
ಪ್ರಗತಿವಾಹಿನಿ ಸುದ್ದಿ, ಮುಂಬೈ: ಬಾಲಿವುಡ್‌ನ ಜನಪ್ರಿಯ ಗಾಯಕ ಪಂಕಜ್ ಉಧಾಸ್ ನಿಧನರಾಗಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿತ್ತು. ಇಂದು (ಫೆಬ್ರವರಿ 26) ಬೆಳಗ್ಗೆ 11 ಗಂಟೆಗೆ ಪಂಕಜ್ ಉಧಾಸ್ ನಿಧನರಾಗಿದ್ದಾರೆ.
ಮೇ 17, 1951ರಲ್ಲಿ ಗುಜರಾತ್‌ನಲ್ಲಿ ಜನಿಸಿದ್ದ ಪಂಕಜ್ ಉಧಾಸ್, ಬಾಲ್ಯದಿಂದಲೇ ಮ್ಯೂಸಿಕಲ್ ಜರ್ನಿಯನ್ನು ಆರಂಭಿಸಿದ್ದರು. 80 ಹಾಗೂ 90ರ ದಶಕದಲ್ಲಿ ಪಂಕಜ್ ಉಧಾಸ್ ಯಶಸ್ಸಿಬನ ಉತ್ತುಂಗದಲ್ಲಿದ್ದರು.
ಪಂಕಜ್ ಉಧಾಸ್ ಗಝಲ್ ಗಾಯಕರಾಗಿ ಜನಪ್ರಿಯತೆಯನ್ನು ಪಡೆದಿದ್ದರು.
ಸಂಗೀತ ಕ್ಷೇತ್ರದಲ್ಲಿ ಪಂಕಜ್ ಉಧಾಸ್ ನೀಡಿದ ಕೊಡುಗೆ ಅಪಾರ. ತಮ್ಮ ವೃತ್ತಿ ಬದುಕಿನ ಉತ್ತುಂಗದ ಕಾಲದಲ್ಲಿ ಮೆಲೋಡಿ ಹಾಗೂ ಅರ್ಥಪೂರ್ಣ ಸಾಹಿತ್ಯದಿಂದ ಸಂಗೀತ ಪ್ರಿಯರನ್ನು ಸೆಳೆದಿದ್ದರು. ಇಂದಿಗೂ ಪಂಕಜ್ ಉಧಾಸ್ ಹಾಡುಗಳನ್ನು ಕೇಳುತ್ತಾ ಮೈ ಮರೆಯುವ ಅದೆಷ್ಟೋ ಮಂದಿ ಸಂಗೀತ ಪ್ರಿಯರು ಇದ್ದಾರೆ.
ಪಂಕಜ್ ಉಧಾಸ್ ಕನ್ನಡದ ಸಿನಿಮಾದಲ್ಲಿಯೂ ಹಾಡಿದ್ದಾರೆ. ಕಿಚ್ಚ ಸುದೀಪ್ ನಾಯಕನಾಗಿ ನಟಿಸಿದ್ದ ‘ಸ್ಪರ್ಶ’ ಸಿನಿಮಾಗಾಗಿ ಕೆಲವು ಹಾಡುಗಳನ್ನು ಹಾಡಿದ್ದಾರೆ. ಅದರಲ್ಲಿ “ಚಂದಕ್ಕಿಂತ ಚಂದ ನೀನೆ ಸುಂದರ..” ಹಾಗೂ ” ಬರೆಯದ ಮೌನದ ಕವಿತೆ ಹಾಡಾಗಿದೆ” ಅನ್ನುವ ಹಾಡುಗಳು ಸಂಗೀತ ಪ್ರಿಯರನ್ನು ಸೆಳೆಯುತ್ತವೆ. ಪಂಕಜ್ ಉಧಾಸ್ ಹಾಡಿದ ಈ ಎರಡೂ ಹಾಡುಗಳು ಸೂಪರ್ ಡೂಪರ್ ಹಿಟ್ ಆಗಿತ್ತು.
ಹಿಂದಿಯಲ್ಲೂ ಹಲವು ಅಲ್ಬಮ್‌ಗಳನ್ನು ರಿಲೀಸ್ ಮಾಡಿದ್ದರು. ಬಹುತೇಕ ಹಾಡುಗಳು ಗಝಲ್ ಪ್ರಿಯರನ್ನು ರಂಜಿಸಿದ್ದವು. ಅದರಲ್ಲಿ “ಚಿಟ್ಟಿ ಆಯಿ ಹೈ..”, ” ಔರ್ ಅಹಿಸ್ತಾ..” ಮತ್ತು “ಜೀಯೆ ತೊ ಜಿಯೆ ಕೈಸೆ..” ಹಾಡುಗಳು ಇಂದಿಗೂ ಹಿಟ್ ಲಿಸ್ಟ್ ಸೇರಿದ್ದವು. ಇಂದಿಗೂ ಈ ಹಾಡುಗಳು ಸಂಗೀತ ಪ್ರಿಯರ ಬಾಯಲ್ಲಿ ಗುನುಗುತ್ತಿವೆ. ಪಂಕಜ್ ಉಧಾಸ್ ಕೇವಲ ಸಂಗೀತ ಕ್ಷೇತ್ರದಲ್ಲಷ್ಟೇ ಸಾಧನೆ ಮಾಡಿಲ್ಲ. ಬದಲಾಗಿದೆ ಸಮಾಜಮುಖಿ ಕೆಲಸಗಳಲ್ಲೂ ತೊಡಗಿಕೊಂಡಿದ್ದರು. 1989ರಲ್ಲಿ ‘ನಬೀಲ್’ ಅನ್ನುವ ಅಲ್ಬಮ್ ಅನ್ನು ರಿಲೀಸ್ ಮಾಡಿದ್ದರು. ಅದು ಬೆಸ್ಟ್ ಸೆಲ್ಲಿಂಗ್ ಅಲ್ಬಮ್ ಆಗಿ ಹೊರಹೊಮ್ಮಿತ್ತು. ಅದರ ಮೊದಲ ಕಾಪಿಯನ್ನು ಹರಾಜಿಗೆ ಇಡಲಾಗಿತ್ತು. ಇದು 1 ಲಕ್ಷ ರೂಪಾಯಿಗೆ ಸೇಲ್ ಆಗಿತ್ತು. ಅದನ್ನು ಕ್ಯಾನ್ಸರ್ ರೋಗಿಯ ಚಿಕಿತ್ಸಾ ಸಂಘಕ್ಕೆ ನೀಡಲಾಗಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ