
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿದ್ಯುತ್ ಬಿಲ್ ಹೆಚ್ಚಳ ಮಾಡಿರುವುದನ್ನು ಖಂಡಿಸಿ ಆಲ್ ಇಂಡಿಯಾ ವುಮನ್ ರೈಟ್ಸ್, ಎಂಇಎಸ್ ಸಂಘಟನೆಯವರು ಸೋಮವಾರ ಪ್ರತಿಭಟನೆ ನಡೆಸಿ ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಚುನಾವಣೆಯ ಪೂರ್ವದಲ್ಲಿ ರಾಜ್ಯದಲ್ಲಿ ಸರಕಾರ ರಚನೆಯಾದ ಮರುಕ್ಷಣ ವಿದ್ಯುತ್ ಬಿಲ್ ಉಚಿತ ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಲಾಗಿತ್ತು. ಆದರೆ ಈಗ ವಿದ್ಯುತ್ ಬಿಲ್ ದುಪ್ಪಟ್ಟು ಬರುತ್ತಿದೆ. ಸರಕಾರ ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.
ರಾಜ್ಯ ಸರಕಾರ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತ ಎಂದು ಘೋಷಿಸಿದೆ. ಆದರೆ ಹದಿನೈದು ದಿನಗಳಿಂದ ಪ್ರತಿ ಯುನಿಟ್ ಬಿಲ್ ದುಪ್ಪಟ್ಟು ಬರುತ್ತಿದೆ. ಇದು ಸರಕಾರದ ಇಬ್ಬಗೆಯ ನೀತಿ. ಇದೇ ತಿಂಗಳಿನಿಂದ ನಾವು ವಿದ್ಯುತ್ ಬಿಲ್ ಕಟ್ಟುವುದಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆಗೆ ಮುನ್ನ ನಮ್ಮ ವಿದ್ಯುತ್ ಬಿಲ್ ಸಹಜವಾಗಿ ಬರುತ್ತಿತ್ತು. ಆದರೆ ಚುನಾವಣೆ ಮುಗಿದ ಮೇಲೆ ಏಕಾಏಕಿ ಬಿಲ್ ಹೆಚ್ಚಳ ಮಾಡಲಾಗಿದೆ. ಮನೆಯ ಖರ್ಚು, ಮಕ್ಕಳ ಶೈಕ್ಷಣಿಕ ಖರ್ಚು ಸಾಕಷ್ಟು ಇರುತ್ತದೆ. ಇದರ ನಡುವೆ ಹೆಸ್ಕಾಂನಿಂದ ಮೂರು ತಿಂಗಳ ಬಿಲ್ ಒಮ್ಮೆಲೆ ಬಂದಿದೆ. ಯಾವುದೇ ಕಾರಣಕ್ಕೂ ಜೂನ್ ತಿಂಗಳಿಂದಲೇ ನಾವು ವಿದ್ಯುತ್ ಬಿಲ್ ಕಟ್ಟುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಮ ಬನವಾನಿ, ದೀಪಾ ದೋಂಗಡೆ, ಸುವರ್ಣಾ ಕದಂ, ಮಾಲನ ಗೋಡ್ಸೆ, ರೇಣುಕಾ ಉದಯ, ರೇಖಾ ಪಾಟೀಲ, ಪ್ರಭಾವತಿ ಚವ್ಹಾಣ, ಸಾವಿತ್ರಿ ಮೊಳವೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ