Kannada NewsKarnataka NewsLatest

*ಕಚೇರಿಯಲ್ಲೇ ಕುಳಿತರೆ ಸಮಸ್ಯೆ ಬಗೆಹರಿಯಲ್ಲ: ಎಸ್ಕಾಂ MD ಗಳಿಗೆ ಹೊಣೆ ಮಾಡಿ: ಸಿಎಂ ಖಡಕ್ ಸೂಚನೆ*

ಆಕಸ್ಮಿಕ‌ ಸಂದರ್ಭಕ್ಕೆ ಅಗತ್ಯವಾದ ಯೋಜನೆ, ಸಿದ್ದತೆ ಏಕೆ ಮಾಡಿಕೊಂಡಿಲ್ಲ? ಅಧಿಕಾರಿಗಳಿಗೆ ಪ್ರಶ್ನೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರೈತರಿಗೆ ವಿದ್ಯುತ್ ಕೊರತೆ ಆಗದಂತೆ ಆಕಸ್ಮಿಕ‌ ಸಂದರ್ಭಕ್ಕೆ ಅಗತ್ಯವಾದ ಯೋಜನೆ/ ಸಿದ್ಧತೆ ಏಕೆ ಮಾಡಿಕೊಂಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂಧನ ಇಲಾಖೆ ಅಧಿಕಾರಿಗಳನ್ನು ಖಾರವಾಗಿ ಪ್ರಶ್ನಿಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಇಂಧನ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸುವ ವೇಳೆಯಲ್ಲಿ ಹಲವು ಜಿಲ್ಲೆಗಳಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗಳನ್ನು ಪ್ರಸ್ತಾಪಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಇರುವ ವಿದ್ಯುತ್ ಅನ್ನು ವೈಜ್ಞಾನಿಕವಾಗಿ ಬೇರೆ ಬೇರೆ ಬ್ಯಾಚ್ ಗಳಲ್ಲಿ ಸರಬರಾಜು ಮಾಡಲು ಕ್ರಮ ವಹಿಸಬೇಕು. ಮೊದಲೇ ಹೀಗೆ ಮಾಡಿದ್ದರೆ ವಿದ್ಯುತ್ ಕೊರತೆಯ ನಡುವೆಯೂ ರೈತರಿಗೆ ಸಮಸ್ಯೆ ಆಗದಂತೆ ನಿರ್ವಹಿಸಬಹುದಿತ್ತು. ಕಚೇರಿಯಲ್ಲೇ ಕುಳಿತರೆ ಸಮಸ್ಯೆ ಬಗೆಹರಿಯುವುದಿಲ್ಲ. ಚೀಫ್ ಎಂಜಿನಿಯರ್ ಗಳು ಫೀಲ್ಡ್ ಗೆ ಹೋಗಬೇಕು. ಪರಿಸ್ಥಿತಿಯನ್ನು ರೈತರಿಗೆ ಮನವರಿಕೆ ಮಾಡಿಸಿ ಅವರ ಸಮಸ್ಯೆಗಳನ್ನು ಆಲಿಸಬೇಕು ಎಂದು ಸ್ಪಷ್ಟ ಸೂಚನೆ ನೀಡಿದರು.

Home add -Advt

ಹಿಂದಿನ ಸರ್ಕಾರದಲ್ಲಿ ಉತ್ತಮವಾದ ಅಗತ್ಯ ಮಳೆ ಆಗಿದ್ದರೂ ವಿದ್ಯುತ್ ಉತ್ಪಾದನೆ ಮಾಡಲಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಮಳೆ ಕೊರತೆ ಆಗಿ, ಬರಗಾಲ ಬಂದಿದೆ. ಇದನ್ನು ರೈತರಿಗೆ ಮನವರಿಕೆ ಮಾಡಿಸಬೇಕು. ರೈತರಿಗೆ ಯಾವ ವೇಳೆ ಎಷ್ಟು ವಿದ್ಯುತ್ ಅಗತ್ಯವಿದೆ ಎನ್ನುವುದನ್ನು ಸರಿಯಾಗಿ ಅರ್ಥಮಾಡಿಕೊಂಡು ಇರುವ ವಿದ್ಯುತ್ ಅನ್ನೇ ಅವರಿಗೆ ಅಗತ್ಯ ವೇಳೆಯಲ್ಲಿ ಸರಬರಾಜು ಮಾಡಬೇಕು ಎಂದು ಸೂಚಿಸಿದರು.

ವಿದ್ಯುತ್ ಕಳ್ಳತನ ಮತ್ತು ವಿದ್ಯುತ್ ಸೋರಿಕೆ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ? ವಿಚಕ್ಷಣಾ ದಳದಲ್ಲಿ ಎಷ್ಟು SP ಗಳು ಇದ್ದೀರಿ ? ಏನು ಮಾಡುತ್ತಿದ್ದೀರಿ? ಇವರು ಎಷ್ಟು ವಿದ್ಯುತ್ ಕಳ್ಳತನ ಪತ್ತೆ ಹಚ್ಚಿದ್ದಾರೆ ಎನ್ನುವುದನ್ನು ನಿಗಾ ವಹಿಸಿ ಕ್ರಿಯಾಶೀಲವಾಗಿ ಕೆಲಸ ಮಾಡಲು ಸೂಚನೆ ನೀಡಿ ಎನ್ನುವ ನಿರ್ದೇಶನವನ್ನು ಮುಖ್ಯಮಂತ್ರಿಗಳು ನೀಡಿದರು.

ಸಭೆಯ ಮುಖ್ಯಾಂಶಗಳು:

  1. ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಿದ್ಯುತ್‌ ಬೇಡಿಕೆ ಗಣನೀಯವಾಗಿ ಹೆಚ್ಚಿರುವುದರಿಂದ ರೈತರಿಗೆ ಪ್ರತಿದಿನ ಮೂರು ಪಾಳಿಗಳಲ್ಲಿ ನಿರಂತರ ಐದು ಗಂಟೆಗಳ ಕಾಲ ವಿದ್ಯುತ್‌ ಪೂರೈಕೆ ಮಾಡುವಂತೆ ಹಾಗೂ ಲೋಡ್‌ ಶೆಡ್ಡಿಂಗ್‌ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಸ್ಕಾಂಗಳ ಎಂ.ಡಿ.ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
  2. ಕೃಷಿ ಕ್ಷೇತ್ರದಲ್ಲಿ ವಿದ್ಯುತ್‌ಗೆ ಬೇಡಿಕೆ ಹೆಚ್ಚಾಗಿದ್ದು, ರೈತರಿಗೆ ಕನಿಷ್ಠ ಐದು ಗಂಟೆ ನಿರಂತರ ವಿದ್ಯುತ್‌ ಒದಗಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
  3. ಲಭ್ಯವಿರುವ ವಿದ್ಯುತ್ತಿನ ದಕ್ಷ ಹಂಚಿಕೆಯೂ ಅತಿ ಮುಖ್ಯವಾಗಿದ್ದು, ಎಸ್ಕಾಂಗಳ ಎಂ.ಡಿ.ಗಳು ಈ ಕುರಿತು ಹೆಚ್ಚಿನ ನಿಗಾ ವಹಿಸಿ ರೈತರಿಗೆ ತೊಂದರೆಯಾಗದಂತೆ ಕ್ರಮ ವಹಿಸಬೇಕು. ಎಲ್ಲ ಮುಖ್ಯ ಎಂಜಿನಿಯರುಗಳನ್ನು ಜಿಲ್ಲೆಗೊಬ್ಬರಂತೆ ನೋಡಲ್‌ ಅಧಿಕಾರಿಗಳಾಗಿ ನೇಮಕ ಮಾಡಲಾಗಿದ್ದು, ಅವರು ನಿರಂತರ 5 ಗಂಟೆ ವಿದ್ಯುತ್‌ ಪೂರೈಕೆ ಯಾವುದೇ ಅಡಚಣೆಯಿಲ್ಲದೆ ಆಗುವಂತೆ ಖಾತರಿಪಡಿಸಬೇಕು ಎಂದು ಸೂಚಿಸಿದರು.
  4. ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಇಂದಿನ ಸಭೆಯ ತೀರ್ಮಾನಗಳ ಪಾಲನೆಯಾಗುತ್ತಿರುವುದನ್ನು ಖಾತರಿಪಡಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.
  5. ಕಳೆದ ಐದು ವರ್ಷಗಳಿಂದ ವಿದ್ಯುತ್‌ ಉತ್ಪಾದನೆಯ ಸ್ಥಾಪಿತ ಸಾಮರ್ಥ್ಯ ಹೆಚ್ಚಳ ಕೇವಲ 4000 ಮೆಗಾವ್ಯಾಟ್ ನಷ್ಟು ಮಾತ್ರ ಇದೆ. ರಾಜ್ಯದ ಒಟ್ಟಾರೆ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯ 32,000 ಮೆಗಾವ್ಯಾಟ್‌ ಇದ್ದರೂ ಇದರಲ್ಲಿ 16 ಸಾವಿರ ಮೆಗಾವ್ಯಾಟ್‌ ಸೌರ ವಿದ್ಯುತ್‌ ಆಗಿದ್ದು, ಇದು ಹಗಲು ಹೊತ್ತಿನಲ್ಲಿ ಮಾತ್ರ ಉತ್ಪಾದನೆ ಆಗುವುದರಿಂದ ಬೇಡಿಕೆ ನಿರ್ವಹಣೆಯಲ್ಲಿ ವ್ಯತ್ಯಯವಾಗುತ್ತಿದೆ. ಜೊತೆಗೆ ಕಲ್ಲಿದ್ದಲಿನಲ್ಲಿ ಕೆಲವು ಸಮಸ್ಯೆಗಳಿದ್ದುದನ್ನು ನಿವಾರಿಸಲಾಗಿದ್ದು, ಇದೀಗ ಆಮದು ಕಲ್ಲಿದ್ದಲು ಖರೀದಿಗೆ ಟೆಂಡರ್‌ ಕರೆಯಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.
  6. IEX/ BILATERAL ನಲ್ಲಿ ವಿದ್ಯುತ್‌ ಪಡೆಯಲು ಕ್ರಮ
    ನವೆಂಬರ್‌ನಿಂದ ಉತ್ತರ ಪ್ರದೇಶದಿಂದ 300 ಮೆ.ವ್ಯಾ., ಪಂಜಾಬ್‌ ನಿಂದ 600 ಮೆ.ವ್ಯಾ. ವಿದ್ಯುತ್‌ ಪಡೆಯಲಾಗುವುದು. ಕೆ.ಇ.ಆರ್.ಸಿ.. ಅನುಮೋದನೆಯೊಂದಿಗೆ 1500 ಮೆಗಾವ್ಯಾಟ್‌ ಅಲ್ಪಾವಧಿ ವಿದ್ಯುತ್‌ ಖರೀದಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
  7. ರಾಜ್ಯದಲ್ಲಿನ ವಿದ್ಯುತ್‌ ಉತ್ಪಾದಕರಿಂದ ವಿದ್ಯುತ್‌ ಪಡೆಯಲು ರಾಷ್ಟ್ರೀಯ ವಿಪತ್ತಿನಡಿಯಲ್ಲಿ ವಿದ್ಯುತ್‌ ಕಾಯ್ದೆಯ ಸೆಕ್ಷನ್‌ 11ನ್ನು ಜಾರಿಗೊಳಿಸಲಾಗಿದೆ. ಆ ಮೂಲಕ ವಿದ್ಯುತ್‌ ಕೊರತೆಯನ್ನು ನಿವಾರಿಸಲಾಗುವುದು ಎಂದು ಅಧಿಕಾರಿಗಳು ವಿವರಿಸಿದರು.
  8. ದಕ್ಷಿಣದ ಎಲ್ಲ ರಾಜ್ಯಗಳಲ್ಲಿ ವಿದ್ಯುತ್‌ ಕೊರತೆ ತೀವ್ರವಾಗಿದೆ. ಪ್ರತಿ ವರ್ಷ ನೀವು contingency plan ಹೊಂದಿರಬೇಕು. ಯುದ್ಧ ಕಾಲೇ ಶಸ್ತ್ರಾಭ್ಯಾಸ ಎಂಬಂತೆ ಕಾರ್ಯಪ್ರವೃತ್ತರಾದರೆ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಎಚ್ಚರಿಸಿದರು.
  9. ಶೇ.13 ರಷ್ಟು ವಿದ್ಯುತ್‌ ವಿತರಣಾ ನಷ್ಟವಾಗುತ್ತಿದೆ. ವಿದ್ಯುತ್‌ ಕಳವು ಗೃಹ ಜ್ಯೋತಿಯಿಂದ ಕಡಿಮೆಯಾಗಿದೆ. ಕೈಗಾರಿಕಾ ವಿದ್ಯುತ್‌ ಕಳವು ಅತಿ ಕಡಿಮೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯ.
  10. ಕಬ್ಬಿನ ಬೆಳೆಗೆ ನೀರು ಹಾಯಿಸಲು ಕೆಲವು ಜಿಲ್ಲೆಗಳಲ್ಲಿ ವಿದ್ಯುತ್‌ ಬೇಡಿಕೆ ಹೆಚ್ಚಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಕಬ್ಬಿನ ಕಟಾವು, ಅರೆಯುವಿಕೆ ಪ್ರಾರಂಭವಾದ ಕೂಡಲೇ ಬೇಡಿಕೆ ಇಳಿಕೆಯಾಗಲಿದ್ದು, ಕಬ್ಬು ಅರೆಯುವಿಕೆಯೊಂದಿಗೆ ಕೊ-ಜೆನರೇಶನ್‌ ನಿಂದ ವಿದ್ಯುತ್‌ ಲಭ್ಯವಾಗುತ್ತದೆ ಎಂದು ಸಭೆಗೆ ವಿವರಿಸಲಾಯಿತು.

ಸಭೆಯಲ್ಲಿ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತಾ, ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್‌, ವಿದ್ಯುತ್‌ ಉತ್ಪಾದನೆ, ಪ್ರಸರಣೆ ಮತ್ತು ವಿತರಣೆಗೆ ಸಂಬಂಧಿಸಿದ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button