ಹಸಿದ ಹೊಟ್ಟೆಗೆ ಅನ್ನ ಕೊಡುವ ಪುಣ್ಯದ ಕೆಲಸ ಕಾಂಗ್ರೆಸ್ ನಿಂದ – ಲಕ್ಷ್ಮೀ ಹೆಬ್ಬಾಳಕರ್


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಿಜೆಪಿಯವರು ಕೊಳ್ಳೆ ಹೊಡೆದು ಬಿಟ್ಟು ಹೋಗಿದ್ದ ರಾಜ್ಯದಲ್ಲಿ ಎಲ್ಲವನ್ನೂ ಸರಿಪಡಿಸಿ, ಹಸಿದ ಹೊಟ್ಟೆಗಳಿಗೆ ಅನ್ನ ನೀಡುವ ಪುಣ್ಯದ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿರೇಬಾಗೇವಾಡಿ ಗ್ರಾಮದಲ್ಲಿ ಮಂಗಳವಾರ, ತಾಲೂಕು ಆಡಳಿತ, ತಾಲೂಕು ಪಂಚಾಯತ ಬೆಳಗಾವಿ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಹಮ್ಮಿಕೊಂಡಿರುವ ಹೋಬಳಿ ಮಟ್ಟದ ಗ್ಯಾರಂಟಿ ಯೋಜನೆಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಬಿಜೆಪಿಯವರು ಸಾಕಷ್ಟು ಭ್ರಷ್ಟಾಚಾರ ಮಾಡಿ, ಬಜೆಟ್ ಇಲ್ಲದಿದ್ದರೂ ಮನಬಂದಂತೆ ಕೆಲಸದ ಆದೇಶ ನೀಡಿ ಎಲ್ಲವನ್ನೂ ಕೊಳ್ಳೆ ಹೊಡೆದು ಹೋಗಿದ್ದರು. ನಾವು ಎಲ್ಲವನ್ನೂ ಸರಿಪಡಿಸುವ ಜೊತೆಗೆ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಿದೆವು. ಈಗ ಅವರು ಗ್ಯಾರಂಟಿಯಿಂದ ರಾಜ್ಯ ದಿವಾಳಿಯಾಗಿದೆ ಎನ್ನುತ್ತಾರೆ. ಜನರಿಗೆ ಕೊಡುವುದು ಅವರಿಗೆ ಬೇಕಾಗಿಲ್ಲ. ಒಂದು ಲೋಟ ನೀರು ಕೊಡಲು ಹಿಂದೆ ಮುಂದೆ ನೋಡುವಂತಹ ಇಂತಿನ ಪರಿಸ್ಥಿತಿಯಲ್ಲಿ ಇಂತಹ ಗ್ಯಾರಂಟಿ ಯೋಜನೆಗಳನ್ನು ನೀಡುವ ಪುಣ್ಯದ ಕೆಲಸವನ್ನು ಸರಕಾರ ಮಾಡುತ್ತಿದೆ ಎಂದು ಹೆಬ್ಬಾಳಕರ್ ಹೇಳಿದರು.

ಗ್ಯಾರಂಟಿ ಯೋಜನೆಗಳು ಎಷ್ಟು ಜನರಿಗೆ ತಲುಪಿಲ್ಲ, ಅದಕ್ಕೆ ಕಾರಣವೇನು ಎನ್ನುವ ಕುರಿತು ಪರಾಮರ್ಶೆ ನಡೆಸಲು ಈ ಸಮಾವೇಶ ಆಯೋಜಿಸಲಾಗಿದೆ. ಅಂಗನವಾಡಿ, ಆಸಾ ಕಾರ್ಯಕರ್ತರನ್ನು ಮನೆ ಮನೆಗೆ ಕಳಿಸಿ ಯಾರಿಗೆ ಯೋಜನೆ ತಲುಪಿಲ್ಲ ಎನ್ನುವ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆದಷ್ಟು ಬೇಗ ಎಲ್ಲ ನೂನ್ಯತೆಗಳನ್ನು ಸರಿಪಡಿಸಲಾಗುವುದು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ಮಹಿಳಾ ಸಬಲೀಕರಣ, ರೈತರು, ಯುವಜನರಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿದೆ. ಯಾವುದೇ ಕಾರಣದಿಂದಲೂ ಗ್ಯಾರಂಟಿ ಯೋಜನೆಗಳನ್ನು ಬಂದ್ ಮಾಡುವುದಿಲ್ಲ ಎಂದು ಲಕ್ಷ್ಮೀ ಹೆಬ್ಬಾಳಕರ್ ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಬರಗಾಲ ಬಂದರೂ ಕೇಂದ್ರದಿಂದ ಒಂದು ಪೈಸೆಯನ್ನೂ ನೀಡಿಲ್ಲ. ರಾಜ್ಯದಲ್ಲಿ 25 ಬಿಜೆಪಿ ಸಂಸದರಿದ್ದಾರೆ. ಆದರೆ ಒಬ್ಬರೂ ಚಕಾರ ಎತ್ತಿಲ್ಲ. ನಮ್ಮ ಗ್ಯಾರಂಟಿಯನ್ನು ಕಾಪಿ ಮಾಡಿ ಮೋದಿ ಗ್ಯಾರಂಟಿ ಎಂದು ಪ್ರಚಾರ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಈ ವೇಳೆ ಆಯೋಜಕರು ಸಚಿವರನ್ನು ಸನ್ಮಾನಿಸಲು ಮುಂದಾದಾಗ, ನನಗೆ ಸನ್ಮಾನ ಬೇಡ. ಜನರಿಂದಾಗಿ ನನಗೆ ಅಧಿಕಾರ ಬಂದಿದೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಜನರ ಖುಷಿಯೇ ನನ್ನ ಖುಷಿ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಕಾಡಾ ಮಾಜಿ ಅಧ್ಯಕ್ಷ ಅಡಿವೇಶ ಇಟಗಿ ಮಾತನಾಡಿ, ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ದಿ ಎಂದರೆ ಏನೆಂದು ಗೊತ್ತಾಗಿದ್ದೇ ಲಕ್ಷ್ಮೀ ಹೆಬ್ಬಾಳಕರ್ ಶಾಸಕರಾದ ನಂತರ. ಕ್ಷೇತ್ರದ ಪಶ್ಚಿಮ ಭಾಗದಲ್ಲಂತೂ ಮಹಾರಾಷ್ಟ್ರ ಏಕೀಕರಣ ಸಮಿತಿಯ ಶಾಸಕರು ಯಾವುದೇ ಅಭಿವೃದ್ದಿ ಕೆಲಸ ಮಾಡಿರಲಿಲ್ಲ ಎಂದು ಹೇಳಿದರು.
ಕೆಪಿಸಿಸಿ ಸದಸ್ಯ ಸುರೇಶ ಇಟಗಿ ಮಾತನಾಡಿ, ಲಕ್ಷ್ಮೀ ಹೆಬ್ಬಾಳಕರ್ ಶಾಸಕರಾಗುವ ಮೊದಲು ಅಭಿವೃದ್ದಿ ಕೇವಲ ಪತ್ರಿಕೆಗಳಲ್ಲಿ ಮಾತ್ರ ಆಗುತ್ತಿತ್ತು, ಲಕ್ಷ್ಮೀ ಹೆಬ್ಬಾಳಕರ್ ಶಾಸಕರಾಗುವ ಮೊದಲೇ ಕ್ಷೇತ್ರದಲ್ಲಿ ಅಭಿವೃದ್ಧಿ ಆರಂಭಿಸಿದ್ದರು. ಅವರು ಅಧಿಕಾರ ಇಲ್ಲದಿದ್ದಾಗ ಹೇಗಿದ್ದರೋ ಮಂತ್ರಿಯಾದ ಮೇಲೂ ಅದೇ ಸರಳತೆ ಉಳಿಸಿಕೊಂಡಿದ್ದಾರೆ ಎಂದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶಂಕರಗೌಡ ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪಾಟೀಲ, ಸಿಡಿಪಿಓ ಸುಮಿತ್ರಾ ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಸಿ ಸಿ ಪಾಟೀಲ, ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್, ತಹಶಿಲ್ದಾರ ಸಿದ್ದರಾಯಿ ಬೋಸಗಿ, ತಾಲೂಕ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ರಾಮರೆಡ್ಡಿ ಪಾಟೀಲ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ನಾಗರಾಜ, ಆಹಾರ ಇಲಾಖೆ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಹೆಸ್ಕಾಂ ಸಹಾಯಕ ಕಾರ್ಯನಿರ್ವಹಣಾಧಿಕಾರಿ ವಿನೋದ್ ಕೆರೂರ್, ಸುರೇಶ ಕಂಬಿ, ಅಪ್ಸರ್ ಜಮಾದಾರ, ಬಸವರಾಜ ಮ್ಯಾಗೋಟಿ, ಚಾರುಕೀರ್ತಿ ಸೈಬಣ್ಣವರ ಮೊದಲಾದವರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ