ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪಿಎಸ್ ಐ ಹುದ್ದೆ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಸಿಎಂ ರೇಸ್ ನಲ್ಲಿರುವ ಪ್ರಭಾವಿ ಮಂತ್ರಿಯೊಬ್ಬರ ಹೆಸರು ಕೇಳಿಬಂದಿದೆ ಎಂದು ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ,.ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಪಿಎಸ್ ಐ ನೇಮಕಾತಿ ಅಕ್ರಮದಲ್ಲಿ 4ನೇ ರ್ಯಾಂಕ್ ಅಭ್ಯರ್ಥಿ ದರ್ಶನ್ ಗೌಡ ಸಚಿವರೊಬ್ಬರ ತಮ್ಮನಿಗೆ 80 ಲಕ್ಷ ರೂಪಾಯಿ ಹಣ ನೀಡಿದ್ದಾಗಿ ಸಿಐಡಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಪ್ರಕರಣದಲ್ಲಿ ಪ್ರಭಾವಿ ಮಂತ್ರಿಯೊಬ್ಬರು ಭಾಗಿಯಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಅಕ್ರಮದಲ್ಲಿ ಪ್ರಭಾವಿ ಸಚಿವರ ಹೆಸರು ಬಲವಾಗಿ ಕೇಳಿಬಂದಿದೆ. ಆ ಸಚಿವರು ಮುಖ್ಯಮಂತ್ರಿಗಳ ರೇಸ್ ನಲ್ಲಿದ್ದಾರೆ. ಹಾಗಾಗಿ ಅವರ ಹೆಸರನ್ನು ನೇರವಾಗಿ ಹೇಳದಂತೆ ನನಗೆ ಮಾಹಿತಿ ಕೊಟ್ಟವರು ಹೇಳಿದ್ದಾರೆ ಎಂದರು.
ಆದರೆ ಅಕ್ರಮದಲ್ಲಿ ಆ ಸಚಿವರೇ ನೇರವಾಗಿ ಭಾಗಿಯಾಗಿದ್ದಾರೆ ಎಂದು ನಾನು ಹೇಳುತ್ತಿಲ್ಲ. ಅವರ ಸಂಬಂಧಿ ಭಾಗಿಯಾಗಿದ್ದಾರೆ ಎಂದು ಮಾಹಿತಿ ಬಂದಿದೆ. ಹಣ ನೀಡಿದ ಬಗ್ಗೆ ಅಭ್ಯರ್ಥಿ ಬಾಯ್ಬಿಟ್ಟಾಗ ಸಿಐಡಿ ಅಧಿಕಾರಿಗಳು ವಿಚಾರಣೆಗೆ ಬಂದರೆ ಸ್ವತ: ಆ ಸಚಿವರೇ ಅಧಿಕಾರಿಗಳಿಗೆ ಫೋನ್ ಮಾಡಿ ವಿಚಾರಣೆ ನಡೆಸದಂತೆ ತಡೆದಿದ್ದಾರೆ. ಅಕ್ರಮದ ಹಿಂದೆ ಸರ್ಕಾರದ ಸಚಿವರ ಕೈವಾಡವಿರುದು ಸ್ಪಷ್ಟ. ಸಿಎಂ ಬೊಮ್ಮಾಯಿ ಅವರಿಗೆ ಬದ್ಧತೆ ಇದ್ದರೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲ್ಲಿ ಎಂದು ಆಗ್ರಹಿಸಿದರು.
ರಾಮನಗರದ ಉಸ್ತುವಾರಿ ಸಚಿವರು ನಮಗೆ ಗಂಡಸ್ತನವಿಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಎದುರೇ ಹೇಳಿಕೆ ನೀಡಿದ್ದರು. ನಾವ್ಯಾರು ಗಂಡಸರಲ್ಲ, ಅವರ ತಾಕತ್ತು ಕಂಡು ನಾನು, ನನ್ನ ತಮ್ಮ, ಅನಿತಾ ಕುಮಾರಸ್ವಾಮಿ ಎಲ್ಲರೂ ರಾಮನಗರದಲ್ಲಿ ನಡುಗುತ್ತಿದ್ದೇವೆ. ಈಗ ಪಿಎಸ್ ಐ ಅಕ್ರಮ ನೇಮಕಾತಿ ವಿಚಾರದಲ್ಲಿ ಸಚಿವರು ತಾಕತ್ತು ತೋರಿಸಲಿ ಎಂದು ಪರೋಕ್ಷವಾಗಿ ಸಚಿವ ಅಶ್ವತ್ಥ ನಾರಾಯಣ ವಿರುದ್ಧ ವಾಗ್ದಾಳಿ ನಡೆಸಿದರು.
ಅಕ್ರಮದಲ್ಲಿ ಭಾಗಿಯಾಗಿರುವ ಅಭ್ಯರ್ಥಿಗಳ ಪೋಸ್ಟಿಂಗ್ ಕೂಡ ಆಗಿದೆ. ಮಾಗಡಿಗೆ ಪೋಸ್ಟಿಂಗ್ ಆದ ಮೂವರು ಅಭ್ಯರ್ಥಿಗಳ ಹೆಸರು ಕೇಳಿಬಂದಿದೆ. ಅವರನ್ನು ಯಾಕೆ ಸಿಐಡಿ ತನಿಖೆ ನಡೆಸುತ್ತಿಲ್ಲ? ರಾಯ ಸರ್ಕಾರ ಪ್ರಕರಣದಲ್ಲಿ ಯಾರನ್ನು ರಕ್ಷಿಸುತ್ತದೆ? ಸಂಪೂರ್ಣ ತನಿಖೆ ನಡೆಸಿ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.
ಪಿಎಸ್ ಐ ಹುದ್ದೆ ನೇಮಕಾತಿ ಅಕ್ರಮ; ಹೆಡ್ ಕಾನ್ಸ್ ಟೇಬಲ್ ಬಂಧನ
ಪಿಎಸ್ ಐ ಪರೀಕ್ಷೆ ಅಕ್ರಮದ ಹಿಂದೆ ಪ್ರಭಾವಿ ಸಚಿವರ ಹೆಸರು; 80 ಲಕ್ಷಕ್ಕೆ ಡೀಲ್?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ