ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿಗೆ ಹೊಸ ಶಕ್ತಿ ನೀಡುವ ಯೋಜನೆಗಳನ್ನು ಜಾರಿಗೊಳಿಸಲಾಗಿದ್ದು,. ಇದು ಈ ಭಾಗದ ಕ್ಷಿಪ್ರಗತಿಯ ಬೆಳವಣಿಗೆಗೆ ಕಾರಣವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅವರು ಬೆಳಗಾವಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ, ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದರು. ಬಸವೇಶ್ವರರನ್ನು ಸ್ಮರಿಸಿ ಮಾತನ್ನು ಆರಂಭಿಸಿದ ಪ್ರಧಾನಿ, ಬೆಳಗಾವಿಯ ಕುಂದಾ ಮತ್ತು ಬೆಳಗಾವಿಯ ಜನರ ಪ್ರೀತಿ ಮರೆಯಲಾಗದ್ದು. ಬೆಳಗಾವಿಯ ಬಂಧುಗಳಿಗೆ ನಮಸ್ಕಾರಗಳು ಎಂದು ಕನ್ನಡದಲ್ಲಿ ಹೇಳಿದರು.
ಬೆಳಗಾವಿಯ ಜನರ ಪ್ರೀತಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದೂ ಅವರು ತಿಳಿಸಿದರು.
ಕಿತ್ತೂರು ರಾಣಿ ಚನ್ನಮ್ಮ, ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಭೂಮಿ ಇದು. ದೇಶದಲ್ಲಿ ಈಗ ಸ್ಟಾರ್ಟ್ ಪ್ ಮಾತಿ ಕೇಳಿತ್ತಿದ್ದರೆ. ಬೆಳಗಾವಿಯಲ್ಲಿ ಬಾಬು ರಾವ್ ಕುಸಾಲ್ಕರ್ 100 ವರ್ಷದ ಹಿಂದೆಯೇ ಸಣ್ಣ ಉದ್ಯಮದ ಯುನಿಟ್ ಆರಂಭಿಸಿದ್ದಾರೆ. ಬೆಳಗಾವಿಯ ಉದ್ಯಮಗಳನ್ನು ಸಶಕ್ತಗೊಳಿಸಬೇಕಾಗಿದೆ. ಈಗ ಉದ್ಘಾಟಿಸಿರುವ ಯೋಜನೆಗಳು ಬೆಳಗಾವಿಗೆ ಹೊಸ ಶಕ್ತಿ ನೀಡಿದೆ. ಈ ಕ್ಷೇತ್ರದ ಪ್ರಗತಿಗೆ ಕಾರಣವಾಗಿದೆ ಎಂದರು.
ಪಿಎಂ ಕಿಸಾನ್ ಸಮ್ಮಾನ ನಿಧಿಯನ್ನು ಒಂದು ಕ್ಲಿಕ್ ಮಾಡುವ ಮೂಲಕ 8 ಕೋಟಿ ರೈತರ ಖಾತೆಗಳಿಗೆ 16 ಸಾವಿರ ಕೋಟಿ ರೂ. ಸೇರಿದೆ. ಇದರಿಂದಾಗಿ ಭ್ರಷ್ಟಾಚಾರವಿಲ್ಲದೆ, ಮಧ್ಯವರ್ತಿಗಳಿಲ್ಲದೆ ನೇರವಾಗಿ ರೈತರ ಖಾತೆಗೆ ಸೇರಿದೆ. ಕಾಂಗ್ರೆಸ್ ಪ್ರಧಾನಿಗಳೊಬ್ಬರು ನೂರು ರೂಗಳಲ್ಲಿ 16 ರೂ ಮಾತ್ರ ಫಲಾನುಭವಿಗೆ ತಲುಪುತ್ತದೆ ಎಂದಿದ್ದರು. ಆದರೆ ಈಗ ಮೋದಿ ಸರಕಾರ ಬಂದಿದೆ ಎಂದರು.
ಹೋಳಿ ಹಬ್ಬದ ಶುಭಾಶಯ ಕೋರಿದ ಅವರು, ಭಾರತ ಬದಲಾಗಿದೆ. ಅಭಿವೃದ್ಧಿಯ ಕೆಲಸ ನಡೆಯುತ್ತಿದೆ. ಸಣ್ಣ ರೈತರನ್ನು ಸಹ ಬಿಜೆಪಿ ಸರಕಾರ ತಲುಪುತ್ತಿದೆ. 10 ಲಕ್ಷ ಕೋಟಿ ರೂಗಳನ್ನು ರೈತರ ಖಾತೆಗೆ ಜಮಾ ಆಗಿದೆ. ಇದರಿಂದ ರೈತರು ಸಣ್ಣ ಸಣ್ಣ ಖರ್ಚುಗಳನ್ನು ಭರಿಸಬಹುದಾಗಿದೆ. ಕೃಷಿಯಲ್ಲಿ ಆಧುನಿಕತೆ ತರಲಾಗಿದೆ. ಭವಿಷ್ಯಕ್ಕಾಗಿ ಸಿದ್ಧಪಡಿಸಲಾಗುತ್ತಿದೆ. ಭಾರತದ ಕೃಷಿ ಬಜೆಟ್ ನಾವು ಅಧಿಕಾರಕ್ಕೆ ಬಂದಾಗಿನ 25 ಸಾವಿರ ಕೋಟಿ ಯಿಂದ 1.25 ಲಕ್ಷ ಕೋಟಿ ರೂಗೆ ಏರಿಸಲಾಗಿದೆ ಎಂದು ಮೋದಿ ಹೇಳಿದರು.
ರೈತರ ಇಂದಿನ ಸಂಕಷ್ಟಕ್ಕೆ ಸ್ಪಂದಿಸುತ್ತಲೇ ಭವಿಷ್ಯದ ಕುರಿತೂ ಯೋಚಿಸಲಾಗುತ್ತಿದೆ. ಪ್ರಕೃತಿ ವಿಕೋಪದ ಸಂಕಷ್ಟಕ್ಕೂ ಸ್ಪಂದಿಸಲಾಗುತ್ತಿದೆ. ಪಿಎಂ ಪ್ರಣಾಮ ಯೋಜನೆ ಜಾರಿಗೊಳಿಸಲಾಗಿದೆ. ಸಿರಿ ಧಾನ್ಯಗಳಿಗೆ ಉತ್ತೇಜನ ನೀಡುವ ಮೂಲಕ ಸಣ್ಣ ಸಣ್ಣ ರೈತರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಇಥೆನಾಲ್ ಉತ್ಪಾದನೆಗೂ ಆದ್ಯತೆ ನೀಡಲಾಗುತ್ತಿದೆ.
ಬೆಳಗಾವಿ ಶಿಕ್ಷಣ, ಆರೋಗ್ಯ ಹಾಗೂ ಪ್ರವಾಸೋದ್ಯಮದ ಕೇಂದ್ರವಾಗಿದೆ. ಡಬಲ್ ಎಂಜಿನ್ ಸರಕಾರದಿಂದಾಗಿ ಶೇ.60ರಷ್ಟು ಜನರಿಗೆ ಮನೆ ಬಾಗಿಲಿಗೆ ನೀರು ಪೂರೈಸಲಾಗುತ್ತಿದೆ. ನೀರಿಗಾಗಿ ಮಹಿಳೆಯರು ಪರದಾಡುವುದು ತಪ್ಪಿದೆ ಎಂದು ಹೇಳಿದರು.
ಕಾಂಗ್ರೆಸ್ ನೀತಿಯನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡ ಪ್ರಧಾನಿ, ಕಾಂಗ್ರೆಸ್ ಸದಾ ಕರ್ನಾಟಕದ ನಾಯಕರನ್ನು ಅವಮಾನಿಸುತ್ತ ಬಂದಿದೆ. ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರೀಯ ಅಧ್ಯಕ್ಷರಾದರೂ ಎಐಸಿಸಿ ಅಧಿವೇಶನದಲ್ಲಿ ಅವರನ್ನು ಅವಮಾನಿಸಲಾಗಿದೆ. ಈ ಹಿಂದೆ ವೀರೇಂದ್ರ ಪಾಟೀಲ ಅವರನ್ನು ಸಹ ಅವಮಾನಿಸಲಾಗಿತ್ತು ಎಂದರು.
ಬಿ.ಎಸ್.ಯಡಿಯೂರಪ್ಪ ಸರಕಾರ ಮತ್ತು ಬೊಮ್ಮಾಯಿ ಸರಕಾರದ ನೀತಿಗಳನ್ನು ಮೋದಿ ಪ್ರಶಂಸಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ ಬೆಳಗಾವಿಯ ಈ ಕಾರ್ಯಕ್ರಮ ಅವಿಸ್ಮರಣೀಯವಾಗಿದ್ದು, ಹಿಂದೆ ಆಗಿಲ್ಲ, ಮುಂದೆ ಆಗಲು ಸಾಧ್ಯವಿಲ್ಲ ಎಂದರು.
ರೈತರ ಪರವಾಗಿ ಡಬಲ್ ಎಂಜಿನ್ ಸರಕಾರ ಕೆಲಸ ಮಾಡುತ್ತಿದೆ. ರೈತರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸವನ್ನು ಮಾಡುತ್ತಿದೆ. ಅತೀ ಹೆಚ್ಚಿನ ಬೆಳೆ ವಿಮೆ ಪರಿಹಾರ ಈ ಬಾರಿ ಬಿಡುಗಡೆಯಾಗಿದೆ. ರೈತರ ಬೆಳೆಗಳಿಗೆ ಎಂಎಸ್ ಪಿ ಯನ್ನು2 -3 ಪಟ್ಟು ಹೆಚ್ಚಿಸಲಾಗಿದೆ ಎಂದು ಹೇಳಿದರು.
ಹುಬ್ಬಳ್ಳಿ – ಅಂಕೋಲಾ ರೈಲ್ವೆ ಮಾರ್ಗ ಹಾಗೂ ಬೆಳಗಾವಿ – ಧಾರವಾಡ ರೈಲ್ವೆ ಮಾರ್ಗ ಅತೀ ಶೀಘ್ರದಲ್ಲೇ ಆರಂಭವಾಗಲಿದೆ. ಅನಿಶ್ಚಿತತೆಯಿಂದ ನಿಶ್ಚಿತತೆಯೆಡೆಗೆ ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡು ಹೋಗುತ್ತಿದ್ದಾರೆ. ಮನೆ ಮನೆಗೆ ನೀರು ಕೊಡುವ ಕೆಲಸವನ್ನು ಈವರೆಗೆ ಯಾವುದೇ ಪ್ರಧಾನಿ ಮಾಡಿರಲಿಲ್ಲ. ಕಳೆದ 3 ವರ್ಷದಲ್ಲಿ 10 ಕೋಟಿ ಮನೆಗಳಿಗೆ ನೀರು ಕೊಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಭಾರತದ ಭಗೀರಥ ಎನಿಸಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.
ಸಂಶಯವನ್ನು ಸಂಕಲ್ಪವನ್ನಾಗಿ, ಸಂಕಲ್ಪವನ್ನು ಸಿದ್ಧಿ ಮಾಡಿದ್ದಾರೆ. ಹೊಸ ಯೋಚನೆಯನ್ನು ತಂದಿದ್ದಾರೆ. ಅನಿಶ್ಚಿತತೆಯನ್ನು ನಿಶ್ಚಿತವನ್ನಾಗಿ ಮಾಡಿದ್ದಾರೆ. ಇಂತಹ ನಾಯಕರು ಸಿಕ್ಕಿರುವುದು ನಮ್ಮ ಪುಣ್ಯ ಎಂದು ಬೊಮ್ಮಾಯಿ ಹೇಳಿದರು.
ಅವರ ಪಾದ ಸ್ಪರ್ಶದಿಂದ ಬೆಳಗಾವಿಗೆ ಬೆಳಕು ಬಂದಿದೆ ಎಂದೂ ಅವರು ತಿಳಿಸಿದರು.
ಸಂಸದರಾದ ಅಣ್ಣಾ ಸಾಹೇಬ ಜೊಲ್ಲೆ ಹಾಗೂ ಈರಣ್ಣ ಕಡಾಡಿ ಏಲಕ್ಕಿ ಹಾರ ಹಾಕಿ ಗೌರವಿಸಿದರು. ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದೆ ಮಂಗಲಾ ಅಂಗಡಿ ಸವದತ್ತಿ ಯಲ್ಲಮ್ಮ ಫೋಟೋ ನೀಡಿ ಗೌರವಿಸಿದರು. ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಹಾಗೂ ಉತ್ತರ ಶಾಸಕ ಅನಿಲ ಬೆನಕೆ ವಿಶಿಷ್ಟವಾಗ ತಯಾರಿಸಿದ ಮೊದಿಯವರ ಫೋಟೋ ಸಮರ್ಪಿಸಿದರು. ಸಚಿವ ಗೋವಿಂದ ಕಾರಜೋಳ ಪೇಟಾ ತೊಡಿಸಿದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸ್ವಾಗತಿಸಿದರು. ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್ ಮಾತನಾಡಿದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಚೆ ಹಾಗೂ ರಾಜ್ಯದ ಹಲವು ಸಚಿವರು, ಜಿಲ್ಲೆಯ ಶಾಸಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದಕ್ಕೂ ಮೊದಲು ನಗರದಲ್ಲಿ ಸುಮಾರು 10 ಕಿಮೀ ರೋಡ್ ಶೋ ನಡೆಯಿತು. ರಸ್ತೆಯ ಇಕ್ಕೆಲಗಳಲ್ಲೂ ಲಕ್ಷಾಂತರ ಜನರು ನಿಂತು ಹೂವಿನ ಮಳೆ ಸುರಿಯುವ ಮೂಲಕ ಪ್ರಧಾನಿಗಳಿಗೆ ಗೌರವ ಸೂಚಿಸಿದರು.
*ಬೆಳಗಾವಿ: ಪ್ರಧಾನಿ ಮೋದಿ ರೋಡ್ ಶೋ ಆರಂಭ*
https://pragati.taskdun.com/belagavipm-narendra-modiroad-show/
ಪ್ರಧಾನಿ ಮೋದಿ ಬೆಳಗಾವಿಯಲ್ಲಿ ಸೋಮವಾರ ಉದ್ಘಾಟನೆ, ಶಂಕುಸ್ಥಾಪನೆ ನಡೆಸಲಿರುವ ಯೋಜನೆಗಳು ಏನೇನು ಗೊತ್ತೇ?
https://pragati.taskdun.com/prime-minister-narendra-modi-will-inaugurate-and-lay-the-foundation-stone-of-the-projects-in-belgaum-on-monday/
https://pragati.taskdun.com/more-than-one-lakh-people-will-attend-pm-modis-event-prahlada-joshi/
*ಬೆಳಗಾವಿ: ಕನ್ನಡದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ಮೋದಿ*
https://pragati.taskdun.com/pm-modibelagavikannadasamavesha/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ