ಈ ಬಾರಿ ಹುಷಾರ್ – ಬೆಳಗಾವಿ BJP ನಾಯಕರ ಸಭೆಯಲ್ಲಿ ಪ್ರಹ್ಲಾದ್ ಜೋಶಿ ಎಚ್ಚರಿಕೆ, ಯಾರಿಗೆ? ಏಕೆ?
ಜಿಲ್ಲೆಯಲ್ಲಿ ಪಕ್ಷದ ನಾಯಕರು ಬೆಳೆಯುತ್ತಿದ್ದಾರೆ, ಪಕ್ಷ ದುರ್ಬಲವಾಗುತ್ತಿದೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕಳೆದ 2 ಬಾರಿಯ ಘಟನೆಗಳನ್ನು ಪಕ್ಷ ಗಂಭೀರವಾಗಿ ಗಣನೆಗೆ ತೆಗೆದುಕೊಂಡಿದೆ. ಆದರೆ ಈ ಬಾರಿ ಅದೇ ರೀತಿಯಾದರೆ ಸುಮ್ಮನಿರಲ್ಲ, ಹುಷಾರ್ – ಇದು ಶನಿವಾರ ಬೆಳಗಾವಿಗೆ ಆಗಮಿಸಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬೆಳಗಾವಿ ಜಿಲ್ಲೆಯ ಬಿಜೆಪಿ ನಾಯಕರಿಗೆ ನೀಡಿದ ಗಂಭೀರ ಎಚ್ಚರಿಕೆ.
ಶಾಸಕರು, ಮಾಜಿ ಶಾಸಕರು, ಸಂಸದರು, ಮಾಜಿ ಸಂಸದರ ಸಭೆಯಲ್ಲಿ ಅವರು ಈ ಎಚ್ಚರಿಕೆ ನೀಡಿದರು.
ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಮತ್ತು ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದಿದ್ದನ್ನು ಗಮನಿಸಿದ್ದೇವೆ, ಗಂಭೀರವಾಗಿ ಪರಿಗಣಿಸಿದ್ದೇವೆ. ಆಗ ಯಾರು ಏನೇನು ಮಾಡಿದ್ದೀರಿ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಿ. ಅದು ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಮರುಕಳಿಸಬಾರದು. ಹಾಗೊಮ್ಮೆ ಮರುಕಳಿಸಿದಲ್ಲಿ ಪಕ್ಷ ಸುಮ್ಮನೇ ಕುಳಿತುಕೊಳ್ಳಲ್ಲ ಎಂದು ಎಚ್ಚರಿಕೆ ನೀಡಿದರು.
ಲೋಕಸಭಾ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಅತ್ಯಂತ ಕಡಿಮೆ ಮತಗಳಿಂದ ಗೆಲುವು ಸಾಧಿಸಿದರೆ, ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಹೀನಾಯವಾಗಿ ಪರಾಭವಗೊಂಡಿದ್ದರು. ಇಬ್ಬರು ಸಚಿವರು, 13 ಶಾಸಕರು, ನಾಲ್ವರು ಸಂಸದರಿದ್ದೂ ಪಕ್ಷಕ್ಕೆ ಇಂತಹ ದುಸ್ತಿತಿ ಬಂದಿದೆ. ಇಂತಹ ಅಶಿಸ್ತನ್ನು ಸಹಿಸಿಕೊಳ್ಳಲು ಆಗುವುದಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಎರಡೂ ಸ್ಥಾನಗಳನ್ನು ಗೆಲ್ಲಲೇಬೇಕು ಎಂದು ಅವರು ಸೂಚಿಸಿದರು.
ಸಭೆಯಲ್ಲಿ ಮಾತನಾಡಿದ ಹಿರಿಯ ನಾಯಕರೊಬ್ಬರು, ಕಳೆದ ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಪಕ್ಷದ ನಾಯಕರು ಬೆಳೆಯುತ್ತಿದ್ದಾರೆ, ಪಕ್ಷ ದುರ್ಬಲವಾಗುತ್ತಿದೆ. ಹಿರಿಯರು ಎಲ್ಲವನ್ನೂ ಗಂಭೀರವಾಗಿ ಪರಿಗಣಿಸಿ, ಸೂಕ್ತ ಸಮಯದಲ್ಲಿ ಸೂಕ್ತವಾದ ಕ್ರಮ ಕೈಗೊಳ್ಳುತ್ತ ಬಂದಲ್ಲಿ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ನೇರವಾಗಿ ಹೇಳಿದರು.
ಹಿಂದೆ ಆಗಿದ್ದು ಆಯಿತು, ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸರಿಮಾಡಿಕೊಂಡು ಹೋಗೋಣ. ಹಿಂದಿನದನ್ನು ಕೆದಕುತ್ತ ಕುಳಿತುಕೊಳ್ಳುವುದು ಬೇಡ ಎಂದು ಮತ್ತೋರ್ವ ಮುಖಂಡರು ವಿನಂತಿಸಿದರು.
ಒಟ್ಟಾರೆ, ಬಿಜೆಪಿ ಮುಖಂಡರ ಸಭೆ ಗಂಭೀರ ಆತ್ಮಾವಲೊಕನಕ್ಕೆ ಎಡೆಮಾಡಿಕೊಟ್ಟಿತು. ಆದರೆ ನಾಯಕರ ಮಧ್ಯೆ ಇರುವ ವಯಕ್ತಿಕ ಭಿನ್ನಾಭಿಪ್ರಾಯ ನಿವಾರಿಸುವ ಪ್ರಯತ್ನ ಮಾತ್ರ ನಡೆಯಲೇ ಇಲ್ಲ.
ಬೆಳಗಾವಿ ಬಿಜೆಪಿಯಲ್ಲಿ ಭಿನ್ನಮತವಿಲ್ಲ; ಯಾರಿಗೆ ಏನು ಸೂಚನೆ ಕೊಡಬೇಕೋ ಕೊಟ್ಟಿದ್ದೇವೆ ಎಂದ ಪ್ರಹ್ಲಾದ್ ಜೋಶಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ