*ಪಂತನಗರದಲ್ಲಿ ಸೈನಿಕರ ಭವನ ನಿರ್ಮಾಣ – ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಘೋಷಣೆ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಡಿಸೆಂಬರ್ ನಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಪುನಃ ಅಭಿವೃದ್ಧಿಯ ಪರ್ವ ಮುಂದುವರೆಯಲಿದ್ದು, ಅಭಿವೃದ್ಧಿ ಕೆಲಸಗಳಿಗೆ ಮೊದಲ ಆದ್ಯತೆಯನ್ನು ನೀಡಲಿದ್ದೇನೆ. ಪಂತನಗರದಲ್ಲಿ ಸುಮಾರು 50 ಲಕ್ಷ ರೂ,ಗಳ ವೆಚ್ಚದಲ್ಲಿ ಸೈನಿಕರ ಭವನ ನಿರ್ಮಾಣ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಘೋಷಿಸಿದರು.
ಪಂತ ಬಾಳೇಕುಂದ್ರಿ ಗ್ರಾಮದ ಪಂತ ನಗರದ ಶ್ರೀ ರಾಧಾಕೃಷ್ಣ ಕಲ್ಯಾಣ ಮಂಟಪದಲ್ಲಿ ಭಾನುವಾರ ಪಂತ ನಗರದ ನಿವಾಸಿಗಳ, ಮಾಜಿ ಸೈನಿಕರ ಕಲ್ಯಾಣ ಸಂಘ, ಡಾ. ಎಸ್ ರಾಧಾಕೃಷ್ಣ ಗುರು ಬಳಗ ಹಾಗೂ ಶಿವಬಸವ ನಗರ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸತ್ಕಾರ ಸಮಾರಂಭ’ದಲ್ಲಿ ಮಾತನಾಡಿದ ಸಚಿವರು, ಪಂತ ನಗರದ ಅಭಿವೃದ್ಧಿಗೆ ಸಂಪೂರ್ಣ ಸಹಕರಿಸುವುದಾಗಿ ಹೇಳಿದರು.

ಸಚಿವೆಯಾದ ನಂತರ ಮೊದಲ ಬಾರಿಗೆ ಪಂತನಗರಕ್ಕೆ ಆಗಮಿಸಿದ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಇದು ನನ್ನ ಮೊದಲ ಭೇಟಿಯಾಗಿದ್ದು, ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ, ಆಶೀರ್ವಾದದಿಂದ ದ್ವೀತಿಯ ಬಾರಿಗೆ ಶಾಸಕಿಯಾಗಿ, ರಾಜ್ಯ ಸರ್ಕಾರದ ಸಂಪುಟದಲ್ಲಿ ಸಚಿವೆಯಾಗಿ ರಾಜ್ಯವನ್ನು ಪ್ರತಿನಿಧಿಸುತ್ತಿದ್ದೇನೆ. ಇದು ಸಾಧ್ಯವಾಗಿದ್ದು ನಿಮ್ಮಿಂದ, ನಿಮ್ಮ ಪ್ರೀತಿ, ಪ್ರೋತ್ಸಾಹ, ಆಶೀರ್ವಾದ ಯಾವತ್ತಿಗೂ ಹೀಗೆಯೇ ಇರಲಿ ಎಂದು ಆಶಿಸುತ್ತೇನೆ ಎಂದರು.
ಇವತ್ತು ಜಗಜ್ಯೋತಿ ಬಸವಣ್ಣ, ಛತ್ರಪತಿ ಶಿವಾಜಿ, ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನಮ್ಮ ಮುಂತಾದ ಮಹನೀಯರು ತಮ್ಮ ಹೋರಾಟ ಹಾಗೂ ಸಮಾಜಮುಖಿ ಕಾರ್ಯಗಳಿಂದ ಪ್ರಸಿದ್ಧಿಯಾಗಿದ್ದಾರೆ, ಜತೆಗೆ ಎಲ್ಲ ಧರ್ಮಗಳನ್ನು ಪ್ರೀತಿಸಿ ಬೆಳೆಸಿದ್ದಾರೆ. ಈ ಎಲ್ಲ ಮಹನೀಯರ ಸ್ಫೂರ್ತಿಯ ದಾರಿಯಲ್ಲಿಯೇ ನಾನು ಸಹ ಎಲ್ಲ ಧರ್ಮಗಳನ್ನು ಪ್ರೀತಿಸಿ, ಬೆಳೆಸಿ ಮುನ್ನೆಡೆಸುವ ಕೆಲಸವನ್ನು ಮಾಡುತ್ತಿದ್ದೇನೆ ಎಂದರು.

ಸತ್ಕಾರಕ್ಕೂ ಮುನ್ನ ಇಲ್ಲಿನ ಸಹೋದರಿಯೊಬ್ಬರು ಸುಳೇಭಾವಿ ಮಹಾಲಕ್ಷ್ಮಿ ಬಗ್ಗೆ ಹಾಡನ್ನು ಹಾಡಿ, ನನ್ನನ್ನು ಭಾವುಕರಾಗಿಸಿದ್ದಾರೆ. ಈ ಸಂದರ್ಭದಲ್ಲಿ ಈ ಭಾಗದ ಆದಿಶಕ್ತಿ ಶ್ರೀ ಮಹಾಲಕ್ಷ್ಮಿ ದೇವಿಯನ್ನು ಮನಃದಲ್ಲಿ ನೆನೆಯುತ್ತಾ, ನಾನು ಇವತ್ತು ಈ ಸ್ಥಿತಿಯಲ್ಲಿ ಇರಲು ಆ ತಾಯಿಯ ಆಶೀರ್ವಾದ ಸಹ ಕಾರಣವಾಗಿದೆ ಎಂದು ಸಚಿವರು ಸ್ಮರಿಸಿದರು.
ಈ ಸಮಯದಲ್ಲಿ ಸ್ಥಳೀಯ ನಿವಾಸಿಗಳು, ಶಂಕರಗೌಡ ಪಾಟೀಲ, ಗ್ರಾಮ ಪಂಚಾಯತ್ ಅಧ್ಯಕ್ಷೆ ಗುಲಾಬಿ ಕೋಲಕಾರ, ಉಪಾಧ್ಯಕ್ಷೆ ಬಿಬಿ ಹನೀಫಾ ಅಪ್ಸರ್ ಜಮಾದಾರ, ಗ್ರಾಮ ಪಂಚಾಯತಿಯ ಸದಸ್ಯರು, ಪಾರ್ವತಿ ತಳವಾರ, ಎಸ್ ಎಸ್ ಹಿರೇಮಠ, ಬಿ ಎನ್ ಪಾಟೀಲ, ಸದಾಶಿವ ಹಿಟ್ಟಣಗಿ, ವೈ ಎಲ್ ಮುರಾಳ, ಅರ್ಜುನ ಪಾಟೀಲ, ಮಲಗೌಡ ಪಾಟೀಲ, ಸಾಯಿರಾಮ್ ಜಂಬಗಿ, ಎಮ್ ಬಿ ಮಾನಕೋಜಿ ಹಾಗೂ ಮಾಜಿ ಸೈನಿಕರು, ನೂರಾರು ಮಹಿಳೆಯರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ