಮ್ಮ ಸಮಾಜದ ವೇದಿಕೆಯಲ್ಲಿ ನಮ್ಮ ಸಮಾಜವನ್ನು ಜಾಗ್ರತೆ ಮಾಡದೆ ಯಾರನ್ನೂ ಮಾಡಲಿ ಎಂದು ಪ್ರಶ್ನಿಸಿದರು.
ಚನ್ನಮ್ಮನನ್ನು ಕೆಲವರು ಬೈಯ್ಯುತ್ತಾರೆ. ಎಲ್ಲ ಸಮಾಜದವರಿಗಾಗಿ ಹೋರಾಟ ಮಾಡಿದವರು ಚನ್ನಮ್ಮ. ಇನ್ನೇನಾದರೂ ಬಯ್ದರೆ ನಿಮ್ಮ ನಾಲಿಗೆ ಸೀಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ನಮ್ಮ ಮಂದಿ ಗ್ರಾಮ ಪಂಚಾಯಿತಿ ಸದಸ್ಯರೂ ಆಗಬೇಕು. ಜಿಲ್ಲಾ ಪಂಚಾಯಿತಿ ಸದಸ್ಯರೂ ಆಗಬೇಕು. ನಾವೂ ರಾಜಕೀಯ ಮಾಡುವವರೇ. ನಾವು ಹುಲಿಯಿದ್ದೇವೆ. ನೀವೆಲ್ಲರೂ ಇಂದು ಹುಲಿಗಳಾಗಿದ್ದೀರಿ. ಸಮಾಜದ ನಾಯಕರ ವಿರುದ್ಧ ಯಾರಾಜರೂ ಮಾತನಾಡಿದರೆ ಉತ್ತರ ಕೊಡಲು ಸಿದ್ದರಾಗಿ ಎಂದರು.
ಬೊಮ್ಮಾಯಿಯವರು 4 ಬಾರಿ ಮಾತು ಕೊಟ್ಟು ತಪ್ಪಿದ್ದಾರೆ. ಇನ್ನೊಮ್ಮೆ ತಪ್ಪಿದರೆ ಖೇಲ್ ಖತಂ, ದುಖಾನ್ ಬಂದ್.
ಡಿ.12ರಂದು 1 ಕೋಟಿ ಕೂಡಿದರೆ ವಿಧಾನಸೌಧ ನಮ್ಮ ಕಬ್ಜಾ. ಇದ್ದವರನ್ನು ಎಬ್ಬಿಸಿ ನಾವು ಕೂಡ್ರೋಣ. 3ನೇ ಮಹಡಿಯಲ್ಲಿ ಯತ್ನಾಳ ಸಾಹೇಬರನ್ನು ಕೂಡ್ರಿಸೋಣ. ಈ ಬಾರಿ 3ನೇ ಮಹಡಿಯಲ್ಲಿ ಯತ್ನಾಳ ಸಾಹೇಬರನ್ನು ಕೂಡ್ರಿಸೋಣ. ಈ ಬಾರಿ ಮುತ್ತಿಗೆ ಹಾಕಿ ವಿಧಾನಸೌಧ ಕಬ್ಜಾ ತೆಗೆದುಕೊಳ್ಳುವುದೇ. ಬ್ರಿಟೀಶರಿಗೇ ಅಂಜದ ನಾವು ನಮ್ಮ ಪೊಲೀಸರಿಗೆ ಅಂಜುತ್ತೇವಾ ಎಂದು ಪ್ರಶ್ನಿಸಿದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮಾಜಿ ಸಚಿವ ಶಶಿಕಾಂತ ನಾಯಿಕ, ಮಾಜಿ ಶಾಸಕ ವಿಶ್ವನಾಥ ಪಾಟೀಲ ಮೊದಲಾದವರು ಇದ್ದರು.
https://pragati.taskdun.com/karnataka-news/25-lakh-panchmasalis-to-siege-vidhana-soudha-on-12-december/
https://pragati.taskdun.com/belagavi-news/a-patient-woman-of-earth-weight-is-a-powerful-force-lakshmi-hebbalkar/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ