Latest

*ಸೈಕಲ್, ಜಟಕಾ ಗಾಡಿಯಲ್ಲಿ ಹೋಗಿ ಪೋಟೋ ತೆಗೆದಿದ್ದೆ…*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: 5 ದಶಕಗಳ ಕಾಲ ಪೋಟೋ ಜರ್ನಲಿಸ್ಟ್ ಆಗಿ ಕೆಲಸ ಮಾಡಿದ ಅಬ್ದುಲ್ ಹಫೀಜ್ ಅವರಿಗೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ವೃತ್ತಿ ಗೌರವ ಸಮರ್ಪಣೆ ಮಾಡಿತು.

ಅರವತ್ತರ ದಶಕದಲ್ಲಿ ತಾಯ್ನಾಡು ಪತ್ರಿಕೆಯ ಮೂಲಕ ವೃತ್ತಿ ಪ್ರವೇಶಿಸಿದ ಅವರು ಸಂಯುಕ್ತ ಕರ್ನಾಟಕ, ಕರ್ಮವೀರ ದಿಂದ ಹಿಡಿದು ಇಂಡಿಯನ್ ಎಕ್ಸ್‌ಪ್ರೆಸ್‌ ತನಕ ಹಾಗೂ ಹಲವಾರು ಸುದ್ದಿ ಸಂಸ್ಥೆಗಳಲ್ಲಿ ಕೆಲಸ ಮಾಡಿರುವ ಅಬ್ದುಲ್ ಹಫೀಜ್ ಅವರ ಕೆಯುಡಬ್ಲ್ಯೂಜೆ ಸ್ಮರಿಸಿತು.

ಕೆಯುಡಬ್ಲ್ಯೂಜೆ ಗೌರವ ಸ್ವಿಕರಿಸಿ ಮಾತನಾಡಿದ 84 ವಸಂತಗಳನ್ನು ಕಂಡಿರುವ ಹಫೀಜ್, ಪತ್ರಿಕೋದ್ಯಮ ವೃತ್ತಿ ಇಂದು ಎಷ್ಟೇ ಬದಲಾವಣೆಯನ್ನು ಕಂಡಿದ್ದರೂ ಸಹ, ಹಿಂದೆ ಮತ್ತು ಇಂದು ಕೂಡಾ ಪತ್ರಿಕಾ ಛಾಯಾಗ್ರಾಹಕರು ತಮ್ಮ ಕ್ಷೇತ್ರದಲ್ಲಿ ಸವಾಲುಗಳನ್ನು ಎದುರಿಸಬೇಕಾದ ಪರಿಸ್ಥಿತಿ ಮುಂದುವರಿದಿದೆ. ಹಾಗಾಗಿ ಪತ್ರಿಕಾ ಛಾಯಾಗ್ರಾಹಕರು ವೃತ್ತಿ ಬದ್ಧತೆ ಮೆರೆದು ತಮ್ಮನ್ನು ಗುರುತಿಸಿಕೊಳ್ಳಲು ಸಾಧ್ಯವಾಗಿದೆ ಎಂದರು.

ಪ್ರೆಸ್‌ಕ್ಲಬ್‌ನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ‘ಮನೆಯಂಗಳದಲ್ಲಿ ಮನದುಂಬಿ’ ಕಾರ್ಯಕ್ರಮ ಏರ್ಪಡಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.

Home add -Advt

ತಾನು ಪತ್ರಿಕಾ ಛಾಯಾಗ್ರಾಹಣ ವೃತ್ತಿ ಆರಂಭಿಸಿದ ಸಮಯದಲ್ಲಿ, ಸೈಕಲ್ ತುಳಿದು ಬಹಳ ಕಷ್ಟಪಟ್ಟು ದೂರದ ಕಾರ್ಯಕ್ರಮದ ಚಿತ್ರಗಳನ್ನು ತೆಗೆಯಲು ಹೋಗುತ್ತಿದ್ದೆ. ಛಾಯಾಗ್ರಾಹಕ ವೃತ್ತಿಗೆ ಸಂಬಂಧಪಟ್ಟ ಪರಿಕರಗಳನ್ನು ಕಚೇರಿಯಲ್ಲಿಯೇ ತಯಾರಿಸಬೇಕಾದ ಪರಿಸ್ಥಿತಿ ಆಗಿನ ದಿನಗಳಲ್ಲಿತ್ತು. ವೃತ್ತಿ ಬದ್ಧತೆ ಮೈಗೂಡಿಸಿಕೊಂಡಿರುವುದರಿಂದ ಎಲ್ಲೇ ಇದ್ದರೂ ಸಕಾಲದಲ್ಲಿ ಛಾಯಾಚಿತ್ರಗಳನ್ನು ಪತ್ರಿಕಾ ಕಚೇರಿಗಳಿಗೆ ತಲುಪಿಸಲು ಸಾಧ್ಯವಾಗಿತ್ತು ಎಂದರು.
ದೂರದರ್ಶನದ ಉರ್ದು ಸುದ್ದಿ ಪ್ರಸಾರದ ವಿರುದ್ಧದ ನಡೆದ ಪತ್ರಿಭಟನೆ, ಬೆಳಗಾವಿ ಗಡಿ ವಿವಾದ, ಹಿಂದಿ ಹೇರಿಕೆ ವಿರುದ್ಧ ಪ್ರತಿಭಟನೆ, ಬೆಂಗಳೂರಿನಲ್ಲಿ ನಡೆದ ವಿಮಾನ ದುರಂತ ಸೇರಿದಂತೆ ರಾಜ್ಯದಲ್ಲಿ ನಡೆದಿದ್ದ ಹಲವಾರು ನಿರ್ಣಾಯಕ ಸಂದರ್ಭದಲ್ಲಿ ಜೀವದ ಹಂಗು ತೊರೆದು ತೆಗೆದ ಪೋಟೋಗಳು ಈಗಲೂ ಎದೆ ಝಲ್ಲೆನಿಸುತ್ತದೆ ಎಂದು ಹಳೆಯ ವೃತ್ತಿ ಜೀವನ ಮೆಲುಕು ಹಾಕಿದರು.

ಹೋರಾಟದ ದಿನಗಳಲ್ಲಿ ತಾನೂ ಸೇರಿದಂತೆ ಹಲವಾರು ಪತ್ರಿಕಾ ಛಾಯಾಗ್ರಾಹಕರು ಕಠಿಣ ಸವಾಲುಗಳನ್ನು ಎದುರಿಸಿದ್ದಿದೆ. ಇಚ್ಛಾಶಕ್ತಿಯೊಂದಿದ್ದರೆ ಪತ್ರಿಕಾ ವೃತ್ತಿಯಲ್ಲೂ ಛಾಯಾಗ್ರಾಹಕರೂ ಗುರುತಿಸಲು ಸಾಧ್ಯ ಎಂದೂ ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಸುಮಾರು ಐದು ದಶಕಗಳ ಕಾಲ ಪೋಟೋ ಜರ್ನಲಿಸ್ಟ್ ಆಗಿದ್ದ ಹಫೀಜ್ ಅವರ ಕ್ರಿಯಾಶೀಲತೆ ಯುವ ವೃತ್ತಿ ಬಾಂಧವರಿಗೆ ಮಾದರಿ ಎಂದರು. ತಾಯಿನಾಡು ಸೇರಿದಂತೆ ಹಲವಾರು ಪತ್ರಿಕೆಗಳಿಗೆ ಮತ್ತು ಸುದ್ದಿ ಸಂಸ್ಥೆಗಳಿಗೆ ಹಿರಿಯ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿದ ಅಫೀಜ್ ಅವರು ನಿಜಕ್ಕೂ ಅಭಿನಂದನಾರ್ಹರು, ಆ ಕಾಲಘಟ್ಟದಲ್ಲಿ ಕೆಯುಡಬ್ಲ್ಯೂಜೆ ಸಂಘದ ಸದಸ್ಯರಾಗಿದ್ದರು ಎಂಬುದು ಹೆಮ್ಮೆಪಡುವ ವಿಷಯ ಎಂದರು.

ಪ್ರೆಸ್‌ಕ್ಲಬ್ ಪ್ರಧಾನ ಕಾರ್ಯದರ್ಶಿ ಬಿ.ಪಿ ಮಲ್ಲಪ್ಪ ಮಾತನಾಡಿ, ಅಫೀಜ್‌ರವರ ಪರಿಶ್ರಮದ ಗುಣ ಇಂದು ಅವರನ್ನು ಪತ್ರಿಕೋದ್ಯಮ ಗುರುತಿಸುವಂತೆ ಮಾಡಿದೆ. ಹಿರಿಯರಾಗಿ ಎಲ್ಲಾ ಕಿರಿಯರಿಗೂ ವೃತ್ತಿ ಕ್ಷೇತ್ರದಲ್ಲಿ ಅವರು ಮಾರ್ಗದರ್ಶಕರಾಗಿದ್ದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಕೆ. ಸತ್ಯನಾರಾಯಣ, ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೆಕಟ್, ಉಪಾಧ್ಯಕ್ಷ ಜಿಕ್ರಿಯಾ, ಸಮಿತಿ ಸದಸ್ಯ ಸ್ವಾಮಿ, ಪ್ರೆಸ್‌ಕ್ಲಬ್ ಕಾರ್ಯಕಾರಿ ಸಮಿತಿ ಸದಸ್ಯ ಸೋಮಣ್ಣ ಸೇರಿದಂತೆ ಸಂಘದ ಹಲವಾರು ಸದಸ್ಯರು ಮತ್ತು ಪ್ರೆಸ್‌ಕ್ಲಬ್ ಸದಸ್ಯರೂ ಉಪಸ್ಥಿತರಿದ್ದರು. ಸಂಘದ ರಾಜ್ಯ ಕಾರ್ಯಕಾರಿ ಸದಸ್ಯ ಸೋಮಶೇಖರ ಗಾಂಧಿ ಕೊನೆಯಲ್ಲಿ ವಂದಿಸಿದರು.

*ಲವ್ ಜಿಹಾದ್ ವಿರೋಧಿ ಪೊಲೀಸ್ ದಳ ಸ್ಥಾಪನೆಗೆ ಹಿಂದೂ ಜನ ಜಾಗೃತಿ ಸಮಿತಿ ಒತ್ತಾಯ*

https://pragati.taskdun.com/hindu-jana-jagruti-samitibelagaviabhay-patillave-jihad-virodhi-police-dala/

Related Articles

Back to top button