Karnataka NewsLatestPolitics

*ರಾಜ್ಯ ಕಾಂಗ್ರೆಸ್ ನಲ್ಲಿ ಕುರ್ಚಿ ಕಿತ್ತಾಟ: ಪ್ರಧಾನಿ ಮೋದಿ ಟೀಕೆ*

ಪ್ರಗತಿವಾಹಿನಿ ಸುದ್ದಿ: ಪ್ರಧಾನಿ ನರೇಂದ್ರ ಮೋದಿ ಇಂದು ರಾಜ್ಯ ರಾಜಧಾನಿ ಬೆಂಗಳೂರಿಗೆ ಆಗಮಿಸಿದ್ದು, ಆರ್ಟ್ ಆಫ್ ಲಿವಿಂಗ್ ನ ೪೭ನೇ ವರ್ಷಚರಣೆ ಹಾಗೂ ಶ್ರೀ ರವಿಶಂಕರ್ ಗುರೂಜಿಯವರ 70ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಇದಕ್ಕೂ ಮುನ್ನ ಹೆಚ್ ಎ ಎಲ್ ವಿಮಾನ ನಿಲ್ದಾಣದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲುವಿನ ಬಗ್ಗೆ ಪ್ರಸ್ತಾಪಿಸಿದರು. ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ತಮಿಳುನಾಡಿನಲ್ಲಿ ಕಾಂಗ್ರೆಸ್ ಅಧಿಕಾರ ದಾಹಕ್ಕಾಗಿ ಡಿಎಂಕೆ ಬೆನ್ನಿಗೆ ಚೂರಿ ಹಾಕಿದೆ. ಟಿವಿಕೆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ವಿಜಯ್ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆಯಲು ಮುಂದಾಗಿದೆ ಎಂದರು.

ಇದೇ ವೇಳೆ ಕರ್ನಾಟಕ ಕಾಂಗ್ರೆಸ್ ಅಧಿಕಾರ ಹಂಚಿಕೆ ಬಿಕ್ಕಟ್ಟಿನ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಕರ್ನಾಟಕದಲ್ಲಿ ಸಿಎಂ ಎಷ್ಟು ದಿನ ಇರುತ್ತಾರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್​​ ಎಲ್ಲೆಲ್ಲಿ ಅಧಿಕಾರಕ್ಕೆ ಬರುತ್ತದೆಯೋ ಅಲ್ಲೆಲ್ಲ ಒಂದೊಂದು ಸಮಸ್ಯೆ ಇದ್ದೇ ಇರುತ್ತದೆ. ಹಿಮಾಚಲ ಪ್ರದೇಶದಲ್ಲಿ ಸಫಾಯಿ ಕರ್ಮಚಾರಿಗಳಿಗೆ ವೇತನ ದೊರೆಯುತ್ತಿಲ್ಲ. ತೆಲಂಗಾಣದಲ್ಲಿ ರೈತರ ಆತ್ಮಹತ್ಯೆಗಳಾಗುತ್ತಿವೆ. ಕೇರಳದಲ್ಲಿ ಬಹುಮತದೊಂದಿಗೆ ಚುನಾವಣೆ ಗೆದ್ದರೂ ಇನ್ನೂ ಸಿಎಂ ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಇಲ್ಲಿ ಕರ್ನಾಟಕದಲ್ಲೂ ಸಿಎಂ ಎಷ್ಟು ದಿನ ಇರುತ್ತಾರೋ ಗೊತ್ತಿಲ್ಲ ಎಂದರು.

ಕಾಂಗ್ರೆಸ್​ ಸರ್ಕಾರ ಎಲ್ಲೆಲ್ಲಿ ಇದೆಯೋ ಅಲ್ಲೆಲ್ಲ ಖಜಾನೆ ಲೂಟಿ ಹೊಡೆಯುತ್ತಿದ್ದಾರೆ. ಜನರು ಸಮಸ್ಯೆಗಳಿಂದ ಬಳಲುತ್ತಿದ್ದರೆ, ಸರ್ಕಾರದ ನಾಯಕರು ಲೂಟಿ ಹೊಡೆಯುವದರಲ್ಲಿ ನಿರತರಾಗಿರುತ್ತಾರೆ. ಮತ್ತೊಂದೆಡೆ ಆಂತರಿಕ ಜಗಳ ಮತ್ತು ಕುರ್ಚಿ ಕಿತ್ತಾಟದಲ್ಲಿ ಮುಳುಗಿರುತ್ತಾರೆ. ಕರ್ನಾಟಕದಲ್ಲಿ ಕುರ್ಚಿಗಾಗಿ ಸಿಎಂ ಹಾಗೂ ಡಿಸಿಎಂ ನಡುವೆ ಕಿತ್ತಾಟ ಆರಂಭವಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವುದನ್ನು ಬಿಟ್ಟು ಅಧಿಕಾರಕ್ಕಾಗಿ ಕಿತ್ತಾಟ ನಡೆಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button