ಕೊರೊನಾ ಸಂದರ್ಭದಲ್ಲಿ ದೇಶವಾಸಿಗಳ ಸಹಕಾರಕ್ಕೆ ಪ್ರಧಾನಿ ಮೆಚ್ಚುಗೆ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೊರೊನಾ ವಿರುದ್ಧ ಭಾರತ ಒಗ್ಗಟ್ಟಿನ ಹೋರಾಟ ನಡೆಸಿದೆ. ಮನೆಯಿಂದ ಯಾರೂ ಅನಗತ್ಯವಾಗಿ ಹೊರಗೆ ಬರಬೇಡಿ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸಿ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಿ ಎಂದು ಪ್ರಧಾನಿ ಮೋದಿ ದೇಶದ ಜನತೆಯಲ್ಲಿ ಮನವಿ ಮಾಡಿದ್ದಾರೆ.

ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ದೇಶದ ಆರ್ಥಿಕ ಅಭಿವೃದ್ಧಿಗೆ ಎಲ್ಲ ಅವಕಾಶಗಳೂ ತೆರೆದಿದೆ. ಮುಂಜಾಗೃತಾ ಕ್ರಮಗಳ ಜತೆ ವಿಮಾನಗಳ ಹಾರಾಟ ಶುರುವಾಗಿದೆ. ಶ್ರಮಿಕ್ ರೈಲು ಕೂಡ ದೇಶಾದ್ಯಂತ ಶುರುವಾಗಿದೆ ಎಂದರು.

ಕೊರೊನಾ ಸಂದರ್ಭದಲ್ಲಿ ದೇಶವಾಸಿಗಳ ಸಹಕಾರ ಮೆಚ್ಚುವಂಥಾದ್ದು. ಕೊರೊನಾ ವಿರುದ್ಧ ಹೋರಾಟದಲ್ಲಿ ನಿರತರಾಗಿರುವ ವೈದ್ಯರು, ನರ್ಸ್ ಗಳಿಗೆ ಧನ್ಯವಾದ ತಿಳಿಸಲೇಬೇಕು. ದೇಶಾದ್ಯಂತ ಜನರ ಪ್ರತಿಕ್ರಿಯೆ ಸಕಾರಾತ್ಮಕವಾಗಿದೆ. ಜನರು ಸೇವಾ ಮನೋಭಾವನೆಯಿಂದ ಸಹಕರಿಸುತ್ತಿದ್ದಾರೆ. ತಮಿಳುನಾಡಿನ ಸಿ. ಮೋಹನ್ ಸಲೂನ್ ನಡೆಸುತ್ತಿರುವ ವ್ಯಕ್ತಿ. ಅವರು ಮಗಳ ಓದಿಗಾಗಿ 5 ಲಕ್ಷ ರೂ ಹಣವನ್ನು ಕೂಡಿಟ್ಟಿದ್ದರು. ಆದರೆ ಕೊರೊನಾದಿಂದಾಗಿ ಸಂಕಷ್ಟಕ್ಕೀಡಾದವರ ಸಹಾಯಕ್ಕಾಗಿ ಆ ಹಣವನ್ನೆಲ್ಲ ನೀಡಿದ್ದಾರೆ. ಇನ್ನು ಅಗರ್ತಲಾದಲ್ಲಿ ಗೌತಮ್ ದಾಸ್ ಎಂಬುವರು ಬಡವರಿಗೆ ಸಹಾಯ ಮಾಡುತ್ತಿದ್ದಾರೆ. ಸುಮಾರು 100 ಕುಟುಂಬಗಳಿಗೆ ರೇಷನ್ ನೀಡಿದ್ದಾರೆ. ಹೀಗೆ ಜನರು ಹಲವು ರೀತಿಯಲ್ಲಿ ಬಡವರಿಗೆ ಸಹಾಯ ಮಾಡುತ್ತಿದ್ದಾರೆ.

ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ ಕಡಿಮೆ. ಕರೋನಾ ವಿರುದ್ಧ ಹೋರಾಟಕ್ಕೆ ಸಲಕರಣೆಗಳನ್ನು ಕಂಡು ಹಿಡಿಯಲಾಗುತ್ತಿದೆ.
ಕೊರೊನಾ ನಿವಾರಣೆಗೆ ಔಷಧ ಕಂಡುಹಿಡಿಯುವ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯುತ್ತಿವೆ. ನಾವಿಂದು ನೋಡುತ್ತಿರುವುದೆಲ್ಲ ಭವಿಷ್ಯದ ಪಾಲಿಗೆ ಪಾಠವಾಗಿದೆ. ಸಂಕಷ್ಟದ ಈ ಸಂದರ್ಭದಲ್ಲಿ ಜನರು ಕೆಲಸಕ್ಕೆ ಹೊಸ ಹೊಸ ಪದ್ಧತಿಗಳನ್ನು ಅನುಸರಿಸುತ್ತಿದ್ದಾರೆ.

ನಮಗೆ ಸಿಕ್ಕ ಅವಕಾಶದಲ್ಲೇ ಪೂರ್ವ ಭಾರತದ ಅಭಿವೃದ್ದಿಗೆ ಪ್ರಯತ್ನಿಸಿದ್ದೇವೆ. ವಲಸೆ ಕಾರ್ಮಿಕರಿಗಾಗಿ ಮತ್ತಷ್ಟು ಹೊಸ ಯೋಜನೆ ರೂಪಿಸಬೇಕಿದೆ. ಬಡವರಿಗಾಗಿ ಆಯುಷ್ಮಾನ್ ಭಾರತ್ ಯೋಜನೆ ಜಾರಿ ಮಾಡಲಾಗಿದೆ. 1 ಕೋಟಿಗೂ ಅಧಿಕ ಜನರು ಇದರ ಲಾಭ ಪಡೆದುಕೊಂಡಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಕೊರೊನಾ ವಿರುದ್ಧ ಹೋರಾಟಕ್ಕೆ ಯೋಗ ಸಹಕಾರಿ ಎಂದ ಪ್ರಧಾನಿ ಮೋದಿ, ವೈರಸ್ ನಮ್ಮ ಉಸಿರಾಟದ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ. ಉಸಿರಾಟದ ತೊಂದರೆಗಳಿಗೆ ಯೋಗದಿಂದ ಪರಿಹಾರ ಸಿಗಲಿದೆ. ಆಯುರ್ವೇದ, ಯೋಗದಿಂದ ಮಾನಸಿಕ ಸದೃಢತೆ ಕಾಪಾಡಬಹುದು. ಕಪಾಲಬಾತಿ, ಅನುಲೋಮ-ವಿಲೋಮ ಪ್ರಾಣಾಯಾಮಗಳಿಂದ ಉಸಿರಾಟದ ತೊಂದರೆ ನಿವಾರಣೆಯಾಗಲಿದೆ. ಯೋಗದಲ್ಲಿ ಹಲವು ರೀತಿಯ ಪ್ರಾಣಾಯಾಮಗಳಿವೆ. ಕಮ್ಯುನಿಟಿ, ಇಮ್ಯುನಿಟಿ, ಯುನಿಟಿಗೆ ಯೋಗ ಸಹಾಯಕಾರಿ ಎಂದು ತಿಳಿಸಿದರು.

ಕೊರೊನಾ ಮಹಾಮಾರಿ ಸಂದರ್ಭದಲ್ಲೇ ಪಶ್ಚಿಮ ಬಂಗಾಳ ಹಾಗೂ ಒಡಿಶಾದಲ್ಲಿ ಭೀಕರ ಅಂಫಾನ್ ಚಂಡಮಾರುತ ಅಪ್ಪಳಿಸಿ ಸಾಕಷ್ಟು ಸಾವು-ನೋವು ನಷ್ಟವುಂಟಾಗಿದೆ. ಎರಡೂ ರಾಜ್ಯಗಳು ಚಂಡಮಾರುತವನ್ನು ಯಶಸ್ವಿಯಾಗಿ ನಿಭಾಯಿಸಿವೆ ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button