
ಪ್ರಗತಿವಾಹಿನಿ ಸುದ್ದಿ: ಮಹಿಳೆಯೊಂದಿಗೆ ಪೊಲೀಸ್ ಕಾನ್ಸ್ ಟೇಬಲ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹುಬ್ಬಳ್ಳಿಯ ನವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಧಾರವಾಡ ಸಂಚಾರಿ ಪೊಲೀಸ್ ಠಾಣೆ ಪಿಸಿ ಮಹೇಶ ಹೆಸರೂರ ಮಹಿಳೆಯೊಂದಿಗೆ ನೇಣಿಗೆ ಶರಣಾದ ಪೊಲೀಸ್ ಕಾನ್ಸ್ ಟೇಬಲ್.
ಹುಬ್ಬಳ್ಳಿಯ ಗಾಮನಗಟ್ಟಿಯಲ್ಲಿರುವ ಮನೆಯೊಂದರಲ್ಲಿ ವಿಜಯಲಕ್ಷ್ಮೀ ವಾಲಿ (30) ಎನ್ನುವ ಮಹಿಳೆಯೊಂದಿಗೆ ಪಿಸಿ ಮಹೇಶ್ ನೇಣಿಗೆ ಕೊರಳೊಡ್ಡಿದ್ದಾರೆ. ಮನೆಯಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ತೆರಳಿದ ನವನಗರ ಠಾಣೆ ಪೊಲಿಸರು ಮನೆ ಬಾಗಿಲು ತೆರೆದು ನೋಡಿದಾಗ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಎರಡು ಮೂರು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಮಹೇಶ್ ಈಗಾಗಲೇ ಮದುವೆಯಾಗಿದ್ದರೂ ವಿಜಯಲಕ್ಷ್ಮೀ ಜತೆ ಸಂಬಂಧಹೊಂದಿದ್ದ ಎನ್ನಲಾಗಿದೆ. 15 ದಿನಗಳ ಹಿಂದಷ್ಟೇ ವಿಜಯಲಕ್ಷ್ಮೀ ಜೊತೆ ಮನೆ ಮಾಡಿಕೊಂಡು ವಾಸವಾಗಿದ್ದ. ಈಗ ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾರೆ.