26 ಕಿ.ಮೀ ವರೆಗೆ ಸಾಗಲಿರುವ ಐತಿಹಾಸಿಕ ರೋಡ್ ಶೋ
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭಾ ಚುನಾವಣೆಗೆ ಕೇವಲ ನಾಲ್ಕು ದಿನಗಳು ಮಾತ್ರ ಬಾಕಿಯಿದ್ದು, ಇಂದು ರಾಜ್ಯ ರಾಜದಾನಿ ಬೆಂಗಳೂರಿನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಎಲ್ಲೆಲ್ಲೂ ಬಿಜೆಪಿ, ಕೇಸರಿ ಧ್ವಜ ರಾರಾಜಿಸುತ್ತಿದೆ. ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಐತಿಹಾಸಿಕ ರೋಡ್ ಶೋ ಆರಂಭವಾಗಿದೆ.
ಬೆಂಗಳೂರಿನ ಜೆಪಿ ನಗರದ ಶ್ರೀ ಸೋಮೇಶ್ವರ ಭವನಕ್ಕೆ ಆಗಮಿಸಿದ ಪ್ರಧಾನಿ ಮೋದಿಯವರನ್ನು ಬಿಜೆಪಿ ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ ಅದ್ದೂರಿಯಾಗಿ ಸ್ವಾಗತಿಸಿದರು. ಸೋಮೇಶ್ವರ ಭವನದಿಂದ ಪ್ರಧಾನಿ ಮೋದಿ ರೋಡ್ ಶೋ ಆರಂಭವಾಗಿದ್ದು, ಮೋದಿ ಮೋದಿ ಜಯಘೋಷ, ಹರ್ಷೋದ್ಘಾರ ಮುಗಿಲು ಮುಟ್ಟಿದೆ.
ರಸ್ತೆಯ ಇಕ್ಕೆಲಗಳಲ್ಲಿ ಸಾಗರೋಪಾದಿಯಲ್ಲಿ ಜನರು ನಿಂತಿದ್ದು, ಎಲ್ಲರತ್ತ ಕೈಬೀಸಿ ಸಾಗಿರುವ ಮೋದಿ ಮೇಲೆ ಹೂವಿನ ಮಳೆಗರೆಯಲಾಗುತ್ತಿದೆ. ಪ್ರಧಾನಿ ಮೋದಿ ರೋಡ್ ಶೋ ಜೆಪಿ ನಗರದ ಬ್ರಿಗೇಡ್ ಮಿಲೇನಿಯಂ, ಸೌತ್ ಎಂಡ್ ಸರ್ಕಲ್, ಕೃಷ್ಣ ರಾವ್ ಪಾರ್ಕ್, ರಾಮಕೃಷ್ಣ ಆಶ್ರಮ, ಮಕ್ಕಳ ಕೂಟ, ಟೌನ್ ಹಾಲ್, ಕಾವೇರಿ ಭವನ, ಮೆಜೆಸ್ಟಿಕ್, ಮಾಗಡಿ ರೋಡ್, ಜಿಟಿ ವರ್ಲ್ಡ್ ಮಾಲ್, ಹೌಸಿಂಗ್ ಬೋರ್ಡ್, ಬಸವೇಶ್ವರ ನಗರ, ಶಂಕರ ಮಠ ಸರ್ಕಲ್, ಮೋದಿ ಆಸ್ಪತ್ರೆ ರಸ್ತೆ, ನವರಂಗ ಸರ್ಕಲ್, ಮಹಾಕವಿ ಕುವೆಂಪು ರಸ್ತೆ, ಮಲ್ಲೇಶ್ವರಂ ಸರ್ಕಲ್, ಸಂಪಿಗೆ ರಸ್ತೆ, ಸರ್ಕಲ್ ಮಾರಮ್ಮ ದೇವಸ್ಥಾನದವರೆಗೆ ಸಾಗಲಿದೆ.
ನಗರದ 13 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಟ್ಟು 26 ಕಿ.ಮೀ ರೋಡ್ ಶೋ ನಡೆಯಲಿದೆ. ರೋಡ್ ಶೋ ಉದ್ದಕ್ಕೂ ವಿವಿಧ ಕಲಾತಂಡಗಳು, ನೃತ್ಯ ಕಲಾವಿದರು, ವಾದ್ಯ ವೃಂದದ ಕಲಾವಿದರು ಹೆಜ್ಜೆ ಹಾಕಿರುವುದು ವಿಶೇಷ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ