ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹುಕ್ಕೇರಿ ತಾಲೂಕಿನ ಪಾಶ್ಚಾಪುರ, ಕರಗುಪ್ಪಿ, ಬಸ್ಸಾಪುರ, ಹಗೇದಾಳ, ಇಸ್ಲಾಂಪುರ ಹಾಗೂ ಶಹಾಬಂದರ ಗ್ರಾಮಗಳಿಂದ ಗೋಟೂರ ಮಾರ್ಗವಾಗಿ ಬೆಳಗಾವಿ ನಗರಕ್ಕೆ ಶಾಲಾ-ಕಾಲೇಜುಗಳಿಗೆ ವ್ಯಾಸಂಗಕ್ಕಾಗಿ ನಿತ್ಯ 970 ವಿದ್ಯಾರ್ಥಿಗಳು ಹೋಗುತ್ತಿದ್ದು ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲದ ಕಾರಣ ಅಧ್ಯಯನಕ್ಕೆ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಅಕ್ರೋಶ ವ್ಯಕ್ತಪಡಿಸಿದ್ದು ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದ್ದಾರೆ.
ಬೆಳಗಿನ ಜಾವ 6 ಗಂಟೆಯಿಂದಲೇ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಬಸ್‌ಗಾಗಿ ಪರದಾಡುವಂತಾಗಿದೆ. ಸುಮಾರು 3 ಗಂಟೆ ಸಮಯ ಕಳೆದು ವಿದ್ಯಾರ್ಥಿಗಳು ಬೆಳಗಾವಿಗೆ ತಲುಪುವಂತಾಗಿದೆ. ಈ ಕುರಿತು ಸಮಸ್ಯೆ ಬಗೆಹರಿಸಿ ಬೆಳಗಿನಜಾವ 8 ಮತ್ತು 9ಗಂಟೆಗೆ ಎರಡು ಬಸ್ಸುಗಳನ್ನು ಬಿಡಲು ಸಾಕಷ್ಟು ಬಾರಿ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗದೆ ಮನವಿಯನ್ನು ಕಸದ ತೊಟ್ಟಿಗೆ ಎಸೆಯುವ ಕೆಲಸ ಮಾಡುತ್ತಿದ್ದಾರೆ ಎಂದು ನೂರಾರು ವಿದ್ಯಾರ್ಥಿಗಳು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಕರಗುಪ್ಪಿ, ಬಸ್ಸಾಪುರ ಮತ್ತು ಹಗೇದಾಳ ಗ್ರಾಮಕ್ಕೆ ಬರುವ ಬಸ್ಸುಗಳು ತುಂಬಾ ದಟ್ಟಣೆಯಿಂದ ಕೂಡಿದ್ದು ಮತ್ತು ಬೆಳಿಗ್ಗೆ 7.30 ರಿಂದ 9.30ರ ವರೆಗೆ ಯಾವುದೇ ಬಸ್ಸಿನ ಸಂಚಾರ ಇರುವುದಿಲ್ಲ. ಇದರಿಂದ ಬೆಳಿಗ್ಗೆ ಬೆಳಗಾವಿಗೆ ಹೋಗುವ ವಿದ್ಯಾರ್ಥಿಗಳು ವ್ಯಾಪಾರಸ್ಥರು, ಜಿಲ್ಲಾಸ್ಪತ್ರೆಗೆ ಬರುವ ಗರ್ಭಿಣಿಯರು, ಮಕ್ಕಳು, ರೋಗಿಗಳು, ವಯೋವೃದ್ಧರು ಸೇರಿ ಹೊಟ್ಟೆ ಪಾಡಿಗಾಗಿ ಬೆಳಗಾವಿಯನ್ನು ಅವಲಂಬಿಸಿರುವ ಸುಮಾರು 2-3 ಸಾವಿರ ಜನ ಈ ಮಾರ್ಗವಾಗಿ ಸಂಚರಿಸುವುದರಿಂದ ಪ್ರತಿನಿತ್ಯ ಬೆಳಿಗ್ಗೆ 8 ಮತ್ತು 9 ಗಂಟೆಗೆ ಪಾಶ್ಚಾಪುರದಿಂದ ಬೆಳಗಾವಿಗೆ ಸಂಚ್ಚರಿಸುವ ಬಸ್ ಬಿಡಲು ವಿನಂತಿಸಿದ್ದಾರೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮನವಿಗೆ ಸ್ಪಂದಿಸದಿದ್ದರೆ ಜು.9ರಂದು ರಂದು ಬಸ್ಸಾಪುರ ಗ್ರಾಮದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಭಾರಿ ಮಳೆ: ರಕ್ಷಣಾ ಹಾಗೂ ಪರಿಹಾರ ಕಾರ್ಯಕ್ಕೆ ಸಿಎಂ ಸೂಚನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ