Belagavi NewsBelgaum NewsKannada NewsKarnataka NewsPolitics

*ಖಾಸಗಿ ಮಾದರಿಯಲ್ಲಿ ಬಡಾವಣೆ ನಿರ್ಮಾಣ ಯೋಜನೆ: ಸಚಿವ ಸತೀಶ್ ಜಾರಕಿಹೊಳಿ* 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯದ ಪರಿಶಿಷ್ಟ ಜಾತಿ/ಪಂಗಡಗಳ ಜನರಿಗೆ ಖಾಸಗಿ ಬಡಾವಣೆ ಮಾದರಿಯಲ್ಲಿ ಸಕಲ ಮೂಲಸೌಕರ್ಯ ಹೊಂದಿರುವ ಬಡಾವಣೆ ಅಭಿವೃದ್ಧಿಪಡಿಸಿ ನೀವೇಶನಗಳನ್ನು ಹಂಚಿಕೆ ಮಾಡಲು “ಬುದ್ಧ, ಬಸವ, ಅಂಬೇಡ್ಕರ್ ನಿವೇಶನ ಹಂಚಿಕೆ” ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ಡಾ.ಬಾಬಾಸಾಹೇಬ್ ಜನ್ಮದಿನಾಚರಣೆ ಅಂಗವಾಗಿ ನಗರದ ಡಾ.ಅಂಬೇಡ್ಕರ್ ಉದ್ಯಾನದಲ್ಲಿ ಡಾ.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ದೇಶದಲ್ಲೇ ಮೊದಲ ಪ್ರಯೋಗ

ಸುಮಾರು 20 ವರ್ಷಗಳಿಂದ ಎಸ್.ಸಿ/ಎಸ್. ಟಿ ಸಮುದಾಯದವರಿಗೆ ನಿವೇಶನ ಮಂಜೂರು ಮಾಡಲಾಗುತ್ತಿದೆ. ಆದರೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುತ್ತಿರಲಿಲ್ಲ. ಹಾಗಾಗಿ ರಸ್ತೆ, ನೀರು, ವಿದ್ಯುತ್ ಸಂಪರ್ಕ ಸೇರಿದಂತೆ ಸಕಲ ಮೂಲಸೌಕರ್ಯ ಹೊಂದಿರುವ ಬಡಾವಣೆಗಳನ್ನು ಲೋಕೋಪಯೋಗಿ ಇಲಾಖೆಯಿಂದ ಅಭಿವೃದ್ಧಿಪಡಿಸುವಂತಹ ಯೋಜನೆಯನ್ನು ದೇಶದಲ್ಲಿ ಪ್ರಪ್ರಥಮ ಬಾರಿಗೆ ಕರ್ನಾಟಕ ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಸಚಿವ ಜಾರಕಿಹೊಳಿ ತಿಳಿಸಿದರು.

Home add -Advt

ಎಸ್.ಸಿ.ಪಿ/ಟಿ.ಎಸ್.ಪಿ ಯೋಜನೆಯಿಂದ ಸುಮಾರು 20 ಕೋಟಿ ಅನುದಾನ ಬಳಕೆ ಮಾಡಿಕೊಂಡು “ಬುದ್ಧ ಬಸವ ಅಂಬೇಡ್ಕರ್ ನಿವೇಶನ ಹಂಚಿಕೆ” ಯೋಜನೆ ಖಾಸಗಿ ಮಾದರಿಯಲ್ಲಿ ಬಡಾವಣೆ ನಿರ್ಮಾಣ ಮಾಡಲಾಗುವುದು.

ಫಲಾನುಭವಿಗಳ ಆಯ್ಕೆ ಮತ್ತು ನಿವೇಶನ ಹಂಚಿಕೆಯು ಸದ್ಯಕ್ಕೆ ಜಾರಿಯಲ್ಲಿರುವ ನಿಯಮಗಳ ಪ್ರಕಾರ ಆಯಾ ಗ್ರಾಮ ಪಂಚಾಯತಿ ಮತ್ತು ಸ್ಥಳೀಯ ಸಂಸ್ಥೆಗಳು ನಡೆಸಲಿದ್ದು, ಲೋಕೋಪಯೋಗಿ ಇಲಾಖೆಯು ನಿಗದಿಪಡಿಸಿದ ಜಾಗದಲ್ಲಿ ಕೇವಲ ಬಡಾವಣೆಗಳನ್ನು ಅಭಿವೃದ್ಧಿಪಡಿಸಿ ಸಂಬಂಧಿಸಿದ ಪಂಚಾಯತಿ ಅಥವಾ ನಗರ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸಲಿದೆ.

ಫಲಾನುಭವಿಗಳ ಆಯ್ಕೆ ಅಥವಾ ಹಂಚಿಕೆಯಲ್ಲಿ ಲೋಕೋಪಯೋಗಿ ಇಲಾಖೆಯ ಪಾತ್ರವಿರುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಒಂದು ಸಾವಿರ ಎಕರೆ ಅಭಿವೃದ್ಧಿ

ಪ್ರಾಯೋಗಿಕವಾಗಿ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದು, ಸಾಧಕ-ಬಾಧಕಗಳನ್ನು ಪರಿಶೀಲಿಸಿ ರಾಜ್ಯದಾದ್ಯಂತ ಒಂದು ಸಾವುರ ಎಕರೆ ಜಾಗೆಯಲ್ಲಿ ಬಡಾವಣೆ ಅಭಿವೃದ್ಧಿಪಡಿಸಲಾಗುವುದು ಎಂದು ಸಚುವ ಸತೀಶ್ ಜಾರಕಿಹೊಳಿ ಹೇಳಿದರು.

ಸದ್ಯಕ್ಕೆ ಮೊದಲ ಹಂತದಲ್ಲಿ ಸುಮಾರು 42 ಎಕರೆಯಲ್ಲಿ ಮೈಸೂರು, ಬೆಳಗಾವಿ ಜಿಲ್ಲೆಯ ಪಾಶ್ಚಾಪುರ ಗ್ರಾಮ ಪಂಚಾಯಿತಿಯ ಗುಮಚನಮರಡಿ; ಹುಕ್ಕೇರಿ ತಾಲೂಕಿನ ಹರಗಾಪುರ;  ಮೂಡಲಗಿ ತಾಲೂಕಿನ ಅರಬಾವಿ, ಸವದತ್ತಿ; ಬಳ್ಳಾರಿ ಜಿಲ್ಲೆಯ ಕುರುಗೋಡು ಹಾಗೂ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹುಳಿಮಾವು ಗ್ರಾಮ ಪಂಚಾಯತಿ ವ್ಯಾಪ್ತಿಯ ಬೊಕ್ಕಹಳ್ಳಿಯಲ್ಲಿ ಬಡಾವಣೆ ನಿರ್ಮಾಣದ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. 

ಬಡಾವಣೆ ನಿರ್ಮಾಣದ ಯೋಜನಾ ಪ್ರದೇಶದ ವಿಸ್ತೀರ್ಣಕ್ಕೆ ಅನುಗುಣವಾಗಿ ನಿವೇಶನ, ರಸ್ತೆ, ಚರಂಡಿ, ಓವರ್ ಹೆಡ್ ಟ್ಯಾಂಕ್, ಬೀದಿ ದೀಪ, ಕುಡಿಯುವ ನೀರು ಸರಬರಾಜು, ಪಾರ್ಕಿಂಗ್ ಗಳಿಗೆ ನಕ್ಷೆಯನ್ನು ತಯಾರಿಸಿಕೊಂಡು ನಿವೇಶನ ರಚನೆಗೆ ಅವಶ್ಯವಿರುವ ಸಕ್ಷಮ ಪ್ರಾಧಿಕಾರಗಳಿಂದ ಅನುಮೋದನೆ ಪಡೆದುಕೊಳ್ಳುಲಾಗುವುದು. 

ಸದ್ಯ ಬಡಾವಣೆ ನಿರ್ಮಾಣ ಯೋಜನೆ ಯಶಸ್ವಿಗೊಂಡ ಬಳಿಕ ರಾಜ್ಯದಲ್ಲಿ ವಿವಿಧೆಡೆ ಅಂದಾಜು ಸಾವಿರ ಎಕರೆ ವಿಸ್ತೀರ್ಣದಲ್ಲಿ ಬಡಾವಣೆ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು. ಸರ್ಕಾರ ಈಗಾಗಲೇ ನಿವೇಶನಗಳನ್ನು ನೀಡಿದ್ದು, ಎರಡನೇ ಹಂತದಲ್ಲಿ ಅಗತ್ಯಕ್ಕೆ ತಕ್ಕಂತೆ ಖಾಸಗಿ ಜಮೀನು ಖರೀದಿಸಿ ಬಡಾವಣೆ ನಿರ್ಮಾಣ ಮಾಡಲಾಗುವುದು.

ನಗರಸಭೆ, ಪಟ್ಟಣ ಪಂಚಾಯತಿ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಯೋಜನೆ ಅನುಷ್ಠಾನಕ್ಕೆ ಕ್ರಮ ವಹಿಸಲಾಗಿದೆ. ಸದ್ಯದಲ್ಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಸಚಿವ ಜಾರಕಿಹೊಳಿ‌ ವಿವರಿಸಿದರು.

ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Related Articles

Back to top button