*ಲೇಡಿಸ್ ಪಿಜಿಗೆ ನುಗ್ಗಿ ಚಾಕು ತೋರಿಸಿ ಮಹಿಳಾ ಅಧಿಕಾರಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಖದೀಮ*

ಪ್ರಗತಿವಾಹಿನಿ ಸುದ್ದಿ: ಲೇಡಿಸ್ ಪಿಜಿಗೆ ನುಗ್ಗಿದ ದರೋಡೆಕೋರನೊಬ್ಬ, ಮಹಿಳಾ ಅಧಿಕಾರಿಗೆ ಚಾಕು ತೋರಿಸಿ ಲೈಂಗಿಕ ದೌರ್ಜನ್ಯವೆಸಗಿ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಜುಡಿಷಿಯಲ್ ಲೇಔಟ್ ನಲ್ಲಿ ಲೇಡಿಸ್ ಪಿಜಿಯೊಂದರಲ್ಲಿ ಈ ಘಟನೆ ನಡೆದಿದೆ. ಸದ್ಯ ಘಟನೆ ಸಂಬಂಧ ಯಲಹಂಕ ಠಾಣೆಗೆ ಮಹಿಳೆ ದೂರು ನೀಡಿದ್ದು, ಪ್ರಕರಣ ಸಂಬಂಧ ಪೊಲೀಸರು ಆರೋಪಿ ಪತ್ತೆಗೆ ಶೋಧ ನಡೆಸಿದ್ದಾರೆ.
ಬೆಸ್ಕಾಂ ನಲ್ಲಿ ಅಸಿಸ್ಟೆಂಟ್ ಇಂಜಿನಿಯರ್ ಆಗಿರುವ ಮಹಿಳೆ ಜುಡಿಷಿಯಲ್ ಲೇಔಟ್ ನ ಲೇಡಿಸ್ ಪಿಜಿಯೊಂದರಲ್ಲಿ 15 ದಿನಗಳ ಹಿಂದಷ್ಟೇ ವಾಸವಾಗಿದ್ದರು. ಆಗಸ್ಟ್ 11ರಂದು ಕೆಲಸ ಮುಗಿಸಿ ಪಿಜಿಯಲ್ಲಿರುವ ಮೂರನೇ ಮಹಡಿಯ ತನ್ನ ರೂಮಿಗೆ ಬಂದಿದ್ದರು. ಈ ವೇಳೆ ಏಕಾಏಕಿ ನುಗ್ಗಿದ ಖದೀಮ ಚಾಕು ಕೈಯಲ್ಲಿ ಹಿಡಿದು ಮಹಿಳೆ ರೂಮ್ ಬಡಿದಿದ್ದಾನೆ. ಪಿಜಿಯವರೆ ಯಾರೋ ಇರಬೇಕೆಂದು ಮಹಿಳೆ ಬಾಗಿಲು ತೆರೆಯುತ್ತಿದ್ದಂತೆ ಒಳ ನುಗ್ಗಿ ಮಹಿಳೆ ಕತ್ತಿಗೆ ಚಾಕು ಇಟ್ತು ಬೆದರಿಸಿದ್ದಾನೆ. ಖಾಸಗಿ ಅಂಗಾಂಗಗಳನ್ನು ಮುಟ್ಟಿ ದೌರ್ಜನ್ಯವೆಸಗಿದ್ದಾನೆ. ಚಿನ್ನಾಭರಣಗಳನ್ನು ದೋಚಲು ಯತ್ನಿಸಿದ್ದಾನೆ. ಇದೇ ವೇಳೆ ಬೆಡ್ ಮೇಲೆ ಇದ್ದ ಎರಡು ಮೊಬೈಲ್ ಗಳನ್ನು ನೋಡಿ ಅವುಗಳನ್ನು ಕಿತ್ತುಕೊಂಡು ಎಸ್ಕೇಪ್ ಆಗಿದ್ದಾನೆ.