*ನಕಲಿ ದಾಖಲೆ ಸೃಷ್ಟಿಸಿ ರಾಣಿ ಚನ್ನಮ್ಮ ವಿವಿ ಕುಲಪತಿಯಾಗಿರುವ ಆರೋಪ: ತ್ಯಾಗರಾಜ್ ವಿರುದ್ಧ ಪ್ರತಿಭಟನೆ*

ಪ್ರಗತಿವಾಹಿನಿ ಸುದ್ದಿ: ನಕಲಿ ದಾಖಲೆ ಸೃಷ್ಟಿಸಿ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಕುಲಪತಿ ಹುದ್ದೆ ಅಲಂಕರಿಸಿರುವ ಪ್ರೊ.ಸಿ.ಎಂ.ತ್ಯಾಗರಾಜ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದಲಿತ ವಿದ್ಯಾರ್ಥಿ ಪರಿಷತ್ ಪ್ರತಿಭಟನೆ ನಡೆಸಿತು.
ವಿಜಯಪುರದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಡಾ.ಫ.ಗು ಹಳಕಟ್ಟಿ ಸ್ನಾತಕೋತ್ತರ ಕೇಂದ್ರಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ವಿವಿ ಕುಲಸಚಿವ ಹಾಗೂ ಸಿಂಡಿಕೇಟ್ ಸದಸ್ಯರಿಗೆ ಪ್ರೊ.ತ್ಯಾಗರಾಜ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ದವಿಪ ರಾಜ್ಯಾಧ್ಯಕ್ಷ ಶ್ರೀನಾಥ್ ಪೂಜಾರಿ, ಪ್ರೊ.ಸಿ.ಎಂ.ತ್ಯಾಗರಾಜ್ ರಾಣಿ ಚನ್ನಮ್ಮ ವಿವಿ ಪ್ರಾಧ್ಯಾಪಕರಾಗಿ ನೇಮಕಗೊಳ್ಳುವ ಮುನ್ನ 2007ರಲ್ಲಿ ತಮ್ಮ ಉಪನ್ಯಾಸಕ ಹುದ್ದೆಗೆ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಸರ್ಕಾರ ಕೂಡ ಇದನ್ನು ಒಪ್ಪಿತ್ತು. ಆದಾಗ್ಯೂ ಅವರನ್ನು ಮತ್ತೆ ರಾಣಿ ಚನ್ನಮ್ಮ ವಿವಿಯಲ್ಲಿ ಪ್ರಾಧ್ಯಾಪಕರಾಗಿ ಆಯ್ಕೆ ಮಾಡಿರುವುದು ತಪ್ಪು. ಈಗಾಗಲೇ ಕುಲಪತಿಗಳ ವಿರುದ್ಧ ಹಲವು ಕ್ರಿಮಿನಲ್ ಕೇಸ್ ಗಳಿವೆ. ವಿಶ್ವವಿದ್ಯಾಲಯಕ್ಕೆ ಪ್ರಾಧ್ಯಾಪಕರಾಗಲು ಪ್ರೊ.ತ್ಯಾಗರಾಜ್ ಅವರು ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಸರ್ಕಾರದ ಕಣ್ಣಿಗೆ ಮಣ್ಣೆರಚಿ ಕುಲಪತಿ ಹುದ್ದೆ ಪಡೆದಿದ್ದಾರೆ. ಇವರ ವಿರುದ್ಧ ಸಿಂಡಿಕೇಟ್ ಸಭೆ ನಿರ್ಣಯ ಕೈಗೊಂಡು ಕೂಡಲೇ ಅಮಾನತು ಮಾಡುವಂತೆ ಸರ್ಕಾರಕ್ಕೆ ಹಾಗೂ ರಾಜ್ಯಪಾಲರಿಗೆ ಆಗ್ರಹಿಸಬೇಕು ಎಂದು ಒತ್ತಾಯಿಸಿದರು.