ಪ್ರಗತಿವಾಹಿನಿ ಸುದ್ದಿ, ಸಂಕೇಶ್ವರ -: ಸಂಚಾರ ನಿಯಮ ಉಲ್ಲಂಘಿಸಿ ಜನರ ಜೀವದ ಜೊತೆಗೆ ಚಲ್ಲಾಟವಾಡುತ್ತಿರುವ ವಾಹನ ಚಾಲಕ ಹಾಗೂ ಮಾಲೀಕರ ವಿರುದ್ಧ ಕಾನೂನು ಪ್ರಕಾರ ನಿರ್ದಾಕ್ಷಿಣ್ಯ ಕ್ರಮ ಕೈಕೊಳ್ಳಲಾಗುವುದು ಎಂದು ಹುಕ್ಕೇರಿ ಸಿಪಿಐ ಗುರುರಾಜ್ ಕಲ್ಯಾಣಶೆಟ್ಟಿ ವಾಹನ ಚಾಲಕರಿಗೆ ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಕಬ್ಬು ಸಾಗಿಸುವ ಟ್ರ್ಯಾಕ್ಟರ್ ಹಾಗೂ ಪ್ರಯಾಣಿಕರನ್ನು ಸಾಗಿಸುವ ಟೆಂಪೋ, ಟ್ರ್ಯಾಕ್ಸ್, ತ್ರಿಚಕ್ರ ವಾಹನ ಚಾಲಕರ ಸಭೆ ನಡೆಸಿ ಮಾತನಾಡಿದ ಅವರು, ರೈತರ ಕಬ್ಬು ಸಾಗಿಸುವ ಟ್ರ್ಯಾಕ್ಟರ್ ಚಾಲಕರು ಬೇಕಾಬಿಟ್ಟಿಯಾಗಿ ಟೇಪ್ ಹಚ್ಚಿ ಧ್ವನಿವರ್ಧಕ ಅಳವಡಿಸಿ ಜನಸಾಮಾನ್ಯರಿಗೆ ತೊಂದರೆ ನೀಡುತ್ತಿದ್ದಾರೆ. ಅಡ್ಡಾದಿಡ್ಡಿಯಾಗಿ ಕಬ್ಬು ಹೊತ್ತುಕೊಂಡು ಬರುತ್ತಿದ್ದಾರೆ. ಅಲ್ಲದೇ ಎಲ್ಲೆಂದರಲ್ಲಿ ವಾಹನ ನಿಲ್ಲಿಸುತ್ತಿರುವುದರಿಂದ ವಾಹನದಟ್ಟಣೆ ಹೆಚ್ಚಾಗುತ್ತಿದೆ. ಇದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ರೈತರ ವಾಹನಗಳಿಗೆ ತೊಂದರೆ ಕೊಡಬಾರದು ಎನ್ನುವ ಉದ್ದೇಶದಿಂದ ನೀಡಲಾಗಿರುವ ಸಡಲಿಕೆ ದುರುಪಯೋಗವಾಗುತ್ತಿರುವುದು ವಿಷಾದನೀಯ ಎಂದರು.
ನೀವು ಮಾಡುವ ತಪ್ಪಿನಿಂದ ಮತ್ತೊಬ್ಬರ ಜೀವ ಬಲಿಯಾಗುತ್ತಿದೆ. ಇನ್ನು ಮುಂದೆ ಕಡ್ಡಾಯವಾಗಿ ಟ್ರ್ಯಾಕ್ಟರ್ ಟ್ರೇಲರಗಳಿಗೆ ರೇಡಿಯಂ ಅಂಟಿಸಬೇಕು. ಟೇಪ್ ಸೌಂಡ್ ನಿಂದ ಸುತ್ತಲಿನ ಯಾವುದೇ ಜನರಿಗೆ ತೊಂದರೆಯಾಗಬಾರದು. ಇನ್ನು ಮುಂದೆ ಇಂತಹ ಘಟನೆ ಮರುಕಳಿಸಿದರೆ ತಪ್ಪಿಗೆ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಖಾಸಗಿ ವಾಹನಗಳು ಸಹ ಪ್ರಯಾಣಿಕರ ಮಿತಿಗಿಂತ ಹೆಚ್ಚು ಜನರನ್ನು ಹೊತ್ತೊಯ್ಯುತ್ತಿದ್ದಾರೆ. ಇದರಿಂದ ಅಪಘಾತಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಬಹುತೇಕರ ಬಳಿ ವಾಹನ ಚಾಲನಾ ಪರವಾನಗಿ ಇಲ್ಲ. ಮತ್ತೊಂದು ಜೀವ ಹೋದರೆ ವಿಮೆ ಕಂಪನಿಗಳು ಸಹ ಜವಾಬ್ದಾರಿ ಹೊರುವುದಿಲ್ಲ. ಇದರಿಂದ ನಷ್ಟವಾಗುವುದು ನಿಮಗೆ, ನಿಮ್ಮ ಕುಟುಂಬಗಳಿಗೆ ಹೊರತು ನಮಗಲ್ಲ ಎಂದರು.
ಪಿಎಸ್‌ಐ ಗಣಪತಿ ಕೊಗನೊಳ್ಳಿ ಮಾತನಾಡಿ, ಸಂಚಾರ ನಿಯಮ ಪಾಲನೆ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಿದರೂ ಸಹ ಬಹುತೇಕ ವಾಹನ ಚಾಲಕರು ಅವುಗಳನ್ನು ಪರಿಪಾಲನೆ ಮಾಡುತ್ತಿಲ್ಲ. ಇದರಿಂದ ಅಘಪಾತ, ಸಂಚಾರ ದಟ್ಟಣೆ ಹೆಚ್ಚುತ್ತಿವೆ. ಕಬ್ಬು ಸಾಗಿಸುವ ಟ್ರ್ಯಾಕ್ಟರ್ ಗಳು ಅಡ್ಡಾದಿಡ್ಡಿಯಾಗಿ ಕಬ್ಬು ಹೊತ್ತೊಯ್ಯುತ್ತಿರುವುದರಿಂದ ಹೆಚ್ಚಿನ ಅಘಪಾತ ಸಂಭವಿಸುತ್ತಿದ್ದು, ಇನ್ನು ಸಂಚಾರ ನಿಯಮ ಪಾಲಿಸುವ ಮೂಲಕ ಪೊಲೀಸ್ ಇಲಾಖೆ ಜೊತೆಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಭೀಮಪ್ಪಾ ನಾಗನೂರಿ, ಮಂಜುನಾಥ ಕಬ್ಬೂರ, ವಾಹನ ಚಾಲಕರ ಸಂಘದ ದುರದುಂಡಿ ಖೋತ್ ಸೇರಿದಂತೆ ಟ್ರ್ಯಾಕ್ಟರ್ ಹಾಗೂ ಖಾಸಗಿ ಟೆಂಪೊ, ಟ್ರ್ಯಾಕ್ಸ್ ಚಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ