
ಗೃಹ ಇಲಾಖೆಯೇ ಬಹಿರಂಗ ಪಡಿಸಿದೆ ಶಾಕಿಂಗ್ ಮಾಹಿತಿ
ಪ್ರಗತಿವಾಹಿನಿ ಸುದ್ದಿ: ಪೊಲೀಸ್ ವಾಹನಗಳಿಗೆ, ಸರ್ಕಾರಿ ವಾಹನಗಳಿಗೆ ಸಂಚಾರಿ ನಿಯಮ ಅನ್ವಯವಾಗುವುದಿಲ್ಲವೇ? ಎಂದು ಜನಸಾಮಾನ್ಯರು ಪ್ರಶ್ನೆ ಮಾಡುವಂತಾಗಿದೆ. ಕಾರಣ ಗೃಹ ಇಲಾಖೆಯೇ ಅಧಿಕೃತವಾಗಿ ಬಿಡುಗಡೆ ಮಾಡಿರುವ ಅಂಕಿ-ಅಂಶ ಇಂತದ್ದೊಂದು ಪ್ರಶ್ನೆಯನ್ನು ಕೇಳುವಂತೆ ಮಾಡಿದೆ.
ಸಾಮಾನ್ಯ ಜನರಿಗೆ ಟ್ರಾಫಿಕ್ ನಿಯಮ ಕೊಂಚ ಉಲ್ಲಂಘನೆ ಮಾಡಿದರೂ ಮೊಬೈಲ್ ಗೆ ಮೆಸೇಜ್ ಬರುವುದು ಮಾತ್ರವಲ್ಲ, ಸಂಚಾರಿ ಪೊಲೀಸರು ವಾಹನ ತಡೆದು ದಂಡ ವಸೂಲಿ ಮಾಡುತ್ತಾರೆ. ಹೀಗಿರುವಾಗ ಪೊಲೀಸ್ ವಾಹನಗಳು ಹಾಗೂ ಸರ್ಕಾರಿ ವಾಹನಗಳು ರಾಜಾರೋಷವಾಗಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದರೂ ಯಾವುದೇ ದಂಡ ವಿಧಿಸದೇ 85,000ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬರೋಬ್ಬರಿ 19.23 ಕೋಟಿ ರೂ ದಂಡ ಬಾಕಿ ಉಳಿಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಸ್ವತಃ ಗೃಹ ಇಲಾಖೆಯೇ ಬಿಡುಗಡೆ ಮಾಡಿರುವ ಅಧಿಕೃತ ಅಂಕಿ-ಅಂಶಗಳ ಪ್ರಕಾರ ಪೊಲೀಸ್ ವಾಹನಗಳ ಮೇಲೆಯೇ 3,366 ಸಂಚಾರಿ ನಿಯಮ ಉಲ್ಲಂಘನೆ ಕೇಸ್ ಗಳಿವೆ. ಕಳೆದ ಮೂರೂವರೆ ವರ್ಷಗಳಲ್ಲಿ ಪೊಲೀಸ್ ಇಲಾಖೆಯ ವಾಹನಗಳ ವಿರುದ್ಧವೇ ಬರೋಬ್ಬರಿ 3,366 ಪ್ರಕರಣಗಳು ದಾಖಲಾಗಿವೆ. 2023ರಲ್ಲಿ ಕೇವಲ 21 ಪ್ರಕರಣಗಳು ದಾಖಲಾಗಿದ್ದರೆ, 2024ರಲ್ಲಿ ಈ ಸಂಖ್ಯೆ 1,494ಕ್ಕೆ ಏರಿಕೆಯಾಗಿತ್ತು. 2025ರಲ್ಲಿ 1,251 ಮತ್ತು 2026ರ ಜುಲೈ ಅಂತ್ಯದ ವೇಳೆಗೆ ಮತ್ತೆ 600 ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.
ಇನ್ನು ಕಳೆದ ಮೂರೂವರೆ ವರ್ಷಗಳಲ್ಲಿ ವಿವಿಧ ಸರ್ಕಾರಿ ಇಲಾಖೆಯ ವಾಹನಗಳ ಮೇಲೆ ಬರೋಬ್ಬರಿ 82,478 ಕೇಸ್‌ಗಳು ದಾಖಲಾಗಿವೆ. 2023ರಲ್ಲಿ 1,055 ಕೇಸ್ ಗಳು, 2024ರಲ್ಲಿ ಅತಿ ಹೆಚ್ಚು ಅಂದರೆ 35,832 ಕೇಸ್ ಗಳು ಹಾಗೂ 2025ರಲ್ಲಿ ದಾಖಲೆಯ 38,282 ಪ್ರಕರಣಗಳು ದಾಖಲಾಗಿವೆ. ಈ ವರ್ಷ 2026ರ ಜುಲೈವರೆಗೆ 7,309 ಕೇಸ್‌ಗಳು ದಾಖಲಾಗಿವೆ.
ಒಟ್ಟಾರೆಯಾಗಿ ಪೊಲೀಸ್ ಹಾಗೂ ಸರ್ಕಾರಿ ಇಲಾಖೆಗಳೆರಡೂ ಸೇರಿ ಬರೋಬ್ಬರಿ 85,844 ಬಾರಿ ನಿಯಮ ಉಲ್ಲಂಘಿಸಿದ್ದು, ಬರೋಬ್ಬರಿ 19.23 ಕೋಟಿ ರೂ ದಂಡ ಬಾಕಿಯಿದೆ ಎಂದು ಗೃಹ ಇಲಾಖೆ ಬಿಡಿಗಡೆಗೊಳಿಸಿರುವ ಅಂಕಿ-ಅಂಶಗಳಿಂದ ತಿಳಿದುಬಂದಿದೆ.




