ಪ್ರಗತಿವಾಹಿನಿ ಸುದ್ದಿ; ಮಂಡ್ಯ: ಹೆತ್ತ ತಂದೆ-ತಾಯಿಯ ಕಿರುಕುಳ ತಾಳಲಾರದೇ 32 ವರ್ಷದ ಮಗನೊಬ್ಬ ಕೊಟ್ಟಿಗೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ನಾಗತಿಹಳ್ಳಿಯಲ್ಲಿ ನಡೆದಿದೆ.
ಗಿರೀಶ್ (32) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಸ್ವತ: ತಂದೆ ತಾಯಿಯೇ ನನಗೆ ಹಾಗೂ ನನ್ನ ಪತ್ನಿಗೆ ಕಿರುಕುಳ ನೀಡಿದ್ದು, ಯಾವೆಲ್ಲ ರೀತಿ ತೊಂದರೆ ಕೊಟ್ಟಿದ್ದಾರೆ ಎಂಬುದನ್ನು ಗಿರೀಶ್ ಡೆತ್ ನೋಟ್ ನಲ್ಲಿ ವಿವರಿಸಿದ್ದಾರೆ.
ತನ್ನ ತಂದೆ ರಾಜು ಹಾಗೂ ಅಮ್ಮ ದೇವಮಣಿಯೇ ನನ್ನ ಸಾವಿಗೆ ಕಾರಣ. ತಂದೆ ಸರ್ಕಾರಿ ಶಾಲೆ ನಿವೃತ್ತ ಶಿಕ್ಷಕ. ತಾಯಿ ದೇವಮಣಿ ಕೂಡ ಸರ್ಕಾರಿ ಶಾಲೆ ಶಿಕ್ಷಕಿ. ಗಿರೀಶ್ ಗೆ ಮದುವೆಯಾಗಿ 11 ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ಇದೇ ಕಾರಣಕ್ಕೆ ತಂದೆ-ತಾಯಿ ಮಗ-ಸೊಸೆಗೆ ಮಾನಸಿಕ ಕಿರುಕುಳ, ಹಿಂಸೆ ನೀಡುತ್ತಿದ್ದರು ಎಂದು ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾರೆ.
ಮಕ್ಕಳಿಲ್ಲ ಎಂಬ ಕಾರಣಕ್ಕೆ ಮಗ-ಸೊಸೆಯನ್ನು ರಾಜು, ದೇವಮಣಿ ದಂಪತಿ ಮನೆಯಿಂದ ಹೊರಹಾಕಿ ಕೊಟ್ಟಿಗೆಯಲ್ಲಿಟ್ಟಿದ್ದರು. ಆಸ್ತಿಯನ್ನೂ ಕೊಟ್ಟಿರಲಿಲ್ಲ. ಗಿರೀಶ್ ಬಳಿ ಜೀವನೋಪಾಯಕ್ಕೆ ಇದ್ದ ಒಂದು ಟ್ರ್ಯಾಕ್ಟರ್ ಕೂಡ ಕಸಿದುಕೊಂಡಿದ್ದರು. ಪತ್ನಿಯೊಂದಿಗೆ ಕೊಟ್ಟಿಗೆಯಲ್ಲಿಯೇ ವಾಸವಾಗಿದ್ದ ಗಿರೀಶ್ ಮಾನಸಿಕವಾಗಿ ತುಂಬಾ ನೊಂದಿದ್ದರು. ಕೊಟ್ಟಿಗೆ ಗೋಡೆಯ ಮೇಲೆಲ್ಲ ತನ್ನ ಸಾವಿಗೆ ತಂದೆ-ತಾಯಿ ರಾಜು ಹಾಗೂ ದೇವಮಣಿಯೇ ಕಾರಣ. ಅವರ ಕಿರುಕುಳವೇ ಕಾರಣ ಎಂದು ಬರೆದಿದ್ದಾರೆ. ಬಳಿಕ ಕೊಟ್ಟಿಗೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಗ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ ತಂದೆ-ತಾಯಿ ನಾಪತ್ತೆಯಾಗಿದ್ದಾರೆ.
‘ನಾ ನಿನ್ನ ಬಿಡಲಾರೆ…’ ಖ್ಯಾತಿಯ ಹಿರಿಯ ನಿರ್ಮಾಪಕ ಸಿ.ಜಯರಾಮ್ ನಿಧನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ