ಪ್ರಗತಿವಾಹಿನಿ ಸುದ್ದಿ, ಮುಗಳಖೋಡ: ಮಹಿಳೆಯರ ಮತ್ತು ಮಕ್ಕಳ ಪೌಷ್ಟಿಕ ಬೆಳವಣಿಗೆ ಮತ್ತು ಗರ್ಭಿಣಿ, ಬಾಣಂತಿಯರ ಮಾಹಿತಿ ಕಲೆ ಹಾಕಲು ಕೇಂದ್ರ ಸರ್ಕಾರ ೨೦೧೯ರಲ್ಲಿ ಪೋಷಣ್ ಅಭಿಯಾನ ಆರಂಭಿಸಿದೆ. ಜೊತೆಗೆ, ಮಾತೃ ವಂದನಾ ಮತ್ತು ಭಾಗ್ಯ ಲಕ್ಷ್ಮೀ ಯೋಜನೆಯನ್ನು ಅಂಗನವಾಡಿಗಳಿಗೆ ರಾಜ್ಯ ಹಾಗೂ ಕೇಂದ್ರ ಸರಕಾರ ಜಾರಿಗೆ ತಂದಿವೆ ಎಂದು ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆಯ ಎಸಿಡಿಪಿಓ ರುಬಿನಾ ಜಮಾದಾರ ಹೇಳಿದರು.
ಪ್ರತಿಯೊಂದು ಅಂಗನವಾಡಿ ಕೇಂದ್ರಗಳನ್ನು ಮಾಹಿತಿ ಕೇಂದ್ರಗಳಾಗಿ ಪರಿವರ್ತಿಸಲು ಇಲಾಖೆ ಕ್ರಮ ಕೈಗೊಂಡಿದ್ದು, ಗರ್ಭಿಣಿ ಮತ್ತು ಬಾಣಂತಿಯರ ಹಾಗೂ ಮಕ್ಕಳ ವಿವರ, ತೂಕ, ಎತ್ತರ, ಆಹಾರ ನೀಡಿದ ವಿವರ ಸಂಗ್ರಹಿಸಲಾಗುವುದು. ಅಂಗನವಾಡಿ ಕಾರ್ಯಕರ್ತೆಯರು ಕೋವಿಡ್-೧೯ ನಿಯಂತ್ರಿಸಲು ಹಾಗೂ ಮನೆ- ಮನೆಗೆ ಹೋಗಿ ಇಲಾಖೆಯ ಯೋಜನೆಯನ್ನು ಜಾರಿಗೊಳಿಸಲು ಶ್ರಮವಹಿಸುತ್ತಿದ್ದಾರೆಂದು ಅಂಗನವಾಡಿ ಮೇಲ್ವೀಚಾರಕಿ ಎಮ್. ಸೂರ್ಯವಂಶಿ ತಿಳಿಸಿದರು.
ಪೋಷಣ್ ಅಭಿಯಾನ ಮಾರ್ಚ ೮, ೨೦೧೮ ರಂದು ರಾಜಸ್ಥಾನದಲ್ಲಿ ಮೊದಲ ಬಾರಿಗೆ ಬಳಕೆಗೆ ಬಂದಿತು. ಮಹಿಳೆಯರು ಮತ್ತು ಮಕ್ಕಳ ಕಲ್ಯಾಣ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಜೊತೆಗೆ ಅಪೌಷ್ಟಿಕತೆಯಿಂದ ಮತ್ತು ರಕ್ತಹೀನತೆಯಿಂದ ಮಕ್ಕಳು, ಮಹಿಳೆಯರ ಸಾವಿನ ಪ್ರಕರಣಗಳನ್ನು ಕಡಿಮೆಗೊಳಿಸುವುದು ಇಲಾಖೆಯ ಮಹದಾಸೆಯಾಗಿದೆ ಎಂದು ಪೋಷಣ್ ಅಭಿಯಾನ ಯೋಜನೆಯ ತಾಲೂಕಾ ಸಂಯೋಜಕಿ ಅನ್ನಪೂರ್ಣಾ ಘಟನಟ್ಟಿ ಹೇಳಿದರು.
ಈ ಸಂದರ್ಭದಲ್ಲಿ ಅಂಗನವಾಡಿ ಹಿರಿಯ ಮೇಲ್ವೀಚಾರಕಿ ಬಿ.ಬಿ. ವಾಲಿ, ಆರೋಗ್ಯ ಇಲಾಖೆಯ ಮಹೇಶ ಪಾಟೀಲ, ಪುರಸಭೆ ಸದಸ್ಯ ವಿಠ್ಠಲ ಎಡವಣ್ಣವರ, ಮುಪ್ಪಯ್ಯ ಹೀರೆಮಠ, ನಿವೃತ್ತ ಶಿಕ್ಷಕ ಎಸ್.ಪಿ. ಕಡಹಟ್ಟಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗರ್ಭಿಣಿ, ಬಾಣಂತಿಯರು ಹಾಗೂ ಮಕ್ಕಳ ತಾಯಂದಿರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ