*ಉದ್ಯಮಿಯಾಗಲು ಧನಾತ್ಮಕ ಚಿಂತನೆ ಮುಖ್ಯ: ದಿಲೀಪ್ ಚಂಡಕ್*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸೆಕ್ಷನ್ 8 ಕಂಪನಿ ವಿಶ್ವೇಶ್ವರಯ್ಯ ರಿಸರ್ಚ ಮತ್ತು ಇನ್ನೋವೇಶನ್ ಫೌಂಡೇಶನ್ ವತಿಯಿಂದ ವಿಶ್ವ ವಾಣಿಜ್ಯೋದಮ ದಿನವನ್ನು ಇಂದು ಆಚರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಅಂತರಾಷ್ಟ್ರೀಯ ಖ್ಯಾತಿಯ ಬೆಳಗಾವಿಯ ಹೆಲ್ಮೆಟ್ ಉದ್ಯಮ ಆಗಿರುವ ವೇಗಾ ಆಟೋ ಎಕ್ಸಸೆರೀಸನ ಸಂಸ್ಥಾಪಕ ಮತ್ತು ಎಂಡಿ ಆಗಿರುವ ದೀಲೀಪ್ ಚಂಡಕ್ ಆಗಮಿಸಿದ್ದರು. ವಿ ಟಿ ಯು ಕುಲಪತಿ ಪ್ರೊ ವಿದ್ಯಾಶಂಕರ್ ಎಸ್. ಅವರು ಅಧ್ಯಕ್ಷತೆಯನ್ನುವಹಿಸಿದ್ದರು. ಕಾರ್ಯಕ್ರಮವನ್ನು ಸಸ್ಯಕ್ಕೆ ನೀರು ಹಾಕುವುದರ ಮುಖಾಂತರ ಉದ್ಘಾಟಿಸಲಾಯಿತು.
ಕಾರ್ಯವನ್ನು ಉದ್ದೇಶಿಸಿ ಮಾತನಾಡಿದ ಶ್ರೀ ದೀಲಿಪ ಚಂಡಕ್ ಅವರು
ವೇಗಾ ಉದ್ಯಮದ ಬೆಳವಣಿಗೆಯ ಕಾಲದಲ್ಲಿ ಅನುಭವಿಸಿದ ಏರಿಳಿತಗಳ ಬಗ್ಗೆ ಹೇಳುತ್ತಾ ಯಾವುದೇ ಉದ್ಯಮ ಆರಂಭಿಸಬೇಕಾದರೆ ಮೊದಲು ಕಷ್ಟ ಮತ್ತು ನಷ್ಟಗಳು ಎರಡು ಜೊತೆಯಾಗುತ್ತವೆ ಹಾಗೂ ಅದನ್ನ ಸಹಿಸಿಕೊಂಡು ತಾಳ್ಮೆಯಿಂದ ಮುಂದುವರೆದರೆ ಮಾತ್ರ ಬೆಳೆಯುವುದಕ್ಕೆ ಹಾಗೂ ಯಶಸ್ವಿ ಉದ್ಯಮಿಯಾಗಲು ಸಾಧ್ಯ ಎಂದು ವೇಗಾ ಕಂಪನಿ ಬೆಳೆದು ಬಂದ ಕಥೆಯನ್ನು ತೆರೆದಿಟ್ಟರು.
ಉದ್ಯಮದ ಬೆಳವಣಿಗೆಯ ಕಾಲದಲ್ಲಿ ಗುಣಮಟ್ಟ ಮತ್ತು ನಿರ್ವಹಣಾ ಬಗ್ಗೆ ಅನೇಕ ರೀತಿಯಲ್ಲಿ ನಕಾರಾತ್ಮಕ ಪ್ರತಿಕ್ರಿಯೆಗಳು ಬರುವುದು ಸಹಜ ಆ ಕ್ಷಣದಲ್ಲಿ ಧೃತಿಗಾಡಬಾರದು ಯಾಕಂದರೆ ನಾವು ಎಲ್ಲರ ಬೇಡಿಕೆ ಮತ್ತು ಆಸಕ್ತಿಗಳನುಸಾರ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಮತ್ತು ಎಲ್ಲರನ್ನೂ ಸಂತೋಷಗೊಳಿಸಲು ಸಾಧ್ಯವಿಲ್ಲ ಆದರೂ ಆ ಬೇಡಿಕೆಯನ್ನು ಅಭ್ಯಾಸ ಮಾಡಿ ಪರಿಶೀಲಿಸಿ ನಾವು ಮುಂದುವರೆಯಬೇಕು ಎಂದು ಹೇಳಿದರು. ಒಬ್ಬ ವಿದ್ಯಾರ್ಥಿ ಉದ್ಯಮಿಯಾಗಬೇಕಂದರೆ ಮನಸ್ಸಿನಲ್ಲಿ ಯಾವುದೇ ರೀತಿಯ ನಕಾರಾತ್ಮಕ ಚಿಂತನೆಯನ್ನು ಹೊಂದಿರದೆ ಬೇರೆಯವರು ಅಥವಾ ಸ್ನೇಹತರು ಯಾವುದೇ ಒಳ್ಳೆಯ ಕೆಲಸವನ್ನು ಅಥವಾ ಸಾಧನೆಯನ್ನ ಮಾಡಿದಾಗ ಅದನ್ನ ಹೀಯಾಳಿಸಿದೆ ಆ ಸಾಧನೆಯನ್ನ ಹತ್ತು ಜನರ ಮುಂದೆ ಹೊಗಳಿ ಅವನ ಬೆಳವಣಿಗೆಗೆ ಸಹಾಯ ಮಾಡಿದರೆ ನಿಮ್ಮ ಬೆಳವಣಿಗೆಗೆ ಅನೇಕರು ಬೆಂಬಲಕ್ಕೆ ನಿಂತಿರುತ್ತಾರೆ.
ಅಧ್ಯಕ್ಷೀಯ ನುಡಿಗಳನ್ನಾಡಿದ ವಿ ಟಿ ಯು ಕುಲಪತಿಗಳಾದ ಪ್ರೊ ವಿದ್ಯಾಶಂಕರ ಎಸ್ ಅವರು ಜಗತ್ತಿನಲ್ಲೆ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಭಾರತದಲ್ಲಿ ಉದ್ಯೋಗಿಗಳ ಬದಲು ಉದ್ಯಮಿಗಳನ್ನು ಬೆಳೆಸುವ ಅವಶ್ಯಕತೆ ಇದೆ ಹೇಳಿದರು.
ಒಬ್ಬ ವ್ಯಕ್ತಿ ಉದ್ಯಮಿಯಾಗಿ ಬೆಳೆಯಲು ಅವನಲ್ಲಿರುವ ಆಸಕ್ತಿ ಮುಖ್ಯ ಕಾರಣವಾಗಿರುತ್ತದೆ ಅಂದರೆ ಆಸಕ್ತಿಯಿಂದ ಉದ್ಯಮಿಗಳಾಗಿರುತ್ತಾರೆ ಆದರೇ ಇವತ್ತು ಆ ಆಸಕ್ತಿ ಇಲ್ಲದೆ ಇರುವ ವಿದ್ಯಾರ್ಥಿಗಳಲ್ಲಿ ಅಥವಾ ಯುವಜನರಲ್ಲಿರುವ ಇನ್ನೊವೇಟಿವ ಚಿಂತನೆ ಮತ್ತು ಕೌಶಲ್ಯವನ್ನು ಬಳಸಿಕೊಂಡು ಅವರನ್ನು ಸ್ಟಾರ್ಟ ಅಪ್ ಗಳನ್ನು ಹುಟ್ಟುಹಾಕಿ ಉದ್ಯಮಿಗಳಾಗಿ ಬೆಳೆಯುವಂತೆ ಆಸಕ್ತಿಯನ್ನು ಅವರಲ್ಲಿ ಹುಟ್ಟುಹಾಕಿ ಅದನ್ನು ಪ್ರೋತ್ಸಾಹಿಸಬೇಕಾಗಿದೆ ಎಂದು ಹೇಳಿದರು. ಇದೇ ನಿಟ್ಟಿನಲ್ಲಿ
ವಿ ಟಿ ಯು ವಿಶ್ವೇಶ್ವರಯ್ಯ ಸಂಶೋಧನಾ ಮತ್ತು ಇನ್ನೋವೇಶನ್ ಫೌಂಡೇಶನ್ ನ್ನು ಸ್ಥಾಪಿಸಿ ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆಯ ಬಗ್ಗೆ ಆಸಕ್ತಿ ಬೆಳೆಸಿ ಅದನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡುತ್ತಿದೆ ಎಂದು ಹೇಳಿದರು. ಇದೇ ದಿಶೆಯಲ್ಲಿ ಇವತ್ತು “ಎಮರ್ಜ -24” ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದರ ಮುಖಾಂತರ ಹೊಸ ಉದ್ಯಮಗಳನ್ನು ಹುಟ್ಟು ಹಾಕುವ ಕಾರ್ಯಮಾಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದ ಮೊದಲಿಗೆ ವಿ ಟಿ ಯು ಕುಲಸಚಿವರಾದ ಪ್ರೊ ಬಿ ಈ ರಂಗಸ್ವಾಮಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿ ಆರ್ ಐ ಎಪ್ ಸಂಚಾಲಕ ಶ್ರೀ ಸಂತೋಷ ಇಟ್ಟಣಗಿ ವಂದಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ವಿ ಟಿ ಯು ಬೋಧಕ ಸಿಬ್ಬಂದಿ ವರ್ಗ ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ