Latest

ಏಕಾತ್ಮಕ ಮಾನವತಾವಾದ ಮತ್ತು ಅಂತ್ಯೋದಯದ ಪ್ರತಿಪಾದಕ ಪಂಡಿತ ದಿನದಯಾಳ ಉಪಾಧ್ಯಾಯ

ಏಕಾತ್ಮಕ ಮಾನವತಾವಾದ ಮತ್ತು ಅಂತ್ಯೋದಯದ ಪ್ರತಿಪಾದಕ  ಪಂಡಿತ ದಿನದಯಾಳ ಉಪಾಧ್ಯಾಯ

 

ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ

ಭಾರತ ಈ ಹೆಸರೇ ಚೇತನಶಕ್ತಿ, ಸನಾತನ ಕಾಲದಿಂದಲೂ ಧರ್ಮ-ಸಂಸ್ಕೃತಿಗಳ ಆಚರಣೆ ಮತ್ತು ಅನುಸರಣೆಗಳಲ್ಲಿ ತನ್ನದೆ ಆದ ವಿಶಿಷ್ಟತೆಗಳನ್ನು ಉಳಿಸಿ ಬೆಳೆಸಿಕೊಂಡು ಬಂದಿದೆ. ಭಾರತೀಯ ತತ್ವಶಾಸ್ತ್ರ ಮತ್ತು ಸಿದ್ಧಾಂತಗಳು, ಜೀವಪರ-ಜನಪರ ನಿಲವುಗಳೊಂದಿಗೆ ಬಹುಮುಖಿ ಆಯಾಮಗಳಲ್ಲಿ ಸತ್ವಯುತವಾಗಿಯೇ ಪ್ರತಿಪಾದಿಸಲ್ಪಟ್ಟಿವೆ. ಆಯಾ ಕಾಲಘಟ್ಟ, ಆಯಾ ಶತಮಾನಗಳ ಸಂದರ್ಭಗಳಲ್ಲಿ ಸೈದ್ಧಾಂತಿಕ ಪ್ರತಿಪಾದಕರು ತಮ್ಮ ವಿಚಾರಗಳಿಂದ ಇಂದಿಗೂ ನಿತ್ಯ ನೂತನ ಆಲೋಚನೆಗಳೊಂದಿಗೆ ಆಧುನಿಕ ಜಗತ್ತಿಗೆ ತೆರೆದುಕೊಳ್ಳುತ್ತಿದ್ದಾರೆ.
ರಾಷ್ಟ್ರೀಯತೆಯ ಪರಿಕಲ್ಪನೆ ಇಂದು ನಿನ್ನೆಯದಲ್ಲ. ನಾಗರಿಕ, ನಾಗರಿಕತ್ವದ ಹಕ್ಕು ಮತ್ತು ಕರ್ತವ್ಯಗಳು ರಾಷ್ಟ್ರೀಯತೆಯ ಅಡಿಪಾಯದಲ್ಲೇ ಕಟ್ಟಲ್ಪಟ್ಟ ಸೌಧ. ಜಾಗತೀಕರಣದ ಹೊಸ ಚಿಂತನೆಗಳಿಗೆ ದೇಶಿಯ ಸೈದ್ಧಾಂತಿಕ ಚಿಂತನೆಗಳು, ಒಮ್ಮೆ ಪೂರಕವಾಗಿ ಮೊಗದಮ್ಮೆ ಪುನರ್‌ವಿಮರ್ಶೆ, ಇನ್ನೊಮ್ಮೆ ಮರು ಚಿಂತನೆಗಳ ಹೊಳಹುಗಳನ್ನು ಹುಟ್ಟು ಹಾಕುತ್ತಲೆ ಇವೆ. ಇಷ್ಟೆಲ್ಲ ಚಿಂತನೆಗಳಿಗೆ ಇಂಬುಗೊಡಲು ಕಾರಣ ಏನೆಂದರೆ, ಶತಮಾನಗಳ ಹಿಂದೆಯೇ ಆಧ್ಯಾತ್ಮಿಕ ರಾಷ್ಟ್ರೀಯತೆ ಎಂಬ ಹೊಸ ಆಲೋಚನೆಯನ್ನು ರಾಷ್ಟ್ರೀಯವಾದದ ಅಡಿಯಲ್ಲಿ ಸೈದ್ಧಾಂತಿಕವಾಗಿ ಪ್ರತಿಪಾದಿಸಿದ ಪಂಡಿತ ದಿನದಯಾಳ ಉಪಾಧ್ಯಾಯ ಅವರ ಸಿದ್ಧಾಂತಗಳು ಜಗತ್ತಿನ ಕಣ್ಣು ತೆರೆಸುತ್ತಿವೆ. ಏಕಾತ್ಮಕ ಮಾನವತಾವಾದ ಮತ್ತು ಅಂತ್ಯೋದಯದ ಪ್ರತಿಪಾದಕರಾದ ಉಪಾಧ್ಯಾಯರ ಪ್ರಖರ ಚಿಂತನೆಗಳು, ವಸಾಹತಿಕರಣದ ಬೇರುಗಳನ್ನು ಅಲುಗಾಡಿಸಿ ಪ್ರಜಾಪ್ರಭುತ್ವದ ಬೀಜಕ್ಕೆ ನೀರೆರೆದು ಪೋಷಿಸಿ ರಾಷ್ಟ್ರದ ಸ್ವಾತಂತ್ರ್ಯತೆಯ ಕನಸಿಗೆ ರೆಕ್ಕಿ ಕಟ್ಟಿದವು.

Home add -Advt

ಪಂಡಿತ ದಿನದಯಾಳ ಉಪಾಧ್ಯಾಯ:

ಸಾಮಾನ್ಯರಲ್ಲಿಯೇ ಅಸಾಮಾನ್ಯರಾಗಿ ಹಮ್ಮು-ಬಿಮ್ಮುಗಳಿಗಾಗಿ ಹಪಿಹಪಿಸದ ಸರಳ ಸಜ್ಜನಿಕೆಯ ರಾಷ್ಟ್ರೀಯವಾದಿ ಚಿಂತಕ. ಉಪಾಧ್ಯಾಯರ ಆಲೋಚನೆಗಳು, ಆಧುನಿಕ ಭಾರತದ ನಿರ್ಮಾಣಕ್ಕೂ ಭದ್ರ ಬುನಾದಿಯನ್ನು ಹಾಕಿವೆ. ಅಭಿವೃದ್ಧಿಯೆಂಬುದು ಕೇವಲ ವರ್ಗೀಕರಣವಲ್ಲ. ಅಲ್ಲದೇ ಆರ್ಥಿಕಾಭಿವೃದ್ಧಿ ಮಾತ್ರ ದೇಶವನ್ನು ಸದೃಡವಾಗಿಸಬಲ್ಲದು ಎಂಬ ಮಾನದಂಡದಿಂದ ಹೊರಬಂದು ದಿನ-ದಲಿತರ ಹಾಗೂ ಹಳ್ಳಿಗಳ ಉದ್ಧಾರವೆ ಅಭಿವೃದ್ಧಿಯೆಂಬ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ.
ಮಥುರಾದ ಸಣ್ಣ ಹಳ್ಳಿ ನಗಲಾ ಚಂದ್ರಬಾನನಲ್ಲಿ ದಿ.೨೫.೦೯.೧೯೧೬ರಲ್ಲಿ ಜನಿಸಿದ ಇವರದು ಅಸಾಧಾರಣ ಪ್ರತಿಭೆ. ೮ ವರ್ಷದವರಿರುವಾಗಲೇ ತಂದೆ-ತಾಯಿಯರನ್ನು ಕಳೆದುಕೊಳ್ಳುತ್ತಾರೆ. ಕಡುಬಡತನದಿಂದ ಜೀವನ ನಿರ್ವಹಣೆಗೆ ಕಷ್ಟವಾದರೂ ಓದು-ಅಭ್ಯಾಸಕ್ಕೆಂದು ಬಡತನ ಬರದಂತೆ ನೋಡಿಕೊಂಡರು. ಎಲ್ಲಾ ತರಗತಿಗಳಲ್ಲೂ ಮೊದಲನೇ ಸ್ಥಾನದಲ್ಲಿಯೇ ಉತ್ತೀರ್ಣರಾದರು. ಸಂಘರ್ಷಮಯ ಜೀವನ ಹೋರಾಟಗಳಲ್ಲಿ ಸದಾ ಹಸನ್ಮುಖರಾಗಿಯೇ ಎಲ್ಲವನ್ನು ಎದುರಿಸುವ ಛಲವುಳ್ಳವರು. ಸಿಕರಕಲ್ಯಾಣಿ ಸ್ಥೂಲನಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಬಿಲಾನಿ ಚಿಡಲಾ ಅವರ ಬಂಗಾರದ ಪದಕವನ್ನು ಪಡೆಯುತ್ತಾರೆ. ಸಿಕರನ ಮಹಾರಾಜಾ ಅವರು ಇವರ ಅಸಾಧಾರಣ ಪ್ರತಿಭೆಯನ್ನು ಗುರುತಿಸಿ ಶಿಷ್ಯವೇತನ ನೀಡಿ ಇಂಟರ್ ಮಿಡಿಯಟ್ ಹಾಗೂ ಮುಂದಿನ ವ್ಯಾಸಂಗಕ್ಕೆ ಅನುವು ಮಾಡಿಕೊಡುತ್ತಾರೆ.
ಕಾಸಿಪೂರದ ಸನಾತನ ಮಹಾವಿದ್ಯಾಲಯದಿಂದ ಬಿ.ಎ. ವ್ಯಾಸಂಗ ಮಾಡುವಾಗಲೇ ಧರ್ಮ-ದೇವರ ಜಿಜ್ಞಾಸೆಗಳ ಕಡೆ ವಾಲುತ್ತಾರೆ.ದೀಕ್ಷಾ ಪಡೆದುಕೊಂಡರು ವಿದ್ಯಾಭ್ಯಾಸದ ಕಡೆಗೆ ಅಲಕ್ಷಿಸದೇ ಪ್ರಥಮ ವರ್ಗದಲ್ಲಿ ಪಾಸಾಗುತ್ತಾರೆ. ೧೯೩೩ರಲ್ಲಿ ರಾಷ್ಟ್ರೀಯವಾದಿ ಶ್ರೀ ಬಲವಂತ ಮಹಾಶಟ್ಟಿ ಅವರ ಪರಿಚಯವಾಗುತ್ತದೆ. ಅವರೊಂದಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೇರುತ್ತಾರೆ.
ವ್ಯಕ್ತಿಗತ ಸಂಘರ್ಷದಿಂದ ಹೊರಬಂದು ರಾಷ್ಟ್ರೀಯ ಸಮಗ್ರತೆಯ ಬಹುದೊಡ್ಡ ಚಿಂತಕರಾಗಿ ಹೊರಹೊಮ್ಮುತ್ತಾರೆ. ಎಂ.ಎ. ಓದಲು ಆಗ್ರಾಕೆ ಹೋದಾಗ ಅಲ್ಲಿ ನಾನಾಜೀ ದೇಶಮುಖ ಭಾವರಾವ ಜುಗಾದೆ ಅವರೊಂದಿಗೆ ಸೇರಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಬಲಗೊಳಿಸುತ್ತಾರೆ.ಸಾಮಾಜಿಕ ನ್ಯಾಯಕ್ಕಾಗಿ ಸದಾ ತುಡಿಯುವ ಇವರು ಪರಿವಾರದ ನಿರೀಕ್ಷೆಯಂತೆ ಕುಟುಂಬಸ್ಥರಾಗುವುದಿಲ್ಲ. ಸಿವಿಲ್ ಪರೀಕ್ಷೆಯಲ್ಲಿ ಉತ್ತೀರ್ಣರಾದರೂ, ರಾಷ್ಟ್ರೀಯವಾದದ ಸಂಕಲ್ಪ ಹೊತ್ತು ಹೊಟ್ಟೆಪಾಡಿನ ಉದ್ಯೋಗಕ್ಕಿಂತ ರಾಷ್ಟ್ರೀಯ ಪರಿವಾರದ ಹಿತಕ್ಕಾಗಿ ಸಂಪೂರ್ಣವಾಗಿ ತಮ್ಮನ್ನು ಸಮರ್ಪಿಸಿಕೊಳ್ಳುತ್ತಾರೆ.
ದಿನದಯಾಳ ಅವರು ಪ್ರಭಾವಶಾಲಿ ವ್ಯಕ್ತಿತ್ವದವರು, ಸಂಘರ್ಷಮಯ ಜೀವನದೊಂದಿಗೆ ಪ್ರಖರ ಚಿಂತಕರಾಗಿ ಹೊರ ಹೊಮ್ಮುತ್ತಾರೆ. ಸಾಮಾನ್ಯ ಭಾರತೀಯನೊಬ್ಬನಲ್ಲಿ ಆಗಸದಷ್ಟು ವಿಶಾಲವಾದ ಚಿಂತನೆಗಳು, ಸಮುದ್ರದಷ್ಟು ಆಳವಾದ ಆಲೋಚನೆಗಳು, ಸಮಯಾನುಸಾರ ಪರಿವರ್ತತೆ, ಅದಮ್ಯ ಕ್ಷಮತೆ, ಹಾಗೂ ಇವೆಲ್ಲವಕ್ಕಿಂತ ಮಿಗಿಲಾಗಿ ಏಕಾತ್ಮಕ ಮಾನವತವಾದ ಮತ್ತು ಅಂತ್ಯೋದಯಗಳಂತಹ ವೈಚಾರಿಕ ಚಿಂತನೆಗಳು, ಅವರೊಬ್ಬ ಕೇವಲ ವ್ಯಕ್ತಿ ಮಾತ್ರ ಆಗಿರದೇ ರಾಷ್ಟ್ರೀಯ ಶಕ್ತಿಯೂ ಕೂಡಾ ಆಗಿದ್ದರು ಎಂಬುದನ್ನು ದರ್ಶಿಸುತ್ತದೆ.
ಪ್ರಖರ ವಿಚಾರ, ವ್ಯಾಪಕ ಚಿಂತನೆಗಳಿಂದ ರಾಜನೀತಿ ಮತ್ತು ರಾಷ್ಟ್ರ ನೀತಿಗಳಿಗೆ ಹೊಸ ಪರಿಭಾಷೆಗಳನ್ನು ನೀಡುತ್ತಾರೆ. ಇವರ ಸಿದ್ಧಾಂತಗಳು, ರಾಷ್ಟ್ರೀಯವಾದದ ಮೌಲ್ಯಾಧಾರಿತ ವಿಚಾರಧಾರೆಗಳೇ ಆಗಿದ್ದರು, ಬಹುಮುಖ ಚಿಂತನೆಗಳ ವಿಶಿಷ್ಟ ವ್ಯಕ್ತಿಯಾಗಿದ್ದರು, ಆಪ್ತ ಚಿಂತಕ, ಸಂಘಟನಾ ಚತುರ, ರಾಜ ನೀತಿಜ್ಞ, ಶಿಕ್ಷಾವೈದ್ಯ, ವಕ್ತಾರ ಮತ್ತು ಲೇಖಕರಾಗಿ ರಾಷ್ಟ್ರೀಯ ಸಂಘದ ಜ್ಞಾನಸೂರ್ಯನಾಗಿ ಪ್ರಕಾಶಿಸಿದ್ದಾರೆ.

ರಾಷ್ಟ್ರೀಯತೆಯ ಪ್ರತಿಪಾದನೆ :

ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಪಂಡಿತ ದೀನ್ ದಯಾಳ ಉಪಾಧ್ಯಾಯ ಅಧ್ಯಯನ ಪೀಠದ ಉದ್ಘಾಟನೆ ಸಂದರ್ಭದ ಚಿತ್ರ

ರಾಷ್ಟ್ರ ಮತ್ತು ಸಮಾಜೋದ್ಧಾರಕ್ಕಾಗಿ ಹಗಲಿರುಳು ತುಡಿಯುವ ಮನಸ್ಸಿನ ಇವರು ಸದಾ ಕ್ರಿಯಾಶೀಲರು, ಪಾರ್ಶ್ಚವಾಯು ಪೀಡಿತ ಸಮಾಜದ ಪುನರ್ ನಿರ್ಮಾಣದ ಕನಸುಹೊತ್ತು, ಉಪಾಧ್ಯಾಯಜೀ ಅವರು ಸಂಘಟನೆ ಮತ್ತು ಸಮರ್ಪಣೆಗೆ ಅಣಿಯಾಗುತ್ತಾರೆ. ಸಮಾಜದ ಋಣಭಾರ ಹೊತ್ತು ನಾನು ದೇಶಕ್ಕಾಗಿ ಏನನ್ನಾದರೂ ಮಾಡಬೇಕೆಂಬ ಹಠ ತೊಟ್ಟು, ಭಾರತದ ಸ್ವಾತಂತ್ರ್ಯಾ ನಂತರ ಜ್ವಲಂತ ಸಮಸ್ಯೆಗಳನ್ನು ಕಂಡು ಕಂಬನಿ ಗರಿಯುತ್ತಾರೆ.ಪ್ರಜಾಪ್ರಭುತ್ವದಲ್ಲಿ ದೋಷವಿಲ್ಲ. ಆದರೆ ಅದನ್ನು ಅನುಸರಿಸುವ ಕ್ರಮದಲ್ಲಿ ದೋಷವಿದೆ ಎಂದು ಅವರು ವೈಕಲ್ಪಿತ ವಿಚಾರ ಧಾರೆಗಳನ್ನು ಪ್ರತಿಪಾದಿಸುತ್ತಾರೆ. ಸಾಮಾಜಿಕ ಅಸಮತೋಲನ ದೇಶದ ಅನ್ವಿಯಿಕತೆಯ ಅರಿವಿನ ಕೊರತೆ, ರಾಷ್ಟ್ರೀಯ ಪರಿಚಯದ ಉಪೇಕ್ಷೆಗಳೇ ಹಿನ್ನೆಡೆಗೆ ಕಾರಣವೆಂದು ಸಾರುತ್ತಾರೆ.
ಆರ್ಥಿಕ ಯೋಜನೆ ಮತ್ತು ಆರ್ಥಿಕ ಪ್ರಗತಿಯ ಮೌಲ್ಯಂಕನವು ಶ್ರೇಣಿಕೃತ ವ್ಯವಸ್ಥೆಯ ಮೇಲ್ದರ್ಜೆಯ ವ್ಯಕ್ತಿಗಳನ್ನು ಅವಲಂಬಿಸಿಲ್ಲ. ಬದಲಾಗಿ, ಸಮಾಜದ ಕೆಳಸ್ತರದ ವ್ಯಕ್ತಿಗಳನ್ನು ಅವಲಂಬಿಸಿದೆ ಎಂಬ ಪ್ರಖರ ವಿಚಾರವನ್ನು ಮಂಡಿಸಿ ಅನೇಕತೆಯಲ್ಲಿ ಏಕತೆಯೇ ಭಾರತೀಯ ಸಂಸ್ಕೃತಿಯ ವಿಶೇಷತೆ ಎಂದು ನಿಲುವನ್ನು ಪ್ರಚುರ ಪಡಿಸುತ್ತಾರೆ.
ರಾಷ್ಟ್ರದ ಪುನರ್ ನಿರ್ಮಾಣದ ಹರಿಕಾರರಾದ ಉಪಾಧ್ಯಾಯಜೀ ಲಖನೌದಲ್ಲಿ ರಾಷ್ಟ್ರಧರ್ಮ ಪ್ರಕಾಶನ ಸಂಸ್ಥೆ ಸ್ಥಾಪಿಸಿ ರಾಷ್ಟ್ರಧರ್ಮ ಮಾಸಿಕ ಪತ್ರಿಕೆ ಪ್ರಾರಂಭಿಸುತ್ತಾರೆ. ಇದಲ್ಲದೆ ’ಪಾಂಚಜನ್ಯ’ ಮತ್ತು ’ಸ್ವದೇಶಿ’ ಪತ್ರಿಕೆಗಳಿಗೆ ಸಂಪಾದಕರಾಗಿಯೂ, ಸೇವೆ ಸಲ್ಲಿಸುತ್ತಾರೆ. ರಾಷ್ಟ್ರೀಯತೆಯ ಕುರಿತು ಪ್ರಸಾರ ಮತ್ತು ಪ್ರಚಾರಕ್ಕಾಗಿ ಪೂರ್ಣಾವಧಿಯಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಸರಳ-ಸಜ್ಜನಿಕೆ, ಆಚಾರ-ವಿಚಾರಗಳ ವೈಚಾರಿಕ ಚಿಂತಕರಾದ ಇವರದು ಗಂಭೀರ ನಿಲುವು. ಇಂತಹ ಉದಾತ್ತ ವಿಚಾರಧಾರೆಗಳು ಅವರ ವ್ಯಕ್ತಿತ್ವದ ಪ್ರತಿಬಿಂಬಗಳಾಗಿದ್ದವು.

ಜನಸಂಘದ ಹರಿಕಾರ :

ರಾಷ್ಟ್ರೀಯತೆಯ ಸಮಗ್ರ ಪರಿಕಲ್ಪನೆಗೆ ಒತ್ತು ಕೊಡುವುದರೊಂದಿಗೆ ರಾಜನೀತಿಯ ಮಹತ್ವವನ್ನು ಪ್ರಚುರಪಡಿಸುವುದು ಅಷ್ಟೇ ಪ್ರಮುಖವಾದುದು ಎಂದು ಅರಿತ ಅವರು, ಉತ್ತರ ಪ್ರದೇಶದಲ್ಲಿ ರಾಜನೀತಿಯ ಸಂದೇಶ ಸಾರುವ ಐತಿಹಾಸಿಕ ಸಮಾರಂಭವನ್ನು ೨೧.೦೯.೧೯೫೧ರಂದು ಆಯೋಜಿಸುತ್ತಾರೆ. ಇದರ ಫಲಿತಾಂಶವೇ ಭಾರತೀಯ ಜನಸಂಘದ ಹುಟ್ಟು. ಮುಂದೆ ೨೧.೧೦.೧೯೫೧ ರಂದು ಶ್ರೀ ಶಾಮಪ್ರಸಾದ ಮುಖರ್ಜಿ ಭಾರತೀಯ ಜನಸಂಘದ ಅಖಿಲ ಭಾರತ ಪ್ರಥಮ ಸಮ್ಮೇಳನದ ಅಧ್ಯಕ್ಷರಾಗುತ್ತಾರೆ.ಶಾಮಪ್ರಸಾದ ಮುಖರ್ಜಿಯವರೊಂದಿಗೆ ಆಪ್ತ ಒಡನಾಟ ಹೊಂದಿದ್ದ ಅವರು ರಾಷ್ಟ್ರೀಯತೆಯ ಪ್ರಖರ ಚಿಂತಕರಾಗಿ ವಕ್ತಾರರಾಗಿ ಹೊರಹೊಮ್ಮುತ್ತಾರೆ.ಮುಖರ್ಜಿ ಹೇಳುವಂತೆ ದಿನದಯಾಳರಂತಹ ರಾಷ್ಟ್ರೀಯವಾದಿ ಇದ್ದರೆ, ಭಾರತದ ಹಣೆ ಬರಹವೇ ಬದಲಾಗುತ್ತಿತ್ತು ಆದರೆ ತಾನೊಂದು ಬಗೆದರೆ, ದೈವವೊಂದು ಬಗೆದಂತೆ ಎಂಬಂತೆ ಪ್ರಖರ ಚಿಂತಕ ಮಾನವ ವಿಕಾಸವಾದಿ, ಅಂತ್ಯೋದಯದ ಹರಿಕಾರ ಉಪಾಧ್ಯಾಯಜೀ ಅವರ ಅಧ್ಯಕ್ಷತೆಯಲ್ಲಿ ಜನಸಂಘದ ಅಧಿವೇಶನ ಕಾಲಿಕಟ್‌ನಲ್ಲಿ ಜರುಗುತ್ತದೆ. ೧೧.೦೨.೧೯೬೮ ರಲ್ಲಿ ಅಧಿವೇಶನದ ಸಂದರ್ಭದಲ್ಲಿಯೇ ದಿನ ದಯಾಳ ಉಪಾಧ್ಯಾಯಜೀಯವರ ಬರ್ಬರ ಹತ್ಯೆಯಾಗುತ್ತದೆ.ಇದರೊಂದಿಗೆ ಸಂಘದ ಅಭಿವೃದ್ಧಿಗೆ ವರ್ಜಾಘಾತವಾಗುತ್ತದೆ.

ಮಾನವತಾವಾದಿ :

ಭಾರತದಿಂದ ಮಾತೆ ಎಂಬ ಪದ ತೆಗೆದುಹಾಕಿದರೆ, ಭಾರತ ಕೇವಲ ಮಣ್ಣಿನ ಭೂಮಿ ಆಗಿ ಮಾತ್ರ ಉಳಿಯುತ್ತದೆ ಎಂದು ಹೇಳುವ ಮೂಲಕ ಉಪಾಧ್ಯಾಯಜೀ ಅವರು ರಾಷ್ಟ್ರೀಯ ವಿಕಾಸವಾದವನ್ನು ಮಂಡಿಸಿದ್ದಾರೆ.ಸಮಾಜವಾದ, ಪೂಂಜಿವಾದ, ಮಾನವ ವಿಕಾಸವಾದ, ಏಕಾತ್ಮಕ ಮಾನವತಾವಾದ ಇವುಗಳೊಂದಿಗೆ ಸನಾತನ ಸಂಸ್ಕೃತಿಯ ಒಳ ಹೊರಗಿನ ಸಮತಾವಾದದ ವಿಚಾರಗಳನ್ನು ಎತ್ತಿಹಿಡಿಯುವಲ್ಲಿ ಶ್ರಮಿಸಿದ್ದಾರೆ. ಅವರೊಬ್ಬ ರಾಜಕಾರಣಿಯಾಗಲೂ ಎಂದೂ ಬಯಸಿದವರಲ್ಲಿ. ಬದಲಾಗಿ ಅಂತ್ಯೋದಯದಂತಹ ಸಾಮಾಜಿಕ ಚಿಂತನೆಯ ಬೀಜಕ್ಕೆ ನೀರೆರೆದು ಪೊಷಿಸಿದ್ದಾರೆ.
ಕೃಷಿಚಿಂತಕ, ಅರ್ಥಶಾಸ್ತ್ರಜ್ಞ, ವಿದೇಶಾಂಗ ವ್ಯವಹಾರ ಚತುರ, ರಾಜನೀತಿಜ್ಞ, ಶೈಕ್ಷಣಿಕ ಚಿಂತಕರಾದ ಉಪಾಧ್ಯಾಯಜೀ, ಸಾಂಸ್ಕೃತಿಕರಣದೊಂದಿಗಿನ ರಾಷ್ಟ್ರವಾದದ ಪ್ರತಿಪಾದಕರಾಗಿದ್ದರು. ಸಾಮಾನ್ಯ ಕಾರ್ಯಕರ್ತರನ್ನು ಅಪ್ಪಿಕೊಂಡು ಸಂಘವನ್ನು ಪ್ರಬಲಗೊಳಿಸಿದ್ದರು. ಅಸಮಾನತೆ ತೊಲಗಲು ಶಿಕ್ಷಣವು ಅತೀ ಅವಶ್ಯಕವೆಂದು, ಜ್ಞಾನ ಮುಖೇನ ಪ್ರಗತಿಗೆ ಹೆಚ್ಚು ಒತ್ತುಕೊಟ್ಟರು. ರಾಜನೀತಿಗೆ ಹೊಸ ಪರಿಭಾಷೆ ಬರೆಯುವುದರ ಮೂಲಕ ಮಾನವೀಯತೆಯ ಪುನರ್ ನಿರ್ಮಾಣಕ್ಕೆ ತೊಡಗಿಸಿಕೊಂಡಿದ್ದರು.
ಸರಳ ಜೀವನ ಉನ್ನತ ಚಿಂತನೆಗಳಿಗೆ ಬೆಲೆ ನೀಡುವ ಅವರು ಕೇವಲ ಎರಡು ಜೊತೆ ಬಟ್ಟೆಯೊಂದಿಗೆ, ಬಿಸಿಲು, ಮಳೆ, ಗಾಳಿ ಎಲ್ಲವೂ ಎಥೇಚ್ಛವಾಗಿ ಒಳಗೆ ಬರಹುದಾದ ಹರಕು ಗುಡಿಸಲಿನಲ್ಲಿ ಬದುಕಿದವರು. ಬಡತನ ನಿರ್ಮೂಲನೆ, ನಿರುದ್ಯೋಗ ಪರಿಹಾರ, ಆತಂಕವಾದ, ಕೋಮವಾದ, ಭ್ರಷ್ಠಾಚಾರ ಮುಕ್ತ ಹೊಸ ಭಾರತವನ್ನು ನಿರ್ಮಿಸುವ ಸತ್‌ಸಂಕಲ್ಪದಿಂದ ಮಾನವೀಯತೆ ನೆಲೆಯಲ್ಲಿ ಸದಾ ಕಾರ್ಯಪ್ರವೃತ್ತರಾಗಿ, ಜನಾನುರಾಗಿಯಾಗಿದ್ದರು.

ಏಕಾತ್ಮಕವಾದದ ಚಿಂತಕ :

ಮಾನವೀಯ ಅಂತಃಕರಣದ ಮೂಲಕವೇ ಸಧೃಡ ರಾಷ್ಟ್ರ ನಿರ್ಮಾಣದ ಕನಸು ಹೊತ್ತು ಸಾಗಿದ ಉಪಾಧ್ಯಾಯಜೀ, ಭಾರತೀಯ ತತ್ವಶಾಸ್ತ್ರಕ್ಕೆ ಮರುವ್ಯಾಖ್ಯಾನ ನೀಡಿದವರು.ಪಾಶ್ಚಾತ್ಯ ಚಿಂತಕರ ವಾಗ್ವಾದಗಳು ಭಾರತೀಯ ಚಿಂತಕರ ಸಿದ್ಧಾಂತಗಳಿಗೆ ಮಹತ್ವಪೂರ್ಣ ಪರಿಭಾಷೆ ಮತ್ತು ಅರ್ಥವೃತ್ತಿಗಳನ್ನು ವ್ಯಾಖ್ಯಾನಿಸಿದರು.
ಸಾಮಾಜಿಕ ಸಂವೇದಕರಾದ ಅವರು ಒಬ್ಬ ಮನುಷ್ಯ ಇನ್ನೊಬ್ಬನನ್ನು ನೋಡುವ ಭಾರತೀಯ ದೃಷ್ಟಿ, ಭಾರತೀಯ ಆಧ್ಯಾತ್ಮಿಕ ಚಿಂತನೆ ಜಗತ್ತಿನಲ್ಲಿ ಹೆಚ್ಚುಗಾರಿಕೆ ಪಡೆದುಕೊಂಡಿರುವ ಮಹತ್ವ ಸಾರಿದರು.
ಭಾರತೀಯ ಚಿಂತನೆಗಳ ಆಧಾರದ ಮೇಲೆ ಮನುಷ್ಯ ಎಂದರೆ, ಶರೀರ, ಬುದ್ಧಿ, ಮನಸ್ಸು ಮತ್ತು ಆತ್ಮ ಈ ನಾಲ್ಕನ್ನು ಒಳಗೊಂಡಿರುವುದು. ಆದರೆ ಪಾಶ್ಚ್ಯಾತ್ಯ ಚಿಂತನೆಗಳಲ್ಲಿ ಶರೀರ ಮತ್ತು ಬುದ್ಧಿ ಮಾತ್ರವೇ ಮನುಷ್ಯ ಎಂಬ ವಾದವಿತ್ತು. ಇತ್ತೀಚಿನ ಮೂವತ್ತು ವರ್ಷಗಳ ಅಭಿಪ್ರಾಯಗಳಲ್ಲಿ ಮನಸ್ಸು ಮತ್ತು ಆತ್ಮಗಳು ಕೂಡಾ ಮನುಷ್ಯನನ್ನು ನಿಭಾಯಿಸುವ ಅಂಗಗಳೆಂದು ಪರಿಗಣಿಸಲು ಪ್ರಾರಂಭಿಸಿದರು. ಸೈಕೋ ಸೇಮ್ಯಾಟಿಕ್ ಡಿಸಿಜಿಸ್-ಎಂದರೆ ಮನಸ್ಸಿನಿಂದ ಹಾಗೂ ಮನೋ ವ್ಯಾಪಾರ, ಮನೋಕ್ಷೋಭೆ, ಮನೋವೈಕಲ್ಯಗಳಿಂದ ಉಂಟಾಗುವ ರೋಗಗಳು, ಹೀಗಾಗಿ ಮನುಷ್ಯನಲ್ಲಿ ಮನಸ್ಸು ಮುಖ್ಯ.ಮನಸ್ಸು ಕೂಡಾ ಮಾನವನ ಅಂಗ, ಇದರೊಂದಿಗೆ ಆತ್ಮವು, ಮನೋವಿಕಾಸಕ್ಕೆ ವೇದಿಕೆಯಂತೆ ಕಾರ್ಯನಿರ್ವಹಿಸುತ್ತದೆ ಎಂದು ಪ್ರತಿಪಾದಿಸಿದರು.
ಉಪಾಧ್ಯಾಯಜೀಯವರ ಆತ್ಮೀಕ ವಿಕಾಸವಾದವನ್ನು ಒಪ್ಪಿಕೊಳ್ಳಲು ಪಾಶ್ಚಾತ್ಯರಲ್ಲಿ ಇನ್ನೂ ಸಂಶಯಗಳಿವೆ, ಇಂದಿಗೂ ಅನೇಕ ಜಿಜ್ಞಾಸೆಗಳಿವೆ. ಪರೀಕ್ಷೆಗಳೂ ಕೂಡಾ ನಡೆಯುತ್ತಿವೆ. ಆದರೆ ಉಪಾಧ್ಯಾಯಜೀ ಅವರು ವ್ಯಾಖ್ಯಾಸುವಂತೆ, ಮನೋವಿಕಾಸವು ಶಾರೀರಿಕ, ಭಾವನಾತ್ಮಕ, ಆಧ್ಯಾತ್ಮಿಕ ಕ್ರಿಯೆಗಳಲ್ಲಿ ಸಾಗಿ, ಆತ್ಮೀಕ ವಿಕಾಸಕ್ಕೆ ದಾರಿ ಮಾಡಿಕೊಡುತ್ತವೆ. ಮಾನವ ಮಾಧವನಾಗುವ ನರ-ನಾರಾಯಣನಾಗುವ ವಿಕಾಸದ ಸೂತ್ರಗಳನ್ನು ಇದರೊಂದಿಗೆ ಪ್ರತಿಪಾದಿಸಿದರು.
ಧರ್ಮದ ಚೌಕಟ್ಟು ಮೋಕ್ಷದ ಲಕ್ಷ್ಯವೇ ಆಗಿದೆ. ಅರ್ಥಕಾಮದ ಪೂರೈಕೆಗೆ ಧರ್ಮದ ಚೌಕಟ್ಟು ಅತೀ ಅವಶ್ಯಕ, ಮೋಕ್ಷವೆಂಬುದು, ಆಧ್ಯಾತ್ಮಿಕ ತಿಳುವಳಿಕೆ, ಜೀವನ ನಿರ್ವಹಣೆಯ ಕಲೆಯೇ ಆರ್ಟ್ ಆಫ್ ಲೀವಿಂಗ್. ಲೀವಿಂಗ್ ಎಂದರೆ ಬದುಕುವ, ಜೀವಿಸುವ ಎಂಬ ಅರ್ಥದೊಂದಿಗೆ, ಲೀವಿಂಗ್ ಎಂದರೆ ನಿನ್ನ ಬೇಕುಗಳಿಗೆ ಬ್ರೇಕ್ ಹಾಕುವುದು. ಅವಶ್ಯಕತೆಗಳನ್ನು ಕಡಿಮೆ ಮಾಡುವುದು.ಮೋಕ್ಷ ಸಾಧನೆಯೆಂದರೆ, ದುಃಖ ಮತ್ತು ಆಶೆಗಳಿಂದ ದೂರವಿರುವ ಮನೋನಿಗ್ರಹ, ಆನಂದಾನುಭವವೇ ಮೋಕ್ಷದಲಕ್ಷ್ಯ ಇಚ್ಛೆಗಳ ಪೂರೈಕೆಗಳಿಗೂ, ಹಣ ಸಂಪಾದನೆಗೂ ಧರ್ಮದ ಚೌಕಟ್ಟು ಅಗತ್ಯ.ಇದೇ ಮನೋವಿಕಾಸದ ಹಾದಿ, ಇಂತಹ ಬದುಕಿನ ಕಲೆಯನ್ನು ಕುರಿತು ಶೈಕ್ಷಣಿಕ ಪಠ್ಯಗಳು ನಿರ್ಮಾಣವಾಗಬೇಕು.ಅಕ್ಯಾಡೆಮಿಕ ಶಿಸ್ತಿನಲ್ಲಿ ಇಂತಹ ಮನೋವಿಕಾಸದ ಪಠ್ಯಗಳು ಅಳವಡಿಸಬೇಕೆಂಬ ಶ್ರೇಷ್ಠ ಚಿಂತನೆಯನ್ನು ಪ್ರಚುರಪಡಿಸಿದರು.
ಮಾನವ ಸಮಾಜಜೀವಿ, ಅಂತೆಯೇ ಪ್ರಕೃತಿ ಆರಾಧಕನು ಆಗಿದ್ದಾನೆ. ಮನುಷ್ಯ ಮತ್ತು ಪ್ರಕೃತಿಯ ಮಧ್ಯೆ ಅವಿನಾಭಾವ ಸಂಬಂಧವಿದೆ. ದೇವರು ಎಂಬ ಅಗೋಚರ ಶಕ್ತಿಯನ್ನು ನಂಬುವ ಹಾಗೂ ಪ್ರಕೃತಿಯನ್ನು ಪರಮೇಷ್ಠಿಯೆಂಬ ಆರಾಧನೆಯ ಮೂಲಕ ಮನುಷ್ಯನಿಗೆ ಸಮನ್ವಯದ ಬದುಕು ಸಾಧ್ಯವಾಗಿದೆ. ಸಾಮಾಜಿಕ, ಕೌಟುಂಬಿಕ, ಅಸಮತೋಲನಗಳು ಹಾಗೂ ಪ್ರಕೃತಿಯೊಂದಿಗೆ ವ್ಯತ್ಯಾಸವಾದರೇ, ವಿಕೋಪಗಳಾಗುತ್ತವೆ. ಆಸೆ ಪೂರೈಕೆ ಮಾಡಿಕೊಳ್ಳುವಾಗ ಇತರರಿಗೆ ತೊಂದರೆ, ನೋವು ಆಗದಂತೆ ಎಚ್ಚರಿಕೆ ಅಗತ್ಯ, ನಮ್ಮ ಅಸಂತೋಷ ಇನ್ನೊಬ್ಬರಿಗೆ ಆತಂಕ ಒಡ್ಡದಂತಿರಬೇಕು, ಪರರ ಸ್ವಾತಂತ್ರ್ಯಕ್ಕೆ ದಕ್ಕೆ ಬರದಂತೆ ಇರುವುದೇ ಮಾನವೀಯತೆ, ವ್ಯಷ್ಠಿ, ಸಮಷ್ಠಿ, ಸೃಷ್ಠಿ…ಪರಮೇಷ್ಠಿ ಚಿಂತನೆಗಳೇ ಸಮನ್ವಯತೆ, ಎಲ್ಲಾ ಆಯಾಮಗಳಲ್ಲಿ ಆದಾಗ ಅದು ವಿಕಾಸಕ್ಕೆ ನಾಂದಿಯಾಗುತ್ತದೆ. ವಿಕಾಸದ ಯೋಜನೆಯೇ ಏಕಾತ್ಮಕ ಮಾನವತಾವಾದವನ್ನೇ ಪ್ರತಿನಿಧಿಸುತ್ತದೆ ಎಂದು ಪ್ರಖರ ಮತ್ತು ಚಿಂತನಾರ್ಹ ಸಿದ್ಧಾಂತವನ್ನು ಪ್ರತಿಪಾದಿಸಿದರು.

ಅಂತ್ಯೋದಯದ ಹರಿಕಾರ :

ಶಿಕ್ಷಣದ ಲಕ್ಷ್ಯ ಸೌಶಿಲ್ಯವಾದುದು. ಶಿಕ್ಷಣದ ಗುರಿ ಉನ್ನತ ಚಾರಿತ್ರ್ಯ ನಿರ್ಮಾಣ ಮಾಡುವುದೇ ಆಗಿದೆ.ಆದ್ದರಿಂದ ಶಿಕ್ಷಣದ ಮೂಲ ಚಿಂತನೆ ಕೇವಲ ಎಜ್ಯುಕೇಶನ ಆಗಿರದೇ ಅದು ಎಜ್ಯುಕೇರ್ ಕೂಡಾ ಆಗಬೇಕು, ಹೀಗಾಗಿ ಜೀರೋ ಅಸೋಸಿಯೇಶನ್ ಸಂಸ್ಥೆ ಸ್ಥಾಪಿಸಿದರು. ರಜಿಸ್ಟರ್ ಆಗದೇ ಇರುವ, ಸ್ವಯಂ ಸೇವಾ ಸಂಸ್ಥೆಯ ಮೂಲಕ, ಅಂಕ ಕಡಿಮೆ ಪಡೆದುಕೊಂಡ ಹಾಗೂ ಅಭ್ಯಾಸದಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಶಿಕ್ಷಣ ನೀಡುವ ಬಹುದೊಡ್ಡ ಶೈಕ್ಷಣಿಕ ಕ್ರಾಂತಿ ಕೈಗೊಂಡರು. ಅಂತಹ ವಿದ್ಯಾರ್ಥಿಗಳನ್ನು ಮುಂದೆ ತರಲು ನಿರಂತರ ಹೋರಾಟ ಮತ್ತು ಸತತ ಪರಿಶ್ರಮದಿಂದ ಜಿರೋ ಅಸೊಸಿಯೇಷನ್ ಸಫಲತೆಯನ್ನು ಪಡೆಯಲು ಶ್ರಮಿಸಿದರು.
ಮನುಷ್ಯನಿಗೆ ಬದುಕಲು ಇರುವ ಜ್ಞಾನದೊಂದಿಗೆ ಬದುಕು ರೂಪಿಸಿಕೊಳ್ಳುವ ಜ್ಞಾನವು ಅಷ್ಟೇ ಮುಖ್ಯ. ಹೀಗಾಗಿ ಹಣಗಳಿಕೆ ಮಾತ್ರ ಜೀವನವಲ್ಲ. ಜೀವನದ ಸಾಪಲ್ಯತೆ ಇರುವುದು, ಯಶಸ್ವಿ ಬದುಕಿನಲ್ಲಿ ಎಂದರು. ಅರ್ಥ-ಕಾಮಗಳಿಗೆ ಮಹತ್ವ ನೀಡಿದಂತೆ, ಧರ್ಮಕ್ಕೂ ಅದರದೇ ಆದ ಚೌಕಟ್ಟಿದೆ. ಧರ್ಮವನ್ನು ಅನುಸರಿಸಲು ಬದ್ಧತೆಯ ಮಾರ್ಗಗಳಿವೆ. ಹೀಗಾಗಿ ಪಾಶ್ಚಾತ್ಯರು ಧರ್ಮವನ್ನು ’ರೀಲಿಜನ್’ ಎಂದು ವ್ಯಾಖ್ಯಾನಿಸಿದ್ದಾರೆ. ಆದರೆ, ಧರ್ಮ ಇವೆಲ್ಲವುಗಳನ್ನು ಮೀರಿದ ಸರಳ ಆಚರಣೆಯಾಗಿದೆ. ಪಾಶ್ಚಾತ್ಯರಲ್ಲಿ ಪಾಪ-ಪುಣ್ಯಗಳಿಗೆ ಸೀನ್ನ (SIಓ ) ಎಂದು ಮಾತ್ರ ಬಳಸುತ್ತಾರೆ. ಪುಣ್ಯಕ್ಕೆ ಪಾಶ್ಚಾತ್ಯರಲ್ಲಿ ಶಬ್ದವೇ ಇಲ್ಲ, ಪುಣ್ಯದ ಪರಿಕಲ್ಪನೆಯೇ ಅವರಿಗಿಲ್ಲ. ಮನುಷ್ಯ ಹುಟ್ಟಿದ್ದೆ ಪಾಪದಿಂದ-ಪಾಪಕ್ಕಾಗಿ ಎಂಬ ನಂಬಿಕೆ ಇರುವುದರಿಂದಲೇ ದಾರ್ಶನಿಕತೆಯ ಅರ್ಥ ವಿಸ್ತಾರದ ಕೊರತೆ ಅವರಲ್ಲಿದೆ.ಇವುಗಳ ಫಲಾಫಲಗಳ ಬಗೆಗೂ ಅವರಲ್ಲಿ ಚಿಂತನೆಗಳಿಲ್ಲ. ನೈವೈದ್ಯ, ಪ್ರದಕ್ಷಣೆ, ಪ್ರಸಾದ ಇವುಗಳ ಕುರಿತಾದ ಪ್ರಾಕಲ್ಪನೆ ಇಲ್ಲದಿರುವುದರಿಂದಲೇ ಪಾಶ್ಚಾತ್ಯ ಭಾಷೆಗಳಲ್ಲಿಯೂ ಶಬ್ದಾರ್ಥಗಳಿಲ್ಲ, ಧರ್ಮವನ್ನು ವ್ಯಾಖ್ಯಾನಿಸುವ ವಾಗ್ವಾದ ಮತ್ತು ಸಾಂಸ್ಕೃತಿಕ ಚಿಂತನೆ ಸರ್ವೋದಯದ ಭೂಮಿಕೆಯಾಗಿದೆ ಎಂಬುದನ್ನು ಮಂಡಿಸಿದರು.
ಧರ್ಮಾಧಾರಿತ ಸಾಮಾಜಿಕ ವ್ಯವಸ್ಥೆಯನ್ನು ಖಂಡಿಸಿದರು. ಅಂತ್ಯೋದಯವೆಂದರೆ, ದೇಶದ ಅಭಿವೃದ್ಧಿಯ ಮಾನದಂಡ, ಸಾಮಾಜಿಕವಾಗಿ ಕಟ್ಟ ಕಡೆಯವರು ಎಂದು ಗುರುತಿಸಲ್ಪಟ್ಟಿರುವ ವ್ಯಕ್ತಿಯೂ ಕೂಡಾ, ಸಂತೋಷದಿಂದ ನಿರ್ಭಯದಿಂದ ಬದುಕಬೇಕು.ಎಲ್ಲಿಯವರೆಗೆ, ದುರ್ಬಲ ವ್ಯಕ್ತಿ ಸಮೃದ್ಧ ಮತ್ತು ಆನಂದದಿಂದ ಬದುಕುವುದಿಲ್ಲವೋ ಅಲ್ಲಿಯವರೆಗೆ ದೇಶದ ಅಭಿವೃದ್ಧಿ ಅಸಾಧ್ಯವಾದುದು, ಹೊಟ್ಟೆಗೆ-ಬಟ್ಟೆಗೆ ಮತ್ತು ಶಿಕ್ಷಣದ ಮೂಲಭೂತ ಸೌಕರ‍್ಯಗಳು ಅವನಿಗೆ ಸುಲಭವಾಗಿ ಸಿಗುವಂತಾದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಇಂತಹ ವೈಚಾರಿಕ ಚಿಂತನೆಗಳನ್ನು ಜಗತ್ತಿನ ಅನೇಕ ರಾಷ್ಟ್ರಗಳು ಒಪ್ಪಿಕೊಂಡದ್ದ ಜಾಗತಿಕ ವೈಚಾರಿಕ ಚಿಂತನೆಗಳಲ್ಲಿ ಉಪಾಧ್ಯಾಯಜೀ ಅವರ ಈ ಪ್ರಖರ ಜಿಜ್ಞಾಸೆಯನ್ನು ಜರ್ಮನ ಅಳವಡಿಸಿಕೊಂಡು, ಕ್ರಿಯಾನ್ವಯತೆಯಿಂದ ಅದ್ಬುತ ಸಾಧನೆಗೈದಿದೆ.
ಜಗತ್ತಿನ ಪ್ರಗತಿಪರ ಆಕಾಂಕ್ಷಿ ಅನೇಕ ರಾಷ್ಟ್ರಗಳ ವಿಶ್ವವಿದ್ಯಾಲಯಗಳಲ್ಲಿ ಉಪಾಧ್ಯಾಯಜೀಯವರ, ಪ್ರಖರ ತತ್ವಗಳನ್ನು ಕುರಿತು ಸಂಶೋಧನೆ ಕೈಗೊಳ್ಳುತ್ತಲಿವೆ. ಹಳ್ಳಿಗಳ ಉದ್ಧಾರವೇ ವಿಚಾರಗಳ ಸಾಕ್ಷಾತ್ಕಾರ, ಸಫಲತೆಯ ಬೆಳಕುಗಳು, ಸೈದ್ಧಾಂತಿಕ ಅನ್ವೇಷಣೆಯ ಫಲಗಳು. ಹೀಗಾಗಿ ಬದ್ಧತೆಯಿಂದ ಶ್ರಮ ಜೀವಿಗಳ ವಿಕಾಸದ ಚಿಂತನೈಗೈದ ದಿನದಯಾಳ ಉಪಾಧ್ಯಾಯಜೀಯವರು, ಜಾಗತೀಯ ಚಿಂತಕರಾಗಿ ಮಾನ್ಯತೆ ಪಡೆದಿದ್ದಾರೆ.ಭಾರತವನ್ನು ಪ್ರತಿನಿಧಿಸುವ ಪ್ರಖರ ವಾಗ್ಮಿ, ಮನೋಜ್ಞ ಜಿಜ್ಞಾಸು, ಪ್ರಖರ ಚಿಂತಕ ಉಪಾಧ್ಯಾಯಜೀಯವರು ಇಂತಹ ತಮ್ಮ ಪ್ರತಿಪಾದನೆಗಳಿಂದ ವಿಶ್ವ ಮಾನ್ಯರಾಗಿದ್ದಾರೆ.

 

(ಲೇಖಕರು -ಸಹಾಯಕ ಪ್ರಾಧ್ಯಾಪಕರು,
ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆ,
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ
ವಿದ್ಯಾಸಂಗಮ, ಬೆಳಗಾವಿ-೫೯೧೧೫೬)

Related Articles

Back to top button