ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಕ್ಕಳಲ್ಲಿ ಧನಾತ್ಮಕ ಕನಸುಗಳನ್ನು ಬಿತ್ತಬೇಕು. ಅವರಲ್ಲಿ ಸ್ಪೂರ್ತಿ ತುಂಬಿದಾಗ ಭಾಗವಹಿಸುವಿಕೆ ಹೆಚ್ಚಾಗಿ ಒಳ್ಳೆಯ ನಿರ್ಧಾರ ತೆಗೆದುಕೊಂಡು ಯಶಸ್ಸು ಸಾಧಿಸಲು ಅನುಕೂಲವಾಗುತ್ತದೆ ಈ ನಿಟ್ಟಿನಲ್ಲಿ ಶಿಕ್ಷಕ ಸಮುದಾಯ ಜಾಗೃತರಾಗಬೇಕು ಎಂದು ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದರು.
ಶನಿವಾರ ನಗರದ ಕೆಎಲ್ಇ ಸಂಸ್ಥೆಯ ಜಿ.ಎ.ಸಂಯುಕ್ತ ಪಪೂ ಮಹಾವಿದ್ಯಾಲಯದ ಪ್ರೊ. ಶಿ.ಶಿ. ಬಸವನಾಳ ಸಭಾಂಗಣದಲ್ಲಿ ಪ್ರೊ. ಶಿ.ಶಿ.ಬಸವನಾಳರ 127ನೇ ಜಯಂತಿ ಉತ್ಸವ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ಉತ್ತೇಜ ನೀಡಿದರೆ ಸಾಧನೆ ಮಾಡಲು ಸಹಕಾರವಾಗುತ್ತದೆ. ವಿದ್ಯಾರ್ಥಿ ಎಷ್ಟೆ ನಿರ್ಲಕ್ಷ್ಯ ಮಾಡಿದರು. ಅವರಿಗೆ ಬುದ್ದಿವಾದ ಹೇಳಿ ಬದಲಾವಣೆ ಮಾಡುವ ಜವಾಬ್ದಾರಿ ಶಿಕ್ಷಕರದ್ದು, ತಪ್ಪು ಮಾಡುವುದು ಸಹಜ. ಅವನಿಗೆ ತಿಳಿ ಹೇಳಿದ ಬಳಿ ಮುಂದೆ ಸಾಧನೆ ಮಾಡುವ ಛಲ ಹೊಂದುತ್ತಾರೆ ಎಂದು ಹೇಳಿದರು.
ಇದೇ ವೇಳೆ ತಮ್ಮ ಶಾಲಾ ಮತ್ತು ಕಾಲೇಜು ದಿನಗಳನ್ನು ಮೆಲುಕು ಹಾಕಿ ಮಾತನಾಡುತ್ತಾ
ಮಣ್ಣಿನ ಆವರಣದಲ್ಲಿ ಆಟವಾಡುವಾಗ ಎಲ್ಲಿಲ್ಲದ ಉತ್ಸಾಹ ಬರುತ್ತಿತ್ತು. ಸದ್ಯ ಕಾಂಕ್ರೀಟ್ ಆಗಿರುವುದರಿಂದ ವಿದ್ಯಾರ್ಥಿಗಳು ಹೇಗೆ ಆಡುತ್ತಾರೋ ಎಂದ ಅವರು, ಕೆಎಲ್ಇ ಸಂಸ್ಥೆ ಹೆಮ್ಮರವಾಗಿ ಬೆಳೆದಿದೆ. ಕೆಎಲ್ಇ ಆಸ್ಪತ್ರೆ ಆರೋಗ್ಯ ಸೇವೆ ನೀಡುತ್ತಿರುವುದು ಶ್ಲಾಘನೀಯ ಎಂದರು.
ಕೆಎಲ್ಇ ಸಂಸ್ಥೆ ಶಿಕ್ಷಣ, ಕ್ರೀಡೆ, ವೈದ್ಯಕೀಯ ಕ್ಷೇತ್ರದಲ್ಲಿ ತನ್ನದೆಯಾದ ಛಾಪು ಮೂಡಿಸಿದೆ ಎಂದರೆ ಸಪ್ತ ಋಷಿಗಳ ಪರಿಶ್ರಮವೇ ಕಾರಣ. ಅವರು ಸಂಸಾರಿಯಾಗಿದ್ದರು. ಸಂನ್ಯಾಸಿಯಾಗಿ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಅಪಾರ ಪ್ರಮಾಣದಲ್ಲಿ ಯುವಕರಿಗೆ ಉದ್ಯೋಗ ನೀಡಿದ್ದು ಹೆಮ್ಮೆಯ ಸಂಗತಿ ಎಂದರು.
ಕೋವಿಡ್ ವಿಷಯವಾಗಿ ಮಾತನಾಡಿ,
ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿನ ಪ್ರಮಾಣ ಕಡಿಮೆಯಾಗಿದೆ. ಆದರೆ ಸಾರ್ವಜನಿಕರು ಮೈ ಮರೆಯುವ ಹಾಗಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಹೇಳಿದರು.
ಕೋವಿಡ್-19 ಸಂದರ್ಭದಲ್ಲಿ ಎಲ್ಲ ಇಲಾಖೆಯವರು ಸಾಕಷ್ಟು ಪರಿಶ್ರಮ ಪಟ್ಟರು. ನೂರು ಜನರನ್ನು ತಪಾಸಣೆ ಮಾಡಿದರೆ 30 ಜನರಿಗೆ ಪಾಸಿಟಿವ್ ಪ್ರಕರಣ ಬರುತ್ತಿದ್ದವು. ಅದನ್ನು ಎಲ್ಲ ಇಲಾಖೆಯ ಸಹಕಾರದಿಂದ ಸಾರ್ವಜನಿಕರಿಗೆ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಬಳಕೆಯ ಬಗ್ಗೆ ಅರಿವು ಮೂಡಿಸಿದ ಪರಿಣಾಮ ಜಿಲ್ಲೆಯಲ್ಲಿ ಸದ್ಯ ಕೋವಿಡ್ -19 ಕೇವಲ 2% ಮಾತ್ರ ಇದೆ ಎಂದರು.
ಕೋವಿಡ್ -19 ಸೋಂಕು ತಗಲಿದರೆ ಯಾರು ಮೃತಪಡುವುದಿಲ್ಲ. ಸಾಮಾಜಿಕ ಅಂತರ, ಸ್ಯಾನಿಟೈಸರ್ ಹಾಗೂ ಮುಖಕಕ್ಕೆ ಮಾಸ್ಕ್ ಧರಿಸಿಕೊಂಡು ಕೊರೋನಾ ವಿರುದ್ದ ಹೋರಾಡಬೇಕಿದೆ ಎಂದು ಕಿವಿಮಾತು ಹೇಳಿದರು.
ಕೋವಿಡ್ -19 ಕಡಿಮೆಯಾಗಿದೆ ಎಂದು ನಿರ್ಲಕ್ಷ್ಯ ವಹಿಸುವುದು ಬೇಡ. ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಲಾಕ್ ಡೌನ್ ನಿಂದ ಶಾಲಾ ಕಾಲೇಜು ಬಂದ್ ಆಗಿದ್ದವು.ಸರಕಾರ ಶಾಲೆಯನ್ನು ಪ್ರಾರಂಭಿಸಲು ಚಿಂತನೆ ನಡೆಸಿದ್ದು, ಈ ಕುರಿತು ಸರಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ ಎಂದರು.
ಸಾಹಿತಿ ಬಿ.ಎಸ್.ಗವಿಮಠ ಮಾತನಾಡಿ, ಶಿ.ಶಿ.ಬಸವನಾಳರು ಜಿ.ಎ.ಹೈಸ್ಕೂಲ್ ನಲ್ಲಿ 1916-1922 ರವರೆಗೆ ಶಿಕ್ಷಕರಾಗಿದ್ದರು. ಆಗ ಬೆಳಗಾವಿ ಮುಂಬೈ ಪ್ರಾಂತದಲ್ಲಿತ್ತು. ಬ್ರಿಟಿಷ್ ರು ಆಡಳಿತ ವಹಿಸಿಕೊಂಡ ಬಳಿಕ ಬ್ರಿಟಿಷ್ ರು ವಶಪಡಿಸಿಕೊಂಡ ಬಳಿಕ ಬೆಳಗಾವಿ ಬಾಂಬೆ ಪ್ರಾಂತಕ್ಕೆ ಹೋಗಿತ್ತು ಎಂದು ನೆನೆಪಿಸಿಕೊಂಡರು.
ವೀರಶೈವರಲ್ಲಿ ಎಂ.ಎ.ಪಾಸಾದ ಮೊದಲಿಗರು ಪ್ರೋ.ಸಾಕಳೆ ಹಾಗೂ ಬಸವನಾಳರು. 1917ರಲ್ಲಿ ದಾವಣಗೆರೆಯಲ್ಲಿ ವೀರಶೈವದವರು ಆನೆಯ ಮೇಲೆ ಮೆರವಣಿಗೆ ಮಾಡಿಸಿದರು. ಆಗಲೇ ಅವರು ಬೆಳಗಾವಿಯಲ್ಲಿ ಕೆಎಲ್ಇ ಸಂಸ್ಥೆ ಪ್ರಾರಂಭಿಸಬೇಕೆಂದು ನಿರ್ಧಾರ ಮಾಡಿದರು ಎಂದು ಹೇಳಿದರು.
ಕೆ.ಎಲ್.ಇ. ಆಜೀವ ಸದಸ್ಯ ಮಹಾದೇವ ಬಳಿಗಾರ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಇದೇ ವೇಳೆ ಜನಜೀವಾಳದ ಬಸವನಾಳರ ವಿಶೇಷ ಸಂಚಿಕೆ ಬಿಡುಗಡೆ ಮಾಡಲಾಯಿತು.
ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಪ್ರಾಚಾರ್ಯರಾದ ಆರ್.ಎಸ್.ಪಾಟೀಲ ಹಾಜರಿದ್ದರು.
ಎ.ಆರ್.ಪಾಟೀಲ ಪ್ರಾರ್ಥಿಸಿದರು. ಡಾ. ಮಹೇಶ ಗುರನಗೌಡರ ನಿರೂಪಿಸಿದರು. ಪ್ರಾಚಾರ್ಯ
ಎಸ್.ಎಸ್.ಪುರಾಣಿಕಮಠ ವಂದಿಸಿದರು. ಉಪಪ್ರಾಚಾರ್ಯ ಸಿದ್ದರಾಮ ಗದಗ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ