Belagavi NewsBelgaum NewsElection NewsKannada NewsKarnataka NewsPolitics

ನೆಮ್ಮದಿಯ ಬೆಳಗಾವಿ ನನ್ನ ಗುರಿ : ಮೃಣಾಲ ಹೆಬ್ಬಾಳಕರ್ ಪ್ರಣಾಳಿಕೆ ಬಿಡುಗಡೆ

ಜನಸ್ನೇಹಿ -ರೈತ ಸ್ನೇಹಿ – ಉದ್ಯಮ ಸ್ನೇಹಿಯಾಗಿ ಬೆಳಗಾವಿಯ ಅಭಿವೃದ್ಧಿ; ಮೃಣಾಲ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಜನಸ್ನೇಹಿ, ರೈತ ಸ್ನೇಹಿ, ಉದ್ಯಮ ಸ್ನೇಹಿಯಾಗಿ ಬೆಳಗಾವಿಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ತಿಳಿಸಿದ್ದಾರೆ.

ಮೇ 7ರಂದು ನಡೆಯಲಿರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅವರು ಕ್ಷೇತ್ರಕ್ಕಾಗಿನ ತಮ್ಮ ಯೋಜನೆಗಳ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

ಬೆಳಗಾವಿಯನ್ನು ನೆಮ್ಮದಿಯ ಮತ್ತು ಸುರಕ್ಷಿತ ಜಿಲ್ಲೆಯಾಗಿ ಅಭಿವೃದ್ಧಿಪಡಿಸುವುದು. ಬೇಡದ ಕಾರಣಕ್ಕಾಗಿ ಬೆಳಗಾವಿಯ ವ್ಯಾಪಾರ ವ್ಯವಹಾರ ಸ್ಥಬ್ಧವಾಗಬಾರದು. ಸೌಹಾರ್ದಯುತ ವಾತಾವರಣ, ಜೊತೆಗೆ ಜನಸ್ನೇಹಿ, ರೈತಸ್ನೇಹಿ, ಉದ್ಯಮ ಸ್ನೇಹಿಯನ್ನು ಬೆಳೆಸುವುದು ನನ್ನ ಕನಸು ಎಂದು ಅವರು ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ.

ರಾಜಕಾರಣ ಕೆಲವರಿಗೆ ಫ್ಯಾಶನ್, ಕೆಲವರಿಗೆ ಹಣಮಾಡುವ ಮಾರ್ಗ, ಕೆಲವರಿಗೆ ಟೈಮ್ ಫಾಸ್, ಆದರೆ ನಮ್ಮ ಕುಟುಂಬಕ್ಕೆ ಇದೊಂದು ಸಮಾಜ ಸೇವೆಯ ಅವಕಾಶ. ಈ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ಜನಸೇವೆ ಮಾಡಲಾಗುವುದು. ನನ್ನ ತಾಯಿಯವರಾದ  ಲಕ್ಷ್ಮೀ ಹೆಬ್ಬಾಳಕರ್ ಅವರು ಕಳೆದ ಎರಡೂವರೆ ದಶಕಗಳಿಂದ ರಾಜಕೀಯ ಕ್ಷೇತ್ರದಲ್ಲಿದ್ದು, ಅಂದಿನಿಂದಲೂ ಸಾಮಾಜ ಸೇವೆಯ ಮೂಲಕ ಬಡವರ ಕಣ್ಣೀರು ಒರೆಸುವ ಕೆಲಸವನ್ನು ಮಾಡುತ್ತಲೇ ಬಂದಿದ್ದಾರೆ.

ಈಗ ಕರ್ನಾಟಕ ಸರಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿರಿಯ ನಾಗರಿಕರು ಹಾಗೂ ವಿಕಲಚೇತನರ ಸಬಲೀಕರಣ ಸಚಿವರಾಗಿದ್ದಾರೆ. ಜನತೆಯ ಆಶಿರ್ವಾದದಿಂದಾಗಿ ಅವರ ಕಾರ್ಯಕ್ಷೇತ್ರ ವಿಸ್ತಾರವಾಗುತ್ತ ಸಾಗಿದೆ. 2013ರಲ್ಲಿ ಅವರು ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದಾಗಿನಿಂದ ಇಂದಿನವರೆಗೂ ನಾನು ಅವರ ಕಾರ್ಯವನ್ನು ಹತ್ತಿರದಿಂದ ನೋಡುತ್ತ, ಅವರ ಕೆಲಸದಲ್ಲಿ ಕೈ ಜೋಡಿಸುತ್ತ, ಸಮಾಜ ಸೇವೆಯಲ್ಲಿ ನನ್ನನ್ನು ತೊಡಗಿಸಿಕೊಂಡು ಬಂದಿದ್ದೇನೆ ಎಂದಿದ್ದಾರೆ.

ಬೆಳಗಾವಿ ಜಿಲ್ಲೆಯ, ಅದರಲ್ಲೂ ವಿಶೇಷವಾಗಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರ ಕಷ್ಟ, ಸುಖದಲ್ಲಿ ಭಾಗಿಯಾಗಿ, ಕೊರೋನಾ, ಪ್ರವಾಹ ಮತ್ತಿತರ ಸಂಕಷ್ಟದ ಸಂದರ್ಭದಲ್ಲಿ ಜನರೊಂದಿಗಿದ್ದು, ನಮ್ಮಿಂದಾದ ಸೇವೆಗೈದಿದ್ದೇವೆ. ನಮ್ಮ ಸಂಪೂರ್ಣ ಕುಟುಂಬಕ್ಕೆ ಕೊರೋನಾ ಬಂದಾಗಲೂ ಸಹ ನಮ್ಮ ಸಿಬ್ಬಂದಿ ಮೂಲಕ ಜನರ ಸೇವೆಯನ್ನು ನಿಲ್ಲಿಸಿರಲಿಲ್ಲ. ಹಾಲು, ಹಣ್ಣು, ತರಕಾರಿ, ದಿನಸಿ ವಸ್ತುಗಳು, ಔಷಧ ಕಿಟ್ ಗಳ ಪೂರೈಕೆ, ಅಂಬುಲನ್ಸ್ ವ್ಯವಸ್ಥೆ, ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಗೆ ವ್ಯವಸ್ಥೆ ಎಲ್ಲವೂ ನೀರಂತರವಾಗಿ ನಡೆಯುವಂತೆ ಮಾಡಿದ್ದೆವು ಎಂದು ಮೃಣಾಲ್ ಹೆಬ್ಬಾಳಕರ್ ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ.

ಕುಡಿಯುವ ನೀರು, ರಸ್ತೆಗಳ ಅಭಿವೃದ್ಧಿ, ಹೊಸ ರಸ್ತೆಗಳ ನಿರ್ಮಾಣ, ಬಾಂದಾರಗಳ ನಿರ್ಮಾಣ, ಸಮರ್ಪಕ ಸಾರಿಗೆ ವ್ಯವಸ್ಥೆ, ಶಾಲಾ ಕೊಠಡಿ, ಕಂಪೌಂಡ್ ವಾಲ್, ಆಟದ ಮೈದಾನಗಳ ನಿರ್ಮಾಣಗಳ ಮೂಲಕ ಮಕ್ಕಳ ಶೈಕ್ಷಣಿಕ ಅವಕಾಶಗಳ ವಿಸ್ತರಣೆ, ಜಿಮ್ ಉಪಕರಣ, ಕ್ರೀಡಾ ಸಾಮಗ್ರಿ, ವಿಜ್ಞಾನ ಉಪಕರಣಗಳ ವಿತರಣೆ, ಮಹಿಳೆಯರು, ದುರ್ಬಲರು, ಅಸಹಾಯಕರಿಗೆ ಸಹಾಯ, ಉದ್ಯಮಗಳಿಗೆ ಸೂಕ್ತ ನೆರವು, ನೂರಕ್ಕೂ ಹೆಚ್ಚು ದೇವಸ್ಥಾನಗಳ ನಿರ್ಮಾಣ/ ಜೀರ್ಣೋದ್ಧಾರಕ್ಕೆ ನೆರವು, ಸಮುದಾಯ ಭವನಗಳ ನಿರ್ಮಾಣ ಸೇರಿದಂತೆ ಸಾವಿರಾರು ಅಭಿವೃದ್ಧಿ ಕೆಲಸಗಳು ಬೆಳಗಾವಿ ಗ್ರಾಮೀಣ ವಿಧಾನಸಭಾ  ಕ್ಷೇತ್ರದಲ್ಲಾಗಿವೆ.

ಜನರೇ ಅಮ್ಮನಿಗೆ ಡೆವಲಪ್ ಮೆಂಟ್ ಕ್ವೀನ್ ಎನ್ನುವ ಬಿರುದನ್ನು ಕೊಟ್ಟಿದ್ದಾರೆ. ಮನೆಮಗಳೆಂದು ಪ್ರೀತಿಯಿಂದ ಒಪ್ಪಿಕೊಂಡಿದ್ದಾರೆ. 5 ವರ್ಷದಲ್ಲಿ ಕ್ಷೇತ್ರದ ಚಿತ್ರಣ ಮೂಗಿನ ಮೇಲೆ ಬೆರಳಿಡುವಷ್ಟು ಬದಲಾಗಿದೆ. ಇಂತಹ ಸಕಾರಾತ್ಮಕ ಬದಲಾವಣೆಯನ್ನು ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲೂ ತರುವ ಕನಸು ಹೊತ್ತು ನಿಮ್ಮ ಮುಂದೆ ನಿಂತಿದ್ದೇನೆ ಎಂದಿದ್ದಾರೆ.

ನಾನು ಎಂಜಿನಿಯರಿಂಗ್ ಪದವೀದರನಾಗಿದ್ದು, ಕುಟುಂಬದ ಉದ್ಯಮಗಳಲ್ಲಿ ಪಾಲುದಾರನಾಗಿದ್ದೇನೆ. ಜೊತೆಗೆ, ಸಮಾಜ ಸೇವೆಗೋಸ್ಕರ ಕಳೆದೊಂದು ದಶಕದಿಂದ ರಾಜಕಾರಣದಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೇನೆ. ಬೆಳಗಾವಿ ಜಿಲ್ಲೆಯ ಕುರಿತು ಸಮಗ್ರವಾಗಿ ಅಧ್ಯಯನ ಮಾಡಿರುವ ನನಗೆ, ಜಿಲ್ಲೆಯ ಸಮಸ್ಯೆಗಳು, ಬೇಕು- ಬೇಡಗಳ ಸಂಪೂರ್ಣ ಅರಿವಿದೆ.    

ಬೆಳಗಾವಿ ನಗರ ಕಳೆದ ಸುಮಾರು 2 ದಶಕಗಳಿಂದ ಬಹಳ ವೇಗವಾಗಿ ಬೆಳೆಯುತ್ತಿದೆ. ಆದರೆ ಈ ಬೆಳವಣಿಗೆ ವ್ಯವಸ್ಥಿತವಾಗಿಲ್ಲ ಎನ್ನುವ ಕೊರಗು ನಮ್ಮೆಲ್ಲರನ್ನೂ ಕಾಡುತ್ತಿದೆ. ಜಿಲ್ಲೆಗೆ ಬರಬೇಕಾದ ದೊಡ್ಡ ದೊಡ್ಡ ಯೋಜನೆಗಳು ಬರುತ್ತಿಲ್ಲ, ಜಿಲ್ಲೆಯ ಯುವಕರ ಕೈಗೆ ಕೆಲಸ ಸಿಗುತ್ತಿಲ್ಲ, ರೈಲ್ವೆ, ವಿಮಾನಯಾನ, ರಸ್ತೆ ಸಂಪರ್ಕ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆ ಜಿಲ್ಲೆಯನ್ನು ಕಾಡುತ್ತಿವೆ.

 ಇಲ್ಲಿನ ಉದ್ಯಮಗಳಿಗೆ, ಕೃಷಿ ಚಟುವಟಿಕೆಗಳಿಗೆ ಸೂಕ್ತ ರೀತಿಯ ಮೂಲಭೂತ ಸೌಲಭ್ಯಗಳಿಲ್ಲ. ಜಿಲ್ಲೆಯಲ್ಲಿ ಉದ್ಯಮಗಳನ್ನು ಆರಂಭಿಸಲು ಇರುವ ಅವಕಾಶಗಳ ಕುರಿತು ಉದ್ಯಮಿಗಳಿಗೆ ಸರಿಯಾಗಿ ಮನದಟ್ಟು ಮಾಡುವ ಕೆಲಸವಾಗುತ್ತಿಲ್ಲ. ಪ್ರವಾಸೋದ್ಯಮ ಬೆಳೆಸಲು ಯಾವುದೇ ಸೂಕ್ತ ಕ್ರಮವಾಗಿಲ್ಲ. ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಕನಸನ್ನು ಹೊತ್ತು, ಹಲವಾರು ಯೋಜನೆಗಳ ಮೂಲಕ ಜಿಲ್ಲೆಯನ್ನು ಯಾವ ರೀತಿಯಲ್ಲಿ ಮುಂದಕ್ಕೆ ಒಯ್ಯಬೇಕೆನ್ನುವ ಸ್ಪಷ್ಟ ಕಲ್ಪನೆಯನ್ನಿಟ್ಟುಕೊಂಡು ನಾನು ಈ ಬಾರಿ ಲೋಕಸಭಾ ಚುನಾವಣೆಗೆ ಸ್ಫರ್ಧಿಸಿದ್ದೇನೆ ಎಂದು ತಿಳಿಸಿದ್ದಾರೆ.

ಮೃಣಾಲ್ ಕನಸು

1. ಬೆಳಗಾವಿಯನ್ನು ನೆಮ್ಮದಿಯ ಮತ್ತು ಸುರಕ್ಷಿತ ಜಿಲ್ಲೆಯಾಗಿ ಅಭಿವೃದ್ಧಿಪಡಿಸುವುದು. ಬೇಡದ ಕಾರಣಕ್ಕಾಗಿ ಬೆಳಗಾವಿಯ ವ್ಯಾಪಾರ ವ್ಯವಹಾರ ಸ್ಥಬ್ಧವಾಗಬಾರದು. ಜನಸ್ನೇಹಿ, ರೈತಸ್ನೇಹಿ, ಉದ್ಯಮ ಸ್ನೇಹಿ ವಾತಾವರಣ ನಿರ್ಮಾಣ ಮಾಡುವುದು.

2. ಇರುವ ಉದ್ಯಮಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ಜೊತೆಗೆ, ಜಿಲ್ಲೆಗೆ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹರಿದುಬರುವಂತೆ ಮಾಡುವುದು. ಸಕಲ ಸೌಲಭ್ಯವನ್ನೊಳಗೊಂಡ ಲ್ಯಾಂಡ್ ಬ್ಯಾಂಕ್ ಸಿದ್ಧಪಡಿಸುವ ಮೂಲಕ (Plug and Play facility) ಬೃಹತ್ ಉದ್ಯಮಗಳನ್ನು ಆಕರ್ಷಿಸುವುದು.

3. ಹುಬ್ಬಳ್ಳಿ – ಬೆಳಗಾವಿ ಮಾರ್ಗದಲ್ಲಿ ಇಂಡಸ್ಟ್ರಿಯಲ್ ಕಾರಿಡಾರ್ ಸ್ಥಾಪನೆ, ಹುಬ್ಬಳ್ಳಿ- ಧಾರವಾಡ -ಬೆಳಗಾವಿ ತ್ರಿವಳಿ ನಗರವಾಗಿ ಅಭಿವೃದ್ಧಿ.

4. ಜಿಲ್ಲೆಯಲ್ಲಿರುವ ಕೈಗಾರಿಕೆಗಳಿಗೆ ಮಾನವ ಸಂಪನ್ಮೂಲ ಒದಗಿಸುವ ಹಿನ್ನೆಲೆಯಲ್ಲಿ ಪೂರಕವಾದ  ಕೌಶಾಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆ ಸೇರಿದಂತೆ, ಕೇಂದ್ರ ಸರಕಾರದಿಂದ ಹೆಚ್ಚಿನ ಯೋಜನೆಗಳನ್ನು ಜಿಲ್ಲೆಗೆ ತರಲು ಕ್ರಮವಹಿಸುವುದು.

5. ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ (IIM), ಆಲ್ ಇಂಡಿಯಾ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (AIIMS) ಸೇರಿದಂತೆ ಪ್ರಮುಖ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಗಳ ಸ್ಥಾಪನೆಗೆ ಯತ್ನ.

6. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ತ್ವರಿತಗತಿಯಲ್ಲಿ ಯೋಜನೆ ರೂಪಿಸಿ, ಕೇಂದ್ರ ಸರಕಾರದ ನೆರವಿನೊಂದಿಗೆ ಕಾರ್ಯರೂಪಕ್ಕೆ ತರುವುದು.

7. ಮೆಡಿಕಲ್ ಟೂರಿಸಂ ಮತ್ತು ರಕ್ಷಣಾ ಇಲಾಖೆಗೆ ಪೂರಕವಾದ ಉತ್ಪನ್ನಗಳ ಉತ್ಪಾದನೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸುವುದು.

8. ಪ್ರತಿಭಾ ಪಲಾಯನ ತಡೆದು, ಈ ಭಾಗದ ಯುವಕರು ಇಲ್ಲೇ ಉದ್ಯಮ ಸ್ಥಾಪಿಸುವಂತೆ, ಉದ್ಯೋಗ ಪಡೆಯುವಂತೆ ವ್ಯವಸ್ಥೆ ಕಲ್ಪಿಸುವುದು.

9. ಜಿಲ್ಲೆಗೆ ಜನ ಮತ್ತು ಸರಕು ಸಾಗಾಣಿಕೆ ರೈಲ್ವೆ ಸಂಪರ್ಕ ಅಭಿವೃದ್ಧಿಪಡಿಸುವುದು. ರಸ್ತೆ ಮೂಲಕ ಸಾಗಾಟವಾಗುತ್ತಿರುವ ಉತ್ಪನ್ನಗಳನ್ನು ರೈಲ್ವೆ ಮೂಲಕ ನೇರವಾಗಿ ಫೋರ್ಟ್ ಗಳಿಗೆ ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳುವುದು (ಇಂಟಿಗ್ರೇಟೆಡ್ ಲಾಜಿಸ್ಟಿಕ್ ಹಬ್ ನಿರ್ಮಾಣ).

10. ಬೆಳಗಾವಿ – ಧಾರವಾಡ ರೈಲ್ವೆ ಲೈನ್ ಕಾಮಗಾರಿಗೆ ವೇಗ ನೀಡಿ, ಆದಷ್ಟು ಶೀಘ್ರ ಕಾರ್ಯಾರಂಭಿಸುವಂತೆ ಮಾಡುವುದು.

11. ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ತುರ್ತು ನಿಗಾವಹಿಸುವುದು.

12. ರೈತರ ಉತ್ಪನ್ನಗಳನ್ನು ಸಂಗ್ರಹಿಸಲು ಕೋಲ್ಡ್ ಸ್ಟೋರೇಜ್ ನಿರ್ಮಾಣ ಮತ್ತು ನೇರವಾಗಿ ರಫ್ತು ಮಾಡಲು ಅಗತ್ಯವಿರುವ ನೆರವು ಒದಗಿಸುವುದು.

13. ರೇರಾ ಪ್ರಾದೇಶಿಕ ಕಚೇರಿ ಸ್ಥಾಪಿಸುವುದಲ್ಲದೆ, ಬ್ಯಾಂಕ್ ಗಳು ರಿಯಲ್ ಎಸ್ಟೇಟ್ ನ್ನು ಆದ್ಯತಾ ವಲಯವನ್ನಾಗಿ (Non Priority Sector to Priority Sector) ಪರಿಗಣಿಸುವಂತೆ ಮಾಡುವುದು.

14. ಪ್ರತಿ ತಾಲೂಕಿನಲ್ಲಿ ಪ್ರತಿ ವರ್ಷ ಬೃಹತ್ ಉದ್ಯೋಗ ಮೇಳ ಮತ್ತು ಕೃಷಿ ಮೇಳಗಳನ್ನು ಸಂಘಟಿಸುವುದು.

15. ಬೆಳಗಾವಿ ಮಹಾನಗರ ಪಾಲಿಕೆ ಮತ್ತು ದಂಡು ಮಂಡಳಿಯ ಮಧ್ಯೆ ಸೌಹಾರ್ದಯುತ ಸಂಬಂಧ ಏರ್ಪಡಿಸಿ, ಅಭಿವೃದ್ಧಿ ಕೆಲಸಗಳಿಗಿರುವ ಅಡ್ಡಿಯನ್ನು ನಿವಾರಿಸುವುದು.

16.  ಜಿಲ್ಲೆಯಲ್ಲಿ ಹೊಸ ಉದ್ಯಮಗಳಿಗೆ ಇರುವ ಅವಕಾಶಗಳು ಮತ್ತು ಕೇಂದ್ರ ಸರಕಾರದಿಂದ ತರಬಹುದಾದ ಯೋಜನೆಗಳ ಕುರಿತು ಬೃಹತ್ ವಿಚಾರಸಂಕಿರಣ ಆಯೋಜಿಸಿ, ಮೂಡಿಬಂದ ಅಭಿಪ್ರಾಯಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಅಗತ್ಯ ಕ್ರಮವಹಿಸುವುದು.

ಜನನಾಯಕನಾಗುವ ಬಯಕೆ ನನ್ನಲ್ಲಿಲ್ಲ, ಎಂದಿಗೂ ಜನಸೇವಕನಾಗಿಯೇ ಇರಬೇಕೆನ್ನುವ ಕನಸು ಹೊತ್ತವನು ನಾನು.  ಅಭಿವೃದ್ಧಿಯಲ್ಲಿ ರಾಜಕೀಯ ತರದೇ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವ ಭರವಸೆ ನೀಡುತ್ತೇನೆ.

ದಯವಿಟ್ಟು ಪಕ್ಷ ಭೇಧ ಮರೆತು ತಮ್ಮ ಅಮೂಲ್ಯ ಮತಗಳನ್ನು ನೀಡುವ ಮೂಲಕ ಅಭಿವೃದ್ಧಿಯ ನನ್ನ ಕನಸಿಗೆ ನೀರೆರೆಯಬೇಕೆಂದು ಅವರು ವಿನಂತಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button