Uncategorized

*ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ; ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧವೂ ಪರೋಕ್ಷ ಕಿಡಿ*

ಪ್ರಗತಿವಾಹಿನಿ ಸುದ್ದಿ; ದಾವಣಗೆರೆ: ಎಐಸಿಸಿ ಅಧ್ಯಕ್ಷರ ತವರು ಜಿಲ್ಲೆಯಲ್ಲಿಯೇ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ನಿನ್ನೆ ಮೇಯರ್, ಉಪಮೇರ್ ಸ್ಥಾನವನ್ನು ಗೆದ್ದುಕೊಂಡಿದೆ. ಈ ಮೂಲಕ ಕರ್ನಾಟಕದಲ್ಲಿ ವಿಜಯ ಯಾತ್ರೆ ಆರಂಭವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಲ್ಲಿಕಾರ್ಜುನ ಖರ್ಗೆಯವರ ಹೆಸರು ಹೇಳದೇ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ದಾವಣಗೆರೆಯಲ್ಲಿ ಬಿಜೆಪಿ ಮಹಾಸಂಗಮ ಸಮಾವೇಶದಲ್ಲಿ ಮಾತನಾದಿದ ಪ್ರಧಾನಿ ಮೋದಿಯವರು, ಕಾಂಗ್ರೆಸ್ ವಿರುದ್ಧ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿತ್ತು. ಆ ಸರ್ಕಾರಗಳು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಹೆಚ್ಚು ರೈತರಿಗೆ ಸಿಗದಂತೆ ಮಾಡಿದವು. ಬಳಿಕ ಬಂದ ಬಿಜೆಪಿ ಸರ್ಕಾರ ಡಬಲ್ ಇಂಜಿನ್ ಸರ್ಕಾರದಿಂದ ವೇಗದಲ್ಲಿ ಅಭಿವೃದ್ಧಿ ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿತು ಎಂದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ನೋಡಿದೆ. ಅದರಲ್ಲಿ ರಾಜ್ಯದ ವಿಪಕ್ಷ ನಾಯಕರೊಬ್ಬರು ತಮ್ಮ ಕಾರ್ಯಕರ್ತನ ಕಪಾಳಕ್ಕೆ ಹೊಡೆಯುತ್ತಿದ್ದರು. ತಮ್ಮದೇ ಪಕ್ಷದ ಕಾರ್ಯಕರ್ತರನ್ನು ಗೌರವಿಸದವರು ಜನತಾಜನಾರ್ಧನನ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಬಿಜೆಪಿಯಲ್ಲಿ ಹಾಗಿಲ್ಲ, ಇಲ್ಲಿ ಹಿಯರು, ಕಿರಿಯರು ಎಂಬ ಬೇಧಭಾವವಿಲ್ಲ, ಎಲ್ಲರೂ ಒಂದೇ. ಎಲ್ಲಾ ಕಾರ್ಯಕರ್ತರನ್ನೂ ಗೌರವಿಸುತ್ತೇವೆ ಎಂದರು.

ಕಾಂಗ್ರೆಸ್ ರಾಜ್ಯವನ್ನು ನಾಯಕರ ತಿಜೋರಿ ತುಂಬಿಸುವ ಎಟಿಎಂ ಆಗಿ ಮಾತ್ರ ಕಾಣುತ್ತಿದೆ. ಕಾಂಗ್ರೆಸ್ ನವರು ಗ್ಯಾರಂಟಿ ಕಾರ್ಡ್ ಗಳನ್ನು ನೀಡುತ್ತಿದ್ದಾರೆ. ಈ ಗ್ಯಾರಂಟಿಗಳು ಜನರ ಮೇಲೆ ಯಾವ ಪರಿಣಾಮವನ್ನೂ ಬೀರಲ್ಲ. ಇದಕ್ಕೆ ಹಿಮಾಚಲಪ್ರದೇಶ ಉದಾಹಣೆ. ಚುನಾವಣೆ ವೇಳೆ ಅಲ್ಲಿಯೂ ದೊಡ್ಡ ದೊಡ್ಡ ಘೋಷಣೆಗಳನ್ನು ಕಾಂಗ್ರೆಸ್ ಮಾಡಿತ್ತು. ಆದರೆ ಬಜೆಟ್ ವೇಳೆ ಯಾವುದನ್ನೂ ಜನರಿಗೆ ಕೊಡಲಿಲ್ಲ. ಹಾಗೇ ಕಾಂಗ್ರೆಸ್ ನ ಗ್ಯಾರಂಟಿ ಭರವಸೆಗಳು ಕೇವಲ ಪೊಳ್ಳು ಭರವಸೆಗಳು. ಇದನ್ನು ಜನರು ಅರ್ಥಮಾಡಿಕೊಂಡು ಬಿಜೆಪಿಗೆ ಮತ ಹಾಕಬೇಕು.

ಕರ್ನಾಟಕದಲ್ಲಿ ಕಾಂಗ್ರೆಸ್ ಗೆ ಯಾವುದೆ ಪಾಸಿಟಿವ್ ಅಜೆಂಡಾಗಳಿಲ್ಲ. ಕರ್ನಾಟಕದ ಔಜ್ವಲ ಭವಿಷ್ಯಕ್ಕಾಗಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎಂದು ಕರೆ ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button