Kannada NewsKarnataka NewsLatest

ಚುನಾವಣೋತ್ತರ ಸಮೀಕ್ಷೆ: ಬಿಜೆಪಿ ಸರಕಾರಕ್ಕಿಲ್ಲ ಆತಂಕ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಗುರುವಾರ 15 ಕ್ಷೇತ್ರಗಳ ಉಪಚುನಾವಣೆ ರಾಜ್ಯಾದ್ಯಂತ ಶಾಂತಿಯುತವಾಗಿ ನಡೆಯಿತು.  ಮತದಾನದ ಪ್ರಮಾಣವೂ ಉತ್ತಮವಾಗಿದೆ.

ಸಿ ವೋಟರ್ಸ್ ಸೇರಿದಂತೆ ವಿವಿಧ ಸಂಸ್ಥೆಗಳು ನಡೆಸಿರುವ ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್ -ಜೆಡಿಸ್ ಪಕ್ಷಗಳ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿವೆ. ಈ ಸಮೀಕ್ಷೆ ಪ್ರಕಾರ ಬಿಜೆಪಿ ಭಾರಿ ಮುನ್ನಡೆ ಪಡೆಯಲಿದ್ದು, ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರಕ್ಕೆ ಯಾವುದೇ ಆತಂಕವಿಲ್ಲ.

ಡಿಸೆಂಬರ್ 9ರಂದು ಮತ ಎಣಿಕೆ ನಡೆಯಲಿದ್ದು, ಬಹುತೇಕ ಎಲ್ಲ ಸಮೀಕ್ಷೆಗಳ ಪ್ರಕಾರ ಬಿಜೆಪಿ 9 ರಿಂದ 12 ಸ್ಥಾನಗಳನ್ನು ಗೆಲ್ಲಲಿದೆ.  ಕಾಂಗ್ರೆಸ್ 2 ರಿಂದ 4 ಸ್ಥಾನ, ಜೆಡಿಎಸ್  ಒಂದು ಸ್ಥಾನವನ್ನು ಗೆಲ್ಲಲಿದೆ.

ಸಿ ವೋಟರ್ಸ್ ಸಮೀಕ್ಷೆ ಪ್ರಕಾರ ಬೆಳಗಾವಿ ಜಿಲ್ಲೆಯ ಮೂರು ಸ್ಥಾನಗಳು ಬಿಜೆಪಿ ಪಾಲಾಗಲಿವೆ. ಗೋಕಾಕ, ಅಥಣಿ ಹಾಗೂ ಕಾಗವಾಡಗಳಲ್ಲಿ ಬಿಜೆಪಿ ಸುಲಭವಾಗಿ ಜಯಗಳಿಸಲಿದೆ. ಯಲ್ಲಾಪುರ  ಹಾಗೂ ಹುಣಸೂರು ಕಾಂಗ್ರೆಸ್ ಪಾಲಾಗಲಿವೆ ಎನ್ನುತ್ತದೆ ಸಮೀಕ್ಷೆ.

Home add -Advt

ಹೊಸಕೋಟೆ, ವಿಜಯನಗರ, ಹಿರೇಕೆರೂರು, ಮಹಾಲಕ್ಷ್ಮೀ ಲೇಔಟ್, ಯಶವಂತಪುರಗಳಲ್ಲಿ ಬಿಜೆಪಿ ಗೆಲ್ಲಲಿದೆ. ಕೆಆರ್ ಪೇಟೆಯಲ್ಲಿ ಜೆಡಿಎಸ್ ಅಥವಾ ಕಾಂಗ್ರೆಸ್ ಗೆಲ್ಲಲಿದೆ. ಕೆ.ಆರ್.ಪುರ,  ರಾಣೆ ಬೆನ್ನೂರು, ಚಿಕ್ಕಬಳ್ಳಾಪುರ ಹಾಗೂ ಶಿವಾಜಿನಗರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಗೆ ಸಮಬಲವಿದೆ ಎನ್ನುತ್ತದೆ ಸಿ ವೋಟರ್ಸ್ ಸಮೀಕ್ಷೆ.

ಪಬ್ಲಿಕ್ ಟಿವಿ, ಬಿ.ಟಿವಿ, ಟಿವಿ 5 ಮತ್ತು ದಿಗ್ವಿಜಯ ಸಮೀಕ್ಷೆಗಳು ಸಹ ಹೆಚ್ಚು ಕಡಿಮೆ ಇದೇ ಫಲಿತಾಂಶವನ್ನು ನೀಡಿವೆ. ಬಿಜೆಪಿ 8 ಸ್ಥಾನಕ್ಕಿಂತ ಕೆಳಗಿಳಿಯುವ ಸಾಧ್ಯತೆಯನ್ನು ಯಾವ ಸಮೀಕ್ಷೆಯೂ ಹೇಳಿಲ್ಲ. ಹಾಗೆಯೇ ಕಾಂಗ್ರೆಸ್ 6 ಸ್ಥಾನಕ್ಕಿಂತ ಮತ್ತು ಜೆಡಿಎಸ್ 2 ಸ್ಥಾನಕ್ಕಿಂತ ಹೆಚ್ಚು ಗಳಿಸುವ ಸಾಧ್ಯತೆ ಯಾವ ಸಮೀಕ್ಷೆಯಲ್ಲೂ ಇಲ್ಲ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button