
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಇಂದು ಇಡೀ ಕನ್ನಡ ನಾಡು ಕಣ್ಣೀರ ಕಡಲಲ್ಲಿ ಮುಳುಗಿದೆ. ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತೀವ್ರ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ.
ಜಿಮ್ ಮಾಡುವ ವೇಳೆ ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದ ಪುನೀತ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ವರನಟ ಡಾ. ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಅವರ ಕಿರಿಯ ಪುತ್ರನಾಗಿ 1975ರಲ್ಲಿ ಜನಿಸಿದ್ದ ಪುನೀತ್ ರಾಜ್ ಕುಮಾರ್ ಅವರ ಮೊದಲ ಹೆಸರು ಲೋಹಿತ್. ಬಾಲನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಪುನೀತ್ ರಾಜ್ ಕುಮಾರ್ ಸ್ಯಾಂಡಲ್ ವುಡ್ ಪವರ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದಾರೆ. 26 ಚಲನಚಿತ್ರಗಳಲ್ಲಿ ನಾಯಕ ನಟನಾಗಿ ನಟನೆ ಮಾಡಿದ್ದಾರೆ .
ಬಾಲ್ಯದಲ್ಲಿ ತನ್ನ ತಂದೆ ರಾಜಕುಮಾರ್ ಅಭಿನಯದ ಚಿತ್ರಗಳಲ್ಲಿ ಬಾಲ ನಟನಾಗಿ ವಸಂತ ಗೀತ (1980), ಭಾಗ್ಯದಾತ (1981), ಚಲಿಸುವ ಮೋಡಗಳು (1982), ಎರಡು ನಕ್ಷತ್ರಗಳು (1983) ಮತ್ತು ಬೆಟ್ಟದ ಹೂವು (1985) ಅವರು ನಟಿಸಿದ ಚಿತ್ರಗಳ ನಟನೆಗೆ ಮೆಚ್ಚುಗೆ ಪಡೆದರು. ಅವರ ಬೆಟ್ಟದ ಹೂವು ಚಿತ್ರದ ರಾಮು ಪಾತ್ರದ ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದರು.
ಪುನೀತ್ ರಾಜ್ ಕುಮಾರ್ ಡಿಸೆಂಬರ್ 1 ,1999 ರಂದು ಅಶ್ವಿನಿ ರೇವಂತ್ ರನ್ನು ವಿವಾಹವಾದರು.ಪುನೀತ್ ಹಾಗೂ ಅಶ್ವಿನಿ ದಂಪತಿಗೆ ದ್ರಿತಿ ಮತ್ತು ವಂದಿತಾ ಎಂಬ ಇಬ್ಬರು ಪುತ್ರಿಯರಿದ್ದಾರೆ.
2002ರಲ್ಲಿ ಪುನೀತ್ ‘ಅಪ್ಪು’ ಚಿತ್ರದ ಮೂಲಕ ನಾಯಕ ನಟನಾಗಿ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದರು. ಬಳಿಕ ಅಭಿ (2003), ಆಕಾಶ್ (2005), ಅರಸು (2007), ಮಿಲನ (2007), ಜಾಕೀ (2010), ಹುಡುಗರು (2011), ಅಣ್ಣಾ ಬಾಂಡ್ (2012) ಮತ್ತು ಪವರ್ (2014) ಸೇರಿದಂತೆ ಯಶಸ್ವಿ ಚಿತ್ರಗಳಲ್ಲಿ ಅಭಿನಯಿಸಿದ್ದರು.
ಬಿಂದಾಸ್, ವಂಶಿ, ರಾಜ್ ದ ಶೋ ಮ್ಯಾನ್. ಪ್ರಥ್ವಿ, ರಾಮ್ , ಜಾಕಿ, ದೊಡ್ಮನೆ ಹುಡುಗ, ರಾಜಕುಮಾರ, ಅಂಜನಿ ಪುತ್ರ, ನಟಸಾರ್ವಭೌಮ ಪುನೀತ್ ಅವರ ಜನಪ್ರಿಯ ಚಿತ್ರಗಳಾಗಿವೆ. ನಟನೆಯ ಜೊತೆಗೆ ಕನ್ನಡದ ಪ್ರಸಿದ್ದ ರಿಯಾಲಿಟಿ ಶೋ ಕನ್ನಡದ ಕೋಟ್ಯಧಿಪತಿ, ಹೂ ವಾಂಟ್ಸ್ ಟು ಬಿ ಮಿಲಿಯನೇರ್ ನಿರೂಪಣೆ ಮಾಡಿದ್ದಾರೆ.
ಪುನಿತ್ ರಾಜ್ ಕುಮಾರ ಸ್ಥಿತಿ ಚಿಂತಾಜನಕ; ಸಿಎಂ ಸೇರಿ ಹಲವು ಗಣ್ಯರು ಆಸ್ಪತ್ರೆಗೆ ದೌಡು