ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದುವ ಎಲ್ಲ ಅವಕಾಶಗಳಿದ್ದರೂ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಪ್ರವಾಸಿಗರಿಂದ ದೂರವೇ ಉಳಿದಿದ್ದ ರಾಜಹಂಸಗಡಕ್ಕೆ ಈಗ ಹೊಸ ಸ್ವರೂಪ ಬರಲಿದೆ.
ಹಿಂದೂ ಹೃದಯ ಸಾಮ್ರಾಟ ಎಂದೇ ಖ್ಯಾತರಾಗಿದ್ದ ಶಿವಾಜಿ ಮಹಾರಾಜರ ಕ್ಷೇತ್ರವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ, ತನ್ಮೂಲಕ ಸುತ್ತಲಿನ ಪ್ರದೇಶಗಳನ್ನು ಬೆಳೆಸುವ ಹಾಗೂ ಸ್ಥಳೀಯ ಜನರಿಗೆ ಉದ್ಯೋಗಾವಕಾಶ ಸೃಷ್ಟಿಸುವ ವಿನೂತನ ಪ್ರಯತ್ನಕ್ಕೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮುಂದಾಗಿದ್ದಾರೆ.
ಮೊದಲ ಹಂತದ ಅಭಿವೃದ್ಧಿ ಯೋಜನೆಗೆ ಸೋಮವಾರ ಚಾಲನೆ ಸಿಗಲಿದೆ.
ರಾಜಹಂಸಗಡ ಬೆಳಗಾವಿ ನಗರದಿಂದ ಕೇವಲ 7 ಕಿಮೀ ಅಂತರದಲ್ಲಿರುವ ಸುಂದರವಾದ ಪ್ರದೇಶ. 1674ರಲ್ಲಿ ಶಿವಾಜಿ ಮಹಾರಾಜರು ಕಟ್ಟಿಸಿದ ಕೋಟೆ ಇದು. ಅತ್ಯಂತ ಎತ್ತರದಲ್ಲಿರುವ ಈ ಪ್ರದೇಶ ಎಂದೋ ಪ್ರವಾಸಿ ತಾಣವಾಗಿ ಕಂಗೊಳಿಸಬೇಕಿತ್ತು. ದೇಶ ವಿದೇಶಗಳ ಲಕ್ಷಾಂತರ ಜನರನ್ನು ಆಕರ್ಷಿಸುವ ಎಲ್ಲ ಸಾಮರ್ಥ್ಯ, ವಿಶೇಷತೆ ರಾಜಹಂಸಗಡಕ್ಕಿದೆ.
ಆದರೆ ಈವರೆಗೆ ಯಾರೂ ಈ ಬಗ್ಗೆ ಲಕ್ಷ್ಯ ವಹಿಸಿರಲಿಲ್ಲ. ಇದೀಗ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹಿಂದಿನ ಸಮ್ಮಿಶ್ರ ಸರಕಾರದ ಅವಧಿಯಲ್ಲಿ 15 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿ ರಾಜಹಂಸಗಡ ಅಭಿವೃದ್ಧಿಗೆ ಚಾಲನೆ ನೀಡಿದ್ದಾರೆ. ಮೊದಲ ಹಂತದಲ್ಲಿ 3.50 ಕೋಟಿ ರೂ. ಮಂಜೂರಾಗಿದ್ದು, ಇದರಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಶಿವಾಜಿ ಮಹಾರಾಜರ ಪುತ್ಥಳಿ ನಿರ್ಮಾಣವಾಗಲಿದೆ.
ಸಂಪರ್ಕ ರಸ್ತೆ ಅಭಿವೃದ್ಧಿ, ಸ್ವಾಗತ ಕಮಾನು ನಿರ್ಮಾಣ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಮೊದಲ ಹಂತದಲ್ಲಿ ಆದ್ಯತೆ ನೀಡಲಾಗುತ್ತದೆ. ಸೋಮವಾರ ಬೆಳಗ್ಗೆ ಮೊದಲ ಹಂತದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಸಂಪೂರ್ಣ 15 ಕೋಟಿ ರೂ. ಬಿಡುಗಡೆಯಾದರೆ ರಾಜಹಂಸಗಡ ಬಿಡುವಿಲ್ಲದ ಪ್ರವಾಸಿ ತಾಣವಾಗಿ ಅಭಿವೃದ್ಧಿಯಾಗಲಿದೆ.
ರಾಜಹಂಸಗಡ ಪ್ರವಾಸಿ ಕ್ಷೇತ್ರವಾಗಿ ನಿರಂತರ ಪ್ರವಾಸಿಗರು ಆಗಮಿಸತೊಡಗಿದರೆ ಸುತ್ತಲಿನ ಗ್ರಾಮಗಳು ಅಭಿವೃದ್ಧಿ ಹೊಂದಲಿವೆ. ಅಲ್ಲಿಗೆ ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯಗಳು ಬರಲಿವೆ. ಅಲ್ಲದೆ ಸ್ಥಳೀಯ ಯುವಕರಿಗೆ, ನಾಗರಿಕರಿಗೆ ಉದ್ಯೋಗಾವಕಾಶ ಸಿಗಲಿದೆ.
ಎಲ್ಲಕ್ಕಿಂತ ಹೆಚ್ಚಾಗಿ ಬೆಳಗಾವಿಯಲ್ಲಿ ನೋಡುವಂತದ್ದು ಏನಿದೆ ಎಂದು ಕೇಳುವವರಿಗೆ ತೋರಿಸಲು ಒಂದು ಸುಂದರ ತಾಣ ನಿರ್ಮಾಣವಾಗಲಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಹೊಸ ಖದರ್ ಬರಲಿದೆ.
ಪ್ರವಾಸಿ ತಾಣವಾಗಿ ರಾಜಹಂಸಗಡ ಕೋಟೆ ಅಭಿವೃದ್ಧಿ -ಶಾಸಕಿ ಲಕ್ಷ್ಮಿ ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ