Kannada NewsKarnataka News

ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲಿರುವ (?) ಬೆಳಗಾವಿಯ ಪ್ರಬಲ ನಾಯಕರು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಈ ಬಾರಿ ಜಯಭೇರಿ ಭಾರಿಸಿದೆ, ತನ್ಮೂಲಕ, 15 ಸ್ಥಾನಕ್ಕಿಂತ ಹೆಚ್ಚು ಗೆಲ್ಲುವ ಅತಿ ವಿಶ್ವಾಸ ಹೊಂದಿದ್ದ ಬಿಜೆಪಿಗೆ ಬಹಳ ದೊಡ್ಡ ಶಾಕ್ ನೀಡಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಮಹಿಳಾ ಕಾಂಗ್ರೆಸ್ ಮಾಜಿ ರಾಜ್ಯಾಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ್ ಜಿಲ್ಲೆಯ ಪ್ರಬಲ ಕಾಂಗ್ರೆಸ್ ನಾಯಕರು. ಜಿಲ್ಲೆಯಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಕಾಂಗ್ರೆಸ್ ಗೆಲ್ಲಲು ಈ ಮೂವರ ಪಾತ್ರ ದೊಡ್ಡದಿದೆ. ಈ ಮೂವರೂ ಕೇವಲ ಮಂತ್ರಿಯಲ್ಲ, ಉಪಮುಖ್ಯಮಂತ್ರಿ ಸ್ಥಾನಕ್ಕೂ ಅರ್ಹತೆ ಹೊಂದಿದವರು. ಈ ಮೂವರಿಗೂ ಯಾವುದೇ ಕೋಟಾ ಅವಶ್ಯಕತೆ ಇಲ್ಲ, ಒತ್ತಡ ಅವಶ್ಯಕತೆ ಇಲ್ಲ, ಜನರಲ್ ಕೋಟಾದಲ್ಲೇ ಮಂತ್ರಿ, ಉಪಮುಖ್ಯಮಂತ್ರಿಯಾಗುವ ಸಾಮರ್ಥ್ಯ ಇದ್ದವರು.

ಲಕ್ಷ್ಮೀ ಹೆಬ್ಬಾಳಕರ್ ಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿದರೆ ರಾಜ್ಯದ ಮೊದಲ ಮಹಿಳಾ ಉಪಮುಖ್ಯಮಂತ್ರಿ ಎನ್ನುವ ದಾಖಲೆಯೂ ಸೃಷ್ಟಿಯಾಗಲಿದೆ.

ಇನ್ನು ಚಿಕ್ಕೋಡಿ ಶಾಸಕ ಗಣೇಶ ಹುಕ್ಕೇರಿ, ರಾಮದುರ್ಗದ ಅಶೋಕ ಪಟ್ಟಣ, ಬೈಲಹೊಂಗಲದ ಮಹಾಂತೇಶ ಕೌಜಲಗಿ, ಕಾಗವಾಡದ ರಾಜು ಕಾಗೆ ಸಹ ಎರಡಕ್ಕಿಂತ ಹೆಚ್ಚು ಬಾರಿ ಆಯ್ಕೆಯಾಗಿ ಸಚಿವ ಸಂಪುಟ ಸೇರಲು ಅರ್ಹರಾಗಿದ್ದಾರೆ.

ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ, ಬೆಳಗಾವಿ ಉತ್ತರದ ಆಸೀಫ್ ಸೇಠ್, ಸವದತ್ತಿಯ ವಿಶ್ವಾಸ ವೈದ್ಯ, ಕುಡಚಿಯ ಮಹೇಂದ್ರ ತಮ್ಮಣ್ಣವರ್ ಬೆಳಗಾವಿಯಿಂದ ಮೊದಲ ಬಾರಿಗೆ ಶಾಸಕರಾದವರು.

ವಿಶೇಷವೆಂದರೆ ಬೆಳಗಾವಿ ಜಿಲ್ಲೆಯ ಯಾವುದೇ ಶಾಸಕರು ಯಾವುದೇ ಬಣದಲ್ಲಿ ಗುರುತಿಸಿಕೊಂಡವರಲ್ಲ. ಎಲ್ಲರೂ ಪಕ್ಷಕ್ಕೆ ನಿಷ್ಠರಾಗಿರುವವರು. ಪಕ್ಷದ ನಿರ್ಣಯವನ್ನು ಒಪ್ಪುವಂತವರು. ಹಾಗಾಗಿ ಯಾರೇ ಮುಖ್ಯಮಂತ್ರಿಯಾದರೂ ಮೊದಲ ಸುತ್ತಿನಲ್ಲೇ ಮೂವರಿಗೂ ಮಂತ್ರಿಸ್ಥಾನ ಖಚಿತ ಎನ್ನುವ ಮಾತು ಕೇಳಿಬರುತ್ತಿದೆ. ಈ ಮೂವರ ಬಗ್ಗೆ ಜಿಲ್ಲೆಯ ಇನ್ನಿತರ 8 ಕಾಂಗ್ರೆಸ್ ಶಾಸಕರಿಗೂ ಭಿನ್ನಾಭಿಪ್ರಾಯ ಇಲ್ಲ. ಬೆಳಗಾವಿ ದೊಡ್ಡ ಜಿಲ್ಲೆಯಾಗಿರುವುದರಿಂದ ನಾಲ್ವರಿಗೆ ಮಂತ್ರಿ ಸ್ಥಾನ ಸಿಗಬಹುದು.

ಈ ಹಿಂದೆ ಬಿಜೆಪಿ ಸರಕಾರವಿದ್ದಾಗ ಯಡಿಯೂರಪ್ಪ ಸಂಪುಟದಲ್ಲಿ ನಾಲ್ವರು ಮಂತ್ರಿಗಳಿದ್ದರು. ಲಕ್ಷ್ಮಣ ಸವದಿ, ಶಶಿಕಲಾ ಜೊಲ್ಲೆ, ರಮೇಶ ಜಾರಕಿಹೊಳಿ ಹಾಗೂ ಶ್ರೀಮಂತ ಪಾಟೀಲ ಮಂತ್ರಿಗಳಾಗಿದ್ದರು. ನಂತರದಲ್ಲಿ ರಮೇಶ ಜಾರಕಿಹೊಳಿ, ಶ್ರೀಮಂತ ಪಾಟೀಲ ಮತ್ತು ಲಕ್ಷ್ಮಣ ಸವದಿ ಸ್ಥಾನ ಕಳೆದುಕೊಂಡರು. ಉಮೇಶ ಕತ್ತಿ ಸೇರ್ಪಡೆಯಾದರೂ ಅವರು ಅಕಾಲಿಕವಾಗಿ ನಿಧನರಾದರು.

ಈ ಬಾರಿ ಜಿಲ್ಲೆಯ ಪ್ರಬಲ ನಾಯಕರಿಗೆ ಮಂತ್ರಿಸ್ಥಾನ ಸಿಕ್ಕಿ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಒಟ್ಟಾಭಿಪ್ರಾಯ ತೆಗೆದುಕೊಳ್ಳುತ್ತಾರೆ ಎನ್ನುವ ನಿರೀಕ್ಷೆ ಇದೆ. ಇನ್ನೇನು 2 -3 ದಿನದಲ್ಲಿ ಬಗ್ಗೆ ಸ್ಪಷ್ಟ ಚಿತ್ರಣ ಹೊರಬೀಳಬಹುದು. ಜಿಲ್ಲೆಗೆ ಒಳ್ಳೆಯದಾಗಲಿ.

https://pragati.taskdun.com/bjp-worker-stabbed-to-death-in-yadagiri/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button