ಪರಿಸರ ಸೂಕ್ಷ್ಮ ವಲಯದಲ್ಲಿ ಅರಣ್ಯ ಭೂಮಿ ಪರಿವರ್ತನೆಗೆ ಪ್ರಸ್ತಾವನೆ ಸಲ್ಲಿಕೆ: ತೀವ್ರ ಆಕ್ಷೇಪ
ಪ್ರಗತಿವಾಹಿನಿ ಸುದ್ದಿ, ಜೋಗ – ಜೋಗ ಜಲಪಾತದ ಬಳಿ ಪರಿಸರ ಸೂಕ್ಷ್ಮ ವಲಯದಲ್ಲಿ ಪಂಚತಾರಾ ಹೋಟೆಲ್ ನಿರ್ಮಿಸುವ ಯೋಜನೆಗಾಗಿ ಅರಣ್ಯ ಭೂಮಿ ಪರಿವರ್ತನೆಗೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಇಲ್ಲಿ ಕ್ಲಿಕ್ ಮಾಡಿ – View Form A Part 1
ಅರಣ್ಯ, ಪರಿಸರ ಹಾಗೂ ವನ್ಯಜೀವಿಗಳ ಸಂರಕ್ಷಣೆಗೆ ಮಾರಕವಾಗಿ ಪರಿಣಮಿಸಲಿರುವ ಹಾಗೂ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡುವ ಎಲ್ಲ ಸಾಧ್ಯತೆ ಇರುವ ಇಂತಹ ಯೋಜನೆಗಳಿಗೆ ರಾಜ್ಯ ಸರಕಾರ ಯಾವುದೇ ಕಾರಣಕ್ಕೂ ಒಪ್ಪಿಗೆ ನೀಡಬಾರದು ಹಾಗೂ ತಕ್ಷಣ ಪ್ರಸ್ತಾವನೆಯನ್ನು ಹಿಂಪಡೆಯಬೇಕೆಂದು ವನ್ಯಜೀವಿ ಕಾರ್ಯಕರ್ತರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.
ಹಿನ್ನೆಲೆ:
ಇಲ್ಲಿ ಕ್ಲಿಕ್ ಮಾಡಿ – 611412541211W65I9Justificationletter
ಜೋಗ ನಿರ್ವಹಣಾ ಪ್ರಾಧಿಕಾರದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾದ ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿಯವರು ಜೋಗ ಜಲಪಾತದ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಸಾಗರ ತಾಲೂಕು, ಭಾರಂಗಿ ಹೋಬಳಿ, ನಾಡವಾಡ ತಲಕಳಲೆ ಗ್ರಾಮದ ಸರ್ವೇ ಸಂಖ್ಯೆ 151 ರಲ್ಲಿರುವ ಅರಣ್ಯ ಪ್ರದೇಶದಲ್ಲಿ ಪಂಚ ತಾರಾ ಹೋಟೆಲ್ ನಿರ್ಮಿಸುವ ಯೋಜನೆಗಾಗಿ 0.8536 ಹೆಕ್ಟೇರ್ ಅರಣ್ಯ ಪ್ರದೇಶವನ್ನು ಅರಣ್ಯೇತರ ಉದ್ದೇಶಕ್ಕಾಗಿ ಬಳಸುವ ಕುರಿತು ಕರ್ನಾಟಕ ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಜೋಗ ಜಲಪಾತದ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು 165 ಕೋಟಿ ರೂಪಾಯಿಗಳ ಆಡಳಿತಾತ್ಮಕ ಅನುಮೋದನೆ:
ಇಲ್ಲಿ ಕ್ಲಿಕ್ ಮಾಡಿ – 0_0_6114125412111Administrativeapprovaloftheproject
ಪ್ರಸ್ತುತ ಅರಣ್ಯ ಪರಿವರ್ತನಾ ಅರ್ಜಿ ಕೇವಲ ಪಂಚತಾರಾ ಹೋಟೆಲ್ ನಿರ್ಮಾಣಕ್ಕೆ ಸಲ್ಲಿಕೆಯಾಗಿದ್ದು ಒಂದೆಡೆಯಾದರೆ ಪಂಚ ತಾರಾ ಹೋಟೆಲ್ ಅಷ್ಟೇ ಅಲ್ಲದೇ ಜೋಗ ಜಲಪಾತದ ಪ್ರದೇಶದಲ್ಲಿ ರೋಪ್ ವೇ, ಕೆಫೆಟೇರಿಯ, ಮಕ್ಕಳ ಉದ್ಯಾನವನ, ಅಂಪಿಥಿಯೇಟರ್, ವಾಹನ ನಿಲ್ದಾಣ, ಜಲ ಕ್ರೀಡೆ ಮತ್ತು ಉದ್ಯಾನವನ, ಮಳಿಗೆಗಳ ಸಮುಚ್ಚಯ, ವೀಕ್ಷಣಾ ಗೋಪುರ, ಗಾಜೀಬೋ, ಹೈ ಮಾಸ್ಕ ಲೈಟಿಂಗ್, ಸಂಪರ್ಕ ರಸ್ತೆಗಳು, ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ಇತರೆ ಪ್ರವಾಸಿ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ರಾಜ್ಯ ಸರಕಾರವು ಒಟ್ಟು 165 ಕೋಟಿ ರೂಪಾಯಿಗಳ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಅರಣ್ಯ ಇಲಾಖೆ ಅಧಿಕಾರಿಗಳಿಂದ ಶಿಫಾರಸ್ಸು:
ಇಲ್ಲಿ ಕ್ಲಿಕ್ ಮಾಡಿ – 0_0_14_Jul_2021_183300407_recomm_JogManagementAuthority
ಅರಣ್ಯ ಪರಿವರ್ತನಾ ಪ್ರಸ್ತಾವನೆಯನ್ನು ಅನುಮೋದಿಸಿ ಈಗಾಗಲೇ ಸಾಗರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಶಿವಮೊಗ್ಗ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಅರಣ್ಯ ಸಂರಕ್ಷಣೆ) ಹಾಗೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಮುಖ್ಯಸ್ಥರು, ಅರಣ್ಯ ಪಡೆ) ಇವರು ಶಿಫಾರಸ್ಸು ಮಾಡಿ ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳ ಕಚೇರಿಗೆ ಕಳುಹಿಸಿದ್ದು ಅರಣ್ಯ (ಸಂರಕ್ಷಣಾ) ಕಾಯ್ದೆ, 1980 ರ ಅಡಿ ಕೇಂದ್ರ ಸರ್ಕಾರದ ಅನುಮೋದನೆ ಪಡೆಯಲು ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಪ್ರಸ್ತಾವನೆ ಕಳುಹಿಸುವಂತೆ ಮನವಿ ಮಾಡಿದ್ದಾರೆ.
ವನ್ಯಜೀವಿ ಕಾರ್ಯಕರ್ತರಿಂದ ಸರ್ಕಾರಕ್ಕೆ ಲಿಖಿತ ಆಕ್ಷೇಪಣೆ ಸಲ್ಲಿಕೆ:
ಸದರಿ ಯೋಜನಾ ಪ್ರದೇಶವು ಶರಾವತಿ ಕಣಿವೆ ಸಿಂಗಳೀಕ ಅಭಯಾರಣ್ಯದ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಬರುವುದರಿಂದ ಪಂಚ ತಾರಾ ಹೋಟೆಲ್ ಯೋಜನೆ ಸೇರಿದಂತೆ ಇತರೆ ಪ್ರವಾಸೋದ್ಯಮ ಚಟುವಟಿಕೆಗಳನ್ನು ಕೈಗೊಳ್ಳಲು ಅನುಮತಿ ನಿರಾಕರಿಸುವಂತೆ ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ ಕುಲಕರ್ಣಿ ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು, ಕರ್ನಾಟಕ ಅರಣ್ಯ ಇಲಾಖೆ, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಹಾಗೂ ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಪತ್ರ ಬರೆದಿದ್ದು ಸದರಿ ಯೋಜನೆ ಅರಣ್ಯ (ಸಂರಕ್ಷಣಾ) ಕಾಯ್ದೆ, 1980, ಪರಿಸರ (ಸಂರಕ್ಷಣಾ) ಕಾಯ್ದೆ, 1986 ಸೇರಿದಂತೆ ಮಾನ್ಯ ಸರ್ವೋಚ್ಚ ನ್ಯಾಯಾಲಯ, ಹಲವಾರು ಉಚ್ಚ ನ್ಯಾಯಾಲಯಗಳು ದೇಶದಲ್ಲಿ ಅರಣ್ಯ ಸಂರಕ್ಷಣೆ ಕುರಿತಂತೆ ನೀಡಿರುವ ತೀರ್ಪುಗಳಿಗೆ ವಿರುದ್ಧವಾಗಿದೆ. ಅಲ್ಲದೆ ಕೇಂದ್ರ ಸರಕಾರವು ಇತ್ತೀಚಿಗೆ ಜಾರಿಗೆ ತಂದಿರುವ “ಅರಣ್ಯ ಹಾಗೂ ವನ್ಯಜೀವಿ ಪ್ರದೇಶಗಳಲ್ಲಿ ಸುಸ್ಥಿರ ಪರಿಸರ-ಪ್ರವಾಸೋದ್ಯಮ ಕುರಿತು ಮಾರ್ಗದರ್ಶಿ ಸೂತ್ರಗಳು- 2021” ಪ್ರಕಾರ ಪರಿಸರ-ಪ್ರವಾಸೋದ್ಯಮ ಸೌಕರ್ಯ ಒದಗಿಸಲು ಅರಣ್ಯ ಭೂಮಿಯ ಮೇಲೆ ಯಾವುದೇ ಶಾಶ್ವತ ರಚನೆ/ ಕಟ್ಟಡ ಕಟ್ಟುವಂತಿಲ್ಲ. ಅಲ್ಲದೆ ಪರಿಸರ ಸೂಕ್ಷ್ಮ ವಲಯದಲ್ಲಿ ವಾಣಿಜ್ಯೋದ್ಯಮ ಉದ್ದೇಶಕ್ಕಾಗಿ ಹೋಟೆಲ್ಗಳನ್ನು ನಿರ್ಮಿಸಲು ಅವಕಾಶವೇ ಇಲ್ಲ ಎಂದು ಗಿರಿಧರ ಕುಲಕರ್ಣಿ ತಿಳಿಸಿದ್ದಾರೆ.
ಆಕ್ಷೇಪಣೆಗಳ ಮೇರೆಗೆ ಪ್ರಸ್ತಾವನೆ ಕುರಿತು ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯದಿಂದ ರಾಜ್ಯ ಸರಕಾರಕ್ಕೆ ಪತ್ರ:
ಗಿರಿಧರ ಕುಲಕರ್ಣಿ ಅವರ ಆಕ್ಷೇಪಣೆಗಳ ಮೇರೆಗೆ ಪ್ರಸ್ತಾವನೆ ಕುರಿತು ಈಗಿರುವ ನಿಯಮಾವಳಿಗಳ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯವು ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಕರ್ನಾಟಕ ಅರಣ್ಯ ಇಲಾಖೆಗೆ ಆಗಸ್ಟ್ 9 ರಂದು ಪತ್ರ ಬರೆದಿದ್ದು ಪತ್ರದ ಪ್ರತಿ ಪ್ರಗತಿವಾಹಿನಿಗೆ ಲಭ್ಯವಾಗಿದೆ.
ಪ್ರಸ್ತಾವನೆ 2014 ರಲ್ಲಿ ಕೇಂದ್ರ ಸರ್ಕಾರದಿಂದ ತಿರಸ್ಕೃತ:
ಇಲ್ಲಿ ಕ್ಲಿಕ್ ಮಾಡಿ – 2014Rejection
ಇದೇ ಪ್ರದೇಶದಲ್ಲಿ ಜೋಗ ನಿರ್ವಹಣಾ ಪ್ರಾಧಿಕಾರದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾದ ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿಯವರು ಸಲ್ಲಿಸಿದ್ದ ಇಂತಹುದೇ ಪ್ರಸ್ತಾವನೆಯನ್ನು ಕೇಂದ್ರ ಸರಕಾರವು ಡಿಸೆಂಬರ್ 2014 ರಲ್ಲಿ ಅರಣ್ಯ ಸಂರಕ್ಷಣೆಯ ದೃಷ್ಟಿಯಿಂದ ತಿರಸ್ಕರಿಸಿತ್ತು ಎನ್ನುವುದು ಗಮನಾರ್ಹ ಸಂಗತಿ. ಹೀಗಿದ್ದರೂ ಮತ್ತೆ ಇಂತಹುದೇ ಯೋಜನೆಯನ್ನು ರಾಜ್ಯ ಸರಕಾರವು ನೂರಾರು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅದರಲ್ಲೂ ಕೋವಿಡ್ ಸಂಕಷ್ಟದ ಸಮಯದಲ್ಲಿ ಕೈಗೊಳ್ಳಲು ಮುಂದಾಗುತ್ತಿರುವುದು ಯಾವುದೇ ರೀತಿಯಲ್ಲೂ ಸಮರ್ಥನೀಯವಲ್ಲ ಎಂದು ವನ್ಯಜೀವಿ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ
ರಾಜ್ಯೋತ್ಸವ ಪ್ರಶಸ್ತಿ: 28,857 ಜನರಿಂದ ಶಿಫಾರಸ್ಸು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ