ಪ್ರಗತಿವಾಹಿನಿ ವಿಶೇಷ
ಮಕ್ಕಳು – ದೇಶದ ಬಹುದೊಡ್ಡ ಆಸ್ತಿ. ಎಲ್ಲ ತಾಯಿ-ತಂದೆಯರು ಗಮನಿಸಬೇಕಾದ ಅಂಶವೆಂದರೆ ತಮ್ಮ ಮಕ್ಕಳನ್ನು ಬೆಳೆಸುವ ರೀತಿ, ನೀತಿಗಳ ಬಗ್ಗೆ. ಕಾರಣ ಮಗು ತಮ್ಮದಾಗಿದ್ದರೂ ಅದು ಮುಂದೆ ಬೆಳೆದು, ದೇಶದ ಪ್ರಜೆಯಾಗುವುದಲ್ಲದೇ, ಜವಾಬ್ದಾರಿಯುತ ನಾಗರಿಕನಾಗುತ್ತಾನೆ. ದೇಶದ ಏಳಿಗೆಯಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸುತ್ತಾನೆ. “ಮಗುವಿಗಾಗಿ ಆಸ್ತಿ ಮಾಡಬೇಡಿ. ಮಗುವನ್ನೇ ಆಸ್ತಿಯನ್ನಾಗಿ ಮಾಡಿ” ಎಂಬ ಮಾತು ಎಲ್ಲರ ಬಾಯಲ್ಲು ಹರಿದಾಡುತ್ತಿದೆ. ಹಾಗಾಗೀ ಮಕ್ಕಳನ್ನು ಬೆಳೆಸುವಾಗ ಆದ್ಯತೆ ನೀಡಬೇಕಾದ ಕೆಲ ಅಂಶಗಳಿಲ್ಲಿವೆ.
ಮನೆ ಸಂಸ್ಕಾರದ ಕಣಜ :
ಮಗು ಭೂಮಿಗೆ ಕಾಲಿಟ್ಟ ಮೇಲೆ ಅದಕ್ಕೆ ಇಡೀ ಜಗತ್ತೇ ಹೊಸತು. ಅದಕ್ಕೆ ಏನೊಂದೂ ಗೊತ್ತಿರುವುದಿಲ್ಲ. ಅದನ್ನು ಸಾಮಾಜೀಕರಣಗೊಳಿಸುವ ಪ್ರಕ್ರಿಯೆ ಸದ್ದಿಲ್ಲದೇ ಆರಂಭವಾಗುತ್ತದೆ. ಕುಟುಂಬ, ನೆರೆ ಹೊರೆ, ಶಾಲೆ, ಸಮ ವಯಸ್ಕರ ಗುಂಪು, ಸಮುದಾಯ, ಸಭೆ ಸಮಾರಂಭಗಳು, ಜಾತ್ರೆ ಉತ್ಸವಗಳೆಲ್ಲ ಸಾಮಾಜೀಕರಣಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
“ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು”. ಈ ಮಾತು ಗೊತ್ತಿಲ್ಲದ ವ್ಯಕ್ತಿಯೇ ಇಲ್ಲ. ಅಂದರೆ ತಾಯಿಯೇ ನಮಗೆಲ್ಲವನ್ನು ಕಲಿಸಿ ಕೊಡುವ ಮೊದಲ ಗುರು. ನಡೆ-ನುಡಿ, ಆಚಾರ-ವಿಚಾರ, ವಿದ್ಯೆ-ವಿನಯ, ಸಮಾಜದಲ್ಲಿ ಹೊಂದಿಕೊಂಡು ಹೋಗುವ ಪರಿ ಪ್ರತಿಯೊಂದನ್ನೂ ಮನೆಯಿಂದಲೇ ಮಗು ತರಬೇತು ಪಡೆಯುತ್ತದೆ. ಹಾಗಾಗೀ ಮನೆಯು ಕೇವಲ ಮನೆಯಾಗಿರದೇ, ಸಂಸ್ಕಾರದ ಕಣಜವಾಗಿರುತ್ತದೆ. ಹಾಗಾಗಿಯೇ ಮನೆಯ ವಾತಾವರಣ ಯಾವತ್ತೂ ಶುದ್ದವಾಗಿರಬೇಕು. ಅಂದರೆ ಮನೆಯಲ್ಲಿನ ಸದಸ್ಯರ ನಡೆವಳಿಕೆ, ಭಾಷೆ, ಭಾವಾಭಿವ್ಯಕ್ತಿ, ಹಿತಮಿತವಾಗಿರಬೇಕು. ಕಾರಣ ಮಗು ಸೂಕ್ಷ್ಮವಾಗಿ ಪ್ರತಿಯೊಬ್ಬರ ಚಲನ- ವಲನಗಳನ್ನು ಗಮನಿಸುತ್ತದೆ. ನಂತರದಲ್ಲಿ ಅನುಕರಣೆ ಮಾಡುತ್ತದೆ.
ಆಟ-ಊಟ-ಪಾಠ :
ಮಗು ಯಾವಾಗಲೂ ಖುಷಿಯಿಂದ ಇರಬೇಕೆಂದಾಗ ಅದರ ಗಮನ ಆಟದ ಕಡೆಗೇ ಹೆಚ್ಚು. ಇದು ಮನುಷ್ಯನಲ್ಲಿ ಮಾತ್ರವಲ್ಲ ಪ್ರಕೃತಿಯಲ್ಲಿನ ಎಲ್ಲ ಜೀವಿಗಳಲ್ಲೂ ಕಂಡುಬರುತ್ತದೆ. ಆ ಮೂಲಕ ದೇಹದ ಬೆಳವಣಿಗೆ, ಸ್ನಾಯುಗಳ ಬಲ ವರ್ಧನೆ, ಗಾತ್ರದಲ್ಲಿ ಬದಲಾವಣೆಯಾಗಲು ಸಹಾಯಕ. ಅದಕ್ಕಾಗಿ ಅದನ್ನು ಅಪಾಯಕರವಲ್ಲದ ಸ್ಥಳ, ಆಟಿಕೆಗಳು,ಸಮಯವನ್ನು ಮೀಸಲಿರಿಸಲೇ ಬೇಕು. ಕಡೇ ಪಕ್ಷ ಒಂದೆರೆಡು ಗಂಟೆಗಳ ಕಾಲ, ಸಮ ವಯಸ್ಕ ಗುಂಪಿನೊಂದಿಗೆ ಆಟವಾಡಿದಾಗ, ಅದರ ಮನಸ್ಸು, ಬೌದ್ಧಿಕ, ಭಾವನೆಗಳು, ಪ್ರತಿಕ್ರಿಯಿಸುವ ಬಗೆ ಎಲ್ಲದರಲ್ಲೂ ಮಾರ್ಪಾಡಾಗುತ್ತಾ ಹೋಗುತ್ತದೆ. ಅಂತಹ ವಾತಾವರಣವನ್ನು ಕಲ್ಪಿಸಿ ಕೊಡಬೇಕಾದುದು ಪಾಲಕರ, ಶಾಲೆಯ ಕರ್ತವ್ಯ.
ಆಟವಾಡುತ್ತಲೇ ಅದಕ್ಕೆ ಹಸಿವಾಗುತ್ತದೆ. ದೇಹಕ್ಕೆ ಪೋಷಕಾಂಶಗಳ ಅಗತ್ಯತೆ ಶಾರೀರಕ ಬೆಳವಣಿಗೆಗಿದೆ. ದವಸ ಧಾನ್ಯಗಳು, ತರಕಾರಿಗಳು, ಸೊಪ್ಪುಗಳು, ಹಣ್ಣು ಹಂಪಲುಗಳು, ಹಾಲು ಮುಂತಾದವುಗಳ ಸಮತೋಲಿತ ಆಹಾರವು, ದೇಹಕ್ಕೆ ಅಗತ್ಯವಿರುವ ಕಾರ್ಬೋಹೈಡ್ರೇಟ್ಸ್, ವಿಟಾಮಿನ್, ಪ್ರೋಟೀನ್, ಕೊಬ್ಬು, ಮಿನರಲ್ಸ್ ಗಳು ದೊರೆತು, ದಷ್ಟಪುಷ್ಟವಾಗಿರಲು ಸಹಾಯಕವಾಗುತ್ತದೆ.
ನಂತರ ಪಾಠದ ಕಡೆಗೆ ಮನಸ್ಸನ್ನು ತಿರುಗಿಸಬೇಕು. ಅದು ಪ್ರಾರಂಭದಲ್ಲಿ ಕಂಠಪಾಠದ ಹಾದಿಯಲ್ಲಿರುತ್ತದೆ. ಕ್ರಮೇಣ ಅರ್ಥೈಸಿಕೊಳ್ಳುತ್ತದೆ. ಈ ಸಂದರ್ಭದಲ್ಲಿ ಭಯ ರಹಿತ, ಉಲ್ಲಾಸ ಮಯ, ಆಸಕ್ತಿಯುತ ವಾತಾವರಣದ ಸೃಷ್ಟಿ ಸುತ್ತಲಿನವರಿಂದಾಗ ಬೇಕು. ಅಪೇಕ್ಷಿತ ಫಲಿತಾಂಶಕ್ಕೆ ಇದೇ ಸೂಕ್ತ. ಒತ್ತಾಯ, ಬಲವಂತ, ಬೆದರಿಕೆಗಳೆಂದೂ ನಕಾರಾತ್ಮಕವಾಗಿರುತ್ತದೆಂಬುದು ವಿಧಿತ.
ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯಕ್ಕೆ ಒತ್ತು ಕೊಡಬೇಕು. ಇಲ್ಲವಾದರೆ ಮಕ್ಕಳು ಯಾವ ಸಂದರ್ಭದಲ್ಲಿ ಹೇಗೆ ಉತ್ತರ ಕೊಡುತ್ತಾರೆ ಎಂಬುದು ನಿಗೂಢವಾಗಿರುತ್ತದೆ. ಅಂಕೆಯಲ್ಲಿಟ್ಟುಕೊಳ್ಳಲು ನಿಮ್ಮ ಪ್ರಯತ್ನಗಳ ಮಾರ್ಗವನ್ನು ಕೊಂಚ ಬದಲಾವಣೆ ಮಾಡಿ ಕೊಳ್ಳಬೇಕು.
ಸ್ವತಂತ್ರ ವಿಚಾರಗಳಿಗೆ ಆದ್ಯತೆ :
ಮಗು ತನ್ನ ವಯಸ್ಸಿಗೆ ತಕ್ಕ ರೀತಿಯಲ್ಲಿ ಯೋಚಿಸಿ, ಅಭಿಪ್ರಾಯ ವ್ಯಕ್ತಪಡಿಸುತ್ತದೆ. ಪ್ರತಿಕ್ರಿಯಿಸುತ್ತದೆ. ಅದು ಹಾಸ್ಯಾಸ್ಪದವಾಗಿರಲೂ ಬಹುದು. ಅದರ ಅಭಿವ್ಯಕ್ತಿ ಸಾಮರ್ಥ್ಯಕ್ಕೆ ಪೋಷಣೆಯ ಅಗತ್ಯತೆಯಿರುತ್ತದೆ. ಹಾಗಾಗಿ ಅದರ ಭಾವನೆಗಳು ಮುಕ್ತವಾಗಿ ಚಲಾವಣೆಗೊಳ್ಳಲು ವೇದಿಕೆ ಸಿದ್ಧಪಡಿಸಲೇ ಬೇಕು. ತಿರಸ್ಕಾರ, ನಿಂದನೆ, ಮುಜುಗರಕ್ಕೀಡು ಮಾಡುವಂತಿರಬಾರದು. ಇಲ್ಲವಾದಲ್ಲಿ ಅದರೊಳಗಿನ ಪ್ರತಿಭೆ ಇದ್ದಲ್ಲೇ ಇಂಗಿ ಹೋಗುತ್ತದೆ.
ಮನೆಗೆಲಸ – ಹೊರೆಯಲ್ಲ ಅದು ಜ್ಞಾನ ವಿಸ್ತರಣೆಯ ಚಟುವಟಿಕೆ :
ವಿಷಯಗಳ ಶಿಕ್ಷಕರು ಹೊರೆಯಾಗದಂತೆ ಭವಿಷ್ಯದಲ್ಲಿ ಅಳವಡಿಸಿಕೊಳ್ಳಬಹುದಾದ, ಜ್ಞಾನದ ಸಂಗ್ರಹವಾಗುವಂತಿರಬೇಕು. ಈಗಿನದು ಹಾಗಲ್ಲ. ಪಠ್ಯಕ್ಕೆ ಪೂರಕವಾದುದಿರದೇ, ಅದೇ ಪಾಠಗಳ ಪ್ರಶ್ನೆ ಉತ್ತರಗಳನ್ನು ಬರೆಯುವುದು ಮನೆಗೆಲಸವೆಂದು ಬಗೆಯಲಾಗಿದೆ. ಅದು ಶಾಲಾ ಕೊಠಡಿಗಳಲ್ಲಾಗುವಂತಹುದು. ಪೂರಕ ವಿಷಯಗಳ ಸಂಗ್ರಹ ಮನೆಗೆಲಸವಾಗುತ್ತದೆ. ಈ ಪರಿಕಲ್ಪನೆಯೇ ತಿರುಗುಮುರುಗಾಗಿದೆ. ಶಿಕ್ಷಕರ ಸೃಜನಶೀಲತೆ ಬತ್ತಿ ಹೋಗಿದೆಯೋ, ಸಮಯದ ಕೊರತೆಯೋ, ಹಲವು ಶೈಕ್ಷಣಿಕ ಯೋಜನೆಗಳ ಉಪಟಳದ ಪರಿಣಾಮವೋ ಸಮಿತಿಯೊಂದರಿಂದ ಅಧ್ಯಯನ ಮಾಡಿಸಲೇ ಬೇಕು.
ಆದರೆ ನೆನಪಿನಲ್ಲಿಡುವ ಅಂಶ ಎಲ್ಲರಿಗೂ ತಿಳಿದಿರಬೇಕು. ಯಾವುದನ್ನು “ನಾವು ಸಂತೋಷದಿಂದ ಕಲಿಯುತ್ತೇವೆಯೋ ಅದು ಜೀವನಪರ್ಯಂತ ಸ್ಮೃತಿ ಪಟಲದಲ್ಲಿರುತ್ತದೆ.” ಹಾಗಾಗಿ ವಿಷಯವಾರು ಮನೆಗೆಲಸದ ಹಂಚಿಕೆ ಕ್ರಮಬದ್ದವಾಗಿರಬೇಕು. ಇದರ ಜವಾಬ್ದಾರಿ ತರಗತಿ ಶಿಕ್ಷಕರದ್ದಾಗಿದೆ.
ಮನೆಯಲ್ಲಿ ಪಾಲಕರು ಮೇಲಿಂದ ಮೇಲೆ ಮಗುವಿನೊಂದಿಗೆ ಉತ್ತಮ ಸಂವಹನ ನಡೆಸುತ್ತಾ ಅದರ ಮನಸ್ಸನ್ನು ಸಂತೋಷವಾಗಿಡಲು ಪ್ರಯತ್ನಿಸಬೇಕು.ಇದು ನಿರಂತರವಾಗಿರಬೇಕು.
ಬೇಸರಿಕೆಯಾಗಲೇ ಬಾರದು. ಕಾರಣ ಮಗು ನಿಮ್ಮದೇ. ಅದರ ಭವಿಷ್ಯದ ಬುನಾದಿಗೆ ನೀವೆ ಅಡಿಪಾಯ ಹಾಕುವವರು.
ಮಕ್ಕಳ ತಪ್ಪುಗಳನ್ನು ಕರುಣೆಯ ವ್ಯಾಪ್ತಿಯಲ್ಲಿಡಿ :
ಸಹಜವಾಗಿ ಲೋಪ ದೋಷಗಳಾಗುತ್ತವೆ. ಅದನ್ನು ಕರುಣೆಯಿಂದ ಕಂಡು ತಿದ್ದಬೇಕಲ್ಲವೇ? ಮಕ್ಕಳ ತಪ್ಪುಗಳು ಅರಿವಿಲ್ಲದೇ ಆಗಿರುತ್ತವೆ. ಉದ್ದೇಶ ಪೂರ್ವಕವಾಗಿ ಎಂಬುದು ತಪ್ಪು.. ತಿಳುವಳಿಕೆ, ಅನುಭವದ ಕೊರತೆ ಹಾಗೇ ಮಾಡಿಸುತ್ತದೆ. ಒಂದು ಸಾರಿ ಮನನವಾದರೆ ಮತ್ತೆ ಹಾಗಾಗಲಿಕ್ಕಿಲ್ಲ. ಅಪರಾಧವೆಂಬಂತೆ ಪರಿಸ್ಥಿತಿಯನ್ನು ಚಿತ್ರಿಸುವ ಅವಶ್ಯಕತೆ ಇಲ್ಲ. ತಾರುಣ್ಯದಲ್ಲಂತೂ ಸೂಕ್ಷ್ಮ ವಿಚಾರಗಳಿರುತ್ತವೆ.ಬಹಳ ಎಚ್ಚರಿಕೆಯಿಂದ ನಿಭಾಯಿಸಬೇಕು. ಇಲ್ಲವಾದರೆ ಆತ್ಮಹತ್ಯೆಯಂತಹ ವಿಚಾರಗಳು ಅವರ ತಲೆಯಲ್ಲಿ ಸುಳಿದಾಡುತ್ತಿರುತ್ತವೆ.
ಜೀವನದ ಗುರಿ ಅವರದ್ದಾಗಿರಲಿ. ಪಾಲಕರದ್ದಲ್ಲ :
ಮಕ್ಕಳು ಏನಾಗಬೇಕೆಂಬುದನ್ಮು ಮೊದಲೇ ತಂದೆ ತಾಯಿಯರು ನಿರ್ಧರಿಸುತ್ತಾರೆ. ಅದು ಬಂಧು ಬಳಗದಲ್ಲಿ ಯಾರೋ ಏನೋ ಆಗಿದ್ದನ್ನು ನೋಡಿ, ನಮ್ಮ ಮಗುವೂ ಅದೇ ಆಗಬೇಕೆಂದು ಮಾಡಲೆತ್ನಿಸುತ್ತಾರೆ . ತಮ್ಮ ಮಗುವಿನ ಸಾಮರ್ಥ್ಯವೇನು ? ಒಮ್ಮೆಯಾದರೂ ಒಳ ಹೊಕ್ಕು ನೋಡಬೇಕು. ಬಲವಂತವಾಗಿ ಹೇರುವುದು ತರವಲ್ಲ. ಅಲ್ಲೇ ನೋಡಿ, ಅತ್ತ ಕಡೆಯೂ ಇಲ್ಲ ಇತ್ತ ಕಡೆಯೂ ಇಲ್ಲ ಎಂಬಂತಾಗುತ್ತದೆ. ತಮ್ಮ ಇಚ್ಛೆಗನುಸಾರವಾಗಿ ಭವಿಷ್ಯ ರೂಪಿಸಿಕೊಳ್ಳುವ ಅವಕಾಶ ಇರಬೇಕು.
ಅತಿಯಾದ ತಿಳಿವಳಿಕೆ, ಮಾರ್ಗದರ್ಶನ ಎಂದೂ ಅಪಾಯಕಾರಿ :
ಕೆಲ ಶಿಕ್ಷಕರ, ಪಾಲಕರ ಸ್ವಭಾವವೇ ಹಾಗೆ. ಮಕ್ಕಳ ನಡೆ ನುಡಿ, ಬಟ್ಟೆ ಬರೆ, ಮೊಬೈಲ್ ಮಾತು ಕತೆಯ ಬಗ್ಗೆ ವಿಪರೀತ ವಿಶ್ಲೇಷಣೆಯಿಂದ ಕಿರಿ ಕಿರಿ ಉಂಟು ಮಾಡಿ ಬಿಡುತ್ತಾರೆ. ಅವರಿಗೆ ತಾವೇ ಮಾದರಿಯಾಗಿದ್ದಲ್ಲಿ, ಮಕ್ಕಳು ಅನುಕರಿಸುವ ಮೂಲಕ ತಮ್ಮನ್ನು ಸ್ಪಂದಿಸುತ್ತಾರೆ. ಇತ್ತೀಚೆಗಿನ ಬೆಳವಣಿಗೆ ಆತಂಕ ಸೃಷ್ಟಿಸಿವೆ. ಜೀವಕ್ಕೆ ತಾವೇ ಕುತ್ತು ತಂದುಕೊಳ್ಳುವ ಘಟನೆಗಳನೇಕ. ಬುದ್ದಿ ಹೇಳುವವರೇ ಪಾಲನೆಯಲ್ಲಿಲ್ಲ. ಅಂದ ಮೇಲೆ ಮಕ್ಕಳ ಬಗೆಗಿನ ನಿರೀಕ್ಷೆ ಸಾಧ್ಯವಿಲ್ಲ.
ಚಿಕ್ಕಂದಿನಿಂದಲೇ ಓದುವ, ಬರೆಯುವ ಹವ್ಯಾಸ ಬೆಳೆಸಬೇಕು. ಅವರ ಮೆಚ್ಚಿನ ಸಂಗತಿಗಳನ್ನರಿತು ಪ್ರೋತ್ಸಾಹ ಕೊಡುವುದೊಳಿತು. ಮಗು ಮುಂದಿನ ದಿನಗಳಲ್ಲಿ ಸಶಕ್ತ ವ್ಯಕ್ತಿಯಾಗಿ ಬೆಳೆದು ಬರಲು ಈಗಿನಿಂದಲೇ ಪ್ರಯತ್ನಿಸಬೇಕು. ತಮಗಷ್ಟೇ ಅಲ್ಲದೇ ಅವರು ದೇಶದ ಬಹುದೊಡ್ಡ ಆಸ್ತಿ. ಹಾಗಾಗಿ ಅವರೆಡೆಗೆ ಗಮನವಿರಿಸಿ, ಕಾಪಾಡಿಕೊಳ್ಳಬೇಕು.
ಲೇಖನ : ರವಿ ಕರಣಂ.
ಸತೀಶ ಬೆಂಬಲಕ್ಕೆ ನಿಂತ ಸಂಘಟನೆಗಳು; ತೇಜೋವಧೆ ಖಂಡಿಸಿ ಇಂದು ಪ್ರತಿಭಟನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ