Kannada NewsKarnataka News

ನಾಳೆಯಿಂದಲೇ ನಾಮಪತ್ರ ಸಲ್ಲಿಕೆ ಆರಂಭ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಜಿಲ್ಲೆಯ ಮೂರು ಮತಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದ್ದು, ಸೋಮವಾರದಿಂದ ನಾಮಪತ್ರ ಸ್ವೀಕಾರ ಆರಂಭವಾಗಲಿದೆ.
ಮಾದರಿ ನೀತಿ ಸಂಹಿತೆ ಜಿಲ್ಲಾ ವ್ಯಾಪ್ತಿಯಲ್ಲಿ  ಜಾರಿಯಲ್ಲಿರುವುದರಿಂದ ಯಾವುದೇ ಸಭೆ, ಸಮಾರಂಭ ಅಥವಾ ಮೆರವಣಿಗೆಗೆ ಸಂಬಂಧಿಸಿದ ಅಧಿಕಾರಿಗಳಿಂದ ಅನುಮತಿ ಕಡ್ಡಾಯವಾಗಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಸೂಚನೆ ನೀಡಿದರು.
ಉಪ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಭಾನುವಾರ (ಸೆ.22) ನಡೆದ ನೋಂದಾಯಿತ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಚುನಾವಣಾ ಪ್ರಚಾರ ಸಾಮಗ್ರಿಗಳನ್ನು ಅಳವಡಿಸುವಂತಿಲ್ಲ. ಖಾಸಗಿ ಜಾಗೆಯಲ್ಲಿ ಪ್ರಚಾರ ಸಾಮಗ್ರಿ ಅಳವಡಿಸಲು ಮಾಲೀಕರು ಹಾಗೂ ಸ್ಥಳೀಯ ಸಂಸ್ಥೆಯ ಅನುಮತಿ ಪಡೆದಿರಬೇಕು.
ಚುನಾವಣಾ ಪ್ರಚಾರವನ್ನು ನಡೆಸಬೇಕಾದರೆ ನಿಯಮಾವಳಿ ಪ್ರಕಾರ ಪೂರ್ವಾನುಮತಿ ಪಡೆದುಕೊಳ್ಳಬೇಕು.
ಪಕ್ಷದ ಪದಾಧಿಕಾರಿಗಳಿಗೆ ವಾಹನ ಬಳಕೆ, ಧ್ವನಿವರ್ಧಕಗಳ ಬಳಕೆಗೆ ಅನುಮತಿ ಪಡೆಯಬೇಕು. ಅದೇ ರೀತಿ ಖಾಸಗಿ ಸ್ಥಳದ ಬಳಕೆಗೆ ಅವುಗಳ ಮಾಲೀಕರ ಮತ್ತು ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳ ಅನುಮತಿ ಅಗತ್ಯ ಎಂದರು.

ಚುನಾವಣಾ ವೆಚ್ವ ವೀಕ್ಷಕರು:

ಜಿಲ್ಲೆಯಲ್ಲಿ ನಡೆಯಲಿರುವ ಮೂರು ಮತಕ್ಷೇತ್ರಗಳ ಉಪ ಚುನಾವಣೆಯ ಖರ್ಚು-ವೆಚ್ಚದ ಮೇಲೆ ನಿಗಾ ವಹಿಸಲು ಚುನಾವಣಾ ವೀಕ್ಷಕರು ಶೀಘ್ರ ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು.
ಚುನಾವಣಾ ಸಂದರ್ಭಗಳಲ್ಲಿ ದುರ್ಬಳಕೆ ತಡೆಗೆ ನಿಯಮಾನುಸಾರ ನಿಗಮ-ಮಂಡಳಿಗಳ ವಾಹನಗಳನ್ನು ಹಿಂದಕ್ಕೆ ಪಡೆಯಲಾಗುವುದು.
ಮತದಾರರ ಪಟ್ಟಿ ಈಗಾಗಲೇ ಸಿದ್ಧಪಡಿಸಲಾಗಿರುತ್ತದೆ. ಹೊಸದಾಗಿ ಅರ್ಜಿ ಪರಿಶೀಲಿಸಿ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತಿದ್ದು, ಹೆಸರು ಸೇರ್ಪಡೆಗೆ ಸೆ.30 ರವರೆಗೆ ಅವಕಾಶವಿದೆ.
ತಿದ್ದುಪಡಿ ಅಥವಾ ಹೆಸರು ತೆಗೆದು ಹಾಕಲು ಅವಕಾಶವಿರುವುದಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಸ್ಪಷ್ಟಪಡಿಸಿದರು.
ಪಟ್ಟಿಯಲ್ಲಿ ಸಂಶಯಾಸ್ಪದ ಹೆಸರುಗಳು ಕಂಡುಬಂದರೆ ಪಕ್ಷಗಳು ಅಥವಾ ಯಾರಾದರೂ ತಮ್ಮ ಗಮನಕ್ಕೆ ತಂದರೆ ಅಂತಹ ವ್ಯಕ್ತಿಗಳು ಮತದಾನಕ್ಕೆ ಬಂದಾಗ ಎಲ್ಲ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುವುದು.
ಇವಿಎಂ/ವಿವಿಪ್ಯಾಟ್ ಗಳಲ್ಲಿ ಹೊಸದಾಗಿ ಎಂ3 ಇವಿಎಂ ಗಳನ್ನು ಈ ಬಾರಿ ಬಳಕೆ ಮಾಡಲಾಗುತ್ತದೆ. ಮತಯಂತ್ರಗಳ ಬಳಕೆಗೆ ಸಂಬಂಧಿಸಿದಂತೆ ಪ್ರಾತ್ಯಕ್ಷಿಕೆ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು.

ಹೆಸರು ಖಚಿತಪಡಿಸಿಕೊಳ್ಳಲು ಸಲಹೆ:

ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಬಗ್ಗೆ ಮುಂಚಿತವಾಗಿಯೇ ಪರಿಶೀಲಿಸಿ, ಖಚಿತಪಡಿಸಿಕೊಂಡರೆ ಮತದಾನದ ದಿನದಂದು ಉಂಟಾಗುವ ಗೊಂದಲ ಅಥವಾ ಮುಜುಗರದ ಸನ್ನಿವೇಶ ಉದ್ಘವಿಸುವುದಿಲ್ಲ ಎಂದು ಡಾ.ಬೊಮ್ಮನಹಳ್ಳಿ ತಿಳಿಸಿದರು.
ಮತದಾರರ ಪಟ್ಟಿಯನ್ನು ಮುದ್ರಿಸಿದ ತಕ್ಷಣ ರಾಜಕೀಯ ಪಕ್ಷಗಳಿಗೆ ನೀಡಲಾಗುವುದು. ಪ್ರಚಾರ ಸಾಮಗ್ರಿಗಳನ್ನು ಮುದ್ರಣ ಮಾಡಿದಾಗ ನಿಯಮಾವಳಿ ಪ್ರಕಾರ ಚುನಾವಣಾಧಿಕಾರಿಗಳಿಗೆ ನಿಗದಿತ ನಮೂನೆಯಲ್ಲಿ ಮಾಹಿತಿಯನ್ನು ಒದಗಿಸಬೇಕು ಎಂದು ತಿಳಿಸಿದರು.
ಮತದಾರರ ಪಟ್ಟಿ ಪರಿಶೀಲನಾ ಕಾರ್ಯಕ್ರಮ ಈಗಾಗಲೇ ಚಾಲ್ತಿಯಲ್ಲಿದೆ. ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದರು.

ಪರ್ಯಾಯ ಮತಗಟ್ಟೆ ಸ್ಥಾಪನೆ-ಪರಿಶೀಲನೆ:

ಕಳೆದ ಚುನಾವಣೆಯಲ್ಲಿದ್ದ ಬಹುತೇಕ ಮತಕೇಂದ್ರಗಳು ಈ ಬಾರಿಯೂ ಇರಲಿವೆ. ಆದರೆ ಪ್ರವಾಹದಿಂದ ಕೆಲವು ಶಾಲಾ ಕಟ್ಟಡಗಳು ಕುಸಿದಿದ್ದರೆ ಅಥವಾ ಶಿಥಿಲಗೊಂಡಿದ್ದರೆ ಸೂಕ್ತ ಪರಿಶೀಲನೆ ಬಳಿಕ ಪರ್ಯಾಯ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಮತದಾನ ಸಂದರ್ಭದಲ್ಲಿ ಆಧಾರ, ವಾಹನ ಚಾಲನಾಪತ್ರ ಸೇರಿದಂತೆ 22 ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆ ಪ್ರದರ್ಶಿಸಿ ಮತದಾನ ಮಾಡಬಹುದು. ಒಂದು ವೇಳೆ ದಾಖಲೆಗಳನ್ನು ಕಳೆದುಕೊಂಡಿದ್ದರೆ ಸಾಕಷ್ಟು ಸಮಯಾವಕಾಶ ಇರುವುದರಿಂದ ನಕಲು ಪ್ರತಿಯನ್ನು ಪಡೆದುಕೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಶಾಂತಿಯುತ ಹಾಗೂ ನಿಷ್ಪಕ್ಷಪಾತ ಚುನಾವಣೆ ನಡೆಸಲು ಎಲ್ಲ ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಬೊಮ್ಮನಹಳ್ಳಿ ಮನವಿ ಮಾಡಿಕೊಂಡರು.
ಭಾರತೀಯ ಜನತಾ ಪಕ್ಷದ ರಾಜೇಂದ್ರ ಹರಕುಣಿ, ಬಹುಜನ ಸಮಾಜ ಪಾರ್ಟಿಯ ರಮೇಶ್ ಕಡ್ಲಾಸ್ಕರ್, ಕೆ.ಜಿ.ಪಾಟೀಲ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಅಪರ ಜಿಲ್ಲಾಧಿಕಾರಿ ಅಶೊಕ ದುಡಗುಂಟಿ, ಮಹಾನಗರ ಪಾಲಿಕೆ ಆಯುಕ್ತರಾದ ಜಗದೀಶ್ ಕೆ.ಎಚ್. ಮತ್ತಿತರರು ಹಾಜರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button