ಬೆಂಗಳೂರು ಸಹಕಾರ ಹಾಲು ಒಕ್ಕೂಟ ನೇಮಕಾತಿಯಲ್ಲಿ ಅಕ್ರಮವಿಲ್ಲ
ಪ್ರಗತಿವಾಹಿನಿ ಸುದ್ದಿ, ಸುವಣಸೌಧ, ಬೆಳಗಾವಿ : ಸರ್ಕಾರ ಬೆಂಗಳೂರು ಸಹಕಾರ ಹಾಲು ಒಕ್ಕೂಟದ 1177 ವಿವಿಧ ವೃದಂದ ಹುದ್ದೆಗಳ ನೇಮಕಾತಿ ಅನುಮೋದನೆ ನೀಡಿದೆ. ಈ ಪೈಕಿ ಖಾಲಿ ಇರುವ 297 ಹುದ್ದೆಗಳ ನೇಮಕಾತಿ ಪ್ರಕ್ರಿಯ ಪಾರದರ್ಶಕವಾಗಿ ಪೂರ್ಣಗೊಂಡಿದೆ. ಅಭ್ಯಥಿಗಳಿಗೆ ಶೀಘ್ರವಾಗಿ ನೇಮಕಾತಿ ಆದೇಶವನ್ನು ನೀಡಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಸೋಮವಾರ ವಿಧಾನ ಪರಿಷತ್ತಿನ ಕಲಾಪದಲ್ಲಿ ಸದಸ್ಯರಾದ ಎಸ್.ಎಲ್.ಭೋಜೆಗೌಡ, ಶರವಣ, ಕೆ.ಎ.ತಿಪ್ಪೇಸ್ವಾಮಿ ಅವರ ಗಮನ ಸೆಳೆಯುವ ಸೂಚನೆ ಮೇಲೆ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿದರು.
ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಬೆಂಗಳೂರು ಸಹಕಾರ ಹಾಲು ಒಕ್ಕೂಟವನ್ನು ಸ್ಥಾಪಿಸಲಾಗಿದೆ. ಒಕ್ಕೂಟದ ನೇಮಕಾತಿ ಪ್ರಕ್ರಿಯೆಯನ್ನು ಮೈಸೂರು ಮುಕ್ತ ವಿಶ್ವ ವಿದ್ಯಾಲಯದಿಂದ ನಡೆಸಲಾಗಿದೆ. ಓಎಂಆರ್ ತಿದ್ದುಪಡಿ, ಅಕ್ರಮ ನೇಮಕಾತಿ ಕುರಿತು ಜನಪ್ರತಿನಿಧಿಗಳಿಂದ ದೂರುಗಳು ಕೇಳಿ ಬಂದಿದ್ದವು.
ಈ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿ ಬ್ಯಾಂಕುಗಳ ವಿಭಾಗದ ಸಹಕಾರಿ ಸಂಘಗಳ ಸಂಯುಕ್ತ ನಿಬಂಧಕರಿAದ ತನೆ ನಡೆಸಲಾಗಿದೆ. ತನಿಖೆಯಲ್ಲಿ ಯಾವುದೇ ಆರೋಪಗಳು ಸಾಬೀತು ಆಗಿರುವುದಿಲ್ಲ. ಸದರಿ ವರದಿಯನ್ನು ಪರಿಶೀಲಿಸಿ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸಲಾಗಿದೆ. ಆಡಳಿತ ನಿರ್ದೇಶಕರ ಮಂಡಳಿಯು ನೇಮಕಾತಿ ಬಗ್ಗೆ ಯಾವುದೇ ಆಕ್ಷೇಪಣೆಯನ್ನು ಎತ್ತದೆ ಆಯ್ಕೆ ಪಟ್ಟಿಯನ್ನು ಅನುಮೋದಿಸಿದೆ. ಆಡಳಿತ ಮಂಡಳಿ ಸರ್ವಾನುಮತದಿಂದ ಆಯ್ಕೆ ಪ್ರಕ್ರಿಯಗೆ ಸಮ್ಮತಿ ಸೂಚಿಸಿದೆ ಎಂದು ಸ್ಪಷ್ಟೀಕರಣ ನೀಡಿದರು.
ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಮೂಲಭೂತ ಸೌಕರ್ಯಗಳನ್ನು ನಿರ್ಮಿಸಲು ಲೋಕೋಪಯೋಗಿ ಇಲಾಖೆ ಎಸ್.ಆರ್ ದರ ಪಟ್ಟಿ ಆಧರಿಸಿ ಕಾಮಗಾರಿಗಳ ಅಂದಾಜು ಪಟ್ಟಿಯನ್ನು ತಯಾರಿಸಲಾಗಿದೆ. ಪಾದರ್ಶಕವಾಗಿ ನಿಯಮಾನುಸಾರ ಟೆಂಡರ್ ಪ್ರಕಟಣೆ ನೀಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ರೂ.4.44 ಕೋಟಿ ವೆಚ್ಚದಲ್ಲಿ ಇ.ಟಿ.ಪಿ( ತ್ಯಾಜ್ಯ ನೀರು ಸಂಸ್ಕರಣ ಘಟಕ) ಉನ್ನತೀಕರಣ, ರೂ.1.33 ಕೋಟಿ ವೆಚ್ಚದಲ್ಲಿ ಮೊಸರಿನ ಶೈತ್ಯಾಗಾರದ ಉನ್ನತೀಕರಣ, ರೂ.2.16 ಕೋಟಿ ವೆಚ್ಚದಲ್ಲಿ ಉತ್ಪನ್ನ ವಿಭಾಗ ವಿಸ್ತರಣೆ ಹಾಗೂ ಅಂದಾಜೂ ರೂ.4.32 ಕೋಟಿ ವೆಚ್ಚದಲ್ಲಿ ಬೈರಾಪಟ್ಟಣ, ದೊಡ್ಡಬಳ್ಳಾಪುರ, ಸೋಲೂರು, ವಿಜಯಪುರ, ಕನಕಪುರದಲ್ಲಿ ಶೀಥಲೀಕರಣ ಕೇಂದ್ರಗಳ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಸದಸ್ಯ ತಿಪ್ಪೇಸ್ವಾಮಿ ಹಾಗೂ ಶರವಣ ಮಾತನಾಡಿ ನೇಮಕಾತಿಯಲ್ಲಿ ಹಗರಣವಾಗಿದೆ ಎಂದು ಆಯ್ಕೆ ಸಮಿತಿಯ ಕೆಲ ನಿರ್ದೇಶಕರು, ಸ್ಥಳೀಯ ಲೋಕಸಭಾ ಸದಸ್ಯರು, ಅಭ್ಯರ್ಥಿಗಳು ದೂರಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಳ್ಳಬೇಕು. ಅರ್ಹ ಅಭ್ಯರ್ಥಿಗಳಿಗೆ ವಂಚನೆಯಾಗಬಾರುದು. ಕಾಮಗಾರಿಗಳ ಅನುಷ್ಠಾನದಲ್ಲಿ ಕೂಡ ನಿಯಮಗಳನ್ನು ಮಿರಿ ವಂಚನೆಯಾಗುತ್ತಿದೆ ಇದನ್ನು ಸಹಕಾರಿ ಸಚಿವರು ತಡೆಯಬೇಕು ಎಂದು ಕೋರಿದರು.
ವಸತಿ ಶಾಲೆಗಳಿಗೆ ಹೆಚ್ಚುವರಿ 25 ಸಾವಿರ ವಿದ್ಯಾರ್ಥಿ ಪ್ರವೇಶ
ಸಿಬ್ಬಂದಿಗೆ ಜ್ಯೋತಿ ಸಂಜೀವಿನಿ ಜಾರಿ
-ಸಚಿವ ಕೋಟಾ ಶ್ರೀನಿವಾಸ ಪೂಜಾರಿ
ವಸತಿ ಶಾಲೆಗಳ ಪ್ರವೇಶಕ್ಕೆ ಹೆಚ್ಚಿನ ಬೇಡಿಕೆ ಇದೆ. ಮುಂದಿನ ಶೈಕ್ಷಣಿಕ ವರ್ಷದಿಂದ 6 ತರಗತಿಯಿಂದ ಎ ಹಾಗೂ ಬಿ ವಿಭಾಗಗಳನ್ನು ಪ್ರಾರಂಭಿಸಿ ಹೆಚ್ಚುವರಿಯಾಗಿ 25 ಸಾವಿರ ವಿದ್ಯಾರ್ಥಿಗಳ ಪ್ರವೇಶ ಅವಕಾಶ ಕಲ್ಪಿಸುವುದಾಗಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟಾ ಶ್ರೀನಿವಾಶ ಪೂಜಾರಿ ಹೇಳಿದರು.
ಸೋಮವಾರ ವಿಧಾನ ಪರಿಷತ್ತಿನ ಸದಸ್ಯ ಮರಿತಿಬ್ಬೇಗೌಡರ ಗಮನ ಸಳೆಯು ಸೂಚನೆ ಪ್ರಶ್ನೆಗೆ ಸದನದಲ್ಲಿ ಉತ್ತರಿಸಿ ಮಾತನಾಡಿದರು.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿ ರಾಜ್ಯಾದ್ಯಂತ 830 ವಸತಿ ಶಾಲೆ ಹಾಗೂ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ ಪರಿಶಿಷ್ಟ ಜಾತಿಯ 503, ಪರಿಶಿಷ್ಟ ವರ್ಗದ 156, ಹಿಂದುಳಿದ ವರ್ಗಗಳ 171 ವಸತಿ ಶಾಲೆಗಳಿವೆ. ಒಟ್ಟು 19094 ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹುದ್ದೆಗಳು ಮಂಜೂರಾಗಿವೆ. ಈ ಪೈಕಿ 5821 ಖಾಯಂ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಾರೆ.
ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ನೌಕರರಿಗೆ ಡಿ.ಸಿ.ಅರ್.ಜಿ (ಕುಟುಂಬ ಪಿಂಚಣಿ ಯೋಜನೆ ಸೌಲಭ್ಯ) ನೀಡಲು ಸರ್ಕಾರ ಆದೇಶ ಹೊರಡಿಸಿದೆ. ಇದನ್ನು 24-11-2018 ರ ನಂತರ ನೇಮಕಾತಿ ಹೊಂದಿದ ನೂತನ ಪಿಂಚಣಿ ಯೋಜನಡಿ ಬರುವ ನೌಕರರಿಗೆ ನೀಡಲಾಗಿದೆ. ಹಿಂದೆ ನೇಮಕಾತಿ ಹೊಂದಿದ ಎಲ್ಲಾ ನೌಕರಿಗೂ ಡಿ.ಸಿ.ಅರ್.ಜಿ ಸೌಲಭ್ಯ ವಿಸ್ತರಿಸುವ ಪ್ರಸ್ತಾವ ಆರ್ಥಿಕ ಇಲಾಖೆ ಪರಿಶೀಲನೆಯಲ್ಲಿದೆ. ಸಿಬ್ಬಂದಿಗಳಿಗೆ ಜ್ಯೋತಿ ಸಂಜೀವಿನಿ ಯೋಜನೆಯಡಿ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಕಲ್ಪಿಸಲಾಗುವುದು. ಈ ಸಂಬಂಧ ಸುರಕ್ಷಾ ಟ್ರಸ್ಟ್ ಮತ್ತು ಹೆಚ್.ಆರ್.ಎಂ.ಎಸ್(ಮಾನವ ಸಂಪನ್ಮೂಲ ನಿರ್ವಹಣಾ) ವಿಭಾಗಳಿಗೆ ಸೂಚನೆ ನೀಡಲಾಗಿದೆ. ಆದಷ್ಟು ಬೇಗ ಜ್ಯೋತಿ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಲಾಗುವುದು. ಸಿಬ್ಬಂದಿಗೆ ಕೆ.ಜಿ.ಐ.ಡಿ ಸೌಲಭ್ಯ ನೀಡಲು ಅವಕಾಶವಿಲ್ಲ ಎಂದು ಆರ್ಥಿಕ ಇಲಾಖೆ ಸ್ಪಷ್ಟಪಡಿಸಿದೆ. ಖಾಯಂ ಶಿಕ್ಷಕರಿಗೆ ವಿಶೇಷ ಭತ್ಯೆ ನೀಡುವ ಕುರಿತು ಸರ್ಕಾರ ಪರಾಮರ್ಶ ನಡೆಸಲಿದೆ ಎಂದು ಅವರು ಹೇಳಿದರು.
ಸದಸ್ಯ ಮರಿತಿಬ್ಬೇಗೌಡ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯ ನೌಕರರಿಗೆ ಕೆ.ಜಿ.ಐ.ಡಿ ಜಾರಿ ಗೊಳಿಸಬೇಕು. ಕೇಂದ್ರ ಸರ್ಕಾರದ ವಸತಿ ಶಾಲೆ ಶಿಕ್ಷಕರಿಗೆ ನೀಡುವ ಮೂಲ ವೇತನದ ಶೇ.10 ರಷ್ಟು ವಿಶೇಷ ಭತ್ಯೆಯನ್ನು ಮಂಜೂರು ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದರು.
*ವಂದೇ ಮಾತರಂ ರೈಲ್ವೆ ಬೆಳಗಾವಿವರೆಗೆ ವಿಸ್ತರಣೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ*
https://pragati.taskdun.com/action-to-make-transport-service-profitable-chief-minister-basavaraja-bommai/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ