ಪ್ರಜ್ವಲ್ ರೇವಣ್ಣ ಭಾರತಕ್ಕೆ ಬಂದ ತಕ್ಷಣ ಅರೆಸ್ಟ್ ಆಗ್ತಾರೆ: ಗೃಹ ಸಚಿವ ಪರಮೇಶ್ವರ್
ಪ್ರಗತಿವಾಹಿನಿ ಸುದ್ದಿ: ಹಾಸನದ ಸಂಸದ ಪ್ರಜ್ವಲ್ ರೇವಣ್ಣ ವಿಡಿಯೋ ಮೂಲಕ ಇದೇ ತಿಂಗಳ 31 ರಂದು ವಿದೇಶದಿಂದ ವಾಪಸ್ ಬಂದು ಬೆಳಗ್ಗೆ 10 ಗಂಟೆಗೆ ಎಸ್‌ಐಟಿ ಮುಂದೆ ಹಾಜರಿರುತ್ತೇನೆ ಎಂದಿದ್ದಾರೆ. ಸದ್ಯ ಅವರು ಭಾರತಕ್ಕೆ ವಾಪಸ್ ಬರುತ್ತೀನಿ ಎಂದು ಹೇಳಿರೋದನ್ನು ಸ್ವಾಗತ ಮಾಡುತ್ತೇವೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.
ತೂಮಕುರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕರ್ನಾಟಕದ ಇತಿಹಾಸದಲ್ಲಿ ಇಂತಹ ಘಟನೆ ನಡೆದಿರಲಿಲ್ಲ. ಇಡೀ ಜಗತ್ತೇ ಮಾತನಾಡುವ ಸಂದರ್ಭದಲ್ಲಿ ಅವರನ್ನು ಕರೆತರುವ ಪ್ರಯತ್ನವನ್ನು ಎಲ್ಲಾ ರೀತಿ ಮಾಡಲಾಗುತ್ತಿತ್ತು. ಪ್ರಧಾನಮಂತ್ರಿಗಳಿಗೆ ಸಿಎಂ ಅವರು ಎರಡು ಬಾರಿ ಪತ್ರ ಬರೆದಿದ್ದರು. ಸಿಬಿಐಗೆ ರಿಕ್ವೆಸ್ಟ್ ಮಾಡಿಕೊಂಡಿದ್ವಿ. ಇಂಟರ್ ಪೋಲ್‌ಗೆ ರಿಕ್ವೆಸ್ಟ್ ಮಾಡಿಕೊಂಡಿದ್ವಿ. ಬ್ಲೂ ಕಾರ್ನರ್ ನೋಟಿಸ್ ಕೂಡಾ ಇಶ್ಯೂ ಮಾಡಿದ್ರು ಎಂದು ತಿಳಿಸಿದರು.
ಪ್ರಜ್ವಲ್ ಅವರ ಡಿಪ್ಲೋಮೆಟಿಕ್ ಪಾಸ್‌ಪೊರ್ಟ್ ರದ್ದು ಮಾಡಿ, ಅವರನ್ನು ಕರೆತರೋದಕ್ಕೆ ಕೇಂದ್ರ ಸರ್ಕಾರ ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ವಿ. ಪಾಸ್ ಪೊರ್ಟ್ ರದ್ದು ಪ್ರಕ್ರಿಯೆ ಪ್ರಾರಂಭ ಮಾಡಿದ್ದೀವಿ ಅಂತ ಅವರು ಹೇಳಿಕೆ ಕೊಟ್ಟಿದ್ದರು. ಈ ಮಧ್ಯೆ ಅವರು ಬರ್ತೀನಿ ಅಂತ ಹೇಳಿರೋದನ್ನು ನಾವು ಸ್ವಾಗತ ಮಾಡುತ್ತೇವೆ. ತನಿಖೆಗೆ ಸಹಕಾರ ಮಾಡುತ್ತೇನೆ ಅಂತ ಹೇಳ್ತಿರೋದನ್ನು ನಾನು ಸ್ವಾಗತಿಸುತ್ತೇನೆ. ಎಸ್ಐಟಿ ಬಳಿ ಏನೇನು ಎವಿಡೆನ್ಸ್‌ಗಳಿವೆ ಅದರ ಆಧಾರದ ಮೇಲೆ ತನಿಖೆ ಮುಂದುವರಿಯುತ್ತದೆ ಎಂದು ಹೇಳಿದರು.
ಪ್ರಜ್ವಲ್ ರೇವಣ್ಣ ಬಂದ ತಕ್ಷಣವೇ ಬಂಧನ ಮಾಡ್ತಾರಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದನ್ನು ನಾವು ಕಾದು ನೋಡಬೇಕು. ಅವರೇ ಶರಣಾಗ್ತಿನಿ ಅಂತ ಹೇಳಿದ್ದಾರೆ. ಅರೆಸ್ಟ್ ಅಂತೂ ಆಗ್ತಾರೆ. ಅವರನ್ನು ಅರೆಸ್ಟ್ ಮಾಡಲು ಈಗಾಗಲೇ ವಾರಂಟ್ ಇಶ್ಯೂ ಆಗಿದೆ. ಬ್ಲೂ ಕಾರ್ನರ್ ನೋಟಿಸ್ ಕೊಟ್ಟು, ವಾರಂಟ್ ಕೊಟ್ಟಿರೋದ್ರಿಂದ ಅರೆಸ್ಟ್ ಮಾಡಬೇಕು. ಈಗ ಅವರೇ ಶರಣಾಗ್ತಾರೆ ಅನ್ನುವಾಗ ಅದನ್ನು ಎಸ್‌ಐಟಿಯವರು ಯಾವರ ರೀತಿ ತೆಗೆದುಕೊಳ್ಳುತ್ತಾರೆ ನೋಡಬೇಕು ಎಂದರು.
ಒಂದು ದೇಶದಿಂದ ಒಬ್ಬರನ್ನು ಕರೆದುಕೊಂಡು ಬರೋದು ಅಷ್ಟು ಸುಲಭವಲ್ಲ. ಅದಕ್ಕೆ ಒಂದಿಷ್ಟು ಪ್ರೊಸೆಸ್ ಇರುತ್ತೆ. ಡಿಪ್ಲೊಮ್ಯಾಟಿಕ್ ಪಾಸ್ ಪೊರ್ಟ್ ಕೊಟ್ಟಿದ್ದು ಕೇಂದ್ರ ಸರ್ಕಾರ. ಎಂಪಿಗಳಿಗೆ ಸಾಮಾನ್ಯವಾಗಿ ಕೊಡ್ತಾರೆ. ಅದನ್ನು ಕ್ಯಾನ್ಸಲ್ ಮಾಡ್ಬೇಕು. ಆ ದೇಶಕ್ಕೆ ನಾವು ಹೋಗಿ ಅರೆಸ್ಟ್ ಮಾಡೋಕೆ ಆಗಲ್ಲ. ಇಲ್ಲೇನೋ ತುಮಕೂರು, ಚಿತ್ರದುರ್ಗದಿಂದ ಅರೆಸ್ಟ್ ಮಾಡಿ ಎಳೆದುಕೊಂಡು ಬಂದ್ರು ಅನ್ನೋ ಹಾಗೆ ಅಲ್ಲ. ಹೊರದೇಶಕ್ಕೆ ಹೋಗಿ ನಮ್ಮ ಪೊಲೀಸರು ಅರೆಸ್ಟ್ ಮಾಡೋಕೆ ಸಾಧ್ಯವಿಲ್ಲ. ಆ ದೇಶದ ಲೀಗಲ್ ಪ್ರೊಸೆಸ್ ನಂತೆ ಅವರಿಗೆ ನಾವು ಮನವಿ ಮಾಡಬೇಕಾಗುತ್ತದೆ. ಇದನ್ನು ನಾವು ಕೇಂದ್ರ ಸರ್ಕಾರದ ಮೂಲಕ ಮಾಡಿದ್ದೇವೆ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ