ಪ್ರಗತಿವಾಹಿನಿ ಸುದ್ದಿ: ಲೇಡಿಸ್ ಪಿಜಿಗೆ ನುಗ್ಗಿ ಯುವತಿಯನ್ನು ಬರ್ಬರವಾಗಿ ಹತ್ಯೆಗೈದಿದ್ದ ಆರೋಪಿಯನ್ನು ಬೆಂಗಳೂರಿನ ಕೋರಮಂಗಲ ಠಾಣೆ ಪೊಲೀಸರು ಮಧ್ಯ ಪ್ರದೇಶದಲ್ಲಿ ಬಂಧಿಸಿದ್ದಾರೆ.
ಜುಲೈ 23ರಂದು ತಡರಾತ್ರಿ ಕೋರಮಂಗಲದಲ್ಲಿರುವ ಲೇಡಿಸ್ ಪಿಜಿಗೆ ನುಗ್ಗಿದ್ದ ಆರೋಪಿ ಯುವಕ, ತನ್ನ ಪ್ರೇಯಸಿಯ ಸ್ನೇಹಿತೆಯನ್ನು ಚಾಕುವಿನಿಂದ ಇರಿದು ಕೊಲೆಗೈದು ಪರಾರಿಯಾಗಿದ್ದ. ಈ ಭೀಕರ ದೃಶ್ಯ ಪಿಜಿಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಆರೋಪಿ ಭೋಪಾಲ್ ಮೂಲದ ಅಭಿಷೇಕ್ ನನ್ನು ಪೊಲೀಸರು ಬಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಬಿಹಾರ ಮೂಲದ ಕೃತಿ ಕುಮಾರಿ ಕೊಲೆಯಾದ ಯುವತಿ. ಕೃತಿ ಕುಮಾರಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಕೃತಿ ಕುಮಾರಿಯ ಸ್ನೇಹಿತೆಯನ್ನು ಅಭಿಷೇಕ್ ಪ್ರೀತಿಸಿದ್ದ. ಅಲ್ಲದೇ ಆಕೆಯನ್ನು ಬಾಡಿಗೆ ಮನೆಯೊಂದರಲ್ಲಿ ಕೂಡಿಹಾಕಿದ್ದ ಎಂಬ ಆರೋಪ ಕೇಲಿಬಂದಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ ಕೃತಿ ಕುಮಾರಿ ತನ್ನ ಸ್ನೇಹಿತೆಯನ್ನು ಕರೆದುಕೊಂಡು ಬಂದು ತನ್ನ ಪಿಜಿಯಲ್ಲಿಯೇ ಇರಲು ಹೇಳಿದ್ದಳು. ಅಲ್ಲದೆ ಅಭಿಷೇಕ್ ಕರೆ ಮಾಡಿದರೂ ಆಕೆ ಫೋನ್ ರಿಸೀವ್ ಮಾಡದೇ ಅವಾಯ್ಡ್ ಮಾಡಿದ್ದಳಂತೆ.
ಇದರಿಂದ ಕೋಪಗೊಂಡ ಅಭಿಷೇಕ್ ಜುಲೈ 23ರಂದು ರಾತ್ರಿ 11 ಗಂಟೆ ಸುಮಾರಿಗೆ ಪಿಜಿಗೆ ನುಗ್ಗಿ ರೂಮಿನ ಬಾಗಿಲು ಬಡಿದಿದ್ದಾನೆ. ಕೃತಿ ಬಾಗಿಲು ತೆಗೆಯುತ್ತಿದ್ದಂತೆ ಆಕೆಯನ್ನು ಎಳೆದು ಚಾಕುವಿನಿಂದ ಮನಬಂದಂತೆ ಇರಿದು, ಕತ್ತು ಕುಯ್ದು ಪರಾರಿಯಾಗಿದ್ದಾನೆ. ಮಧ್ಯಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಈಗ ಪೊಲೀಸರು ಬಂಧಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ