ಕೊಟ್ಟ ಮಾತಿನಂತೆ ಅವರನ್ನ ಸಚಿವರನ್ನಾಗಿ ಮಾಡುತ್ತೇವೆ: ಸಚಿವ ಆರ್.ಅಶೋಕ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ದಾವೋಸ್ ನಿಂದ ವಾಪಸ್ಸಾದ ಹಿನ್ನಲೆಯಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಚಟುವಟಿಕೆ ಮತ್ತೆ ಗರಿಗೆದರಿದೆ. ಸಂಪುಟ ವಿಸ್ತರಣೆಗೆ ಹೈಕಾಮಾಂಡ್ ನಿಂದ ಯಾವುದೇ ತಕರಾರೂ ಇಲ್ಲ. ನೂತನ ರಾಷ್ಟ್ರಾಧ್ಯಕ್ಷರ ಜತೆ ಸಿಎಂ ಯಡಿಯೂರಪ್ಪ ಶೀಘ್ರವೇ ಚರ್ಚೆ ನಡೆಸಲಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅಶೋಕ್, ಸಂಪುಟ ವಿಸ್ತರಣೆಗೆ ಹೈಕಮಾಂಡ್ ನಿಂದ ಯಾವುದೇ ತಕರಾರು ಇಲ್ಲ. ಶಾಸಕರು ಪಕ್ಷಕ್ಕೆ ಬರುವಾಗ ಏನು ಒಪ್ಪಂದ ಆಗಿತ್ತೋ ಅದನ್ನ ನಡೆಸಿಕೊಡುತ್ತೇವೆ ಎಂದು ಹೇಳಿದರು.

ನಾವು ಕೊಟ್ಟ ಮಾತಿನಂತೆ ಅವರನ್ನ ಸಚಿವರನ್ನಾಗಿ ಮಾಡುತ್ತೇವೆ. ನಾನು ಕೂಡ 5 ಜನರ ಜತೆ ಮಾತುಕತೆ ನಡೆಸಿದ್ದೇನೆ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಜತೆ ಸಿಎಂ ಮಾತುಕತೆ ನಡೆಸುತ್ತಾರೆ ಎಂದು ತಿಳಿಸಿದರು.

ಇದೇ ವೇಳೆ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಜಿಲ್ಲಾಧಿಕಾರಿ, ಡಿಸಿಗಳನ್ನು ಕಲೆಕ್ಟರ್ ಎಂದು ಕರೆಯುತ್ತಿದ್ದಾರೆ. ಹೀಗಾಗಿ ನಮ್ಮ ರಾಜ್ಯದಲ್ಲೂ ಕಲೆಕ್ಟರ್ ಅಂತಾ ಹೆಸರು ಬದಲಿಸಲು ಚಿಂತನೆ ನಡೆಸಲಾಗಿದ್ದು, ಈ ಸಂಬಂಧ ಸಿಎಂಗೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಸಚಿವ ಆರ್​ ಅಶೋಕ್​​ ಹೇಳಿದ್ದಾರೆ.

ಇನ್ನು ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗೆ ಸರ್ಕಾರ‌ ನಿರ್ಧಾರ ಮಾಡಿದ್ದು, ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಲು ಉದ್ದೇಶಿಸಿದ್ದ ಮೌಢ್ಯ ಪ್ರತಿಬಂಧಕ ಕಾಯ್ದೆಯಲ್ಲಿ ಕೆಲವು ಬದಲಾವಣೆಗಳೊಂದಿಗೆ ಜಾರಿಗೊಳಿಸಲು ಸರ್ಕಾರ ಉದ್ದೇಶಿಸಿದೆ. ಆದರೆ ಯಾವುದೇ ಕಾರಣಕ್ಕೂ ಜ್ಯೋತಿಷ್ಯವನ್ನು ಪ್ರತಿಬಂಧಿಸುವುದಿಲ್ಲ. ಜ್ಯೋತಿಷ್ಯ ವಿಜ್ಞಾನ ಎಂದು ಸಾಬೀತಾಗಿದೆ. ಆದರೆ, ಮೌಢ್ಯ ಬಿತ್ತುವ ನಕಲಿ ಜ್ಯೋತಿಷಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button