ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಭಿವೃದ್ಧಿಯಲ್ಲಿ ಜನರ ಪಾಲ್ಗೊಳ್ಳುವಿಕೆ ಅತ್ಯಗತ್ಯವಾಗಿದ್ದು, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಜನರನ್ನು ತೊಡಗಿಸಿಕೊಂಡೇ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ವಿಕಲ ಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಪಂತ ಬಾಳೇಕುಂದ್ರಿಯ ವಾಮನ ನಿತ್ಯ ಮಂಗಲ ಕಾರ್ಯಾಲಯದಲ್ಲಿ ಭಾನುವಾರ ಸಂಜೆ ಸುಳೇಭಾವಿ ಜಿಲ್ಲಾ ಪಂಚಾಯತ್ ವ್ಯಾಪಿಯಲ್ಲಿ ಬರುವ ಎಲ್ಲ ಗ್ರಾಮಗಳ ಕಾರ್ಯಕರ್ತರ ಹಾಗೂ ಮತದಾರರ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ನಾನು ಶಾಸಕಿಯಾದಾಗಿನಿಂದಲೂ ಜನರೊಂದಿಗೆ ಚರ್ಚಿಸಿಯೇ ಯೋಜನೆಗಳನ್ನು ಜಾರಿಗೊಳಿಸಿದ್ದೇನೆ. ಜನರ ಸಹಕಾರ ಇದ್ದಿದ್ದರಿಂದಲೇ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕೆ ದೊಡ್ಡ ಯೋಜನೆಗಳನ್ನು ತರುವ ಉದ್ದೇಶವಿದ್ದು, ಇದರಲ್ಲಿ ಸಂಪೂರ್ಣವಾಗಿ ಜನರು ಪಾಲ್ಗೊಳ್ಳುವಂತೆ ಮಾಡಲಾಗುವುದು. ನಾವು- ನೀವೆಲ್ಲ ಸೇರಿ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ದಿಪಡಿಸೋಣ ಎಂದು ಅವರು ಹೇಳಿದರು.
ಕಳೆದ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಮತ ನೀಡಿ ನನ್ನನ್ನು ಆಯ್ಕೆ ಮಾಡಿದ್ದೀರಿ. ಇಷ್ಟೊಂದು ಪ್ರೀತಿ, ವಿಶ್ವಾಸವನ್ನು ನಾನು ಎಂದೂ ಕಂಡಿರಲಿಲ್ಲ. ಯಾವುದೇ ಜನಪ್ರತಿನಿಧಿ ಬಯಸುವುದು ಜನರ ಪ್ರೀತಿಯನ್ನು. ಆ ವಿಷಯದಲ್ಲಿ ನಾನು ಧನ್ಯ. ನಿಮ್ಮಂತಹ ಮತದಾರರನ್ನು ಪಡೆದಿರುವುದು ನನ್ನ ಪುಣ್ಯ ಎಂದು ಹೆಬ್ಬಾಳಕರ್ ಹೇಳಿದರು.
ಸ್ಥಳೀಯ ಮುಖಂಡರು, ಕಾರ್ಯಕರ್ತರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಸ್ಥಳೀಯರು ಸನ್ಮಾನಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ