*ನರೇಗಾ ಹೆಸರು ಬದಲಾವಣೆ ಖಂಡಿಸಿ ದೇಶಾದ್ಯಂತ ಪ್ರತಿಭಟನೆ: ಎಐಸಿಸಿ ಕಾರ್ಯದರ್ಶಿ ಗೋಪಿನಾಥ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೇಂದ್ರ ಸರ್ಕಾರ ನರೇಗಾ ಹೆಸರು ಬದಲಾವಣೆ ಮಾಡಿದಕ್ಕೆ ಹಳ್ಳಿಯಿಂದ ದಿಲ್ಲಿವರೆಗೆ ಪ್ರತಿಭಟನೆ ನಡೆಸಲಾಗುವುದು ಎಂದು ಎಐಸಿಸಿ ಕಾರ್ಯದರ್ಶಿ ಗೋಪಿನಾಥ್ ತಿಳಿಸಿದರು.
ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿ ನಡೆಸಿ ಅವರು ಮಾತನಾಡಿದ ಅವರು, ಜನವರಿ 11 ರಂದು ಜಿಲ್ಲಾಮಟ್ಟದಲ್ಲಿ ಸಾಂಕೇತಿಕ ಉಪವಾಸ ಸತ್ಯಾಗ್ರಹ ನಡೆಯಲಿದೆ. ಬಿಜೆಪಿ ಕಾರ್ಯಾಲಯಗಳಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು. ಅಲ್ಲದೇ ಸಂಪೂರ್ಣ ಎರಡು ದಿನ ವಿಶೇಷ ಸಮಾವೇಶವನ್ನು ಆಯೋಜಿಸಲಾಗಿದೆ.
ಕೇವಲ ಹೆಸರು ಬದಲಾಯಿಸಿದ್ದಕ್ಕೆ ಕಾಂಗ್ರೆಸ್ ಪ್ರತಿಭಟಿಸುತ್ತಿಲ್ಲ. ಹಲವಾರು ಮಾರಕ ಬದಲಾವಣೆಗಳನ್ನು ತರಲಾಗಿದ್ದು, ಅದರ ವಿರುದ್ಧ ಹಳ್ಳಿಯಿಂದ ದಿಲ್ಲಿಯ ವರೆಗೆ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು. ಜಾಬ್ ಕಾರ್ಡ್ ನಲ್ಲಿ ಗೊಂದಲವಿದೆ ಎಂದಾದರೇ, 10 ವರ್ಷಗಳಿಂದ ಯಾಕೆ ಸುಮ್ಮನಿದ್ದರು? ವೋಟ್ ಚೋರಿ ಪ್ರಕರಣದ ದಿಕ್ಕು ತಪ್ಪಿಸಲೂ ಬಿಜೆಪಿ ಷಡ್ಯಂತ್ರವನ್ನು ನಡೆಸುತ್ತಿದೆ.

ಕೇಂದ್ರ ಸರ್ಕಾರ ನರೇಗಾದಿಂದ ಕೇವಲ ಗಾಂಧಿಜೀಯವರ ಹೆಸರನ್ನು ಬದಲಾಯಿಸಿಲ್ಲ. ಅದು ಯೋಜನೆಯನ್ನು ಸಂಪೂರ್ಣವಾಗಿ ಮುಗಿಸಲು ಹುನ್ನಾರ ನಡೆಸಿದೆ. ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿಯ ಹೆಸರನ್ನು ಬದಲಾಯಿಸಿ, ವಿಬಿಜಿ ರಾಮಜೀ ಹೆಸರನ್ನಿಡಲಾಗಿದೆ. ಮತಗಳು, ಜಾತಿ ಮತ್ತು ಧರ್ಮದ ಹೆಸರಿನಲ್ಲಿ ದೇಶವನ್ನು ಒಡೆಯಲು ಯೋಜನೆಯ ಹೆಸರನ್ನು ಬದಲಾಯಿಸಲಾಗುತ್ತಿದೆ.
ಪಂಚಾಯಿತಿಮಟ್ಟದ ಕಾರ್ಯಗಳ ಕಾಮಗಾರಿಯ ನಿರ್ಣಯವನ್ನು ಅಧ್ಯಕ್ಷರು ಕೈಗೊಳ್ಳಬೇಕಿತ್ತು. ಆದರೇ, ಅದನ್ನು ದೆಹಲಿಗೆ ಮಟ್ಟಕ್ಕೆ ಒಯ್ಯಲಾಗಿದೆ. ರಾಜ್ಯ ಸರ್ಕಾರಗಳ ಗಮನಕ್ಕೆ ತರದೇ ತರಾತುರಿಯಲ್ಲಿ ಹೆಸರು ಬದಲಾಯಿಸಿ ಪಕ್ಷದ ಪ್ರಮುಖರಾದ ಸೋನಿಯಾ ಗಾಂಧಿ ಹೇಳಿದಂತೆ ಮತ್ತೊಮ್ಮೆ ಬಿಜೆಪಿ ಗಾಂಧಿಜೀ ಅವರನ್ನು ಹತ್ಯೆ ಮಾಡಿದೆ. ಗಾಂಧಿಜೀ ಹೆಸರಿನೊಂದಿಗೆ ಮೊದಲಿನಂತೆ ಯೋಜನೆ ಜಾರಿಯಾಗುವವರೆಗೂ ನಮ್ಮ ಹೋರಾಟ ನಿರಂತರವಾಗಿರಲಿದೆ ಎಂದರು.
ಮಾಧ್ಯಮಗೋಷ್ಟಿಯಲ್ಲಿ ಉತ್ತರ ಶಾಸಕ ಆಸೀಫ್ ಸೇರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ವಿನಯ ನಾವಲಗಟ್ಟಿ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಕಾಡಾ ಅಧ್ಯಕ್ಷ ಯುವರಾಜ್ ಕದಮ್, ಮೃಣಾಲ್ ಹೆಬ್ಬಾಳ್ಳರ್ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ದರು.



