*ಆಗ ಗ್ಯಾರಂಟಿ ಜಾರಿ ಆಶ್ವಾಸನೆ: ಈಗ ಗ್ಯಾರಂಟಿ ರದ್ದುಪಡಿಸೋ ಬೆದರಿಕೆ*
ಕಾಂಗ್ರೆಸ್ ವಿರುದ್ಧ ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಆಕ್ರೋಶ
ಪ್ರಗತಿವಾಹಿನಿ ಸುದ್ದಿ: ಲೋಕಸಭೆ ಚುನಾವಣೆ ಸೋತರೆ ಗ್ಯಾರಂಟಿ ರದ್ದುಪಡಿಸೋ ಬೆದರಿಕೆ ಹಾಕುತ್ತಿರುವ ಕಾಂಗ್ರೆಸ್ ಜನರ ಭಾವನೆ ಜತೆ ಚೆಲ್ಲಾಟ ಆಡುತ್ತಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಹರಿ ಹಾಯ್ದಿದ್ದಾರೆ.
2023ರ ವಿಧಾನಸಭಾ ಚುನಾವಣೆ ವೇಳೆ ಗ್ಯಾರಂಟಿ ಯೋಜನೆಗಳ ಆಶ್ವಾಸನೆ ನೀಡಿ ಮತದಾರರನ್ನು ಸೆಳೆದಿದ್ದ ಕಾಂಗ್ರೆಸ್ ಈಗ ಲೋಕಸಭೆ ಚುನಾವಣೆಯಲ್ಲಿ ಮತ ನೀಡದಿದ್ದರೆ ಗ್ಯಾರಂಟಿಗಳನ್ನು ರದ್ದುಪಡಿಸುವ ಬೆದರಿಕೆವೊಡ್ಡಿ ಮತದಾರರನ್ನು ಬುಟ್ಟಿಗೆ ಹಾಕಿಕೊಳ್ಳಲು ನೋಡುತ್ತಿದೆ ಎಂದು ಟ್ವೀಟರ್ ನಲ್ಲಿ ಆರೋಪಿಸಿದ್ದಾರೆ.
ಕರ್ನಾಟಕದಲ್ಲಿ ಗ್ಯಾರಂಟಿಗಳನ್ನೇ ಮುಂದಿಟ್ಟುಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಗೆ ಇದೀಗ ಸೋಲಿನ ಭಯ ಶುರುವಾಗಿದೆ. ಹಾಗಾಗಿ ಲೋಕಸಭೆ ಚುನಾವಣೆ ಹೊತ್ತಿಗೆ ಕಾಂಗ್ರೆಸ್ ಶಾಸಕರು ಗ್ಯಾರಂಟಿ ಗಳನ್ನು ರದ್ದುಪಡಿಸುವ ಮಾತನಾಡುತ್ತಿದ್ದಾರೆ ಎಂದು ಜೋಶಿ ಟೀಕಿಸಿದ್ದಾರೆ.
ಆಶ್ವಾಸನೆ ನೀಡಿದಂತೆ ಇನ್ನೂ ಸರಿಯಾಗಿ ಗ್ಯಾರಂಟಿಗಳನ್ನು ಎಲ್ಲರಿಗೂ ಪೂರೈಸಿಯೇ ಇಲ್ಲ. ಅದಾಗಲೇ ಮತದಾರರ ಮೇಲೆ ಗ್ಯಾರಂಟಿ ರದ್ದುಪಡಿಸುವ ಹೊಸ ಬೆದರಿಕೆ ತಂತ್ರ ಹೇರುತ್ತಿದೆ. ಜನರ ಭಾವನೆಗಳ ಜತೆ ಚೆಲ್ಲಾಟ ಆಡುತ್ತಿದೆ ಎಂದು ಸಚಿವ ಜೋಶಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ನೀಡದೇ ಇದ್ದರೆ ಎಲ್ಲಾ ಗ್ಯಾರಂಟಿ ಭಾಗ್ಯಗಳನ್ನು ರದ್ದು ಮಾಡುವುದಾಗಿ ಕಾಂಗ್ರೆಸ್ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿಕೊಂಡಿರುವುದನ್ನ ಕೇಳಿದರೆ ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳಿಗೆ ಗ್ಯಾರಂಟಿಯೇ ಇಲ್ಲದಂತಾಗಿದೆ ಎಂದು ಹೇಳಿದರು.
ರಾಜ್ಯದ ಅಭಿವೃದ್ಧಿಗೆ ಕತ್ತರಿ: ರಾಜ್ಯದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಕತ್ತರಿ ಹಾಕಿದ ಕಾಂಗ್ರೆಸ್ ಇದೀಗ ತನ್ನ ಚುನಾವಣಾ ಗ್ಯಾರಂಟೀಗಳನ್ನೂ ಈಡೇರಿಸುತ್ತಿಲ್ಲ. ಖಂಡಿತವಾಗಿ ಮುಂದಿನ ಚುನಾವಣೆಯಲ್ಲಿ ಕೈ ಗೆ “ಕೈ” ಕೊಡಲಿದ್ದಾರೆ ಜನತೆ ಎಂದು ಸಚಿವ ಜೋಶಿ ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ