ಪ್ರಗತಿವಾಹಿನಿ ಸುದ್ದಿ, ಕೊಚ್ಚಿ: ಕೇರಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ಕೊಚ್ಚಿಯಲ್ಲಿ ರೋಡ್ ಶೋ ನಡೆಸುವ ವೇಳೆ ಪುಷ್ಪ ವೃಷ್ಟಿಯ ನಡುವೆಯೇ ಮೊಬೈಲ್ ಫೋನ್ ಒಂದು ತೂರಿಬಂದು ಭದ್ರತಾ ವ್ಯವಸ್ಥೆಯನ್ನೇ ಪ್ರಶ್ನಾರ್ಹವಾಗಿಸಿದೆ.
ರೋಡ್ ಶೋನಲ್ಲಿ ಪ್ರಧಾನಿ ಮೋದಿ ಕಾಲ್ನಡಿಗೆಯಲ್ಲೇ ಬರುತ್ತಿದ್ದ ವೇಳೆ ಜನ ರಸ್ತೆಯ ಇಕ್ಕೆಲಗಳಲ್ಲಿ ನಿಂತು ವ್ಯಾಪಕ ಪ್ರಮಾಣದಲ್ಲಿ ಪುಷ್ಪ ವೃಷ್ಟಿ ಆರಂಭಿಸಿದ್ದರು. ಈ ವೇಳೆ ಹಠಾತ್ತಾಗಿ ಹೂಮಳೆಯ ಮಧ್ಯೆ ಮೊಬೈಲ್ ಫೋನ್ ಒಂದು ಮೋದಿಯವರತ್ತ ತೂರಿ ಬಂದಿದೆ.
ಅದೇನಾದರೂ ಪ್ರಧಾನಿಯವರಿಗೆ ತಗುಲಿದ್ದರೆ ದೊಡ್ಡ ವಿವಾದವೇ ಜನ್ಮ ತಾಳುತ್ತಿತ್ತು. ಆದರೆ ಅಲ್ಲಿದ್ದ ಭದ್ರತಾ ಅಧಿಕಾರಿಯೊಬ್ಬರ ಕಾರ್ಯಪ್ರಜ್ಞೆ ಇದಕ್ಕೆಲ್ಲ ಅವಕಾಶ ನೀಡದೆ ಶ್ಲಾಘನೆಗೆ ಒಳಗಾಗಿದೆ.
ವ್ಯಾಪಕ ಪ್ರಮಾಣದಲ್ಲಿ ಬಂದೆರಗುತ್ತಿದ್ದ ಹೂವುಗಳ ಮಧ್ಯೆಯೂ ಕ್ಷಣಾರ್ಧದಲ್ಲಿ ಮೊಬೈಲ್ ಫೋನ್ ಗಮನಿಸಿದ ಭದ್ರತಾ ಅಧಿಕಾರಿ ಅದನ್ನು ಕೈಯಿಂದಲೇ ತಡೆದು ಬೀಳಿಸಿ ಕೊನೆಗೆ ಕಾಲಿಂದ ತೂರಿಬಿಟ್ಟಿದ್ದಾರೆ. ಈ ಬಗ್ಗೆ ತಕ್ಷಣದಲ್ಲಿ ವಿಚಾರಣೆ ಆರಂಭಿಸಿದಾಗ ಇದು ಮೋದಿಯವರತ್ತ ಹೂ ಎಸೆಯುವ ವೇಳೆ ಅಚಾತುರ್ಯದಿಂದ ವ್ಯಕ್ತಿಯೊಬ್ಬರ ಕೈಯ್ಯಿಂದ ಜಾರಿ ಬಂದ ಮೊಬೈಲ್ ಫೋನ್ ಎಂದು ತಿಳಿದುಬಂದಿದೆ.
ಇಷ್ಟು ತಿಳಿದ ಬಳಿಕ ಇನ್ನೊಬ್ಬ ಭದ್ರತಾ ಅಧಿಕಾರಿ ಅದನ್ನು ಸಂಬಂಧಿಸಿದವರಿಗೆ ವಾಪಸ್ ನೀಡಿದ್ದಾಗಿ ತಿಳಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ